Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೋಬ

ಯೋಬ 29

Help us?
Click on verse(s) to share them!
1ತರುವಾಯ ಯೋಬನು ಪ್ರಸ್ತಾಪವನ್ನೆತ್ತಿ ಇಂತೆಂದನು,
2“ಅಯ್ಯೋ ನಾನು ಹಿಂದಿನ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಸಂತೋಷವಾಗಿತ್ತು! ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಿದ್ದನಲ್ಲಾ!
3ಆತನ ದೀಪವು ನನ್ನ ತಲೆಯ ಮೇಲೆ ಪ್ರಕಾಶಿಸುತ್ತಿತ್ತು, ಆತನ ಬೆಳಕಿನಿಂದ ಕತ್ತಲಲ್ಲೂ ಸಂಚರಿಸುತ್ತಿದ್ದೆನು.
4ಆ ದಿನಗಳು ನನ್ನ ಜೀವಮಾನದ ಸುಗ್ಗೀಕಾಲವು, ದೇವರ ಸ್ನೇಹವು ನನ್ನ ಗುಡಾರವನ್ನು ಆವರಿಸಿಕೊಂಡಿತ್ತು.
5ಸರ್ವಶಕ್ತನಾದ ದೇವರು ಇನ್ನೂ ನನ್ನೊಂದಿಗಿದ್ದನು, ನನ್ನ ಮಕ್ಕಳು ನನ್ನ ಸುತ್ತಲಿದ್ದರು.
6ಹಾಲು ತುಪ್ಪದಲ್ಲಿ ನನ್ನ ಪಾದಗಳನ್ನು ತೊಳೆಯುತ್ತಿದ್ದೆ, ಬಂಡೆಯು ನನಗೋಸ್ಕರ ಎಣ್ಣೆಯನ್ನು ಪ್ರವಾಹವಾಗಿ ಸುರಿಸುತ್ತಿತ್ತು.
7ಊರ ಮುಂದಿನ ಚಾವಡಿಗೆ ಹೋದಾಗಲೂ, ಚೌಕದಲ್ಲಿ ಆಸನವನ್ನು ಹಾಕಿಸಿಕೊಂಡಾಗಲೂ
8ಯೌವನಸ್ಥರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು, ವೃದ್ಧರು ಎದ್ದು ನಿಂತರು.
9ಪ್ರಭುಗಳು ಮೌನವಾಗಿ ಬಾಯ ಮೇಲೆ ಕೈಯಿಟ್ಟುಕೊಂಡರು.
10ಮುಖಂಡರ ನಾಲಿಗೆಯು ಸೇದಿಹೋಗಿ ಧ್ವನಿಯಡಗಿತು.
11ಕೇಳಿದ ಕಿವಿಯು ನನ್ನನ್ನು ಹರಸಿತು, ನೋಡಿದ ಕಣ್ಣು ಸಾಕ್ಷಿ ಕೊಟ್ಟಿತು.
12ಏಕೆಂದರೆ ಅಂಗಲಾಚುವ ಬಡವನನ್ನೂ, ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿದ್ದೆನು.
13ಗತಿಯಿಲ್ಲದವನು ನನ್ನನ್ನು ಹರಸುತ್ತಿದ್ದನು, ವಿಧವೆಯ ಹೃದಯವನ್ನು ಉತ್ಸಾಹಗೊಳಿಸುತ್ತಿದ್ದೆನು.
14ನಾನು ಧರ್ಮವನ್ನು ಧರಿಸಿಕೊಂಡೆನು, ಧರ್ಮವು ನನ್ನನ್ನು ಧರಿಸಿತು. ನನ್ನ ನ್ಯಾಯವೇ ನನಗೆ ನಿಲುವಂಗಿಯೂ, ಕಿರೀಟವೂ ಆಗಿತ್ತು.
15ನಾನು ಕುರುಡನಿಗೆ ಕಣ್ಣಾಗಿಯೂ, ಕುಂಟನಿಗೆ ಕಾಲಾಗಿಯೂ ಇದ್ದೆನು.
16ದರಿದ್ರರಿಗೆ ತಂದೆಯಾಗಿ, ಪರಿಚಯವಿಲ್ಲದವನ ವ್ಯಾಜ್ಯವನ್ನೂ ವಿಚಾರಿಸುತ್ತಿದ್ದೆನು.
17ಅನ್ಯಾಯಗಾರನ ಕೋರೆಗಳನ್ನು ಮುರಿದು, ಅವನ ಹಲ್ಲುಗಳಿಂದ ಬೇಟೆಯನ್ನು ಕಿತ್ತು ತರುತ್ತಿದ್ದೆನು.
18ಆಗ ನಾನು ಹೇಳಿದ್ದೇನೆಂದರೆ, ‘ನನ್ನ ಗೂಡಿನಲ್ಲಿಯೇ ನಾನು ಸಾಯುವೆನು, ನನ್ನ ದಿನಗಳು ಮರಳಿನಂತೆ ಅಸಂಖ್ಯವಾಗಿರುವವು.

19ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುವವು, ರಾತ್ರಿಯಲ್ಲಿ ಇಬ್ಬನಿಯು ನನ್ನ ರೆಂಬೆಗಳ ಮೇಲೆ ಬಿದ್ದಿರುವುದು.
20ನನ್ನ ಮಾನವು ಹೊಸದಾಗುತ್ತಲೂ, ನನ್ನ ಬಿಲ್ಲು ಕೈಯಲ್ಲಿ ಬಲಗೊಳ್ಳುತ್ತಲೂ ಇರುವವು’ ಎಂಬುದೇ.
21ಜನರು ಕಾದುಕೊಂಡಿದ್ದು ನನ್ನ ಮಾತಿಗೆ ಕಿವಿಗೊಟ್ಟು, ನನ್ನ ಆಲೋಚನೆಯನ್ನು ತಿಳಿದುಕೊಳ್ಳಬೇಕೆಂದು ಮೌನವಾಗಿದ್ದರು.
22ನಾನು ಮಾತನಾಡಿದ ಮೇಲೆ ಮತ್ತೆ ಅವರು ಮಾತನಾಡುತ್ತಿರಲಿಲ್ಲ, ನನ್ನ ವಚನವೃಷ್ಟಿಯು ಅವರ ಮೇಲೆ ಬೀಳುತ್ತಿತ್ತು,
23ಮಳೆಯನ್ನು ಹೇಗೋ ಹಾಗೆಯೇ ನನ್ನನ್ನು ಎದುರು ನೋಡುತ್ತಾ, ಮುಂಗಾರಿಗೋ ಎಂಬಂತೆ ಬಾಯ್ದೆರೆಯುತ್ತಿದ್ದರು.
24ನಾನು ಅವರನ್ನು ನೋಡಿ ನಗಲು ಅವರು ಧೈರ್ಯಗೆಟ್ಟರು, ನನ್ನ ಮುಖಕಾಂತಿಯನ್ನೋ ಅವರು ಎಂದೂ ಕುಂದಿಸಲಿಲ್ಲ.
25ನಾನು ಅವರಿಗೆ ತಕ್ಕ ಮಾರ್ಗವನ್ನು ಆರಿಸಿಕೊಟ್ಟು, ತನ್ನ ಸೈನ್ಯಗಳ ಮಧ್ಯದಲ್ಲಿ ಕುಳಿತಿರುವ ರಾಜನಂತೆಯೂ, ದುಃಖಿತರನ್ನು ಸಂತೈಸುವ ಮುಖಂಡನಾಗಿ ಆಸೀನನಾಗಿದ್ದೆನು.”