Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಆದಿ - ಆದಿ 4

ಆದಿ 4:4-16

Help us?
Click on verse(s) to share them!
4ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮ ಮಾಡಿದನು, ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನು ಮೆಚ್ಚಿಕೊಂಡನು.
5ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು, ಅವನ ಮುಖವು ಸಿಟ್ಟಿನಿಂದ ಕಳೆಗುಂದಿತು.
6ಆಗ ಯೆಹೋವನು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ?
7ನಿನ್ನ ಮುಖವು ಕಳೆಗುಂದಲು ಕಾರಣವೇನು? ನೀನು ತಲೆ ತಗ್ಗಿಸಲು ಕಾರಣವೇನು? ನೀನು ಒಳ್ಳೆಯ ಕೆಲಸ ಮಾಡಿದ್ದರೆ ನಿನ್ನ ತಲೆಯು ಎತ್ತಲ್ಪಡುವುದಲ್ಲವೇ? ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು, ಅದು ನಿನ್ನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಆದರೆ ನೀನು ಅದನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕು” ಎಂದು ಹೇಳಿದನು.
8ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನ ಸಂಗಡ ಮಾತನಾಡಿದನು. ಅವರು ಹೊಲದಲ್ಲಿದ್ದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.
9ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನು ಎಲ್ಲಿ?” ಎಂದು ಕೇಳಲು ಅವನು, “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?” ಎಂದು ಉತ್ತರ ಕೊಟ್ಟನು.
10ಅದಕ್ಕೆ ಯೆಹೋವನು, “ನೀನು ಏನು ಮಾಡಿದೆ? ಭೂಮಿಯ ಕಡೆಯಿಂದ ಕೂಗಿ ನನಗೆ ಮೊರೆಯಿಡುತ್ತಿದೆ. ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ಕೂಗಿ ನನಗೆ ಮೊರೆಯಿಡುತ್ತಿದೆ.
11ಈಗ ನೀನು ನಿನ್ನ ಕೈಯಿಂದ ಸುರಿಸಿದ, ನಿನ್ನ ತಮ್ಮನ ರಕ್ತದಿಂದ ನೆನೆದ ಈ ಭೂಮಿಯಿಂದ ನಿನಗೆ ಶಾಪ ಬಂತು.
12ನೀನು ಭೂಮಿಯನ್ನು ವ್ಯವಸಾಯ ಮಾಡಿದರೂ, ಅದು ಇನ್ನು ಮುಂದೆ ನಿನಗೆ ಫಲಕೊಡುವುದಿಲ್ಲ. ನೀನು ಭೂಲೋಕದಲ್ಲಿ ಅಲೆದಾಡುವವನು ದೇಶ ಭ್ರಷ್ಟನೂ ಆಗಿರುವಿ” ಎಂದನು.
13ಆಗ ಕಾಯಿನನು ಯೆಹೋವನಿಗೆ, “ನನ್ನ ಅಪರಾಧದ ಫಲ ಸಹಿಸಲಾರದಷ್ಟಾಗಿದೆ.
14ಇಗೋ, ನೀನು ಈ ಹೊತ್ತು ನನ್ನನ್ನು ಸ್ವದೇಶದಿಂದ ಓಡಿಸಿ ಬಿಟ್ಟಿದ್ದೀಯಲ್ಲಾ! ನಿನ್ನ ಸಮ್ಮುಖದಿಂದ ಮರೆಯಾಗಿರುವೆನು. ಆದ್ದರಿಂದ ನಾನು ಭೂಮಿಯಲ್ಲಿ ಅಲೆಮಾರಿಯಾಗಿ ದೇಶಭ್ರಷ್ಟನೂ ಆಗಬೇಕಾಯಿತು; ಇದಲ್ಲದೆ ನನ್ನನ್ನು ಕಂಡವರು ನನ್ನನ್ನು ಕೊಲ್ಲುವರು” ಎಂದು ಹೇಳಿದನು.
15ಅದಕ್ಕೆ ಯೆಹೋವನು, “ಕಾಯಿನನ ಪ್ರಾಣವನ್ನು ತೆಗೆದವನಿಗೆ ಏಳರಷ್ಟು ಪ್ರತಿದಂಡನೆಯಾಗುವುದು” ಎಂದು ಹೇಳಿದನು. ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಯೆಹೋವನು ಅವನ ಮೇಲೆ ಒಂದು ಗುರುತನ್ನು ಇಟ್ಟನು.
16ಆಗ ಕಾಯಿನನು ಯೆಹೋವನ ಸನ್ನಿಧಿಯಿಂದ ಹೊರಟು ಹೋಗಿ ಏದೆನ್ ಪೂರ್ವದಲ್ಲಿದ್ದ ನೋದ್ ಎಂಬ ದೇಶದಲ್ಲಿ ನೆಲೆಸಿದನು.

Read ಆದಿ 4ಆದಿ 4
Compare ಆದಿ 4:4-16ಆದಿ 4:4-16