35ನಮ್ಮ ಪ್ರಾಣವನ್ನು ಹಿಂಸಿಸಿದ ದೋಷ ಬಾಬಿಲೋನಿಗೆ ತಟ್ಟಲಿ’ ಎಂದು ಚೀಯೋನಿನವರು ಅನ್ನುತ್ತಾರೆ; ‘ನಮ್ಮ ರಕ್ತವನ್ನು ಸುರಿಸಿದ ಅಪರಾಧವು ಕಸ್ದೀಯರಿಗೆ ಬಡಿಯಲಿ’ ಎಂದು ಯೆರೂಸಲೇಮಿನವರು ಹೇಳುತ್ತಾರೆ.”
36ಆದ್ದರಿಂದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನು ನಿನ್ನ ಪರವಾಗಿ ವ್ಯಾಜ್ಯವಾಡಿ, ನಿನ್ನನ್ನು ಹಿಂಸಿಸಿದ ರಾಜ್ಯಕ್ಕೆ ಮುಯ್ಯಿತೀರಿಸುವೆನು; ಅದರ ಸರೋವರವು ಬತ್ತುವಂತೆಯೂ, ಅದರ ಪ್ರವಾಹವು ಒಣಗುವಂತೆಯೂ ಮಾಡುವೆನು.
37ಆಗ ಬಾಬೆಲ್ ಹಾಳುದಿಬ್ಬಗಳಿಂದ ತುಂಬುವುದು ಮತ್ತು ನರಿಗಳ ಬೀಡಾಗಿರುವುದು; ಅದು ನಿರ್ಜನವಾಗಿ ಪರಿಹಾಸ್ಯಕ್ಕೆ ಗುರಿಯಾಗುವುದು.
38ಆ ದೇಶದವರು ಪ್ರಾಯದ ಸಿಂಹಗಳಂತೆ ಒಟ್ಟಿಗೆ ಗರ್ಜಿಸುತ್ತಿದ್ದಾರೆ, ಸಿಂಹದ ಮರಿಗಳ ಹಾಗೆ ಗುರುಗುಟ್ಟುತ್ತಿದ್ದಾರೆ.
39ಅವರು ಹೊಟ್ಟೆಬಾಕರು, ನಾನು ಅವರಿಗೆ ಔತಣವನ್ನು ಸಿದ್ಧಪಡಿಸುವೇನು, ಅವರು ಅದರಿಂದ ಸಂಭ್ರಮಪಟ್ಟು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವಂತೆ ತಲೆಗೇರುವ ಮಟ್ಟಿಗೆ ಕುಡಿಸುವೆನು. ಇದು ಯೆಹೋವನ ನುಡಿ” ಎಂಬುದೇ.
40“ನಾನು ಅವರನ್ನು ಕುರಿ, ಟಗರು ಮತ್ತು ಹೋತಗಳ ಹಾಗೆ ವಧ್ಯಸ್ಥಾನಕ್ಕೆ ಬರಮಾಡುವೆನು.
41ಆಹಾ, ಶೇಷಕ್ ಶತ್ರುವಶವಾಯಿತು, ಲೋಕಪ್ರಸಿದ್ಧವಾದ ಪಟ್ಟಣವು ಹಿಡಿಯಲ್ಪಟ್ಟಿದೆ, ಬಾಬೆಲ್ ಜನಾಂಗಗಳ ಬೆರಗಿಗೆ ಈಡಾಗಿದೆ!
42ಸಮುದ್ರವು ಬಾಬೆಲಿನ ಮೇಲೆ ನುಗ್ಗಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.
43ಅದರ ಪಟ್ಟಣಗಳು ಕಾಡು, ಕಗ್ಗಾಡು, ಬೆಗ್ಗಾಡೂ ಆಗಿವೆ. ಆ ದೇಶದಲ್ಲಿ ಯಾರೂ ವಾಸಿಸರು, ಯಾವ ಮನುಷ್ಯನೂ ಹಾದು ಹೋಗನು.
44ನಾನು ಬಾಬೆಲಿನಲ್ಲಿ ಬೇಲ್ ದೇವತೆಯನ್ನು ದಂಡಿಸಿ, ಅದು ನುಂಗಿದ್ದನ್ನು ಅದರ ಬಾಯೊಳಗಿಂದ ಕಕ್ಕಿಸುವೆನು; ಪ್ರವಾಹಪ್ರವಾಹವಾಗಿ ಬಾಬಿಲೋನಿಗೆ ಬರುತ್ತಿದ್ದ ಸಕಲ ದೇಶೀಯರು ಇನ್ನು ಮೇಲೆ ಬರುವುದಿಲ್ಲ; ಇದಲ್ಲದೆ ಬಾಬೆಲಿನ ಪೌಳಿಗೋಡೆಯು ಬಿದ್ದುಹೋಗುವುದು.
45ನನ್ನ ಜನರೇ, ನೀವೆಲ್ಲರೂ ಬಾಬೆಲಿನೊಳಗಿಂದ ಹೊರಟು ಯೆಹೋವನ ರೋಷಾಗ್ನಿಯಿಂದ ತಪ್ಪಿಸಿಕೊಳ್ಳಿರಿ.
46ನಿಮ್ಮ ಎದೆಯು ಕುಂದದಿರಲಿ, ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಯು ನಿಮ್ಮನ್ನು ಹೆದರಿಸದಿರಲಿ; ಒಂದು ವರ್ಷ ಒಂದು ಸುದ್ದಿಯು, ಮತ್ತೊಂದು ವರ್ಷ ಮತ್ತೊಂದು ಸುದ್ದಿಯು ಹರಡುತ್ತಿರುವವು; ಬಲಾತ್ಕಾರವು ದೇಶದಲ್ಲಿ ಪ್ರಬಲವಾಗುವುದು, ಅಧಿಕಾರಿಯು ಅಧಿಕಾರಿಗೆ ವಿರೋಧಿಯಾಗುವನು.
47ಇದರಿಂದ ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ ಎಂದು ತಿಳಿದುಕೊಳ್ಳಿರಿ. ಆ ದೇಶವೆಲ್ಲಾ ನಾಚಿಕೆಪಡುವುದು; ಅದರ ಪ್ರಜೆಗಳು ಅದರೊಳಗೆ ಹತರಾಗಿ ಬೀಳುವರು.
48ಆಗ ಭೂಮ್ಯಾಕಾಶಗಳೂ ಅಲ್ಲಿನ ಸಮಸ್ತವೂ ಬಾಬೆಲಿನ ನಾಶವನ್ನು ನೋಡಿ ಹರ್ಷಧ್ವನಿಗೈಯುವವು; ಏಕೆಂದರೆ ಹಾಳುಮಾಡುವವರು ಉತ್ತರ ದಿಕ್ಕಿನಿಂದ ಬಂದು ಅದರ ಮೇಲೆ ಬೀಳುವರು; ಇದು ಯೆಹೋವನ ನುಡಿ.”
49“ಹತರಾದ ಇಸ್ರಾಯೇಲರೇ, ಬಾಬೆಲಿನ ಹಿತಕ್ಕಾಗಿ ಲೋಕದಲ್ಲೆಲ್ಲಾ ಬಹು ಜನರು ಹೇಗೆ ಹತರಾದರೋ, ಹಾಗೆಯೇ ಬಾಬೆಲೂ ಹತವಾಗುವುದು.
50ಖಡ್ಗಕ್ಕೆ ತಪ್ಪಿಸಿಕೊಂಡವರೇ, ಸುಮ್ಮನೆ ನಿಂತುಕೊಳ್ಳದೆ ನಡೆಯಿರಿ; ದೂರದಲ್ಲಿಯೂ ಯೆಹೋವನನ್ನು ಸ್ಮರಿಸಿರಿ, ಯೆರೂಸಲೇಮಿನ ಹಂಬಲ ನಿಮ್ಮ ಮನಸ್ಸಿನಲ್ಲಿ ಹುಟ್ಟಲಿ.
51ನಾವು ನಿಂದೆಯನ್ನು ಕೇಳಿ ನಾಚಿಕೆಗೊಂಡೆವು, ‘ಯೆಹೋವನ ಆಲಯದ ಪವಿತ್ರಸ್ಥಾನಗಳನ್ನು ಮ್ಲೇಚ್ಛರು ಪ್ರವೇಶಿಸಿದ್ದರಿಂದ ಅವಮಾನವು ನಮ್ಮ ಮುಖವನ್ನು ಮುಚ್ಚಿಕೊಂಡಿದೆ’ ಎಂಬುದಾಗಿ ಅಂದುಕೊಳ್ಳುತ್ತಿರೋ?
52ಹೀಗಿರಲು ಯೆಹೋವನು ಇಂತೆನ್ನುತ್ತಾನೆ, ‘ಇಗೋ, ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ; ಆಗ ಆ ದೇಶದಲ್ಲೆಲ್ಲಾ ಗಾಯಪಟ್ಟವರು ನರಳಾಡುವರು.
53ಬಾಬೆಲ್ ಆಕಾಶದ ತನಕ ಬೆಳೆದು ಎತ್ತರವಾಗಿಯೂ ಮತ್ತು ಬಲವಾಗಿಯೂ ಇರುವ ತನ್ನ ಕೋಟೆಕೊತ್ತಲಗಳನ್ನು ಭದ್ರಪಡಿಸಿದರೂ, ಹಾಳುಮಾಡುವವರು ನನ್ನ ಅಪ್ಪಣೆಯಿಂದ ಅದರ ಮೇಲೆ ಬೀಳುವರು.’ ಇದು ಯೆಹೋವನ ನುಡಿ.”
54“ಆಹಾ, ಬಾಬೆಲಿನಿಂದ ಮೊರೆಯೂ, ಕಸ್ದೀಯರ ದೇಶದಿಂದ ಮಹಾನಾಶದ ಶಬ್ದವೂ ಕೇಳಿ ಬರುತ್ತದೆ!
55ಯೆಹೋವನು ಬಾಬೆಲನ್ನು ಹಾಳುಮಾಡುತ್ತಿದ್ದಾನಲ್ಲಾ, ಅದರ ಸದ್ದುಗದ್ದಲವನ್ನು ಅಡಗಿಸಿಬಿಡುತ್ತಾನೆ; ಮಹಾ ಜಲಪ್ರವಾಹಗಳು ಭೋರ್ಗರೆಯುವಂತೆ ತರಂಗತರಂಗವಾಗಿ ಬಂದ ಶತ್ರುಗಳು ಘೋಷಿಸುತ್ತಾರೆ, ಕೂಗಿ ಆರ್ಭಟಿಸುತ್ತಾರೆ;
56ಹಾಳುಮಾಡುವವನು ಬಾಬೆಲಿನ ಮೇಲೆ ಬಿದ್ದಿದ್ದಾನೆ, ಅದರ ಶೂರರು ಸೆರೆಯಾಗಿದ್ದಾರೆ, ಅವರ ಬಿಲ್ಲುಗಳು ಮುರಿದುಹೋಗಿವೆ; ಏಕೆಂದರೆ ಯೆಹೋವನು ಮುಯ್ಯಿತೀರಿಸುವ ದೇವರು, ಆತನು ಪ್ರತಿಕ್ರಿಯಿಸದೆ ಬಿಡುವುದಿಲ್ಲ.
57ನಾನು ಅದರ ಪ್ರಧಾನರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಬಲಿಷ್ಠರು, ಇವರೆಲ್ಲರಿಗೂ ತಲೆಗೇರುವ ಮಟ್ಟಿಗೆ ಕುಡಿಸುವೆನು; ಅವರು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವರು ಎಂದು ಸೇನಾಧೀಶ್ವರನಾದ ಯೆಹೋವನೆಂಬ ಹೆಸರಿನ ರಾಜಾಧಿರಾಜನು ಅನ್ನುತ್ತಾನೆ.”
58ಸೇನಾಧೀಶ್ವರನಾದ ಯೆಹೋವನು, “ಬಾಬೆಲಿನ ಗಾತ್ರವಾದ ಪೌಳಿಗೋಡೆಯು ಸಂಪೂರ್ಣವಾಗಿ ನೆಲಸಮವಾಗುವುದು. ಅದರ ಉನ್ನತದ್ವಾರಗಳು ಬೆಂಕಿಯಿಂದ ಸುಟ್ಟುಹೋಗುವವು; ಜನಾಂಗಗಳು ಪಟ್ಟ ಪರಿಶ್ರಮ ವ್ಯರ್ಥ, ಜನಗಳು ಆಯಾಸಗೊಂಡು ದುಡಿದದ್ದು ಬೆಂಕಿಗೆ ತುತ್ತಾಗುವುದು” ಎಂದು ನುಡಿಯುತ್ತಾನೆ.
59ಮಹ್ಸೇಯನ ಮೊಮ್ಮಗನೂ ನೇರೀಯನ ಮಗನೂ ಆದ ಸೆರಾಯನು ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷ ಚಿದ್ಕೀಯನೊಡನೆ ಬಾಬಿಲೋನಿಗೆ ಪ್ರಯಾಣಮಾಡಿದಾಗ ಪ್ರವಾದಿಯಾದ ಯೆರೆಮೀಯನು ಅವನಿಗೆ ಕೊಟ್ಟ ಅಪ್ಪಣೆ. (ಸೆರಾಯನು ಯಾರೆಂದರೆ ಸೇನೆಯ ಪ್ರಧಾನ ಅಧಿಕಾರಿ.)
60ಯೆರೆಮೀಯನು ಬಾಬಿಲೋನಿಗೆ ಸಂಭವಿಸತಕ್ಕ ಎಲ್ಲಾ ಕೇಡಿನ ವಿಷಯವನ್ನು ಅಂದರೆ ಬಾಬೆಲಿನ ಸಂಬಂಧವಾಗಿ ಹಿಂದೆ ಲಿಖಿತವಾದ ಎಲ್ಲಾ ಸಂಗತಿಗಳನ್ನು ಒಂದು ಗ್ರಂಥವನ್ನಾಗಿ ಬರೆದನು.
61ಅವನು ಸೆರಾಯನಿಗೆ ಹೀಗೆ ಹೇಳಿದನು, “ನೋಡು, ನೀನು ಬಾಬಿಲೋನಿಗೆ ಸೇರಿದ ಮೇಲೆ ಈ ಮಾತುಗಳನ್ನೆಲ್ಲಾ ಓದಿ ಹೇಳಿ,