1ಯೋಷೀಯನ ಮಗನೂ, ಯೆಹೂದದ ಅರಸನೂ ಆದ ಯೆಹೋಯಾಕೀಮನ ಕಾಲದಲ್ಲಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ,
2“ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ ಅವರ ಸಂಗಡ ಮಾತನಾಡಿ ಅವರನ್ನು ಯೆಹೋವನ ಆಲಯದ ಒಂದು ಕೋಣೆಯೊಳಕ್ಕೆ ಕರೆದು ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು” ಎಂಬುದೇ.
3ಆಗ ಪ್ರವಾದಿಯು ಯೆರೆಮೀಯನ ಮಗನೂ ಹಬಚ್ಚಿನ್ಯನ ಮೊಮ್ಮಗನೂ ಆದ ಯಾಜನ್ಯನನ್ನು, ಅವನ ಅಣ್ಣತಮ್ಮಂದಿರನ್ನು, ಅವನ ಎಲ್ಲಾ ಮಕ್ಕಳನ್ನು, ಅಂತು ರೇಕಾಬನ ಮನೆತನದವರೆಲ್ಲರನ್ನೂ
4ಯೆಹೋವನ ಆಲಯಕ್ಕೆ ಕರೆದು ಇಗ್ದಲ್ಯನ ಮಗನೂ, ದೇವರ ಮನುಷ್ಯನೂ ಆದ ಹಾನಾನನ ಮಕ್ಕಳ ಕೋಣೆಯೊಳಕ್ಕೆ, ಅಂದರೆ ಸರದಾರರ ಕೋಣೆಯ ಪಕ್ಕದಲ್ಲಿ, ಶಲ್ಲೂಮನ ಮಗನೂ ದ್ವಾರಪಾಲಕನೂ ಆದ ಮಾಸೇಯನ ಕೋಣೆಯ ಮೇಲ್ಗಡೆ ಇರುವ ಕೋಣೆಯೊಳಕ್ಕೆ ಬರಮಾಡಿದನು.
5ಆ ರೇಕಾಬನ ಮನೆತನದವರ ಮುಂದೆ ದ್ರಾಕ್ಷಾರಸ ತುಂಬಿದ ಬಟ್ಟಲುಗಳನ್ನೂ, ಪಂಚಪಾತ್ರೆಗಳನ್ನೂ ಇಟ್ಟು, “ದ್ರಾಕ್ಷಾರಸವನ್ನು ಕುಡಿಯಿರಿ” ಅಂದನು.
6ಅದಕ್ಕೆ ಅವರು, “ನಾವು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ, ನಮ್ಮ ಪಿತೃವಾದ ರೇಕಾಬನ ಮಗನಾದ ಯೋನಾದಾಬನು ನಮಗೆ, ‘ನೀವಾಗಲಿ ನಿಮ್ಮ ಸಂತಾನದವರಾಗಲಿ ಯುಗಯುಗಾಂತರಕ್ಕೂ ದ್ರಾಕ್ಷಾರಸ ಕುಡಿಯಬಾರದು,
7ಮನೆಕಟ್ಟಬಾರದು, ಬೀಜ ಬಿತ್ತಬಾರದು, ದ್ರಾಕ್ಷಿತೋಟ ಮಾಡಬಾರದು, ಅನುಭವಿಸಲೂ ಬಾರದು, ನಿಮ್ಮ ಜೀವಮಾನವೆಲ್ಲಾ ಗುಡಾರಗಳಲ್ಲೇ ವಾಸಿಸಬೇಕು, ಇದರಿಂದ ನೀವು ತಂಗುವ ದೇಶದಲ್ಲಿ ನಿಮಗೆ ದೀರ್ಘಾಯುಷ್ಯವಾಗವುದು’” ಎಂದು ಅಪ್ಪಣೆಕೊಟ್ಟಿದ್ದಾನೆ.
8ನಮ್ಮ ಪಿತೃವಾದ ರೇಕಾಬನ ಮಗನಾಗಿರುವ ಯೋನಾದಾಬನು ನಮಗೆ ಕೊಟ್ಟ ಈ ಅಪ್ಪಣೆಯನ್ನು, ಎಲ್ಲಾ ವಿಷಯದಲ್ಲಿಯೂ ಕೈಗೊಳ್ಳುತ್ತಿದ್ದೇವೆ; ನಾವಾಗಲಿ, ನಮ್ಮ ಹೆಂಡತಿಯರಾಗಲಿ, ಗಂಡು ಹೆಣ್ಣುಮಕ್ಕಳಾಗಲಿ ಜೀವಮಾನದಲ್ಲೆಲ್ಲಾ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ.
9ನಮ್ಮ ವಾಸಕ್ಕೆ ಮನೆಯನ್ನು ಕಟ್ಟುವುದಿಲ್ಲ; ನಮಗೆ ದ್ರಾಕ್ಷಿತೋಟ, ಹೊಲ ಮತ್ತು ಬೀಜಗಳೂ ಇಲ್ಲ.
10ನಾವು ಗುಡಾರಗಳಲ್ಲಿ ವಾಸಿಸುತ್ತಾ ನಮ್ಮ ಪಿತೃವಾದ ಯೋನಾದಾಬನು ನಮಗೆ ವಿಧಿಸಿದ್ದನ್ನೆಲ್ಲಾ ಶಿರಸಾವಹಿಸಿ ನಡೆಸುತ್ತಿದ್ದೇವೆ.
11ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ದೇಶದೊಳಗೆ ನುಗ್ಗಿದಾಗ, “ಕಸ್ದೀಯರ ಮತ್ತು ಅರಾಮ್ಯರ ಸೈನ್ಯಗಳ ಮುಂದೆ ನಿಲ್ಲದೆ ಯೆರೂಸಲೇಮಿಗೆ ಹೋಗೋಣ ಬನ್ನಿ ಎಂದುಕೊಂಡು ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದರು.
12ಆಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು,
13“ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀನು ಹೋಗಿ ಯೆಹೂದ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಹೀಗೆ ಹೇಳು, ‘ಇದರಿಂದ ನೀವು ಬುದ್ಧಿತಂದುಕೊಂಡು ನನ್ನ ಮಾತುಗಳನ್ನು ಕೇಳುವುದಿಲ್ಲವೋ?’ ಎಂದು ಯೆಹೋವನು ಅನ್ನುತ್ತಾನೆ.
14ರೇಕಾಬನ ಮಗನಾದ ಯೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ; ಅವರು ಇಂದಿನ ವರೆಗೂ ಕುಡಿಯಲಿಲ್ಲ, ತಮ್ಮ ಪಿತೃವಿನ ಆಜ್ಞೆಯನ್ನು ಕೈಕೊಂಡಿದ್ದಾರೆ; ನೀವೋ, ನಾನು ನಿಮಗೆ ಎಡೆಬಿಡದೆ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.
15ಇದಲ್ಲದೆ ನಾನು ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿತ್ಯವೂ ಕಳುಹಿಸುತ್ತಾ, ನೀವೆಲ್ಲರೂ ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ, ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸದಿರಿ; ಹೀಗೆ ಮಾಡಿದರೆ ನಾನು ನಿಮಗೂ, ನಿಮ್ಮ ಪೂರ್ವಿಕರಿಗೂ ದಯಪಾಲಿಸಿದ ದೇಶದಲ್ಲಿ ನೀವು ಸುಖವಾಸಿಗಳಾಗಿರುವಿರಿ ಎಂದು ಹೇಳಿಸಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.
16ರೇಕಾಬನ ಮಗನಾದ ಯೋನಾದಾಬನ ಸಂತಾನದವರು ತಮ್ಮ ಪಿತೃವು ತಮಗೆ ವಿಧಿಸಿದ್ದನ್ನು ಕೇಳಿ ಅನುಸರಿಸುತ್ತಿರುವಲ್ಲಿ ಈ ಜನರು ನನ್ನ ಮಾತನ್ನು ಕೇಳದೆ ಹೋದುದರಿಂದ,
17ಇಗೋ, ನಾನು ಯೆಹೂದ್ಯರಿಗೂ, ಯೆರೂಸಲೇಮಿನವರೆಲ್ಲರಿಗೂ ಕೊಟ್ಟ ಶಾಪದ ಕೇಡನ್ನೆಲ್ಲಾ ಅವರ ಮೇಲೆ ಬರಮಾಡುವೆನು; ನಾನು ಹೇಳಿದರೂ ಅವರು ಕೇಳಲಿಲ್ಲ, ಕೂಗಿದರೂ ಉತ್ತರಕೊಡಲಿಲ್ಲ ಎಂದು ಸೇನಾಧೀಶ್ವರ ಸ್ವಾಮಿಯೂ, ಇಸ್ರಾಯೇಲರ ದೇವರೂ ಆದ ಯೆಹೋವನು ಅನ್ನುತ್ತಾನೆ” ಎಂಬುದೇ.
18ಮತ್ತು ಯೆರೆಮೀಯನು ರೇಕಾಬ್ಯರಿಗೆ, “ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ನೀವು ನಿಮ್ಮ ಪಿತೃವಾದ ಯೋನಾದಾಬನ ಅಪ್ಪಣೆಯನ್ನು ಕೇಳಿ ಅವನ ಸಕಲ ವಿಧಿಗಳನ್ನು ಅನುಸರಿಸಿ ಅವನು ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿದ ಕಾರಣ,
19ರೇಕಾಬನ ಮಗನಾದ ಯೋನಾದಾಬನ ಸಂತಾನದವರೊಳಗೆ ನನ್ನ ಸಮ್ಮುಖದಲ್ಲಿ ಸೇವೆಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು. ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇದನ್ನು ನುಡಿದಿದ್ದಾನೆ’” ಎಂಬುದೇ.