Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೆಹೋ

ಯೆಹೋ 6

Help us?
Click on verse(s) to share them!
1ಯೆರಿಕೋವಿನವರು ಇಸ್ರಾಯೇಲ್ಯರಿಗೆ ಹೆದರಿ ತಮ್ಮ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಒಳಗೆ ಹೋಗಲಿಲ್ಲ; ಹೊರಗೆ ಬರಲಿಲ್ಲ.
2ಆಗ ಯೆಹೋವನು ಯೆಹೋಶುವನಿಗೆ “ನೋಡು, ನಾನು ಯೆರಿಕೋವನ್ನೂ ಅದರ ಅರಸನನ್ನೂ ಹಾಗೂ ಯುದ್ಧವೀರರನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ.
3ನಿನ್ನ ಭಟರೆಲ್ಲ ಆರು ದಿನಗಳ ವರೆಗೆ ದಿನಕ್ಕೆ ಒಂದು ಸಾರಿ ಪಟ್ಟಣವನ್ನು ಸುತ್ತಲಿ.
4ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಮಂಜೂಷದ ಮುಂದೆ ನಡೆಯಲಿ. ಏಳನೆಯ ದಿನ ನೀವು ಪಟ್ಟಣವನ್ನು ಏಳು ಸಾರಿ ಸುತ್ತಬೇಕು; ಯಾಜಕರು ಕೊಂಬುಗಳನ್ನು ಊದಬೇಕು.
5ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಗಟ್ಟಿಯಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವುದು; ಪ್ರತಿಯೊಬ್ಬನೂ ನೆಟ್ಟಗೆ ಒಳಗೆ ನುಗ್ಗಬಹುದು” ಎಂದು ಹೇಳಿದನು.
6ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಯೆಹೋವನ ಮಂಜೂಷದ ಮುಂದೆ ನಡೆಯಲಿ” ಎಂದನು.
7ಮತ್ತು ಅವನು ಜನರಿಗೆ “ನೀವು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ಧರೆಲ್ಲರೂ ಯೆಹೋವನ ಮಂಜೂಷದ ಮುಂದೆ ಹೋಗಲಿ” ಎಂದು ಹೇಳಿದನು.
8ಯೆಹೋಶುವನು ಆಜ್ಞಾಪಿಸಿದಂತೆಯೇ ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಊದುತ್ತಾ, ಯೆಹೋವನ ಪ್ರಸನ್ನತೆಯಲ್ಲಿ ನಡೆದರು. ಯೆಹೋವನ ಒಡಂಬಡಿಕೆಯ ಮಂಜೂಷವು ಅವರ ಹಿಂದೆ ಹೋಯಿತು.
9ಯುದ್ಧ ಸನ್ನದ್ಧರಾದವರು ಕೊಂಬುಗಳನ್ನು ಊದುತ್ತಿದ್ದ ಯಾಜಕರ ಮುಂದೆ ಇದ್ದರು. ಹಿಂಬದಿಯ ದಂಡು ಮಂಜೂಷದ ಹಿಂದಿತ್ತು. ಯಾಜಕರು ಕೊಂಬುಗಳನ್ನು ಊದುತ್ತಲೇ ಹೋಗುತ್ತಿದ್ದರು.
10ಯೆಹೋಶುವನು ಜನರಿಗೆ “ನೀವು ಈಗ ಆರ್ಭಟಿಸಬಾರದು; ನಿಮ್ಮ ಧ್ವನಿಯು ಕೇಳಿಸದಿರಲಿ, ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ. ಆರ್ಭಟಿಸಿರೆಂದು ನಾನು ಹೇಳುವ ದಿನದಲ್ಲಿ ಮಾತ್ರ ಆರ್ಭಟಿಸಿರಿ” ಎಂದು ಆಜ್ಞಾಪಿಸಿದನು.
11ಅವರು ಯೆಹೋವನ ಮಂಜೂಷವನ್ನು ಒಂದು ಸಾರಿ ಪಟ್ಟಣವನ್ನು ಪ್ರದಕ್ಷಿಣೆ ಮಾಡಿದ ಮೇಲೆ ತಿರುಗಿ ಪಾಳೆಯಕ್ಕೆ ಬಂದು ರಾತ್ರಿ ಕಳೆದರು.
12ಯೆಹೋಶುವನು ಬೆಳಗಿನ ಜಾವದಲ್ಲೇ ಎದ್ದನು. ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡು ಹೊರಟರು.
13ಏಳು ಮಂದಿ ಯಾಜಕರು ಕೊಂಬುಗಳನ್ನು ಊದುತ್ತಾ ಯೆಹೋವನ ಮಂಜೂಷದ ಮುಂದೆ ನಡೆದರು. ಯುದ್ಧ ಸನ್ನದ್ಧರು ಅವರ ಮುಂದಿದ್ದರು. ಹಿಂಬದಿಯ ದಂಡು ಯೆಹೋವನ ಮಂಜೂಷದ ಹಿಂದಿತ್ತು. ಕೊಂಬುಗಳನ್ನು ಊದುತ್ತಲೇ ಹೋಗುತ್ತಿದ್ದರು.
14ಹೀಗೆ ಎರಡನೆಯ ದಿನದಲ್ಲಿಯೂ ಪಟ್ಟಣವನ್ನು ಸುತ್ತಿ ಪಾಳೆಯಕ್ಕೆ ಹಿಂದಿರುಗಿದರು.
15ಆರು ದಿನ ಈ ಪ್ರಕಾರ ಮಾಡಿದರು. ಏಳನೆಯ ದಿನದಲ್ಲಿ ಅವರು ಸೂರ್ಯೋದಯವಾಗುತ್ತಲೇ ಎದ್ದು ಅದೇ ಕ್ರಮದಲ್ಲಿ ಪಟ್ಟಣವನ್ನು ಏಳು ಸಾರಿ ಸುತ್ತಿದರು. ಈ ದಿನದಲ್ಲಿ ಮಾತ್ರ ಅದನ್ನು ಏಳು ಸಾರಿ ಸುತ್ತಿದರು.
16ಏಳನೆಯ ಸಾರಿ ಸುತ್ತುವಾಗ ಯಾಜಕರು ಕೊಂಬುಗಳನ್ನು ಊದಲು ಯೆಹೋಶುವನು ಜನರಿಗೆ, “ಆರ್ಭಟಿಸಿರಿ, ಯೆಹೋವನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ.
17ಇದೂ ಇದರಲ್ಲಿರುವುದೆಲ್ಲವೂ ಯೆಹೋವನಿಗೆ ಅರ್ಪಿತವಾದವುಗಳೇ ಎಂದು ತಿಳಿಯಿರಿ. ವೇಶ್ಯೆಯಾದ ರಾಹಾಬಳೂ ಅವಳ ಸಂಗಡ ಮನೆಯಲ್ಲಿರುವವರೆಲ್ಲರೂ ಉಳಿಯಲಿ. ಏಕೆಂದರೆ ನಾವು ಕಳುಹಿಸಿದ ಗೂಢಚಾರರನ್ನು ಅವಳು ಅಡಗಿಸಿಟ್ಟಿದ್ದಳಲ್ಲಾ.
18ನೀವಾದರೋ ಯೆಹೋವನಿಗೆ ಅರ್ಪಿಸುವ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವುದನ್ನಾದರೂ ತೆಗೆದುಕೊಂಡರೆ, ಇಸ್ರಾಯೇಲ್ಯರ ಪಾಳೆಯವು ಶಾಪಕ್ಕೆ ಗುರಿಯಾಗಿ ನಾಶವಾದೀತು.

19ಎಲ್ಲಾ ಬೆಳ್ಳಿ ಬಂಗಾರವೂ, ತಾಮ್ರ ಕಬ್ಬಿಣಗಳ ಪಾತ್ರೆಗಳೂ ಯೆಹೋವನಿಗೆ ಮೀಸಲಾಗಿದ್ದು ಆತನ ಭಂಡಾರಕ್ಕೆ ಸೇರತಕ್ಕವುಗಳು” ಎಂದನು.
20ಕೂಡಲೆ ಜನರ ಆರ್ಭಟವೂ ಕೊಂಬುಗಳ ಧ್ವನಿಯೂ ಉಂಟಾದವು. ಜನರು ಕೊಂಬಿನ ಧ್ವನಿಯನ್ನು ಕೇಳಿ ಗಟ್ಟಿಯಾಗಿ ಆರ್ಭಟಿಸಲು ಪಟ್ಟಣದ ಗೋಡೆಯು ತಾನೇ ಬಿದ್ದುಹೋಯಿತು. ಪ್ರತಿಯೊಬ್ಬನೂ ನೆಟ್ಟಗೆ ಪಟ್ಟಣದಲ್ಲಿ ನುಗ್ಗಿ ಹೋದನು. ಅದು ಅವರಿಗೆ ವಶವಾಯಿತು.
21ಪಟ್ಟಣದಲ್ಲಿದ್ದ ಗಂಡಸರನ್ನೂ, ಹೆಂಗಸರನ್ನೂ, ಹುಡುಗರನ್ನೂ, ಮುದುಕರನ್ನೂ, ದನ, ಕುರಿ ಕತ್ತೆಗಳನ್ನೂ ಸಂಪೂರ್ಣವಾಗಿ ಕತ್ತಿಯಿಂದ ಸಂಹರಿಸಿಬಿಟ್ಟರು.
22ಯೆಹೋಶುವನು ದೇಶವನ್ನು ಸಂಚರಿಸಿ ನೋಡಿದ್ದ ಇಬ್ಬರು ಗೂಢಚಾರರಿಗೆ “ನೀವು ಆ ವೇಶ್ಯೆಯ ಮನೆಗೆ ಹೋಗಿ ಅವಳಿಗೆ ಪ್ರಮಾಣಮಾಡಿದಂತೆ ಅವಳನ್ನೂ ಅವಳಿಗಿರುವುದೆಲ್ಲವನ್ನೂ ಹೊರಗೆ ತೆಗೆದುಕೊಂಡು ಬನ್ನಿರಿ” ಎಂದು ಹೇಳಲು
23ಆ ಯೌವನಸ್ಥರು ಹೋಗಿ ರಾಹಾಬಳನ್ನೂ ಅವಳ ತಂದೆತಾಯಿಯನ್ನು, ಸಹೋದರರನ್ನು, ಅವಳಿಗಿರುವುದೆಲ್ಲವನ್ನೂ, ಅವಳ ಗೋತ್ರದ ಎಲ್ಲಾ ಜನರನ್ನೂ ತಂದು ಇಸ್ರಾಯೇಲ್ಯರ ಪಾಳೆಯದ ಹೊರಗೆ ಇಟ್ಟರು.
24ಇಸ್ರಾಯೇಲ್ಯರು ಪಟ್ಟಣವನ್ನೂ ಅದರಲ್ಲಿರುವುದೆಲ್ಲವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಆದರೆ ಬೆಳ್ಳಿಬಂಗಾರವನ್ನೂ, ತಾಮ್ರ ಕಬ್ಬಿಣಗಳ ಪಾತ್ರೆಗಳನ್ನೂ, ಯೆಹೋವನ ಆಲಯದ ಭಂಡಾರಕ್ಕೆ ಒಪ್ಪಿಸಿದರು.
25ವೇಶ್ಯೆಯಾದ ರಾಹಾಬಳು ಯೆರಿಕೋ ಪಟ್ಟಣವನ್ನು ಸಂಚರಿಸಿ ನೋಡುವುದಕ್ಕೆ ಬಂದಿದ್ದ ಯೆಹೋಶುವನ ಗೂಢಚಾರರನ್ನು ಅಡಗಿಸಿಟ್ಟದ್ದರಿಂದ ಅವನು ಅವಳನ್ನೂ, ಅವಳ ತಂದೆಯ ಮನೆಯವರನ್ನೂ, ಅವಳಿಗಿರುವುದೆಲ್ಲವನ್ನೂ ಉಳಿಸಿದನು. ಅವಳು ಇಂದಿನವರೆಗೂ ಇಸ್ರಾಯೇಲ್ಯರಲ್ಲಿ ವಾಸವಾಗಿದ್ದಾಳೆ.
26ಅದೇ ಸಮಯದಲ್ಲಿ ಯೆಹೋಶುವನು ಇಸ್ರಾಯೇಲ್ಯರಿಂದ ಪ್ರಮಾಣಮಾಡಿಸಿ ಅವರಿಗೆ “ಈ ಯೆರಿಕೋ ಪಟ್ಟಣವನ್ನು ಕಟ್ಟುವುದಕ್ಕೆ ಕೈ ಹಾಕುವ ಮನುಷ್ಯನು ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಿರಲಿ. ಅಂಥವನು ಅದಕ್ಕೆ ಅಸ್ತಿವಾರ ಹಾಕುವಾಗ ತನ್ನ ಹಿರಿಯ ಮಗನನ್ನೂ ಬಾಗಿಲುಗಳನ್ನಿಡುವಾಗ ಕಿರಿಯ ಮಗನನ್ನೂ ಕಳೆದುಕೊಳ್ಳಲಿ” ಎಂದು ಹೇಳಿದನು.
27ಯೆಹೋವನು ಯೆಹೋಶುವನ ಸಂಗಡ ಇದ್ದುದರಿಂದ ಅವನ ಕೀರ್ತಿ ದೇಶದಲ್ಲೆಲ್ಲಾ ಹಬ್ಬಿತು.