14ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬೆಲಿನ ವಿದ್ವಾಂಸರ ಸಂಹಾರಕ್ಕೆ ಹೊರಟಾಗ, ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತನಾಡಿ,
15“ಈ ರಾಜಾಜ್ಞೆಯು ಏಕೆ ಇಷ್ಟು ಉಗ್ರವಾಗಿದೆ?” ಎಂದು ಕೇಳಲು ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು.
16ಆ ಮೇಲೆ ದಾನಿಯೇಲನು ಅರಮನೆಗೆ ಬಂದು, “ನನಗೆ ಸಮಯವನ್ನು ಕೊಟ್ಟರೆ ನಾನು ಆ ಕನಸಿನ ಅರ್ಥವನ್ನು ರಾಜನಿಗೆ ವಿವರಿಸುವೆನು” ಎಂದು ಅರಿಕೆ ಮಾಡಿದನು.
17ಬಳಿಕ ದಾನಿಯೇಲನು ತನ್ನ ಮನೆಗೆ ಹೋಗಿ ಹನನ್ಯ, ಮೀಶಾಯೇಲ, ಅಜರ್ಯ ಎಂಬ ತನ್ನ ಸ್ನೇಹಿತರಿಗೆ,
18“ದಾನಿಯೇಲನು ಆ ಸಮಾಚಾರವನ್ನು ತಿಳಿಸಿ, ನಾವು ಬಾಬೆಲಿನ ಇತರ ವಿದ್ವಾಂಸರೊಂದಿಗೆ ನಾಶವಾಗದಂತೆ ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆತೋರಿಸಲು ಆತನನ್ನು ಬೇಡಿಕೊಳ್ಳೋಣ” ಎಂದನು.
19ಆಗ ಆ ರಹಸ್ಯವು ರಾತ್ರಿಯ ಸ್ವಪ್ನದಲ್ಲಿ ದಾನಿಯೇಲನಿಗೆ ಪ್ರಕಟವಾಯಿತು. ಕೂಡಲೆ ದಾನಿಯೇಲನು ಪರಲೋಕ ದೇವರನ್ನು ಹೀಗೆ ಸ್ತುತಿಸಿದನು,
20“ದೇವರ ನಾಮಕ್ಕೆ ಯುಗಯುಗಾಂತರಗಳಲ್ಲಿಯೂ ಸ್ತುತಿಸ್ತೋತ್ರ ಉಂಟಾಗಲಿ! ಜ್ಞಾನ ತ್ರಾಣಗಳು ಆತನವುಗಳೇ.
21ಕಾಲ ಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ಕಡೆಗಣಿಸುತ್ತಾನೆ, ನೆಲೆಸುವಂತೆ ಮಾಡುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ.
22ಆತನು ಅಗಾಧ ವಿಷಯಗಳನ್ನೂ ಗೂಢಾರ್ಥಗಳನ್ನೂ ಬಯಲಿಗೆ ತರುತ್ತಾನೆ; ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರವಾಗುವುದು; ತೇಜಸ್ಸು ಆತನಲ್ಲೇ ನೆಲೆಗೊಂಡಿದೆ.
23ನನ್ನ ಪೂರ್ವಿಕರ ದೇವರೇ, ನಿನ್ನನ್ನು ಸ್ತುತಿಸುತ್ತೇನೆ, ಕೊಂಡಾಡುತ್ತೇನೆ, ನೀನು ನನಗೆ ಜ್ಞಾನತ್ರಾಣಗಳನ್ನು ದಯಪಾಲಿಸಿ ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದ್ದಿಯಲ್ಲಾ; ಹೌದು, ರಾಜನ ರಹಸ್ಯವನ್ನು ನಮಗೆ ಪ್ರಕಟಪಡಿಸಿರುವೆ” ಎಂದನು.