Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಪ್ರಲಾ

ಪ್ರಲಾ 3

Help us?
Click on verse(s) to share them!
1ಯೆಹೋವನ ರೌದ್ರದಂಡದ ಪೆಟ್ಟನ್ನು ತಿಂದವನು ನಾನೇ.
2ಆತನೇ ನನ್ನನ್ನು ಕರೆದುಕೊಂಡು ಹೋಗಿ ಬೆಳಕಿನಲ್ಲಿ ಅಲ್ಲ, ಕತ್ತಲಲ್ಲೇ ನಡೆಯಮಾಡಿದ್ದಾನೆ.
3ನಿಶ್ಚಯವಾಗಿ ಆತನು ನನಗೆ ವಿರುದ್ಧವಾಗಿದ್ದಾನೆ. ದಿನವೆಲ್ಲಾ ನನ್ನ ಮೇಲೆ ಕೈಮಾಡುತ್ತಾ ಬಂದಿದ್ದಾನೆ.
4ನನ್ನ ಮಾಂಸಚರ್ಮಗಳನ್ನು ಕ್ಷೀಣಿಸುವಂತೆ ಮಾಡಿ, ನನ್ನ ಎಲುಬುಗಳನ್ನು ಮುರಿದಿದ್ದಾನೆ;
5ನನ್ನ ಸುತ್ತಲು ಶ್ರಮಸಂಕಟಗಳ ದಿಬ್ಬಗಳನ್ನು ಹಾಕಿದ್ದಾನೆ.
6ಕಾರ್ಗತ್ತಲಲ್ಲಿ ನನ್ನನ್ನು ಇರಿಸಿದ್ದಾನೆ; ಬಹುಕಾಲದ ಹಿಂದೆ ಸತ್ತವರ ಹಾಗೆ ನಾನು ಇದ್ದೇನೆ.
7ನಾನು ತಪ್ಪಿಸಿಕೊಂಡು ಹೋಗದಂತೆ ನನ್ನ ಸುತ್ತಲು ಗೋಡೆಯನ್ನು ಕಟ್ಟಿ, ನನಗೆ ಭಾರವಾದ ಬೇಡಿಯನ್ನು ಹಾಕಿದ್ದಾನೆ.
8ಇದಲ್ಲದೆ ನಾನು ಮೊರೆಯಿಟ್ಟು ಕೂಗಿಕೊಂಡರೂ ನನ್ನ ಬಿನ್ನಹಕ್ಕೆ ಕಿವಿಗೊಡುತ್ತಿಲ್ಲ.
9ನನ್ನ ದಾರಿಗಳಿಗೆ ಅಡ್ಡವಾಗಿ ಕೆತ್ತನೆಯ ಕಲ್ಲಿನ ಗೋಡೆಗಳನ್ನು ಹಾಕಿ, ಹಾದಿಗಳನ್ನು ಸುತ್ತುವರಿಯುವಂತೆ ಮಾಡಿದ್ದಾನೆ.
10ಆತನು ನನಗೆ ಹೊಂಚುಹಾಕುತ್ತಿರುವ ಕರಡಿಯಂತಿದ್ದಾನೆ, ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿರುವ ಸಿಂಹದ ಹಾಗಿದ್ದಾನೆ.
11ನಾನು ನಡೆದ ದಾರಿಗಳಿಂದ ನನ್ನನ್ನು ತಪ್ಪಿಸಿದ್ದಾನೆ. ಆತನು ನನ್ನನ್ನು ದಿಕ್ಕಿಲ್ಲದವನಂತೆ ಮಾಡಿದ್ದಾನೆ.
12ತನ್ನ ಬಿಲ್ಲನ್ನು ಬೊಗ್ಗಿಸಿ ಬಾಣಕ್ಕೆ ನನ್ನನ್ನು ಗುರಿಮಾಡಿಕೊಂಡಿದ್ದಾನೆ.
13ತನ್ನ ಬತ್ತಳಿಕೆಯ ಅಂಬುಗಳಿಂದ ನನ್ನ ಅಂತರಂಗಗಳನ್ನು ಇರಿದಿದ್ದಾನೆ.
14ನಾನು ಸ್ವಜನರೆಲ್ಲರಿಗೂ ಹಾಸ್ಯಾಸ್ಪದನಾಗಿ, ಹಗಲೆಲ್ಲಾ ಅವರ ಗೇಲಿಯ ಮಾತು ಮತ್ತು ಹಾಡುಗಳಿಗೆ ಗುರಿಯಾಗಿದ್ದೇನೆ.
15ಆತನು ನನಗೆ ಕಹಿಯಾದ ಆಹಾರವನ್ನು ಕೊಟ್ಟು, ವಿಷ ಪಾನವನ್ನು ಕುಡಿಯಮಾಡಿದ್ದಾನೆ.
16ನಾನು ಗರಸು ಕಲ್ಲುಚೂರುಗಳನ್ನು ಅಗೆಯುವಂತೆ ಮಾಡಿ ನನ್ನ ಹಲ್ಲುಗಳನ್ನು ಮುರಿದುಬಿಟ್ಟು, ನನ್ನನ್ನು ಬೂದಿಯಲ್ಲಿ ತಳ್ಳಿದ್ದಾನೆ.
17ನನ್ನನ್ನು ತಳ್ಳಿಹಾಕಿ ಸಮಾಧಾನಕ್ಕೆ ದೂರಮಾಡಿದ್ದೀ; ನಾನು ಸಂತೋಷವನ್ನು ಮರೆಯುವಂತೆ ಮಾಡಿದ್ದಾನೆ.
18“ಅಯ್ಯೋ, ನನ್ನ ಶಕ್ತಿಯೆಲ್ಲಾ ಹಾಳಾಯಿತು, ಯೆಹೋವನು ನನಗೆ ದಯಪಾಲಿಸಿದ ನಿರೀಕ್ಷೆಯೂ ವ್ಯರ್ಥವಾಯಿತು” ಅಂದುಕೊಂಡೆನು.

19ನಾನು ಅಲೆದು ಕಷ್ಟಪಟ್ಟದ್ದನ್ನು ನೆನಪಿಗೆ ತಂದುಕೋ, ಕಹಿಯಾದ ನನ್ನ ಆಹಾರಪಾನಗಳನ್ನು ಜ್ಞಾಪಕಮಾಡಿಕೋ.
20ನನ್ನ ಆತ್ಮವು ಇವುಗಳನ್ನು ನಿತ್ಯವೂ ಜ್ಞಾಪಿಸಿಕೊಳ್ಳುತ್ತಾ ನನ್ನೊಳಗೆ ಕುಗ್ಗಿದೆ.
21ಹೀಗಿರಲು ನಾನು ನಿನ್ನ ಕರುಣೆಯನ್ನು ನೆನಪಿಗೆ ತಂದುಕೊಳ್ಳುತ್ತೇನೆ, ಅದರಿಂದ ನನಗೆ ನಿರೀಕ್ಷೆಯುಂಟಾಗುತ್ತದೆ!
22ನಾನು ಉಳಿದಿರುವುದು ಒಡಂಬಡಿಕೆಗೆ ಬದ್ಧವಾಗಿರುವ ಆತನ ನಂಬಿಗಸ್ತಿಕೆಯಿಂದಲೇ; ಯೆಹೋವನ ಕೃಪಾವರಗಳ ಕಾರ್ಯಗಳು ನಿಂತುಹೋಗವು.
23ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ನಂಬಿಗಸ್ತಿಕೆಯು ದೊಡ್ಡದು!
24“ಯೆಹೋವನೇ ನನ್ನ ಪಾಲು, ಆದಕಾರಣ ಆತನನ್ನು ನಿರೀಕ್ಷಿಸುವೆನು” ಎಂದು ನನ್ನ ಅಂತರಾತ್ಮವು ಅಂದುಕೊಳ್ಳುತ್ತದೆ.
25ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಮತ್ತು ಹುಡುಕುವವರಿಗೂ ಮಹೋಪಕಾರಿಯಾಗಿದ್ದಾನೆ.
26ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ ಕಾದುಕೊಂಡಿರುವುದು ಒಳ್ಳೇಯದು.
27ಯೌವನದಲ್ಲಿ ನೊಗಹೊರುವುದು ಮನುಷ್ಯನಿಗೆ ಹಿತಕರ.
28ನನ್ನ ಮೇಲೆ ಇದನ್ನು ಹೊರಿಸಿದವನು ಯೆಹೋವನೇ ಎಂದು ಅವನು ಒಂಟಿಗನಾಗಿ ಕುಳಿತು ಮೌನವಾಗಿರಲಿ.
29ಒಂದು ವೇಳೆ ಯೆಹೋವನಿಂದ ಸುಗತಿಯಾದೀತೆಂಬ ನಿರೀಕ್ಷೆಯಿಂದ ತನ್ನ ಮುಖವನ್ನು ಕೊಳಕಿನ ಮೇಲೆ ಹಾಕಲಿ.
30ಹೊಡೆಯುವವನಿಗೆ ತನ್ನ ಕೆನ್ನೆಯನ್ನು ಕೊಟ್ಟು ಅವಮಾನವನ್ನು ಹೊಟ್ಟೆತುಂಬಾ ತಿನ್ನಲಿ.
31ಕರ್ತನು ನಿರಂತರಕ್ಕೂ ಕೈ ಬಿಡುವವನಲ್ಲ.
32ಆತನು ವ್ಯಥೆಗೊಳಿಸಿದರೇನು, ತನ್ನ ಕೃಪಾತಿಶಯದಿಂದ ಕನಿಕರಿಸುವನು.
33ನರಜನ್ಮದವರನ್ನು ಬಾಧಿಸಿ, ವ್ಯಥೆಗೊಳಿಸುವುದು ಆತನಿಗೆ ಇಷ್ಟವಿಲ್ಲ.
34ಲೋಕದ ಸೆರೆಯವರನ್ನೆಲ್ಲಾ ತನ್ನ ಕಾಲುಗಳ ಕೆಳಗೆ ತುಳಿದುಬಿಡುವುದೂ,
35ಪರಾತ್ಪರನಾದ ದೇವರ ಸನ್ನಿಧಿಯಲ್ಲಿ ನ್ಯಾಯವನ್ನು ತಪ್ಪಿಸುವುದೂ,
36ವ್ಯಾಜ್ಯವನ್ನು ಅನ್ಯಾಯವಾಗಿ ತೀರಿಸುವುದೂ, ಇವುಗಳನ್ನು ಕರ್ತನು ಲಕ್ಷ್ಯಕ್ಕೆ ತಾರನೇ?

37ಕರ್ತನ ಅಪ್ಪಣೆಯಿಲ್ಲದೆ ಯಾರ ಮಾತು ಸಾರ್ಥಕವಾದೀತು?
38ಪರಾತ್ಪರನಾದ ದೇವರ ಬಾಯಿಯ ಮಾತಿನಿಂದಲೇ ಮೇಲು ಮತ್ತು ಕೇಡುಗಳು ಸಂಭವಿಸುತ್ತವಲ್ಲಾ.
39ಮನುಷ್ಯನಿಗೆ ಜೀವ ವರವಿರಲು ತನ್ನ ಪಾಪದ ಶಿಕ್ಷೆಗಾಗಿ ಗುಣುಗುಟ್ಟುವುದೇಕೆ?
40ನಮ್ಮ ನಡತೆಯನ್ನು ಶೋಧಿಸಿ, ಪರೀಕ್ಷಿಸಿಕೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳೋಣ.
41ಪರಲೋಕದಲ್ಲಿರುವ ದೇವರ ಕಡೆಗೆ ನಮ್ಮ ಕೈಗಳೊಡನೆ ಮನಸ್ಸನ್ನೂ ತಿರುಗಿಸಿ ಸ್ತುತಿಸೋಣ.
42“ನಾವು ಅವಿಧೇಯರಾಗಿ ದ್ರೋಹಮಾಡಿದ್ದೇವೆ; ನೀನು ಕ್ಷಮಿಸಲಿಲ್ಲ.
43ನೀನು ರೋಷವನ್ನು ಹೊದ್ದುಕೊಂಡು ನಮ್ಮನ್ನು ಹಿಂದಟ್ಟಿದ್ದೀ; ಕನಿಕರಿಸದೆ ಕೊಂದು ಹಾಕಿದ್ದೀ.
44ನಮ್ಮ ಪ್ರಾರ್ಥನೆಯು ನಿನಗೆ ಮುಟ್ಟಬಾರದೆಂದು ಮೋಡವನ್ನು ಮರೆಮಾಡಿಕೊಂಡಿದ್ದೀ.
45ನಮ್ಮನ್ನು ಜನಾಂಗಗಳ ಮಧ್ಯದಲ್ಲಿ ಕಸವನ್ನಾಗಿಯೂ ಮತ್ತು ಹೊಲಸನ್ನಾಗಿಯೂ ಹಾಕಿಬಿಟ್ಟಿದ್ದೀ.
46ನಮ್ಮ ಶತ್ರುಗಳೆಲ್ಲಾ ನಮ್ಮನ್ನು ನೋಡಿ ಹಾಸ್ಯಮಾಡುತ್ತಾರೆ.
47ಭಯವೂ, ಗುಂಡಿಯೂ, ಸಂಹಾರವೂ ಮತ್ತು ಭಂಗವೂ ನಮಗೆ ಕಾದಿವೆ.”
48ಸ್ವಜನರು ನಾಶವಾದ ಕಾರಣ ನನ್ನ ಕಣ್ಣೀರು ಹೊಳೆಹೊಳೆಯಾಗಿ ಹರಿಯುವುದು.
49ಯೆಹೋವನು ಆಕಾಶದಿಂದ ಕಟಾಕ್ಷಿಸಿ ನೋಡುವ ತನಕ
50ನನ್ನ ಕಣ್ಣುಗಳು ನಿರಂತರವಾಗಿ ಅಶ್ರುಧಾರೆ ಸುರಿಸುವುದನ್ನು, ಎಂದಿಗೂ ಬಿಡದು.
51ನನ್ನ ಪಟ್ಟಣದ ಕನ್ಯೆಯರಿಗಾಗಿ ಅಳುತ್ತಿರುವ ನಾನು ಕಣ್ಣುರಿಯಿಂದ ಪೀಡಿತನಾಗಿದ್ದೇನೆ.
52ನಿಷ್ಕಾರಣವಾಗಿ ನನ್ನ ವೈರಿಗಳು ಪಕ್ಷಿಯನ್ನೋ ಎಂಬಂತೆ ನನ್ನನ್ನು ಆತುರದಿಂದ ಹಿಂದಟ್ಟಿದರು.
53ನನ್ನನ್ನು ನೆಲಮಾಳಿಗೆಯಲ್ಲಿ ಇಳಿಸಿ ಕಲ್ಲುಮುಚ್ಚಿ ನನ್ನ ಪ್ರಾಣವನ್ನು ತೆಗೆದುಬಿಟ್ಟರು
54ಪ್ರವಾಹವು ನನ್ನನ್ನು ಮುಣುಗಿಸಿತು; ಆಗ ಸತ್ತೆನು ಅಂದುಕೊಂಡೆನು.

55ಯೆಹೋವನೇ, ಅಗಾಧವಾದ ನೆಲಮಾಳಿಗೆಯಲ್ಲಿ ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು.
56ನೀನು ನನ್ನ ಧ್ವನಿಯನ್ನು ಕೇಳಿದಿ; ನನ್ನ ನಿಟ್ಟುಸಿರಿಗೂ ಮತ್ತು ಮೊರೆಗೂ ಕಿವಿಯನ್ನು ಮರೆಮಾಡಿಕೊಳ್ಳಬೇಡ!
57ನಾನು ನಿನ್ನನ್ನು ಕೂಗಿಕೊಂಡಾಗ ನನ್ನ ಸಮೀಪಕ್ಕೆ ಬಂದು “ಭಯಪಡಬೇಡ” ಎಂದು ಅಭಯವಚನ ನೀಡಿದೆ.
58ಕರ್ತನೇ, ನೀನು ನನ್ನ ವ್ಯಾಜ್ಯಗಳನ್ನು ನಡಿಸಿ, ನನ್ನ ಪ್ರಾಣವನ್ನು ಉಳಿಸಿದ್ದೀ.
59ಯೆಹೋವನೇ, ನನಗಾದ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯತೀರಿಸು.
60ನನ್ನ ವೈರಿಗಳು ನನ್ನ ಮೇಲೆ ತೀರಿಸಿದ ಹಗೆಯನ್ನೂ ಮತ್ತು ಕಲ್ಪಿಸಿಕೊಂಡ ಯುಕ್ತಿಗಳನ್ನೂ ನೋಡಿದ್ದೀಯಲ್ಲಾ.
61ಯೆಹೋವನೇ, ಅವರು ನನಗೆ ವಿರುದ್ಧವಾಗಿ ಮಾಡಿದ ದೂಷಣೆಯೂ, ನನ್ನ ಹಾನಿಗಾಗಿ ಕಲ್ಪಿಸಿದ ಕುಯುಕ್ತಿಗಳೂ,
62ನಿತ್ಯ ನಡಿಸುತ್ತಿರುವ ತಂತ್ರೋಪಾಯವೂ ಮತ್ತು ನನ್ನ ಎದುರಾಳಿಗಳ ನಿಂದೆಯೂ ನಿನ್ನ ಕಿವಿಗೆ ಬಿದ್ದಿವೆಯಷ್ಟೆ.
63ಅವರು ಕುಳಿತುಕೊಳ್ಳಲಿ, ಏಳಲಿ ನೋಡುತ್ತಲೇ ಇರು; ನಾನು ಅವರ ಗೇಲಿಯ ಹಾಡಿಗೆ ಗುರಿಯಾಗಿದ್ದೇನೆ.
64ಯೆಹೋವನೇ, ಅವರ ದುಷ್ಕೃತ್ಯಗಳಿಗೆ ಸರಿಯಾದ ಪ್ರತಿಫಲವನ್ನು ನೀನು ಅವರಿಗೆ ಕೊಡುವಿ;
65ಅವರ ಮನಸ್ಸಿನಲ್ಲಿ ಭಯಹುಟ್ಟಿಸುವಿ, ನಿನ್ನ ಶಾಪವು ಅವರ ಮೇಲಿರಲಿ!
66ನೀನು ಕೋಪಗೊಂಡು ಅವರನ್ನು ಹಿಂದಟ್ಟಿ ಅವರು ನಿನ್ನ ಕೈಕೆಲಸವಾಗಿರುವ ಆಕಾಶದ ಕೆಳಗೆ ಉಳಿಯದಂತೆ ಅಳಿಸಿಬಿಡುವಿ.