Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 6

ಲೂಕ 6:2-32

Help us?
Click on verse(s) to share them!
2ಆದರೆ ಫರಿಸಾಯರಲ್ಲಿ ಕೆಲವರು, “ಸಬ್ಬತ್ ದಿನದಲ್ಲಿ ನಿಷಿದ್ಧವಾದ ಕೆಲಸವನ್ನು ನೀವು ಯಾಕೆ ಮಾಡುತ್ತೀರಿ?” ಎಂದು ಕೇಳಿದ್ದಕ್ಕೆ,
3ಯೇಸು ಅವರಿಗೆ, “ದಾವೀದನು ಮತ್ತು ಆತನ ಸಂಗಡ ಇದ್ದವರೂ ಹಸಿದಿದ್ದಾಗ, ಆತನು ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೋ?
4ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತೆಗೆದುಕೊಂಡು ತಾನೂ ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ಉತ್ತರಿಸಿ,
5“ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದಾನೆ” ಎಂದು ಅವರಿಗೆ ಹೇಳಿದನು.
6ಮತ್ತೊಂದು ಸಬ್ಬತ್ ದಿನದಲ್ಲಿ ಆತನು ಸಭಾಮಂದಿರಕ್ಕೆ ಹೋಗಿ ಉಪದೇಶಮಾಡುತ್ತಿರುವಾಗ, ಅಲ್ಲಿ ಬಲಗೈ ಬತ್ತಿದವನೊಬ್ಬನು ಇದ್ದನು.
7ಶಾಸ್ತ್ರಿಗಳೂ ಫರಿಸಾಯರೂ ಆತನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣ ಸಿಕ್ಕಬೇಕೆಂದು ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವನೋ ಇಲ್ಲವೋ ಎಂದು ಆತನನ್ನು ಹೊಂಚಿನೋಡುತ್ತಿದ್ದರು.
8ಆದರೆ ಆತನು ಅವರ ಯೋಚನೆಗಳನ್ನು ತಿಳಿದು ಕೈ ಬತ್ತಿಹೋಗಿದ್ದ ಆ ಮನುಷ್ಯನಿಗೆ, “ಎದ್ದು ನಡುವೆ ಬಂದು ನಿಂತುಕೋ” ಎಂದು ಹೇಳಿದನು. ಅವನು ಎದ್ದುಬಂದು ನಿಂತುಕೊಂಡನು.
9ಆಗ ಯೇಸು ಅವರಿಗೆ, “ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ಸಬ್ಬತ್ ದಿನದಲ್ಲಿ ಯಾವುದನ್ನು ಮಾಡುವುದು ನ್ಯಾಯ? ಮೇಲನ್ನು ಮಾಡುವುದೋ ಅಥವಾ ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ಹಾಳುಮಾಡುವುದೋ?” ಎಂದು ಕೇಳಿ,
10ಸುತ್ತಲೂ ಇದ್ದವರೆಲ್ಲರನ್ನೂ ನೋಡಿ ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು, ಕೈ ವಾಸಿಯಾಯಿತು.
11ಆದರೆ ಅವರು ಕ್ರೋಧಭರಿತರಾಗಿದ್ದರಿಂದ, ಈ ಯೇಸುವಿಗೆ ಏನು ಮಾಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
12ಆ ದಿನಗಳಲ್ಲಿ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋಗಿ ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದನು.
13ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು ಅವರಿಗೆ ಅಪೊಸ್ತಲರೆಂದು ಹೆಸರಿಟ್ಟನು.
14ಅವರು ಯಾರಾರೆಂದರೆ, ಆತನಿಂದ ಪೇತ್ರನೆಂಬ ಹೆಸರನ್ನು ಹೊಂದಿದ ಸೀಮೋನ, ಅವನ ತಮ್ಮನಾದ ಅಂದ್ರೆಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ,
15ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ಮತಾಭಿಮಾನಿ ಅನ್ನಿಸಿಕೊಂಡ ಸೀಮೋನ,
16ಯಾಕೋಬನ ಮಗನಾದ ಯೂದ, ಆತನನ್ನು ಹಿಡಿದುಕೊಡುವ ದ್ರೋಹಿಯಾದ ಇಸ್ಕರಿಯೋತ ಯೂದ.
17ಆ ಮೇಲೆ ಯೇಸು ಅವರೊಂದಿಗೆ ಬೆಟ್ಟದಿಂದ ಇಳಿದು ಸಮಭೂಮಿಯಲ್ಲಿ ಬಂದು ನಿಂತನು. ಆತನ ಶಿಷ್ಯರ ದೊಡ್ಡಗುಂಪು ಮತ್ತು ಎಲ್ಲಾ ಯೂದಾಯದಿಂದಲೂ, ಯೆರೂಸಲೇಮಿನಿಂದಲೂ, ತೂರ್, ಸೀದೋನ್ ಪಟ್ಟಣಗಳ ಕರಾವಳಿತೀರದಿಂದಲೂ ಬಂದಿದ್ದ ಜನರ ಮಹಾಸಮೂಹವು ಆತನ ಸಂಗಡ ಇದ್ದಿತು.
18ಆ ಜನರು ಆತನ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ವಾಡಿಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಪೀಡಿತರು ಸಹ ಬಂದು ಸ್ವಸ್ಥರಾದರು.
19ಮತ್ತು ಆತನಿಂದ ಶಕ್ತಿ ಹೊರಟು ಎಲ್ಲರನ್ನೂ ವಾಸಿಮಾಡುತ್ತಿದ್ದುದರಿಂದ, ಆ ಗುಂಪಿನ ಜನರೆಲ್ಲಾ ಆತನನ್ನು ಮುಟ್ಟುವುದಕ್ಕೆ ಪ್ರಯತ್ನಪಟ್ಟರು.
20ತರುವಾಯ ಆತನು ತನ್ನ ಶಿಷ್ಯರ ಕಡೆಗೆ ಕಣ್ಣೆತ್ತಿನೋಡಿ ಹೇಳಿದ್ದೇನಂದರೆ, “ಬಡವರಾದ ನೀವು ಧನ್ಯರು; ದೇವರ ರಾಜ್ಯವು ನಿಮ್ಮದೇ.
21ಈಗ ಹಸಿದಿರುವವರಾದ ನೀವು ಧನ್ಯರು; ನಿಮಗೆ ತೃಪ್ತಿಯಾಗುವುದು. ಈಗ ಅಳುವವರಾದ ನೀವು ಧನ್ಯರು; ನೀವು ನಗುವಿರಿ.
22“ಮನುಷ್ಯಕುಮಾರನ ನಿಮಿತ್ತವಾಗಿ ಜನರು ನಿಮ್ಮನ್ನು ಹಗೆಮಾಡಿ ನಿಮಗೆ ಬಹಿಷ್ಕಾರ ಹಾಕಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದೆಂದು ತೆಗೆದುಹಾಕಿದರೆ ನೀವು ಧನ್ಯರು.
23ಆ ದಿನದಲ್ಲಿ ಸಂತೋಷಿಸಿ, ಕುಣಿದಾಡುವಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು ಎಂದು ತಿಳಿದುಕೊಳ್ಳಿರಿ. ಈ ಜನರ ಪೂರ್ವಿಕರು ಪ್ರವಾದಿಗಳಿಗೂ ಹಾಗೆಯೇ ಮಾಡಿದರು.
24“ಆದರೆ ಐಶ್ವರ್ಯವಂತರೇ, ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮ ಸುಖವು ಈಗಾಗಲೇ ನಿಮಗೆ ಬಂದದೆ.
25ಈಗ ಹೊಟ್ಟೆತುಂಬಿದವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಹಸಿಯುವಿರಿ. ಈಗ ನಗುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದುಃಖಪಟ್ಟು ಅಳುವಿರಿ.
26“ಜನರೆಲ್ಲಾ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪೂರ್ವಿಕರು ಸುಳ್ಳುಪ್ರವಾದಿಗಳನ್ನು ಹಾಗೆಯೇ ಹೊಗಳಿದ್ದರು.
27“ಕೇಳುವವರಾದ ನಿಮಗೆ ನಾನು ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ;
28ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ.
29ನಿನ್ನ ಒಂದು ಕೆನ್ನೆಯ ಮೇಲೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನೂ ತೋರಿಸು; ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳಂಗಿಯನ್ನೂ ತೆಗೆದುಕೊಳ್ಳಲು ಅಡ್ಡಿಮಾಡಬೇಡ.
30ನಿನ್ನನ್ನು ಬೇಡುವವರೆಲ್ಲರಿಗೂ ಕೊಡು; ನಿನ್ನ ಸೊತ್ತನ್ನು ಕಸಿದುಕೊಳ್ಳುವವನನ್ನು ಹಿಂದಕ್ಕೆ ಕೊಡೆಂದು ಕೇಳಬೇಡ.
31ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.
32“ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಮಗೆ ಪ್ರೀತಿ ತೋರಿಸುವವರನ್ನು ಪ್ರೀತಿಸುತ್ತಾರಲ್ಲಾ.

Read ಲೂಕ 6ಲೂಕ 6
Compare ಲೂಕ 6:2-32ಲೂಕ 6:2-32