Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 1

ಲೂಕ 1:28-69

Help us?
Click on verse(s) to share them!
28ಆ ದೂತನು ಆಕೆಯ ಬಳಿಗೆ ಬಂದು “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ ಕರ್ತನು ನಿನ್ನ ಸಂಗಡ ಇದ್ದಾನೆ” ಅಂದನು.
29ಆಕೆಯು ಆ ಮಾತಿಗೆ ತಬ್ಬಿಬ್ಬಾಗಿ, ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿದ್ದಳು.
30ಆ ದೂತನು ಆಕೆಗೆ, “ಮರಿಯಳೇ, ಹೆದರಬೇಡ; ನಿನಗೆ ದೇವರ ಕೃಪೆ ದೊರಕಿದೆ.
31ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು.
32ಆತನು ಮಹಾಪುರುಷನಾಗುವನು, ಪರಾತ್ಪರನಾದ ದೇವರ ಕುಮಾರನೆಂದು ಕರೆಯಲ್ಪಡುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು.
33ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇರದು” ಎಂದು ಹೇಳಿದನು.
34ಆಗ ಮರಿಯಳು ಆ ದೂತನಿಗೆ, “ಇದು ಹೇಗಾದೀತು? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ” ಎಂದು ಕೇಳಿದಳು.
35ಅದಕ್ಕೆ ದೂತನು, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಪರಾತ್ಪರನಾದ ದೇವರ ಶಕ್ತಿಯು ನಿನ್ನನ್ನು ಅವರಿಸುವುದು; ಆದುದರಿಂದ ನಿನಗೆ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವನು.
36ಇಗೋ, ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡು ಮಗುವಿದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಈಗ ಆರನೆಯ ತಿಂಗಳು.
37ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ” ಅಂದನು.
38ಆಗ ಮರಿಯಳು “ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ” ಅಂದಳು. ಆ ಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.
39ಇದಾದ ನಂತರ ಮರಿಯಳು ಎದ್ದು ತ್ವರೆಯಾಗಿ ಯೆಹೂದದ ಮಲೆನಾಡಿನಲ್ಲಿರುವ ಒಂದು ಊರಿಗೆ ಹೋದಳು.
40ಜಕರೀಯನ ಮನೆಯನ್ನು ಸೇರಿ ಎಲಿಸಬೇತಳಿಗೆ ವಂದಿಸಿದಳು.
41ಎಲಿಸಬೇತಳು ಮರಿಯಳ ವಂದನೆಯನ್ನು ಕೇಳುತ್ತಲೇ ಆಕೆಯ ಗರ್ಭದಲ್ಲಿದ್ದ ಕೂಸು ಕುಣಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮಭರಿತಳಾದಳು.
42ಆಗ ಆಕೆಯು ಮಹಾಧ್ವನಿಯಿಂದ ಕೂಗಿ, “ನೀನು ಸ್ತ್ರೀಯರೊಳಗೆ ಧನ್ಯಳು, ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು.
43ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವಷ್ಟು ಸೌಭಾಗ್ಯ ನನಗೆ ಎಲ್ಲಿಂದಾಯಿತು?
44ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಕುಣಿದಾಡಿತು.
45ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು. ಇದನ್ನು ನಂಬಿದವಳಾದ ನೀನು ಧನ್ಯಳು.”
46ಆಗ ಮರಿಯಳು, “ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ,
47ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ.
48ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ. ಇಗೋ, ಇಂದಿನಿಂದ ತಲತಲಾಂತರದವರೆಗೆ ಎಲ್ಲರೂ ನನ್ನನ್ನು ಧನ್ಯಳೆಂದು ಹೊಗಳುವರು,
49ಏಕೆಂದರೆ ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು ಮಾಡಿದ್ದಾನೆ; ಆತನ ನಾಮವು ಪರಿಶುದ್ಧವಾದುದು.
50ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯೆಯು ತಲತಲಾಂತರದ ವರೆಗೂ ಇರುವುದು.
51ಆತನು ತನ್ನ ಭುಜಪರಾಕ್ರಮದಿಂದ ಸೊಕ್ಕಿದ ಮನಸ್ಸುಳ್ಳವರನ್ನು ಚದರಿಸಿಬಿಟ್ಟಿದ್ದಾನೆ.
52ಪ್ರಭುಗಳನ್ನು ಸಿಂಹಾಸನಗಳಿಂದ ಕೆಳಗೆ ದೊಬ್ಬಿ, ದೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ತಂದಿದ್ದಾನೆ.
53ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ, ಸಿರಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ.
54ಆತನು ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂತೆ ಅಬ್ರಹಾಮನಿಗೂ ಅವನ ವಂಶದವರಿಗೂ ಯಾವಾಗಲೂ ದಯೆ ತೋರಿಸಬೇಕೆಂಬುದನ್ನು ನೆನಪಿಸಿಕೊಂಡು, ತನ್ನ ಸೇವಕನಾದ ಇಸ್ರಾಯೇಲನಿಗೆ ನೆರವಾಗಿದ್ದಾನೆ” ಎಂದಳು.
56ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಬಳಿಯಲ್ಲಿದ್ದು ತನ್ನ ಮನೆಗೆ ಹಿಂತಿರುಗಿ ಹೋದಳು.
57ಹೆರಿಗೆಕಾಲ ಬಂದಾಗ ಎಲಿಸಬೇತಳು ಗಂಡು ಮಗುವನ್ನು ಹೆತ್ತಳು.
58ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ವಿಶೇಷ ದಯೆಯನ್ನು ತೋರಿಸಿದ್ದಾನೆಂಬುದನ್ನು ಕೇಳಿ ಆಕೆಯ ಸಂಗಡ ಸಂತೋಷಪಟ್ಟರು.
59ಎಂಟನೆಯ ದಿನದಲ್ಲಿ ಅವರು ಆ ಮಗುವಿಗೆ ಸುನ್ನತಿಮಾಡುವುದಕ್ಕಾಗಿ ಬಂದು ಅದಕ್ಕೆ ಜಕರೀಯನೆಂದು ತಂದೆಯ ಹೆಸರನ್ನು ಇಡಬೇಕೆಂದಿದ್ದರು.
60ಈ ವಿಷಯದಲ್ಲಿ ಎಲಿಸಬೇತಳು “ಅದು ಬೇಡ, ಯೋಹಾನನೆಂದು ಹೆಸರಿಡಬೇಕು” ಅನ್ನಲು,
61ಅವರು, “ನಿನ್ನ ಬಂಧುಬಾಂಧವರಲ್ಲಿ ಈ ಹೆಸರಿನವರು ಒಬ್ಬರಾದರೂ ಇಲ್ಲವಲ್ಲಾ” ಎಂದು ಆಕೆಗೆ ಹೇಳಿದರು.
62ಇದಕ್ಕೆ ಏನು ಹೆಸರಿಡಬೇಕೆಂದಿರುತ್ತೀ ಎಂಬುದಾಗಿ ಜಕರೀಯನಿಗೆ ಸನ್ನೆಮಾಡಿ ಕೇಳಿದರು.
63ಅವನು ಒಂದು ಹಲಗೆಯನ್ನು ತರಿಸಿಕೊಂಡು, “ಆತನ ಹೆಸರು ಯೋಹಾನನು” ಎಂದು ಬರೆದನು. ಅದಕ್ಕೆ ಎಲ್ಲರೂ ಆಶ್ಚರ್ಯಪಟ್ಟರು.
64ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು, ನಾಲಿಗೆ ಸಡಿಲವಾಯಿತು, ಅವನು ಮಾತನಾಡುವವನಾಗಿ ದೇವರನ್ನು ಕೊಂಡಾಡಿದನು.
65ಇದನ್ನು ಕೇಳಿದ ನೆರೆಹೊರೆಯವರಿಗೆಲ್ಲಾ ಹೆದರಿಕೆಯುಂಟಾಯಿತು ಮತ್ತು ಈ ಎಲ್ಲಾ ಸಂಗತಿಗಳನ್ನು ಕುರಿತು ಯೂದಾಯದ ಮಲೆನಾಡಿನಲ್ಲೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.
66ಈ ಸಂಗತಿಗಳನ್ನು ಕೇಳಿದವರೆಲ್ಲರೂ, “ಆಹಾ, ಈ ಕೂಸು ಎಂಥವನಾಗುವನೋ?” ಅಂದುಕೊಂಡರು, ಆದರೆ ಕರ್ತನ ಅಭಯ ಹಸ್ತವು ಅವನ ಮೇಲೆ ಇತ್ತು.
67ಇದಲ್ಲದೆ ಆ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ನುಡಿದ ಪ್ರವಾದನೆ ಏನೆಂದರೆ,
68“ಇಸ್ರಾಯೇಲರ ದೇವರಾಗಿರುವ ಕರ್ತನಿಗೆ ಸ್ತೋತ್ರವು; ತನ್ನ ಪ್ರಜೆಯನ್ನು ಸಂಧಿಸಿ ಅವರಿಗೆ ಬಿಡುಗಡೆಯನ್ನುಂಟುಮಾಡಿದ್ದಾನೆ;
69ತನ್ನ ಸೇವಕನಾದ ದಾವೀದನ ಮನೆತನದಲ್ಲಿ, ನಮಗೋಸ್ಕರ ಒಬ್ಬ ರಕ್ಷಣಾವೀರನನ್ನು ಎಬ್ಬಿಸಿದ್ದಾನೆ.

Read ಲೂಕ 1ಲೂಕ 1
Compare ಲೂಕ 1:28-69ಲೂಕ 1:28-69