Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೆಹೋ

ಯೆಹೋ 8

Help us?
Click on verse(s) to share them!
1ಅನಂತರ ಯೆಹೋವನು ಯೆಹೋಶುವನಿಗೆ “ಅಂಜಬೇಡ, ಕಳವಳಗೊಳ್ಳಬೇಡ; ಎದ್ದು ಭಟರೆಲ್ಲರನ್ನೂ ಕರೆದುಕೊಂಡು ಆಯಿ ಪಟ್ಟಣಕ್ಕೆ ಹೋಗು. ನೋಡು, ಆಯಿ ಎಂಬ ಊರಿನ ಅರಸ, ಪ್ರಜೆ, ನಗರ, ಸೀಮೆ ಇವುಗಳನ್ನೆಲ್ಲಾ ನಿನಗೆ ಕೊಟ್ಟಿದ್ದೇನೆ.
2ಯೆರಿಕೋವಿಗೂ ಅದರ ಅರಸನಿಗೂ ಮಾಡಿದಂತೆಯೇ ಆಯಿಗೂ ಅದರ ಅರಸನಿಗೂ ಮಾಡು. ಆದರೆ ಕೊಳ್ಳೆಯನ್ನೂ ಪಶುಪ್ರಾಣಿಗಳನ್ನೂ ನಿಮಗೋಸ್ಕರ ತೆಗೆದುಕೊಳ್ಳಬಹುದು. ನಿಮ್ಮಲ್ಲಿ ಕೆಲವರು ಆ ಊರಿನ ಹಿಂಬದಿಯಲ್ಲಿ ಹೊಂಚುಹಾಕಿಕೊಂಡಿರಲಿ” ಎಂದು ಆಜ್ಞಾಪಿಸಿದನು.
3ಅಂತೆಯೇ ಯೆಹೋಶುವನು ಎದ್ದು ಭಟರೆಲ್ಲರ ಸಹಿತವಾಗಿ ಆಯಿಗೆ ಹೋಗುವುದಕ್ಕೋಸ್ಕರ ಸಿದ್ಧನಾಗಿ ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿ ಅವರಿಗೆ
4“ನೀವು ಪಟ್ಟಣದ ಹಿಂಭಾಗದಲ್ಲಿ ಹೊಂಚುಹಾಕಿ ಕುಳಿತಿರಬೇಕು. ಪಟ್ಟಣಕ್ಕೆ ಬಹುದೂರವಾಗಿರಬೇಡಿರಿ; ಎಲ್ಲರೂ ಸಿದ್ಧವಾಗಿರಿ.
5ನಾನೂ ಮತ್ತು ನನ್ನ ಸಂಗಡ ಇರುವ ಜನರೆಲ್ಲರೂ ಪಟ್ಟಣದ ಸಮೀಪಕ್ಕೆ ಹೋಗುವೆವು. ಅವರು ಮೊದಲಿನಂತೆ ನಮ್ಮೊಡನೆ ಯುದ್ಧಕ್ಕೆ ಬಂದ ಕೂಡಲೆ ನಾವು ಓಡಿ ಹೋಗುವೆವು.
6ಇವರು ಮೊದಲಿನಂತೆ ನಮಗೆ ಹೆದರಿ ಓಡಿಹೋಗುತ್ತಿದ್ದಾರೆಂದು ತಿಳಿದು ಅವರು ನಮ್ಮನ್ನು ಹಿಂದಟ್ಟುವರು; ನಾವು ಓಡುತ್ತಲೇ ಇರುವೆವು.
7ನಾವೂ ಅವರೂ ಪಟ್ಟಣದಿಂದ ದೂರವಾದ ಕೂಡಲೇ ನೀವು ಹೊಂಚಿ ಕುಳಿತ್ತಿದ್ದ ಸ್ಥಳದಿಂದ ಎದ್ದು ಪಟ್ಟಣದೊಳಗೆ ನುಗ್ಗಿ ಅದನ್ನು ಸ್ವಾಧೀನ ಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ಅದನ್ನು ನಿಮ್ಮ ಕೈಗೆ ಒಪ್ಪಿಸುವನು.
8ನೀವು ಪಟ್ಟಣವನ್ನು ಹಿಡಿದ ಕೂಡಲೆ ಅದಕ್ಕೆ ಬೆಂಕಿ ಹೊತ್ತಿಸಿರಿ. ಯೆಹೋವನ ಮಾತಿನಂತೆ ನಡೆಯಿರಿ. ಇದೇ ನಾನು ನಿಮಗೆ ಕೊಡುವ ಆಜ್ಞೆ” ಎಂದು ಹೇಳಿ ಅವರನ್ನು ರಾತ್ರಿಯಲ್ಲಿಯೇ ಕಳುಹಿಸಿದನು.
9ಅವರು ಹೊಂಚುಹಾಕುವುದಕ್ಕೆ ಹೊರಟುಹೋಗಿ ಬೇತೇಲಿಗೂ ಆಯಿಗೂ ನಡುವೆ ಆಯಿ ಎಂಬ ಊರಿನ ಪಶ್ಚಿಮದಲ್ಲಿ ಅಡಗಿಕೊಂಡರು. ಯೆಹೋಶುವನು ಆ ರಾತ್ರಿಯನ್ನು ಜನರ ಮಧ್ಯದಲ್ಲಿ ಕಳೆದನು.
10ಅವನು ಬೆಳಿಗ್ಗೆ ಎದ್ದು ಇಸ್ರಾಯೇಲ್ಯರ ಹಿರಿಯರ ಸಂಗಡ ಸೈನ್ಯವನ್ನು ಕೂಡಿಸಿ ಅವರ ಮುಂದಾಗಿ ಆಯಿಗೆ ಹೊರಟನು.
11ಅವನ ಸಂಗಡ ಇದ್ದ ಭಟರೆಲ್ಲರೂ ಗಟ್ಟಾಹತ್ತಿ ಪಟ್ಟಣದ ಸಮೀಪಕ್ಕೆ ಬಂದು ಅದರ ಉತ್ತರದಿಕ್ಕಿನಲ್ಲಿ ಇಳಿದುಕೊಂಡರು. ಅವರಿಗೂ ಆಯಿಗೂ ನಡುವೆ ಒಂದು ತಗ್ಗು ಇತ್ತು.
12ಯೆಹೋಶುವನು ಹೆಚ್ಚುಕಡಿಮೆ ಐದು ಸಾವಿರ ಜನರನ್ನು ಆರಿಸಿಕೊಂಡು ಬೇತೇಲಿಗೂ ಆಯಿಗೂ ನಡುವೆ ಇರುವ ಪಟ್ಟಣದ ಪಶ್ಚಿಮದಲ್ಲಿ ಹೊಂಚಿನೋಡುವುದಕ್ಕೋಸ್ಕರ ಇರಿಸಿದನು.
13ಪಟ್ಟಣದ ಉತ್ತರದಲ್ಲಿದ್ದ ಎಲ್ಲಾ ಸೈನ್ಯವನ್ನೂ ಪಟ್ಟಣದ ಪಶ್ಚಿಮದಲ್ಲಿ ಹೊಂಚಿನೋಡುತ್ತಿದ್ದ ಸೈನ್ಯವನ್ನೂ ಕ್ರಮಪಡಿಸಿಕೊಂಡು ಯೆಹೋಶುವನು ಆ ರಾತ್ರಿಯಲ್ಲಿ ಕಣಿವೆಗೆ ಹೋದನು.
14ಆಯಿ ಎಂಬ ಊರಿನ ಅರಸನು ಬೆಳಿಗ್ಗೆ ಇದನ್ನು ತಿಳಿದು ತ್ವರೆಯಾಗಿ ಜನರೆಲ್ಲರ ಸಹಿತವಾಗಿ ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡುವುದಕ್ಕೆ ಹೊರಟನು. ಅವನೂ ಅವನ ಜನರೂ ಅರಾಬಾ ಎಂಬ ಕಣಿವೆಯ ಪ್ರದೇಶವು ಕಾಣುವ ಸ್ಥಳಕ್ಕೆ ಬಂದರು. ಪಟ್ಟಣದ ಹಿಂಭಾಗದಲ್ಲಿ ಹೊಂಚಿನೋಡುತ್ತಿರುವುದು ಅವನಿಗೆ ಗೊತ್ತಿರಲಿಲ್ಲ.
15ಯೆಹೋಶುವನೂ ಅವನ ಸಂಗಡ ಇದ್ದ ಇಸ್ರಾಯೇಲ್ಯರೆಲ್ಲರೂ ತಾವು ಸೋತವರೋ ಎಂಬಂತೆ ಅರಣ್ಯಮಾರ್ಗವಾಗಿ ಓಡತೊಡಗಿದರು.
16ಆಯಿ ಎಂಬ ಪಟ್ಟಣದವರು ಊರಿನಲ್ಲಿದ್ದ ತಮ್ಮ ಎಲ್ಲಾ ಜನರನ್ನೂ ಕರೆದುಕೊಂಡು ಯೆಹೋಶುವನನ್ನು ಹಿಂದಟ್ಟುತ್ತಾ ಪಟ್ಟಣವನ್ನು ದೂರವಾಗಿ ಓಡತೊಡಗಿದರು.
17ಆಯಿ ಎಂಬ ಊರಿನಲ್ಲಿಯೂ ಬೇತೇಲಿನಲ್ಲಿಯೂ ಒಬ್ಬ ಗಂಡಸಾದರೂ ಉಳಿಯಲಿಲ್ಲ. ಊರಬಾಗಿಲುಗಳನ್ನು ತೆರೆದು ಬಿಟ್ಟು ಎಲ್ಲರೂ ಇಸ್ರಾಯೇಲ್ಯರನ್ನು ಹಿಂದಟ್ಟುವುದಕ್ಕೋಸ್ಕರ ಹೊರಟರು.
18ಯೆಹೋವನು ಯೆಹೋಶುವನಿಗೆ “ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿ ಎಂಬ ಊರಿನ ಕಡೆಗೆ ಚಾಚು; ಆ ಪಟ್ಟಣವನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ” ಎನ್ನಲು ಅವನು ಅದನ್ನು ಚಾಚಿದನು.

19ಅವನು ಈಟಿಯನ್ನು ಚಾಚಿದ ಕೂಡಲೆ ಹೊಂಚಿನೋಡುತ್ತಿದ್ದವರು ತಾವಿದ್ದ ಸ್ಥಳದಿಂದ ಎದ್ದು ಓಡಿಬಂದು ಪಟ್ಟಣದೊಳಕ್ಕೆ ನುಗ್ಗಿ ಕೂಡಲೆ ಅದಕ್ಕೆ ಬೆಂಕಿ ಹಚ್ಚಿದರು.
20ಆಯಿ ಎಂಬ ಊರಿನ ಜನರು ಹಿಂದಿರುಗಿ ನೋಡಿದಾಗ ಪಟ್ಟಣದ ಹೊಗೆಯು ಆಕಾಶದೆತ್ತರಕ್ಕೆ ಏರಿಹೋಗುವುದನ್ನು ಕಂಡು ಯಾವ ಮಾರ್ಗದಿಂದಲೂ ತಪ್ಪಿಸಿಕೊಳ್ಳಲಾರದೆ ಇದ್ದರು. ಅರಣ್ಯದ ಕಡೆಗೆ ಓಡಿಹೋಗಿದ್ದ ಇಸ್ರಾಯೇಲ್ಯರು ಹಿಂದಟ್ಟುವವರ ಕಡೆಗೆ ತಿರುಗಿದರು.
21ಯೆಹೋಶುವನೂ ಇಸ್ರಾಯೇಲ್ಯರೂ ಪಟ್ಟಣವು ಹೊಂಚಿ ನೋಡುತ್ತಿದ್ದವರಿಗೆ ಸ್ವಾಧೀನವಾದದ್ದನ್ನೂ, ಹೊಗೆಯು ಆಕಾಶಕ್ಕೆ ಏರಿಹೋಗುತ್ತಿದ್ದದ್ದನ್ನೂ ಕಂಡು ಹಿಂದಿರುಗಿ ಬಂದು ಆಯಿ ಊರಿನ ಜನರನ್ನು ಸಂಹರಿಸಿದರು.
22ಪಟ್ಟಣದೊಳಗೆ ನುಗ್ಗಿದವರೂ ಒಟ್ಟಿಗೆ ಸೇರಿದ್ದರಿಂದ ಆಯಿ ಎಂಬ ಊರಿನವರು ಆ ಕಡೆಯಿಂದಲೂ ಈ ಕಡೆಯಿಂದಲೂ ಇದ್ದ ಇಸ್ರಾಯೇಲ್ಯರ ಮಧ್ಯದಲ್ಲಿ ಸಿಕ್ಕಿಬಿದ್ದರು. ಅವರು ಎಲ್ಲರನ್ನೂ ಕೊಂದು ಹಾಕಿದರು. ಒಬ್ಬನಾದರೂ ಉಳಿಯಲಿಲ್ಲ, ಯಾವನೂ ತಪ್ಪಿಸಿಕೊಳ್ಳಲಿಲ್ಲ.
23ಆಯಿ ಎಂಬ ಪಟ್ಟಣದ ಅರಸನನ್ನು ಮಾತ್ರ ಜೀವಸಹಿತ ಹಿಡಿದು ಯೆಹೋಶುವನ ಬಳಿಗೆ ಕರೆದುಕೊಂಡು ಬಂದರು.
24ಇಸ್ರಾಯೇಲ್ಯರು ತಮ್ಮನ್ನು ಅರಣ್ಯದವರೆಗೂ ಹಿಂದಟ್ಟಿ ಬಂದ ಆಯಿ ಎಂಬ ಊರಿನವರನ್ನು ಅಲ್ಲೇ ಕತ್ತಿಯಿಂದ ಸಂಹರಿಸಿದ ನಂತರ ಅವರೆಲ್ಲರೂ ಪಟ್ಟಣಕ್ಕೆ ಹೋಗಿ ಅಲ್ಲಿದ್ದವರನ್ನು ಕೊಂದರು.
25ಆ ದಿನ ಆಯಿ ಎಂಬ ಊರಿನಲ್ಲಿ ಸತ್ತ ಗಂಡಸರ ಮತ್ತು ಹೆಂಗಸರ ಸಂಖ್ಯೆ ಹನ್ನೆರಡು ಸಾವಿರ ಮಂದಿ.
26ಪಟ್ಟಣದವರೆಲ್ಲರೂ ಹತರಾಗುವವರೆಗೆ ಯೆಹೋಶುವನು ಈಟಿ ಹಿಡಿದು ಚಾಚಿದ ಕೈಯನ್ನು ಹಿಂದೆಗೆಯಲಿಲ್ಲ.
27ಯೆಹೋವನು ಯೆಹೋಶುವನಿಗೆ ಆಜ್ಞಾಪಿಸಿದಂತೆ ಇಸ್ರಾಯೇಲ್ಯರು ಆ ಪಟ್ಟಣದೊಳಗಿಂದ ಪಶು ಪ್ರಾಣಿ ಮೊದಲಾದವುಗಳನ್ನು ಮಾತ್ರ ಕೊಳ್ಳೆಯಾಗಿ ತೆಗೆದುಕೊಂಡರು.
28ಯೆಹೋಶುವನು ಆಯಿ ಎಂಬ ಪಟ್ಟಣವನ್ನು ಸುಟ್ಟು ಅದು ಎಂದಿಗೂ ತಿರುಗಿ ಕಟ್ಟಲು ಸಾಧ್ಯವಾಗದಂತೆ ಹಾಳುದಿಬ್ಬವನ್ನಾಗಿ ಮಾಡಿದನು. ಅದು ಇಂದಿನ ವರೆಗೂ ಹಾಗೆಯೇ ಉಳಿದಿದೆ.
29ಆಯಿ ಊರಿನ ಅರಸನನ್ನು ಸಾಯಂಕಾಲದವರೆಗೂ ಮರಕ್ಕೆ ನೇತು ಹಾಕಿಸಿ ಸೂರ್ಯನು ಅಸ್ತಮಿಸುವಾಗ ಯೆಹೋಶುವನು ಅವನ ಶವವನ್ನು ಕೆಳಗಿಳಿಸಿ ಅದನ್ನು ಊರಬಾಗಿಲಲ್ಲಿ ಹಾಕಿಸಿ ಅದರ ಮೇಲೆ ಕಲ್ಲಿನ ದೊಡ್ಡ ರಾಶಿಯನ್ನು ಹಾಕಿಸಿದನು. ಅದು ಇಂದಿನ ವರೆಗೂ ಹಾಗೆಯೇ ಇದೆ.
30ಯೆಹೋವನ ಸೇವಕನಾದ ಮೋಶೆಯು ಇಸ್ರಾಯೇಲರಿಗೆ ಆಜ್ಞಾಪಿಸಿದಂತೆ ಹಾಗೂ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಯೆಹೋಶುವನು ಇಸ್ರಾಯೇಲಿನ ದೇವರಾದ ಯೆಹೋವನಿಗೆ ಏಬಾಲ್ ಬೆಟ್ಟದಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿಸಿದನು. ಉಳಿಯು ಮುಟ್ಟದ ಹುಟ್ಟುಕಲ್ಲುಗಳಿಂದಲೇ ಅದನ್ನು ಕಟ್ಟಿಸಿದನು
31ಜನರು ಅದರ ಮೇಲೆ ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನ ಯಜ್ಞಗಳನ್ನೂ ಸಮರ್ಪಿಸಿದರು.
32ಯೆಹೋಶುವನು ಅಲ್ಲಿದ್ದ ಕಲ್ಲುಗಳ ಮೇಲೆ ಜನರೆಲ್ಲರ ಸಮಕ್ಷಮದಲ್ಲಿ ಮೋಶೆಯ ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಬರೆದನು.
33ಎಲ್ಲಾ ಇಸ್ರಾಯೇಲ್ಯರು, ಅಂದರೆ ಹಿರಿಯರು, ಅಧಿಕಾರಿಗಳು, ನ್ಯಾಯಾಧಿಪತಿಗಳು, ಪರದೇಶದವರೂ ಹಾಗೂ ಸ್ವದೇಶಸ್ಥರೂ ಯೆಹೋವನ ಒಡಂಬಡಿಕೆಯ ಮಂಜೂಷದ ಎಡಬಲಗಳಲ್ಲಿ ಅದನ್ನು ಹೊತ್ತ ಲೇವಿಯರಾದ ಯಾಜಕರ ಎದುರಾಗಿ ನಿಂತುಕೊಂಡರು. ಗೆರಿಜ್ಜೀಮ್ ಬೆಟ್ಟದ ಕಡೆ ಅರ್ಧಜನರೂ, ಏಬಾಲ್ ಬೆಟ್ಟದ ಕಡೆ ಅರ್ಧ ಜನರೂ, ಹೀಗೆ ಯೆಹೋವನ ಸೇವಕನಾದ ಮೋಶೆಯು ಮೊದಲೇ ಹೇಳಿದ್ದಂತೆ ಆಶೀರ್ವಾದಗಳನ್ನು ನುಡಿಯುವುದಕ್ಕೋಸ್ಕರ ನಿಂತರು.
34ಅನಂತರ ಯೆಹೋಶುವನು ಧರ್ಮಶಾಸ್ತ್ರದ ಎಲ್ಲಾ ಅಶೀರ್ವಾದದ ವಾಕ್ಯಗಳನ್ನು ಹಾಗೂ ಶಾಪವಾಕ್ಯಗಳನ್ನು ಆ ಗ್ರಂಥದಲ್ಲಿ ಇದ್ದ ಹಾಗೆಯೇ ಓದಿದನು.
35ಮೋಶೆಯು ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಹೆಂಗಸರಿಗೂ, ಚಿಕ್ಕವರಿಗೂ, ಪರದೇಶದವರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಅದನ್ನು ಓದಿದನು.