Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಸಮು

2 ಸಮು 11

Help us?
Click on verse(s) to share them!
1ರಾಜರೆಲ್ಲರು ಸಾಮಾನ್ಯವಾಗಿ ವಸಂತಕಾಲದ ಪ್ರಾರಂಭದಲ್ಲಿ ಯುದ್ಧಕ್ಕೆ ಹೊರಡುವ ಸಮಯವನ್ನು ಗೊತ್ತುಮಾಡುತ್ತಿದ್ದರು. ದಾವೀದನು ಯೋವಾಬನನ್ನೂ, ತನ್ನ ಸೇವಕರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತ್ಯಗಳನ್ನು ನಾಶ ಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ಆದರೆ ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು.
2ಅವನು ಒಂದು ದಿನ ಸಂಜೆ ಹೊತ್ತಿನಲ್ಲಿ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಅವನು ಅಲ್ಲಿಂದ ಬಹು ಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವುದನ್ನು ಕಂಡನು.
3ಕೂಡಲೆ ದಾವೀದನು ಒಬ್ಬನನ್ನು ಕರೆದು, “ಆ ಸ್ತ್ರೀ ಯಾರು?” ಎಂದು ವಿಚಾರಿಸಲು ಅವನು, “ಆಕೆಯು ಎಲೀಯಾಮನ ಮಗಳೂ, ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆ ಅಲ್ಲವೇ?” ಎಂದು ಉತ್ತರ ಕೊಟ್ಟನು.
4ಆಗ ದಾವೀದನು ಆಗ ತಾನೇ ಋತುಸ್ನಾನಮಾಡಿಕೊಂಡಿದ್ದ ಆಕೆಯನ್ನು ಕರೆದು ತರುವಂತೆ ದೂತರನ್ನು ಕಳುಹಿಸಿದನು. ಆಕೆಯು ಬರಲು ಅವನು ಆಕೆಯನ್ನು ಸಂಗಮಿಸಿದನು. ಅನಂತರ ಆಕೆಯು ತನ್ನ ಮನೆಗೆ ಹೋದಳು.
5ಆಕೆಯು ತಾನು ಗರ್ಭಧರಿಸಿದ್ದು ಗೊತ್ತಾದಾಗ ದಾವೀದನಿಗೆ ವರ್ತಮಾನ ಕಳುಹಿಸಿದಳು.
6ಆಗ ದಾವೀದನು ದೂತರ ಮುಖಾಂತರವಾಗಿ ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು” ಎಂದು ಹೇಳಿ ಕಳುಹಿಸಿದನು. ಅವನು ಊರೀಯನನ್ನು ಕಳುಹಿಸಿದನು.
7ಊರೀಯನು ಬಂದಾಗ ದಾವೀದನು, “ಯೋವಾಬನೂ ಮತ್ತು ಸೈನ್ಯದವರೂ ಹೇಗಿರುತ್ತಾರೆ? ಯುದ್ಧವು ಹೇಗೆ ನಡೆದಿದೆ?” ಎಂದು ವಿಚಾರಿಸಿದ, ನಂತರ
8ಅವನಿಗೆ, “ಮನೆಗೆ ಹೋಗಿ ಕೈಕಾಲು ತೊಳೆದುಕೋ” ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೆ ಅವನ ಹಿಂದೆಯೆ ಅರಸನ ಭೋಜನ ಪದಾರ್ಥಗಳು ಹೋದವು.
9ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಸನ ಸೇವಕರೊಡನೆ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು.
10ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನವು ದಾವೀದನಿಗೆ ತಿಳಿದಾಗ ಅವನು ಊರೀಯನಿಗೆ, “ನೀನು ಪ್ರಯಾಣಮಾಡಿಕೊಂಡು ಬಂದಿಯಲ್ಲಾ, ಯಾಕೆ ಮನೆಗೆ ಹೋಗಲಿಲ್ಲ?” ಅಂದನು.
11ಅದಕ್ಕೆ ಊರೀಯನು, “ಒಡಂಬಡಿಕೆಯ ಮಂಜೂಷವೂ, ಇಸ್ರಾಯೇಲ್ಯರೂ, ಯೆಹೂದ್ಯರೂ ಗುಡಾರಗಳಲ್ಲಿ ವಾಸವಾಗಿದ್ದಾರೆ. ನನ್ನ ಒಡೆಯನಾದ ಯೋವಾಬನೂ, ಅವನ ಸೇವಕರೂ ಬಯಲಿನಲ್ಲಿ ಪಾಳೆಯಮಾಡಿಕೊಂಡಿದ್ದಾರೆ. ಹೀಗಿರುವಾಗ ನಾನು ಮಾತ್ರ ನನ್ನ ಮನೆಗೆ ಹೋಗಿ ಊಟಮಾಡಿ, ಕುಡಿದು, ಹೆಂಡತಿಯೊಡನೆ ಮಲಗಿಕೊಳ್ಳುವುದು ಹೇಗೆ? ನಿನ್ನಾಣೆ, ನಿನ್ನ ಜೀವದ ಆಣೆ, ನಾನು ಇಂಥದ್ದನ್ನು ಮಾಡುವುದೇ ಇಲ್ಲ” ಎಂದು ಉತ್ತರಕೊಟ್ಟನು.
12ಆಗ ದಾವೀದನು ಅವನಿಗೆ, “ನೀನು ಈ ಹೊತ್ತು ಇಲ್ಲೇ ಇರು. ನಾಳೆ ನಿನ್ನನ್ನು ಕಳುಹಿಸುತ್ತೇನೆ” ಎಂದು ಆಜ್ಞಾಪಿಸಿದನು. ಊರೀಯನು ಆ ದಿನ ಯೆರೂಸಲೇಮಿನಲ್ಲೇ ಇದ್ದನು.
13ಮರುದಿನ ದಾವೀದನು ಅವನನ್ನು ಅನ್ನಪಾನಗಳನ್ನೂ ತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರೆದುಕೊಂಡು ಹೋಗಿ, ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯಲ್ಲಿಯೂ ಅವನು ಹೋಗಿ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿಕೊಂಡು ಮಲಗಿಕೊಂಡನೇ ಹೊರತು ತನ್ನ ಮನೆಗೆ ಹೋಗಲಿಲ್ಲ.
14ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟು ಕಳುಹಿಸಿದನು.
15ಅದರಲ್ಲಿ, “ಊರೀಯನು ಗಾಯಗೊಂಡು ಸಾಯುವಂತೆ ಅವನನ್ನು ಘೋರ ಯುದ್ಧ ನಡೆಯುತ್ತಿರುವ ಕಡೆ ಮುಂಭಾಗದಲ್ಲಿ ನಿಲ್ಲಿಸಿ, ನೀವು ಹಿಂದಕ್ಕೆ ಸರಿದುಕೊಳ್ಳಿರಿ” ಎಂಬುದಾಗಿ ಬರೆದಿದ್ದನು.
16ಯೋವಾಬನು ಪಟ್ಟಣಕ್ಕೆ ಮುತ್ತಿಗೆ ಹಾಕುವಾಗ ಶೂರರಾದ ಶತ್ರುಸೈನಿಕರು ಎಲ್ಲಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿ ನಿಲ್ಲಿಸಿದನು.
17ಆ ಊರಿನ ಜನರು ಹೊರಗೆ ಬಂದು ಯೋವಾಬನೊಡನೆ ಕಾದಾಡಿದಾಗ ದಾವೀದನ ಸೇವಕರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ಊರೀಯನೂ ಸಹ ಸತ್ತನು.
18ಅನಂತರ ಯೋವಾಬನು ಒಬ್ಬ ದೂತನನ್ನು ಕರೆದು ಅವನಿಗೆ, “ನೀನು ಹೋಗಿ ದಾವೀದನಿಗೆ ಯುದ್ಧ ವರ್ತಮಾನವನ್ನೆಲ್ಲಾ ತಿಳಿಸು.

19ನೀನು ಯುದ್ಧ ಸಮಾಚಾರವನ್ನು ಹೇಳಿ ಮುಗಿಸಿದ ನಂತರ ಅರಸನು ಕೋಪಗೊಂಡು ನಿನ್ನನ್ನು,
20‘ನೀವು ಯುದ್ಧ ಮಾಡುವುದಕ್ಕಾಗಿ ಪಟ್ಟಣದ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರಗೋಡೆಯ ಮೇಲಣಿಂದ ಬಾಣಗಳನ್ನು ಎಸೆಯುವರೆಂದು ನಿಮಗೆ ತಿಳಿದಿರಲಿಲ್ಲವೋ?
21ಯೆರುಬ್ಬೇಷೆತನ ಮಗನಾದ ಅಬೀಮೆಲೇಕನನ್ನು ಕೊಂದವರು ಯಾರು ಎಂದು ನಿಮಗೆ ಗೊತ್ತಿಲ್ಲವೋ? ತೇಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಿನಿಂದ ಒಂದು ಬೀಸುವ ಕಲ್ಲನ್ನು ಅವನ ಮೇಲೆ ಎತ್ತಿ ಹಾಕಿ ಅವನನ್ನು ಕೊಂದಳಲ್ಲವೇ. ಹೀಗಿರುವುದರಿಂದ ನೀವು ಗೋಡೆಯ ಸಮೀಪಕ್ಕೆ ಹೋದದ್ದೇಕೆ?’ ಎಂದು ಕೇಳಿದರೆ ನೀನು, ಹಿತ್ತಿಯನಾದ ನಿನ್ನ ಸೇವಕ ಊರೀಯನು ಮೃತನಾದನೆಂದು ಹೇಳು” ಎಂಬುದಾಗಿ ಆಜ್ಞಾಪಿಸಿ ಅವನನ್ನು ಕಳುಹಿಸಿದನು.
22ಆ ದೂತನು ಹೋಗಿ ಯೋವಾಬನ ಆಜ್ಞೆಯಂತೆ ದಾವೀದನಿಗೆ ತಿಳಿಸಿದ್ದೇನೆಂದರೆ,
23“ಆ ಊರಿನವರು ಮಹಾಸೈನ್ಯಬಲದೊಡನೆ ಯುದ್ಧಮಾಡುವುದಕ್ಕೆ ಬಯಲಿಗೆ ಬಂದರು. ನಾವು ಅವರನ್ನು ಊರ ಬಾಗಿಲಿನವರೆಗೂ ಹಿಂದಟ್ಟಿದೆವು.
24ಆಗ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿನ್ನ ಸೇವಕರ ಮೇಲೆ ಬಾಣಗಳನ್ನು ಎಸೆದದ್ದರಿಂದ ಅವರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ನಿನ್ನ ಸೇವಕ ಊರೀಯನೂ ಸತ್ತನು” ಎಂದನು.
25ಅದಕ್ಕೆ ದಾವೀದನು ದೂತನಿಗೆ, “ನೀನು ಹೋಗು, ಇದಕ್ಕೋಸ್ಕರ ವ್ಯಸನಪಡಬೇಡ. ಕತ್ತಿಯು ಈ ಹೊತ್ತು ಒಬ್ಬನನ್ನು ನುಂಗಿದರೆ, ನಾಳೆ ಇನ್ನೊಬ್ಬನನ್ನು ನುಂಗುವುದು, ಮತ್ತಷ್ಟು ಶೂರತನದಿಂದ ಯುದ್ಧಮಾಡಿ ಪಟ್ಟಣವನ್ನು ಕೆಡವಿಬಿಡಿರಿ ಎಂಬುದಾಗಿ ಅರಸನು ಆಜ್ಞಾಪಿಸುತ್ತಾನೆ ಎಂದು ಯೋವಾಬನಿಗೆ ಹೇಳಿ ಅವನನ್ನು ಧೈರ್ಯಪಡಿಸು” ಎಂದನು.
26ಊರೀಯನ ಮರಣದ ವಾರ್ತೆಯನ್ನು ಅವನ ಹೆಂಡತಿಯು ಕೇಳಿ ಗಂಡನಿಗೋಸ್ಕರ ಗೋಳಾಡಿದಳು.
27ದುಃಖಕಾಲವು ತೀರಿದ ನಂತರ ದಾವೀದನು ಆಕೆಯನ್ನು ತನ್ನ ಮನೆಗೆ ಕರತರಿಸಿ, ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಆಕೆಯು ಅವನಿಂದ ಒಬ್ಬ ಮಗನನ್ನು ಹೆತ್ತಳು. ದಾವೀದನು ಮಾಡಿದ ಈ ಕೃತ್ಯಗಳು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದೂ, ಅನೀತಿಯೂ ಆಗಿತ್ತು.