Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಜ್ಞಾನೋ

ಜ್ಞಾನೋ 20

Help us?
Click on verse(s) to share them!
1ದ್ರಾಕ್ಷಾರಸವು ಪರಿಹಾಸ್ಯ, ಮದ್ಯವು ಕೂಗಾಟ, ಇವುಗಳಿಂದ ದಾರಿತಪ್ಪಿ ಹೋಗುವವನು ಜ್ಞಾನಿಯಲ್ಲ.
2ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು, ಅವನನ್ನು ಕೆಣಕುವವನು ತನಗೇ ಕೆಡುಕುಮಾಡಿಕೊಳ್ಳುವನು.
3ವ್ಯಾಜ್ಯಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು, ಜಗಳವು ಪ್ರತಿಯೊಬ್ಬ ಮೂರ್ಖನಿಗೂ ಸಹಜ.
4ಮೈಗಳ್ಳನು ಮಳೆಗಾಲದಲ್ಲಿ ಉಳುವುದಿಲ್ಲ, ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು?
5ಮನುಷ್ಯನ ಹೃದಯಸಂಕಲ್ಪವು ಆಳವಾದ ಬಾವಿಯ ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.
6ಸ್ನೇಹಿತರೆಂದು ಹೇಳಿಕೊಳ್ಳುವವರು ಬಹಳ ಜನರು, ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು?
7ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು, ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು.
8ರಾಜನು ನ್ಯಾಯಾಸನಾರೂಢನಾಗಿ, ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು.
9“ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪವನ್ನು ತೊಳೆದುಕೊಂಡು ನಿರ್ಮಲನಾಗಿದ್ದೇನೆ” ಎಂದು ಯಾರು ಹೇಳಬಲ್ಲರು?
10ತೂಕದ ಕಲ್ಲನ್ನೂ, ಅಳತೆಯ ಪಾತ್ರೆಯನ್ನೂ ಹೆಚ್ಚಿಸುವುದು, ತಗ್ಗಿಸುವುದು ಇವೆರಡೂ ಯೆಹೋವನಿಗೆ ಅಸಹ್ಯ.
11ಒಬ್ಬ ಹುಡುಗನಾದರೂ ಶುದ್ಧವೂ, ಸತ್ಯವೂ ಆದ ನಡತೆಯಿಂದಲೇ, ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು.
12ಕೇಳುವ ಕಿವಿ, ನೋಡುವ ಕಣ್ಣು, ಇವೆರಡನ್ನೂ ಯೆಹೋವನು ನಿರ್ಮಿಸಿದ್ದಾನೆ.
13ನಿದ್ರಾನಿರತನಾಗಿರಬೇಡ! ಬಡವನಾದೀಯೆ, ಕಣ್ಣು ತೆರೆ! ಆಹಾರದಿಂದ ತೃಪ್ತಿಗೊಳ್ಳುವಿ.
14ಕೊಳ್ಳುವವನು, “ಚೆನ್ನಾಗಿಲ್ಲ, ಚೆನ್ನಾಗಿಲ್ಲ” ಎಂದು ಹೇಳುತ್ತಾನೆ, ಕೊಂಡುಕೊಂಡು ಹೋಗಿ ಹೆಚ್ಚಳಪಡುತ್ತಾನೆ.
15ಹೊನ್ನು ಉಂಟು, ಹವಳದ ರಾಶಿ ಉಂಟು, ಆದರೆ ಜ್ಞಾನದ ತುಟಿಗಳೇ ಅಮೂಲ್ಯವಾದ ಆಭರಣ.
16ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ, ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆ ಮಾಡಿಕೋ.
17ಮೋಸದಿಂದ ಸಿಕ್ಕಿದ ಆಹಾರವು ಮನುಷ್ಯನಿಗೆ ರುಚಿ, ಆ ಮೇಲೆ ಅವನ ಬಾಯಿ ಮರಳಿನಿಂದ ತುಂಬುವುದು.
18ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು, ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು.

19ಚಾಡಿಕೋರನು ಗುಟ್ಟನ್ನು ರಟ್ಟು ಮಾಡುವನು, ಆದುದರಿಂದ ತುಟಿ ಬಿಗಿಹಿಡಿಯದವನ ಗೊಡವೆಗೆ ಹೋಗಬೇಡ.
20ತಂದೆಯನ್ನಾಗಲಿ ಅಥವಾ ತಾಯಿಯನ್ನಾಗಲಿ ಶಪಿಸುವವನ ದೀಪವು, ಮಧ್ಯರಾತ್ರಿಯ ಅಂಧಕಾರದಲ್ಲಿ ಆರಿಹೋಗುವುದು.
21ಮೊದಲು ಬೇಗನೆ ಬಾಚಿಕೊಂಡ ಸ್ವತ್ತು, ಕೊನೆಯಲ್ಲಿ ಕಳೆದು ಹೋಗುವುದು.
22ಕೇಡಿಗೆ ಮುಯ್ಯಿತೀರಿಸುವೆನು ಅನ್ನಬೇಡ, ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನು ಉದ್ಧರಿಸುವನು.
23ತೂಕದ ಕಲ್ಲನ್ನು ಹೆಚ್ಚಿಸುವುದು, ತಗ್ಗಿಸುವುದು ಯೆಹೋವನಿಗೆ ಅಸಹ್ಯ, ಮೋಸದ ತಕ್ಕಡಿ ಒಳ್ಳೆಯದಲ್ಲ.
24ಮನುಷ್ಯನಿಗೆ ಗತಿಯನ್ನು ಏರ್ಪಡಿಸುವವನು ಯೆಹೋವನೇ ಆಗಿರುವಲ್ಲಿ, ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಂಡಾನು?
25“ಇದು ದೇವರಿಗಾಗಿ” ಎಂದು ದುಡುಕಿ ಹರಕೆಮಾಡುವುದು, ಹರಕೆಯನ್ನು ಹೊತ್ತಮೇಲೆ ವಿಚಾರಮಾಡುವುದು ಮನುಷ್ಯನಿಗೆ ಉರುಲು.
26ಜ್ಞಾನಿಯಾದ ಅರಸನು ದುಷ್ಟರ ಮೇಲೆ ಕಣದ ಗುಂಡನ್ನು ಉರುಳಿಸಿ, ಅವರನ್ನು ತೂರಿಬಿಡುವನು.
27ಮನುಷ್ಯನ ಆತ್ಮವು ಯೆಹೋವನ ದೀಪವಾಗಿದೆ, ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ.
28ರಾಜನ ಕೃಪಾಸತ್ಯತೆಗಳು ಅವನನ್ನು ಕಾಯುವವು, ಅವನ ಕರುಣೆಯೇ ಅವನ ಸಿಂಹಾಸನಕ್ಕೆ ಆಧಾರ.
29ಯುವಕರಿಗೆ ಬಲವು ಭೂಷಣ, ಮುದುಕರಿಗೆ ನರೆಯು ಒಡವೆ.
30ಗಾಯಮಾಡುವ ಪೆಟ್ಟುಗಳು ಕೆಟ್ಟದ್ದನ್ನು ತೊಳೆದುಬಿಡುವುದು, ಏಟುಗಳು ಅಂತರಂಗವನ್ನು ಶುದ್ಧಿಮಾಡುವುದು.