Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಸಮು

2 ಸಮು 21

Help us?
Click on verse(s) to share them!
1ದಾವೀದನ ಕಾಲದಲ್ಲಿ ಮೂರು ವರ್ಷಗಳ ವರೆಗೂ ಎಡಬಿಡದೆ ಬರವಿತ್ತು. ದಾವೀದನು ಯೆಹೋವನನ್ನು ವಿಚಾರಿಸಲು ಆತನು, “ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೆಯೂ, ಅವನ ಮನೆಯವರ ಮೇಲೆಯೂ ರಕ್ತಾಪರಾಧವಿದೆ” ಎಂದು ಉತ್ತರ ಕೊಟ್ಟನು.
2ಗಿಬ್ಯೋನ್ಯರು ಇಸ್ರಾಯೇಲ್ಯರ ಕುಲಕ್ಕೆ ಸೇರಿದವರಲ್ಲ. ಸಂಹೃತರಾಗದೆ ಉಳಿದ ಅಮೋರಿಯರಷ್ಟೆ. ಇಸ್ರಾಯೇಲ್ಯರು ತಾವು ಇವರನ್ನು ಕೊಲ್ಲುವುದಿಲ್ಲವೆಂದು ಪ್ರಮಾಣಮಾಡಿದ್ದರು. ಆದರೂ ಸೌಲನು ಇಸ್ರಾಯೇಲ್ ಮತ್ತು ಯೆಹೂದ ಕುಲಗಳ ಮೇಲೆ ತನಗಿದ್ದ ಅಭಿಮಾನದ ನಿಮಿತ್ತ ಇವರನ್ನು ನಿರ್ನಾಮಗೊಳಿಸಬೇಕೆಂದಿದ್ದನು.
3ಆಗ ಅರಸನಾದ ದಾವೀದನು ಗಿಬ್ಯೋನ್ಯರನ್ನು ಕರೆದು, “ನಾನು ನಿಮಗೋಸ್ಕರ ಏನು ಮಾಡಬೇಕೆನ್ನುತ್ತೀರಿ? ನಿಮಗೆ ಪ್ರಾಯಶ್ಚಿತ್ತವಾಗಿ ಯಾವುದನ್ನು ಮಾಡಿದರೆ ನೀವು ಯೆಹೋವನ ಸ್ವತ್ತನ್ನು ಆಶೀರ್ವದಿಸುವಿರಿ?” ಎಂದು ಕೇಳಿದನು.
4ಅದಕ್ಕೆ ಅವರು, “ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯವು ಬೆಳ್ಳಿ ಬಂಗಾರದಿಂದ ಮುಗಿಯಲಾರದು. ಇಸ್ರಾಯೇಲ್ಯರನ್ನು ಕೊಲ್ಲುವ ಅಧಿಕಾರವು ನಮಗಿಲ್ಲ” ಎಂದು ಉತ್ತರ ಕೊಟ್ಟರು. ಆಗ ಅರಸನು ಅವರಿಗೆ, “ಏನು ಮಾಡಬೇಕು ಹೇಳಿರಿ ಮಾಡುತ್ತೇನೆ” ಅಂದನು.
5ಆಗ ಅವರು, “ನಮ್ಮನ್ನು ಇಸ್ರಾಯೇಲರ ಪ್ರಾಂತ್ಯಗಳಿಂದ ಹೊರಡಿಸುವುದಕ್ಕೂ, ನಿರ್ನಾಮಗೊಳಿಸುವುದಕ್ಕೂ ಪ್ರಯತ್ನಿಸಿದ ಆ ಮನುಷ್ಯನ ಮಕ್ಕಳಲ್ಲಿ ಏಳು ಮಂದಿಯನ್ನು ನಮಗೆ ಒಪ್ಪಿಸು.
6ಯೆಹೋವನಿಂದ ಆರಿಸಲ್ಪಟ್ಟ ಸೌಲನು ವಾಸವಾಗಿದ್ದ ಗಿಬೆಯದಲ್ಲಿ ನಾವು ಅವರನ್ನು ಕೊಂದು, ಯೆಹೋವನ ಸನ್ನಿಧಿಯಲ್ಲಿ ಅವರನ್ನು ನೇತು ಹಾಕುವೆವು” ಎಂದರು. ಅದಕ್ಕೆ ಅರಸನು, “ಆಗಲಿ ಅವರನ್ನು ನಿಮಗೆ ಒಪ್ಪಿಸುತ್ತೇನೆ” ಅಂದನು.
7ದಾವೀದನು ತಾನು ಸೌಲನ ಮಗನಾದ ಯೋನಾತಾನನಿಗೆ ಯೆಹೋವನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನಪುಮಾಡಿಕೊಂಡು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು.
8ಆದರೆ ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಅರ್ಮೋನೀ ಮತ್ತು ಮೆಫೀಬೋಶೆತ್ ಎಂಬ ಇಬ್ಬರು ಮಕ್ಕಳನ್ನೂ, ಮೆಹೋಲದ ಬರ್ಜಿಲ್ಲೈಯ ಮಗನಾದ ಅದ್ರಿಯೇಲನಿಗೆ ಸೌಲನ ಮಗಳಾದ ಮೀಕಲಳಲ್ಲಿ ಹುಟ್ಟಿದ ಐದು ಮಂದಿ ಮಕ್ಕಳನ್ನೂ ಕರೆದುಕೊಂಡು ಅವರನ್ನು ಗಿಬ್ಯೋನ್ಯರಿಗೆ ಒಪ್ಪಿಸಿದರು.
9ಅವರು ಇವರನ್ನು ಕೊಂದು, ಗುಡ್ಡದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕಿದರು. ಈ ಏಳು ಮಂದಿಯೂ ಏಕ ಕಾಲದಲ್ಲಿ ಸತ್ತುಹೋದರು. ಇವರನ್ನು ಕೊಂದಾಗ ಜವೆಗೋದಿಯ ಸುಗ್ಗಿ ಆರಂಭವಾಗಿತ್ತು
10ಆಗ ಅಯ್ಯಾಹನ ಮಗಳಾದ ರಿಚ್ಪಳು ಒಂದು ಗೋಣಿತಟ್ಟನ್ನು ತೆಗೆದುಕೊಂಡು, ಅದನ್ನು ಬಂಡೆಯ ಮೇಲೆ ಹಾಸಿ, ಸುಗ್ಗಿಯ ಆರಂಭದಿಂದ ಶವಗಳ ಮೇಲೆ ಮಳೆ ಬೀಳುವ ತನಕ ಅದರ ಮೇಲೆ ಕುಳಿತುಕೊಂಡು, ಹಗಲಿನಲ್ಲಿ ಆಕಾಶದ ಪಕ್ಷಿಗಳೂ, ರಾತ್ರಿಯಲ್ಲಿ ಕಾಡು ಮೃಗಗಳೂ ಅವುಗಳನ್ನು ತಿನ್ನದಂತೆ ಕಾಯುತ್ತಿದ್ದಳು.
11ಅಯ್ಯಾಹನ ಮಗಳೂ, ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡಿದ ಈ ಕಾರ್ಯವು ದಾವೀದನಿಗೆ ಗೊತ್ತಾಯಿತು.
12ಆಗ ಅವನು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕೋಸ್ಕರ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಸೌಲನನ್ನು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವನ ಮತ್ತು ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ನೇತುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು.
13ದಾವೀದನು ಯಾಬೇಷಿನಲ್ಲಿದ್ದ ಸೌಲ ಮತ್ತು ಯೋನಾತಾನರ ಎಲುಬುಗಳನ್ನು ಗಿಬ್ಯೋನಿನಲ್ಲಿ ಹತರಾದವರ ಎಲುಬುಗಳನ್ನೂ ತೆಗೆದುಕೊಂಡರು.
14ಅವರು ಅ ಎಲಬುಗಳನ್ನೆಲ್ಲಾ ಬೆನ್ಯಾಮೀನ್ ದೇಶದ ಚೇಲಾ ಊರಿನಲ್ಲಿ ಸೌಲನ ತಂದೆಯಾದ ಕೀಷನ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿಸಿದನು. ಅರಸನ ಅಪ್ಪಣೆಯಂತೆ ಇದೆಲ್ಲಾ ಆದ ನಂತರ ದೇಶದ ಮೇಲೆ ದೇವರಿಗಿದ್ದ ಕೋಪವು ಶಾಂತವಾಗಿ, ಅವನು ಅವರ ಪ್ರಾರ್ಥನೆಗಳಿಗೆ ಉತ್ತರಕೊಟ್ಟನು.
15ಫಿಲಿಷ್ಟಿಯರಿಗೂ ಇಸ್ರಾಯೇಲರಿಗೂ ಪುನಃ ಯುದ್ಧವಾಯಿತು. ದಾವೀದನು ತನ್ನ ಸೇವಕರನ್ನು ಕರೆದುಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋದಾಗ ಬಹಳವಾಗಿ ದಣಿದಿದ್ದನು.
16ಆಗ ರೆಫಾಯರಲ್ಲೊಬ್ಬನಾದ ಇಷ್ಬಿಬೆನೋಬ್ ಎಂಬುವನು ದಾವೀದನನ್ನು ಕೊಲ್ಲುಬೇಕೆಂದಿದ್ದನು. ಅವನ ತಾಮ್ರದ ಬರ್ಜಿಯು ಮುನ್ನೂರು ಶೆಕಲ್ (ಬೆಳ್ಳಿನಾಣ್ಯ) ತೂಕದ್ದು. ಅವನು ಸೊಂಟಕ್ಕೆ ಹೊಸ ಕತ್ತಿಯನ್ನು ಕಟ್ಟಿಕೊಂಡಿದ್ದನು.
17ಆದರೆ ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು, ಆ ಫಿಲಿಷ್ಟಿಯನನ್ನು ಕೊಂದು ಹಾಕಿದನು. ಆಗ ಜನರು ದಾವೀದನಿಗೆ, “ಇಸ್ರಾಯೇಲರ ದೀಪವು ಆರಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು” ಎಂದು ಖಂಡಿತವಾಗಿ ಹೇಳಿದನು.
18ಅನಂತರ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬುವನು ರೆಫಾಯನಾದ ಸೆಫ ಎಂಬುವನನ್ನು ಕೊಂದನು.

19ಗೋಬಿನಲ್ಲಿ ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಬೇತ್ಲೆಹೇಮಿನವನಾದ ಯಾರೇಯೋರೆಗೀಮ್ ಎಂಬುವವನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನನ್ನು ಕೊಂದನು. ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯಷ್ಟು ಗಾತ್ರವಿತ್ತು.
20ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು ಅವನು ರೆಫಾಯನಿಗೆ ಹುಟ್ಟಿದವನಾಗಿದ್ದನು.
21ಅವನು ಇಸ್ರಾಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮಿಯಾನನ ಮಗ ಯೋನಾತಾನನು ಅವನನ್ನು ಕೊಂದು ಹಾಕಿದನು.
22ಗತ್ ಊರಿನವರಾದ ಈ ನಾಲ್ಕು ಮಂದಿ ರೆಫಾಯರೂ ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.