Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೆರೆ

ಯೆರೆ 26

Help us?
Click on verse(s) to share them!
1ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆಹೋವನಿಂದ ಯೆರೆಮೀಯನಿಗೆ ಈ ಅಪ್ಪಣೆಯಾಯಿತು.
2“ಯೆಹೋವನು ಇಂತೆನ್ನುತ್ತಾನೆ, ನೀನು ಯೆಹೋವನ ಆಲಯದ ಪ್ರಾಕಾರದಲ್ಲಿ ನಿಂತು ಆ ಮಂದಿರದಲ್ಲಿ ಆರಾಧಿಸುವುದಕ್ಕೆ ಬರುವ ಯೆಹೂದದ ಎಲ್ಲಾ ಊರಿನವರಿಗೆ ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಹೇಳು, ಒಂದು ಮಾತನ್ನೂ ಬಿಡಬೇಡ.
3ಅವರು ಒಂದು ವೇಳೆ ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಹಾಗೆ ಮಾಡಿದರೆ ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರಿಗೆ ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.
4ನೀನು ಅವರಿಗೆ, ‘ಯೆಹೋವನು ಇಂತೆನ್ನುತ್ತಾನೆ, ನೀವು ನನ್ನ ಕಡೆಗೆ ಕಿವಿಗೊಡದೆ ನಾನು ನಿಮ್ಮ ಮುಂದೆ ಇಟ್ಟಿರುವ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯಬೇಕೆಂಬ ಮಾತನ್ನು ಕೇಳದೆ,
5ನಿಮ್ಮ ಬಳಿಗೆ ನಾನು ತಪ್ಪದೆ ಕಳುಹಿಸುತ್ತಾ ಬಂದಿರುವ ನನ್ನ ಸೇವಕರಾದ ಪ್ರವಾದಿಗಳ ಮಾತುಗಳನ್ನು ಕೇಳದೆಯೂ ಇದ್ದರೆ,
6ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ತಂದು, ಈ ಪಟ್ಟಣವು ಲೋಕದ ಸಮಸ್ತ ಜನಾಂಗಗಳಲ್ಲಿ ಶಾಪದ ಮಾತಾಗುವಂತೆ ಮಾಡುವೆನು’” ಎಂದು ಹೇಳು ಎಂದನು.
7ಯೆರೆಮೀಯನು ಯೆಹೋವನ ಆಲಯದಲ್ಲಿ ಹೀಗೆ ಮಾತನಾಡುವುದನ್ನು ಯಾಜಕರೂ, ಪ್ರವಾದಿಗಳು ಮತ್ತು ಸಕಲ ಜನರೂ ಕೇಳಿದರು.
8ಸಮಸ್ತಜನರಿಗೆ ಹೇಳಬೇಕೆಂದು ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಯೆರೆಮೀಯನು ಹೇಳಿ ಮುಗಿಸಿದ ಮೇಲೆ ಯಾಜಕರೂ, ಪ್ರವಾದಿಗಳೂ ಎಲ್ಲಾ ಜನರೂ ಅವನನ್ನು ಹಿಡಿದು, “ನೀನು ಸಾಯಲೇಬೇಕು!
9ನೀನು ಯೆಹೋವನ ಹೆಸರೆತ್ತಿ ಪ್ರವಾದಿಸುತ್ತಾ, ‘ಈ ಆಲಯವು ಶಿಲೋವಿನ ಗತಿಗೆ ಬರುವುದು, ಈ ಪಟ್ಟಣವು ಒಕ್ಕಲಿಲ್ಲದೆ ಹಾಳುಬೀಳುವುದು’ ಎಂದು ಏಕೆ ಹೇಳಿದೆ” ಎಂದರು. ಆಗ ಯೆಹೋವನ ಆಲಯದಲ್ಲಿ ಎಲ್ಲಾ ಜನರು ಯೆರೆಮೀಯನ ಸುತ್ತಲು ಸುತ್ತಿಕೊಂಡಿದ್ದರು.
10ಯೆಹೂದದ ಸರದಾರರು ಈ ವರ್ತಮಾನವನ್ನು ಕೇಳಿ ಅರಮನೆಯಿಂದ ಯೆಹೋವನ ಆಲಯಕ್ಕೆ ಬಂದು ಆ ಮಂದಿರದ ಹೊಸ ಬಾಗಿಲಿನಲ್ಲಿ ಕುಳಿತುಕೊಂಡರು.
11ಆಗ ಯಾಜಕರೂ ಮತ್ತು ಪ್ರವಾದಿಗಳೂ, “ಇವನು ಮರಣದಂಡನೆಗೆ ತಕ್ಕವನು; ಇವನು ಈ ಪಟ್ಟಣಕ್ಕೆ ಅಹಿತ ನುಡಿದದ್ದನ್ನು ನೀವು ಕಿವಿಯಾರೆ ಕೇಳಿದಿರೀ” ಎಂದು ಸರದಾರರಿಗೂ ಎಲ್ಲಾ ಜನರಿಗೂ ಹೇಳಿದರು.
12ಆಗ ಯೆರೆಮೀಯನು ಸಕಲ ಸರದಾರರಿಗೂ ಸಮಸ್ತ ಜನರಿಗೂ, “ನೀವು ಕೇಳಿದ ಮಾತುಗಳನ್ನೆಲ್ಲಾ ಈ ಆಲಯಕ್ಕೂ ಈ ಪಟ್ಟಣಕ್ಕೂ ಪ್ರತಿಕೂಲವಾಗಿ ನುಡಿಯಬೇಕೆಂದು ಯೆಹೋವನು ನನ್ನನ್ನು ಕಳುಹಿಸಿದನು.
13ಈಗಲೇ ನಿಮ್ಮ ಮಾರ್ಗಗಳನ್ನೂ ಕೃತ್ಯಗಳನ್ನೂ ತಿದ್ದಿಕೊಂಡು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡಿರಿ; ಹಾಗೆ ಮಾಡಿದರೆ ಯೆಹೋವನು ನಿಮ್ಮ ವಿಷಯವಾಗಿ ನುಡಿದಿರುವ ಕೇಡನ್ನು ಮನಮರುಗಿ ಮಾಡದಿರುವನು.
14ನಾನೋ ನಿಮ್ಮ ಕೈಯಲ್ಲಿದ್ದೇನಲ್ಲಾ; ನಿಮಗೆ ಒಳ್ಳೆಯದಾಗಿಯೂ, ನ್ಯಾಯವಾಗಿಯೂ ತೋರುವುದನ್ನು ನನಗೆ ಮಾಡಿರಿ.
15ಆದರೆ ನೀವು ನನ್ನನ್ನು ಕೊಂದು ಹಾಕಿದ ಪಕ್ಷಕ್ಕೆ, ನೀವೂ, ಈ ಪಟ್ಟಣವೂ ಮತ್ತು ಇದರ ನಿವಾಸಿಗಳೂ ನಿರ್ದೋಷಿಯ ರಕ್ತವನ್ನು ಸುರಿಸಿದ ಅಪರಾಧಕ್ಕೆ ಪಾತ್ರರಾಗುವಿರಿ ಎಂದು ನಿಶ್ಚಯವಾಗಿ ತಿಳಿದುಕೊಳ್ಳಿರಿ. ಈ ಮಾತುಗಳನ್ನೆಲ್ಲಾ ನಿಮ್ಮ ಕಿವಿಗೆ ಮುಟ್ಟಿಸುವಂತೆ ಯೆಹೋವನು ನನ್ನನ್ನು ಕಳುಹಿಸಿರುವುದು ಖಂಡಿತ” ಎಂದು ಹೇಳಿದನು.
16ಇದನ್ನು ಕೇಳಿ ಸರದಾರರೂ ಸಕಲ ಜನರೂ ಯಾಜಕ ಪ್ರವಾದಿಗಳಿಗೆ, “ಇವನು ಮರಣ ದಂಡನೆಗೆ ತಕ್ಕವನಲ್ಲ; ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಇದನ್ನು ನಮಗೆ ನುಡಿದಿದ್ದಾನಷ್ಟೆ” ಎಂದು ಹೇಳಿದರು.
17ತರುವಾಯ ದೇಶದ ಹಿರಿಯರಲ್ಲಿ ಕೆಲವರು ಎದ್ದು ನಿಂತು,
18“ಯೆಹೂದದ ಅರಸನಾದ ಹಿಜ್ಕೀಯನ ಕಾಲದಲ್ಲಿ ಮೋರೆಷೆತ್ ಊರಿನವನಾದ ಮೀಕಾಯನು ಯೆಹೂದ್ಯರೆಲ್ಲರಿಗೆ, ‘ಸೇನಾಧೀಶ್ವರನಾದ ಯೆಹೋವನ ಮಾತನ್ನು ಕೇಳಿರಿ, ಚೀಯೋನ್ ಪಟ್ಟಣವು ಹೊಲದಂತೆ ಉಳಲಾಗುವುದು, ಯೆರೂಸಲೇಮು ಹಾಳುದಿಬ್ಬಗಳಾಗಿ ಬೀಳುವುದು, ಯೆಹೋವನ ಆಲಯದ ಪರ್ವತವು ಕಾಡು ಗುಡ್ಡಗಳಂತಾಗುವುದು’ ಎಂದು ಹೇಳಲಾಗಿ

19ಯೆಹೂದದ ಅರಸನಾದ ಹಿಜ್ಕೀಯನೂ ಎಲ್ಲಾ ಯೆಹೂದ್ಯರೂ ಅವನನ್ನು ಕೊಂದುಹಾಕಿದರೋ? ಇಲ್ಲವೇ ಇಲ್ಲ. ಆ ಅರಸನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ದಯೆಯನ್ನು ಬೇಡಿಕೊಳ್ಳಲು ಯೆಹೋವನು ಅವರ ವಿಷಯವಾಗಿ ನುಡಿದಿದ್ದ ಕೇಡನ್ನು ಮನಮರುಗಿ ಮಾಡದೆ ಬಿಟ್ಟನಲ್ಲಾ. ನಾವಾದರೋ ಇವನನ್ನು ಕೊಂದು ಹಾಕಿ ನಮಗೆ ದೊಡ್ಡ ಕೇಡನ್ನು ಉಂಟು ಮಾಡಿಕೊಳ್ಳುವವರಾಗಿದ್ದೇವೆ” ಎಂಬುದಾಗಿ ಸಕಲಜನ ಸಮೂಹಕ್ಕೆ ಹೇಳಿದರು.
20ಅದೇ ಸಮಯದಲ್ಲಿ ಶಮಾಯನ ಮಗನೂ ಕಿರ್ಯತ್ ಯಾರೀಮ್ ಊರಿನವನೂ ಆದ ಊರೀಯನೆಂಬ ಒಬ್ಬ ಮನುಷ್ಯನು ಯೆಹೋವನ ಹೆಸರಿನಲ್ಲಿ ಪ್ರವಾದಿಸುವವನಾಗಿದ್ದು ಯೆರೆಮೀಯನು ನುಡಿದಂತೆಯೇ ಈ ಪಟ್ಟಣಕ್ಕೂ ಈ ದೇಶಕ್ಕೂ ಅಹಿತವನ್ನು ನುಡಿಯುತ್ತಿದ್ದನು.
21ಅರಸನಾದ ಯೆಹೋಯಾಕೀಮನೂ, ಅವನ ಎಲ್ಲಾ ಪ್ರಸಿದ್ಧ ಶೂರರೂ ಮತ್ತು ಸರದಾರರೂ ಇವನ ಮಾತುಗಳನ್ನು ಕೇಳಿದಾಗ ಅರಸನು ಇವನನ್ನು ಕೊಂದುಹಾಕಲು ಮನಸ್ಸು ಮಾಡಿದನು; ಆದರೆ ಊರೀಯನು ಆ ಸುದ್ದಿಯನ್ನು ಕೇಳಿ ಭಯಪಟ್ಟು ಓಡಿಹೋಗಿ ಐಗುಪ್ತವನ್ನು ಸೇರಿಕೊಂಡನು.
22ಆಗ ಅರಸನಾದ ಯೆಹೋಯಾಕೀಮನು ಅಕ್ಬೋರನ ಮಗನಾದ ಎಲ್ನಾಥಾನನನ್ನೂ ಅವನ ಸಂಗಡ ಇನ್ನು ಕೆಲವರನ್ನೂ ಐಗುಪ್ತಕ್ಕೆ ಕಳುಹಿಸಿದನು.
23ಅವರು ಊರೀಯನನ್ನು ಐಗುಪ್ತದಿಂದ ಎಳೆದು ಅರಸನಾದ ಯೆಹೋಯಾಕೀಮನ ಬಳಿಗೆ ತರಲು ಅವನು ಇವನನ್ನು ಕತ್ತಿಯಿಂದ ಕಡಿಸಿ, ಶವವನ್ನು ಸಾಧಾರಣ ಜನರ ಗೋರಿಗಳ ನಡುವೆ ಹಾಕಿಸಿದನು.
24ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸದ ಹಾಗೆ ಶಾಫಾನನ ಮಗನಾದ ಅಹೀಕಾಮನ ಸಹಾಯವು ಅವನಿಗೆ ಒದಗಿತು.