1ಆ ಮೇಲೆ ನಾಮಾಥ್ಯನಾದ ಚೋಫರನು ಹೀಗೆಂದನು,
2“ನನ್ನ ಮನೋವ್ಯಥೆಯು ಪ್ರತ್ಯುತ್ತರವನ್ನು ನನಗೆ ಹೇಳಿಕೊಡುತ್ತದೆ, ಆತುರವು ನನ್ನಲ್ಲಿ ತುಂಬಿದೆ.
3ಏಕೆಂದರೆ ನಾನು ಅಪಮಾನಕರವಾದ ನಿನ್ನ ಖಂಡನೆಯನ್ನು ಕೇಳಿದ್ದೇನೆ, ಆದಕಾರಣ ನನ್ನ ಆತ್ಮವು ನನ್ನ ಬುದ್ಧಿಯಿಂದಲೇ ಕಲಿತ ಉತ್ತರವನ್ನು ನನಗೆ ತಿಳಿಸುತ್ತದೆ.
4ಮನುಷ್ಯನು ಲೋಕದಲ್ಲಿ ಉದ್ಭವಿಸಿದ ಪುರಾತನಕಾಲದಿಂದಲೂ,
5ದುಷ್ಟರ ಉತ್ಸಾಹ ಧ್ವನಿಯು ಅಲ್ಪಕಾಲದ್ದು, ಭ್ರಷ್ಟನ ಉಲ್ಲಾಸವು ಕ್ಷಣಿಕವಾದದ್ದು ಎಂದು ನಿನಗೆ ಗೊತ್ತಿಲ್ಲವೋ?
6ಅವನ ಪ್ರತಿಷ್ಠೆಯು ಆಕಾಶಕ್ಕೆ ಏರಿದರೂ, ಅವನ ತಲೆಯು ಮೋಡಗಳಿಗೆ ತಗುಲಿದರೂ,
7ತನ್ನ ಮಲದ ಹಾಗೆ ನಿತ್ಯನಾಶನವನ್ನೂ ಹೊಂದುವನು, ಅವನನ್ನು ಕಂಡವರು ಕೂಡ ‘ಅವನು ಎಲ್ಲಿ?’ ಎನ್ನುವರು.
8ಅವನು ಸ್ವಪ್ನದಂತೆ ಮರೆಯಾಗಿ ಸಿಕ್ಕುವುದಿಲ್ಲ, ರಾತ್ರಿಯ ಕನಸಿನ ಹಾಗೆ ಓಡಿಹೋಗುವನು.
9ಕಂಡವನ ಕಣ್ಣಿಗೆ ಮತ್ತೆ ಕಾಣಿಸನು, ಅವನ ನಿವಾಸವು ಅವನನ್ನು ತಿರುಗಿ ನೋಡುವುದೇ ಇಲ್ಲ.
10ಅವನ ಮಕ್ಕಳು ದರಿದ್ರರ ದಯೆಯನ್ನು ಬೇಡುವರು. ಅವನು ತನ್ನ ಕೈಯಿಂದಲೇ ತನ್ನ ಆಸ್ತಿಯನ್ನು ಹಿಂದಕ್ಕೆ ಕೊಟ್ಟು ಬಿಡಬೇಕಾಗುವುದು.
11ಯೌವನವು ಅವನ ಎಲುಬುಗಳಲ್ಲಿ ಇನ್ನೂ ತುಂಬಿರುವಾಗಲೇ, ಅದು ಅವನೊಂದಿಗೆ ಧೂಳಿನಲ್ಲಿ ಮಲಗುವುದು.
12ಕೆಟ್ಟತನವು ಅವನ ಬಾಯಿಗೆ ಸಿಹಿಯಾಗಿರಲು, ಅವನು ನಾಲಿಗೆಯ ಕೆಳಗೆ ಅದನ್ನು ಅಡಗಿಸಿ,
13ನುಂಗದೆ ಕಾಪಾಡುತ್ತಾ ಬಾಯಲ್ಲೇ ಇಟ್ಟುಕೊಂಡಿದ್ದರೂ
14ತಿಂದ ಮೇಲೆ ಆ ಪದಾರ್ಥವು ಮಾರ್ಪಟ್ಟು, ಅವನೊಳಗೆ ಹಾವಿನ ವಿಷವಾಗುವುದು.
15ನುಂಗಿದ ಐಶ್ವರ್ಯವನ್ನು ಅವನು ಕಾರುವನು, ದೇವರು ಅವನ ಹೊಟ್ಟೆಯೊಳಗಿಂದ ಅದನ್ನು ಕಕ್ಕಿಸಿ ಬಿಡುವನು.
16ಅವನು ಚೀಪುವುದು ಹಾವಿನ ವಿಷವೇ, ಸರ್ಪದ ನಾಲಿಗೆಯು ಅವನನ್ನು ಕೊಲ್ಲುವುದು.
17ಜೇನೂ, ಮೊಸರೂ ಸಮೃದ್ಧಿಯಾಗಿ ಹರಿಯುವ ನದಿಗಳನ್ನು ಅವನು ನೋಡುವುದೇ ಇಲ್ಲ.
18ಅವನು ದುಡಿದದ್ದನ್ನು ಅನುಭವಿಸದೆ ಪರರ ಪಾಲು ಮಾಡುವನು, ಅವನ ಲಾಭದಿಂದಾಗತಕ್ಕ ಆನಂದವು ಅವನಿಗೆ ಸಿಕ್ಕುವುದಿಲ್ಲ.
19ಅವನು ಬಡವರನ್ನು ಜಜ್ಜಿ ತ್ಯಜಿಸಿಬಿಟ್ಟಿದ್ದಾನಲ್ಲಾ; ಸುಲಿಗೆಯಿಂದ ಕಿತ್ತುಕೊಂಡ ಮನೆಯನ್ನು ಭದ್ರಪಡಿಸಿಕೊಳ್ಳದೆ ಹೋಗುವನು.
20ಅವನ ಹೊಟ್ಟೆಗೆ ತೃಪ್ತಿಯಿಲ್ಲವಾದ ಕಾರಣ, ಅವನು ತನ್ನ ಇಷ್ಟ ಸಂಪತ್ತಿನಲ್ಲಿ ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ.
21ಏನೂ ಉಳಿಯದಂತೆ ಅವನು ನುಂಗಿಬಿಟ್ಟಿದರಿಂದ; ಅವನ ಸುಖವು ಅಸ್ಥಿರವಾಗಿರುವುದು.
22ಸಮೃದ್ಧಿಯು ತುಂಬಿರುವಾಗಲೇ ಅವನಿಗೆ ಇಕ್ಕಟ್ಟಾಗುವುದು. ಶ್ರಮೆಯನ್ನು ಅನುಭವಿಸುವ ಪ್ರತಿಯೊಬ್ಬನ ಕೈ ಅವನ ಮೇಲೆ ಬೀಳುವುದು.
23ಅವನ ಹೊಟ್ಟೆ ತುಂಬುವುದು, ಹೌದು, ದೇವರು ತನ್ನ ಕೋಪಾಗ್ನಿಯನ್ನು ಕಳುಹಿಸಿ; ಅದನ್ನೇ ಆಹಾರವನ್ನಾಗಿ ಅವನ ಮೇಲೆ ಸುರಿಸುವನು.
24ಕಬ್ಬಿಣದ ಆಯುಧದ ದೆಸೆಯಿಂದ ಓಡಿಹೋಗುವನು, ತಾಮ್ರದ ಬಿಲ್ಲು ಅವನನ್ನು ಇರಿಯುವುದು.
25ಅವನು ಬಾಣವನ್ನು ಕೀಳಲು ಅದು ಬೆನ್ನಿನಿಂದ ಹೊರಬರುವುದು, ಥಳಥಳಿಸುತ್ತಾ ಅವನ ಪಿತ್ತಕೋಶದೊಳಗಿಂದ ಹೊರಡುತ್ತಿರುವುದು, ಭಯಭ್ರಾಂತಿಗಳು ಅವನನ್ನು ಮುತ್ತಿಕೊಳ್ಳುವವು.
26ಅವನ ನಿಧಿನಿಕ್ಷೇಪಗಳಿಗಾಗಿ ಪೂರ್ಣಾಂಧಕಾರವು ಕಾದಿರುವುದು, ಯಾರೂ ಹೊತ್ತಿಸದ ಬೆಂಕಿಯು ಅವನನ್ನು ತಿಂದುಹಾಕಿ, ಅವನ ಗುಡಾರದಲ್ಲಿ ತಪ್ಪಿಸಿಕೊಂಡದ್ದನ್ನು ಮೇದು ಬಿಡುವುದು.
27ಆಕಾಶವು ಅವನ ಪಾಪವನ್ನು ಬಯಲುಪಡಿಸುವುದು. ಭೂಮಿಯು ಅವನ ವಿರುದ್ಧ ಸಾಕ್ಷಿಯಾಗಿ ಏಳುವುದು.
28ದೇವರ ಸಿಟ್ಟಿನ ದಿನದಲ್ಲಿ ಅವನ ಮನೆಯ ಧನಧಾನ್ಯಗಳು, ಪ್ರವಾಹದಿಂದ ಕೊಚ್ಚಿಕೊಂಡು ತೊಲಗಿಹೋಗುವವು.
29ದುಷ್ಟನಿಗೆ ದೇವರಿಂದ ದೊರೆಯುವ ಪಾಲೂ, ದೇವರು ನೇಮಿಸಿರುವ ಸ್ವಾಸ್ತ್ಯವೂ ಇವೇ.”