Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಸಮು

2 ಸಮು 19

Help us?
Click on verse(s) to share them!
1ಅರಸನು ಅಬ್ಷಾಲೋಮನಿಗಾಗಿ ಅಳುತ್ತಾ ಗೋಳಾಡುತ್ತಾ ಇದ್ದಾನೆಂಬ ವರ್ತಮಾನವು ಯೋವಾಬನಿಗೆ ಮುಟ್ಟಿತು.
2ಅರಸನು ಮಗನಿಗೊಸ್ಕರ ಪ್ರಲಾಪಿಸುತ್ತಿದ್ದಾನೆ ಎಂದು ಎಲ್ಲಾ ಜನರಿಗೂ ಗೊತ್ತಾದುದರಿಂದ, ಅವರ ಜಯಘೋಷವು ಗೋಳಾಟವಾಯಿತು.
3ಜನರು ಆ ದಿನ ಯುದ್ಧದಲ್ಲಿ ಸೋತು ಓಡಿ ಬಂದವರೋ ಎಂಬಂತೆ ನಾಚಿಕೆಯಿಂದ ಕಳ್ಳತನದಿಂದ ಊರನ್ನು ಪ್ರವೇಶಿಸಿದರು.
4ಅರಸನು ತನ್ನ ಮುಖವನ್ನು ಮುಚ್ಚಿಕೊಂಡು, “ನನ್ನ ಮಗನಾದ ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನೇ!” ಎಂದು ಬಹಳವಾಗಿ ಗೋಳಾಡಿದನು.
5ಯೋವಾಬನು ಅರಸನ ಬಳಿಗೆ ಹೋಗಿ ಅವನಿಗೆ, “ನಿನ್ನನ್ನೂ, ನಿನ್ನ ಗಂಡು ಹೆಣ್ಣು ಮಕ್ಕಳನ್ನೂ, ಹೆಂಡತಿಯರನ್ನೂ, ಉಪಪತ್ನಿಯರನ್ನೂ ರಕ್ಷಿಸಿದಂಥ ನಿನ್ನ ಸೈನಿಕರನ್ನು ಈ ಹೊತ್ತು ಅಪಮಾನಪಡಿಸಿದಿ.
6ನೀನು ಶತ್ರುಗಳನ್ನು ಪ್ರೀತಿಸುವವನೂ, ಮಿತ್ರರನ್ನು ದ್ವೇಷಿಸುವವನೂ ಆಗಿದ್ದೀ. ನೀನು ನಿನ್ನ ಸೇನಾಧಿಪತಿಗಳನ್ನೂ, ಸೈನಿಕರನ್ನೂ ಲಕ್ಷಿಸುವವನಲ್ಲವೆಂದು ಈಗ ತೋರಿಸಿಕೊಟ್ಟೆ. ಇದರಿಂದ ಈ ದಿನ ನಾವೆಲ್ಲರೂ ಸತ್ತು ಅಬ್ಷಾಲೋಮನೊಬ್ಬನೆ ಉಳಿದಿದ್ದರೆ ನಿನಗೆ ಸಂತೋಷವಾಗುತ್ತಿತ್ತೆಂದು ತಿಳಿಯಬೇಕಷ್ಟೆ.
7ಈಗ ಎದ್ದು ಹೋಗಿ ನಿನ್ನ ಸೇವಕರನ್ನು ದಯೆಯಿಂದ ಮಾತನಾಡಿಸು. ಯೆಹೋವನಾಣೆ, ನೀನು ಹೀಗೆ ಮಾಡದಿದ್ದರೆ ಸಾಯಂಕಾಲವಾಗುವಷ್ಟರಲ್ಲಿ ಎಲ್ಲರೂ ನಿನ್ನನ್ನು ಬಿಟ್ಟು ಹೋಗುವರು. ಯೌವನ ಕಾಲದಿಂದ ಈ ವರೆಗೆ ನಿನಗೆ ಬಂದ ಎಲ್ಲಾ ಕೇಡುಗಳಲ್ಲಿ ಇದೇ ಹೆಚ್ಚಿನದಾಗಿರುವುದು” ಎಂದು ಹೇಳಿದನು.
8ಆಗ ಅರಸನು ಎದ್ದು ಬಂದು ಊರಬಾಗಿಲಲ್ಲಿ ಕುಳಿತುಕೊಂಡನು. ಇಗೋ, ಅರಸನು ಬಂದು ಊರಬಾಗಿಲಲ್ಲಿ ಕುಳಿತುಕೊಂಡಿದ್ದಾನೆಂಬ ಸುದ್ದಿಯು ಪ್ರಜೆಗಳಿಗೆ ಮುಟ್ಟಿದಾಗ ಅವರೆಲ್ಲರೂ ಅವನ ಮುಂದೆ ನೆರೆದು ಬಂದರು.
9ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ನಿವಾಸಗಳಿಗೆ ಓಡಿ ಹೋಗಿದ್ದರು. ಇಸ್ರಾಯೇಲರ ಕುಲಗಳ ಎಲ್ಲಾ ಜನರು ತಮ್ಮತಮ್ಮೊಳಗೆ ಜಗಳವಾಡಿ “ಅರಸನಾದ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಗೂ, ಬೇರೆ ಎಲ್ಲಾ ವೈರಿಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡಿದನು. ಆದರೆ ಅವನು ಅಬ್ಷಾಲೋಮನ ದೆಸೆಯಿಂದ ದೇಶವನ್ನು ಬಿಟ್ಟು ಓಡಿಹೋಗಬೇಕಾಯಿತು.
10ನಾವು ಅಭಿಷೇಕಿಸಿದ ಅಬ್ಷಾಲೋಮನು ಯುದ್ಧದಲ್ಲಿ ಸತ್ತನು. ಹೀಗಿರುವಲ್ಲಿ ಅರಸನಾದ ದಾವೀದನನ್ನು ತಿರುಗಿ ಕರೆದುಕೊಂಡು ಬರಬಾರದೇಕೆ? ಸುಮ್ಮನೆ ಕುಳಿತಿರುವುದೇಕೆ?” ಎಂದು ಮಾತನಾಡಿಕೊಂಡರು.
11ಇಸ್ರಾಯೇಲರು ಈ ಪ್ರಕಾರ ಮಾತನಾಡಿಕೊಂಡ ವರ್ತಮಾನವು ದಾವೀದನಿಗೆ ಮುಟ್ಟಿತು. ಅವನು ಯಾಜಕರಾದ ಚಾದೋಕ್ ಮತ್ತು ಎಬ್ಯಾತಾರರಿಗೆ, “ನೀವು ನನ್ನ ಹೆಸರಿನಲ್ಲಿ ಯೆಹೂದ ಕುಲದ ಹಿರಿಯರಿಗೆ, ‘ಅರಸನಾದ ನನ್ನನ್ನು ತಿರುಗಿ ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ತಡಮಾಡುತ್ತಿರುವುದೇಕೆ?
12ನೀವು ನನ್ನ ರಕ್ತಸಂಬಂಧಿಗಳಾದ ಸಹೋದರರಾಗಿರುತ್ತೀರಿ. ಆದುದರಿಂದ ನನ್ನನ್ನು ಕರೆದುಕೊಂಡು ಹೋಗುವುದರಲ್ಲಿ ನೀವು ತಡಮಾಡುತ್ತಿರುವುದು ಒಳ್ಳೆಯದಲ್ಲ’ ಎಂದು ಹೇಳಿರಿ.
13ಅಮಾಸನಿಗೆ, ‘ನೀನು ನನಗೆ ರಕ್ತಸಂಬಂಧಿಯಾಗಿದ್ದೀ. ನಾನು ಯೋವಾಬನ ಬದಲಿಗೆ ನಿನ್ನನ್ನೇ ನಿತ್ಯ ಸೇನಾಧಿಪತಿಯನ್ನಾಗಿ ಮಾಡದಿದ್ದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ’ ಎಂಬುದಾಗಿಯೂ ತಿಳಿಸಿರಿ” ಎಂದು ಹೇಳಿ ಕಳುಹಿಸಿದನು.
14ಆಗ ಯೆಹೂದ್ಯರೆಲ್ಲರೂ ಏಕಮನಸ್ಸಿನಿಂದ ಅರಸನ ಕಡೆಗೆ ತಿರುಗಿಕೊಂಡು ಅವನಿಗೆ, “ನೀನು ಮತ್ತು ನಿನ್ನ ಎಲ್ಲಾ ಸೇವಕರೂ ಹಿಂದಿರುಗಿ ಬನ್ನಿರಿ” ಎಂದು ಹೇಳಿಕಳುಹಿಸಿದರು.
15ಅರಸನು ಸ್ವದೇಶಕ್ಕೆ ಹೋಗಬೇಕೆಂದು ಹೊರಟು ಯೊರ್ದನಿಗೆ ಬಂದಾಗ ಯೆಹೂದ ಕುಲದವರು ಅವನನ್ನು ಎದುರುಗೊಳ್ಳುವುದಕ್ಕೂ, ಯೊರ್ದನ್ ನದಿಯನ್ನು ದಾಟಿಸುವುದಕ್ಕೂ ಗಿಲ್ಗಾಲಿಗೆ ಬಂದರು.
16ಬೆನ್ಯಾಮೀನ ಕುಲದ ಗೇರನ ಮಗನೂ ಬಹುರೀಮಿನವನೂ ಆದ ಶಿಮ್ಮಿಯು ಅವಸರದಿಂದ ಬಂದು ಅರಸನಾದ ದಾವೀದನನ್ನು ಎದುರುಗೊಳ್ಳುವುದಕ್ಕೆ ಯೆಹೂದ ಕುಲದವರನ್ನು ಕೂಡಿಕೊಂಡನು.
17ಅವನ ಜೊತೆಯಲ್ಲಿ ಸಾವಿರ ಬೆನ್ಯಾಮೀನ್ಯರಿದ್ದರು. ಇದಲ್ಲದೆ ಸೌಲನ ಮನೆಯ ಸೇವಕನಾದ ಚೀಬನು ತನ್ನ ಹದಿನೈದು ಮಂದಿ ಮಕ್ಕಳನ್ನೂ, ಇಪ್ಪತ್ತು ಸೇವಕರನ್ನೂ ಕರೆದುಕೊಂಡು ಅರಸನ ಮುಂದೆಯೆ ಪೂರ್ಣಾಸಕ್ತಿಯಿಂದ ಯೊರ್ದನ್ ಹೊಳೆಯಲ್ಲಿಳಿದು
18ಅರಸನ ಮನೆಯವರನ್ನು ದಾಟಿಸುವುದಕ್ಕೋಸ್ಕರವೂ, ಅವರಿಗೆ ಬೇಕಾದ ಸಹಾಯ ಮಾಡುವುದಕ್ಕೋಸ್ಕರವೂ ದಡದಿಂದ ದಡಕ್ಕೆ ಹೋಗುತ್ತಾ, ಬರುತ್ತಾ ಇದ್ದನು. ಅರಸನು ಯೊರ್ದನ್ ನದಿಯನ್ನು ದಾಟಿಬಂದ ಕೂಡಲೆ ಗೇರನ ಮಗನಾದ ಶಿಮ್ಮಿಯು ಸಾಷ್ಟಾಂಗ ನಮಸ್ಕಾರ ಮಾಡಿ ಅವನಿಗೆ,

19“ನನ್ನ ಒಡೆಯನು ನನ್ನನ್ನು ಅಪರಾಧಿಯೆಂದೆಣಿಸದಿರಲಿ. ನನ್ನ ಅರಸನು ಯೆರೂಸಲೇಮನ್ನು ಬಿಟ್ಟು ಹೋಗುವಾಗ ನಾನು ಮೂರ್ಖತನದಿಂದ ಮಾಡಿದ್ದನ್ನೆಲ್ಲಾ ಲಕ್ಷಿಸದಿರಲಿ.
20ಒಡೆಯನೇ, ನಿನ್ನ ಸೇವಕನಾದ ನಾನು ಪಾಪಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. ಆದ್ದರಿಂದಲೆ ನಾನು ಈ ಹೊತ್ತು ಅರಸನನ್ನು ಎದುರುಗೊಳ್ಳುವುದಕ್ಕೆ ಎಲ್ಲಾ ಯೋಸೇಫ್ಯರಲ್ಲಿ ಮೊದಲಿಗನಾಗಿ ಬಂದಿದ್ದೇನೆ” ಎಂದು ಹೇಳಿದನು.
21ಚೆರೂಯಳ ಮಗನಾದ ಅಬೀಷೈಯು, “ಯೆಹೋವನ ಅಭಿಷಿಕ್ತನನ್ನು ಶಪಿಸಿದ್ದಕ್ಕಾಗಿ ಶಿಮ್ಮಿಗೆ ಮರಣದಂಡನೆಯಾಗಬೇಕಲ್ಲವೇ” ಎಂದನು.
22ಅದಕ್ಕೆ ದಾವೀದನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ, ನೀವು ನನಗೆ ಯಾಕೆ ಶತ್ರುಗಳಾಗಬೇಕು? ಈ ದಿನದಲ್ಲಿ ಇಸ್ರಾಯೇಲ್ಯರಲ್ಲಿ ಒಬ್ಬನಿಗೆ ಮರಣದಂಡನೆಯಾಗುವುದು ಸರಿಯೋ? ನಾನು ಇಸ್ರಾಯೇಲರ ಅರಸನೆಂಬುದು ಈಹೊತ್ತು ಸ್ಪಷ್ಟವಾಗಿ ಗೊತ್ತಾಯಿತು” ಎಂದು ನುಡಿದನು.
23ಅನಂತರ ಅರಸನು ಶಿಮ್ಮಿಗೆ, “ನಿನಗೆ ಮರಣದಂಡನೆ ಆಗುವುದಿಲ್ಲ” ಎಂದು ಪ್ರಮಾಣಮಾಡಿ ಹೇಳಿದನು.
24ತರುವಾಯ ಸೌಲನ ಮೊಮ್ಮಗನಾದ ಮೆಫೀಬೋಶೆತನು ಅರಸನನ್ನು ಎದುರುಗೊಳ್ಳುವುದಕ್ಕಾಗಿ ಬಂದನು. ಅರಸನು ಯೆರೂಸಲೇಮನ್ನು ಬಿಟ್ಟಂದಿನಿಂದ ಸುರಕ್ಷಿತವಾಗಿ ಹಿಂದಿರುವವರೆಗೂ ಇವನು ತನ್ನ ಕಾಲುಗಳನ್ನು ತೊಳೆದುಕೊಂಡಿರಲಿಲ್ಲ, ಮೀಸೆಯನ್ನು ಕತ್ತರಿಸಿರಲಿಲ್ಲ, ಬಟ್ಟೆಯನ್ನು ಒಗೆಸಿಕೊಂಡಿರಲಿಲ್ಲ.
25ಇವನು ಯೆರೂಸಲೇಮಿನಿಂದ ಅರಸನ ದರ್ಶನಕ್ಕೆ ಬಂದಾಗ ಅರಸನು, “ಮೆಫೀಬೋಶೆತನೇ, ನೀನು ನನ್ನ ಸಂಗಡ ಯಾಕೆ ಬರಲಿಲ್ಲ?” ಎಂದು ಕೇಳಿದನು.
26ಅವನು, “ನನ್ನ ಒಡೆಯನೇ, ಅರಸನೇ, ನನ್ನ ಸೇವಕನು ನನ್ನನ್ನು ವಂಚಿಸಿದನು. ಕುಂಟನಾದ ನಾನು ಅವನಿಗೆ ‘ಕತ್ತೆಗೆ ತಡಿಹಾಕು. ನಾನು ಕುಳಿತುಕೊಂಡು ಅರಸನ ಜೊತೆಯಲ್ಲಿ ಹೋಗಬೇಕು’ ಎಂದು ಆಜ್ಞಾಪಿಸಿದೆನು.
27ಅವನು ಹಾಗೆ ಮಾಡದೆ ನನ್ನ ಒಡೆಯನಾದ ಅರಸನ ಬಳಿಗೆ ಬಂದು ನನ್ನ ವಿಷಯದಲ್ಲಿ ಚಾಡಿಹೇಳಿದನು. ಅರಸನು ದೇವದೂತನ ಹಾಗಿರುತ್ತಾನೆ. ತನಗೆ ಸರಿಕಂಡದ್ದನ್ನು ಮಾಡಲಿ.
28ನನ್ನ ತಂದೆಯ ಮನೆಯವರೆಲ್ಲರೂ ಅರಸನಾದ ನನ್ನ ಒಡೆಯನ ದೃಷ್ಟಿಯಲ್ಲಿ ಮರಣಕ್ಕೆ ಪಾತ್ರರಾಗಿದ್ದರು. ಆದರೂ ಅವನು ತನ್ನ ಸೇವಕನಾದ ನನ್ನನ್ನು ಭೋಜನಕ್ಕೆ ತನ್ನ ಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡನು. ಅರಸನಿಗೆ ಹೆಚ್ಚಾಗಿ ಮೊರೆಯಿಡುವುದಕ್ಕೆ ನಾನೇನು ಯೋಗ್ಯನೋ?” ಎಂದು ಉತ್ತರ ಕೊಟ್ಟನು.
29ಆಗ ಅರಸನು ಅವನಿಗೆ, “ಹೆಚ್ಚು ಮಾತು ಯಾಕೆ? ನೀನೂ ಮತ್ತು ಚೀಬನೂ ಹೊಲವನ್ನು ಭಾಗಮಾಡಿಕೊಳ್ಳಬೇಕೆಂಬುದೇ ನನ್ನ ತೀರ್ಪು” ಎಂದು ಹೇಳಿದನು.
30ಅದಕ್ಕೆ ಮೆಫೀಬೋಶೆತನು, “ಚೀಬನು ಎಲ್ಲವನ್ನು ತಾನೆ ತೆಗೆದುಕೊಂಡರೂ, ತೆಗೆದುಕೊಳ್ಳಲಿ. ನನ್ನ ಒಡೆಯನಾದ ಅರಸನು ತನ್ನ ಮನೆಗೆ ಸುರಕ್ಷಿತನಾಗಿ ಬಂದದ್ದೇ ಸಾಕು” ಎಂದನು.
31ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬುವನು ಅರಸನನ್ನು ಸಾಗಕಳುಹಿಸುವುದಕ್ಕಾಗಿ ರೋಗೆಲೀಮಿನಿಂದ ಯೊರ್ದನಿಗೆ ಬಂದಿದ್ದನು.
32ಇವನು ಎಂಬತ್ತು ವರ್ಷದ ಮುದುಕನು. ಇವನು ಬಹು ಶ್ರೀಮಂತನಾಗಿದ್ದುದರಿಂದ ದಾವೀದನು ಮಹನಯಿಮಿನಲ್ಲಿದ್ದ ಕಾಲದಲ್ಲೆಲ್ಲಾ ಅವನ ಜೀವನಕ್ಕೆ ಬೇಕಾದದ್ದನ್ನು ಇವನೇ ಒದಗಿಸಿಕೊಡುತ್ತಿದ್ದನು.
33ಅರಸನು ಬರ್ಜಿಲ್ಲೈಗೆ, “ನನ್ನ ಜೊತೆಯಲ್ಲಿ ನದಿಯ ಆಚೆಗೆ ಬಾ, ನಾನು ಯೆರೂಸಲೇಮಿನಲ್ಲಿ ನಿನ್ನನ್ನು ಹತ್ತಿರವೇ ಇಟ್ಟುಕೊಂಡು ಸಂರಕ್ಷಿಸುತ್ತೇನೆ” ಎಂದನು.
34ಅದಕ್ಕೆ ಬರ್ಜಿಲ್ಲೈಯು, “ಇಷ್ಟು ವಯಸ್ಸು ಕಳೆದವನಾದ ನಾನು ಅರಸನ ಸಂಗಡ ಯೆರೂಸಲೇಮಿಗೆ ಬರುವುದು ಹೇಗೆ
35ಈಗ ನಾನು ಎಂಬತ್ತು ವರ್ಷದವನು. ಒಳ್ಳೆಯದು, ಕೆಟ್ಟದ್ದು ಇವುಗಳ ಭೇದವು ನನಗಿನ್ನು ತಿಳಿಯುವುದೋ? ನಿನ್ನ ಸೇವಕನಾದ ನನಗೆ ಅನ್ನಪಾನಗಳ ರುಚಿಯು ಗೊತ್ತಾಗುವುದೋ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೋ? ನಾನು ನನ್ನ ಒಡೆಯನಾದ ಅರಸನಿಗೆ ಯಾಕೆ ಹೊರೆಯಾಗಿರಬೇಕು?
36ಹೊಳೆದಾಟಿ ಸ್ವಲ್ಪ ದೂರ ನಿನ್ನ ಸಂಗಡ ಬರುತ್ತೇನೆ. ಅರಸನಾದ ನೀನು ನನಗೇಕೆ ಇಂಥ ಉಪಕಾರ ಮಾಡಬೇಕು?

37ದಯವಿಟ್ಟು ನಿನ್ನ ಸೇವಕನಾದ ನನಗೆ ಹಿಂದಿರುಗಿ ಹೋಗುವುದಕ್ಕೆ ಅಪ್ಪಣೆಯಾಗಲಿ. ನಾನು ನನ್ನ ತಂದೆತಾಯಿಗಳ ಸಮಾಧಿಯಿರುವ ಸ್ವಂತ ಊರಿಗೆ ಹೋಗಿ ಅಲ್ಲೇ ಸಾಯುವೆನು. ಇಗೋ ಇಲ್ಲಿ ನಿನ್ನ ಸೇವಕನಾದ ಕಿಮ್ಹಾಮನಿರುತ್ತಾನೆ. ನನ್ನ ಒಡೆಯನಾದ ಅರಸನು ಇವನನ್ನು ಕರೆದುಕೊಂಡು ಹೋಗಿ ತನ್ನ ಇಷ್ಟವಿದ್ದಂತೆ ಇವನಿಗೆ ದಯೆತೋರಿಸಲಿ” ಎಂದನು.
38ಅದಕ್ಕೆ ಅರಸನು, “ಕಿಮ್ಹಾಮನು ನನ್ನ ಸಂಗಡ ಬರಲಿ. ಅವನಿಗೆ ನಿನ್ನ ಇಷ್ಟದಂತೆ ದಯೆತೋರಿಸುವೆನು. ಇನ್ನು ಏನೇನು ಮಾಡಬೇಕೆನ್ನುತ್ತಿಯೋ ಅದೆಲ್ಲವನ್ನೂ ಮಾಡುತ್ತೇನೆ” ಎಂದು ಹೇಳಿದನು.
39ಎಲ್ಲಾ ಜನರೂ ನದಿದಾಟಿದರು. ಅರಸನು ನದಿ ದಾಟಿದ ಮೇಲೆ ಬರ್ಜಿಲ್ಲೈಯನ್ನು ಮುದ್ದಿಟ್ಟು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಊರಿಗೆ ಹೋದನು.
40ಅರಸನು ಕಿಮ್ಹಾಮನೊಡನೆ ಗಿಲ್ಗಾಲಿಗೆ ತೆರಳಿದನು. ಎಲ್ಲಾ ಯೆಹೂದ್ಯರೂ, ಇಸ್ರಾಯೇಲರಲ್ಲಿ ಅರ್ಧ ಜನರೂ ಅರಸನನ್ನು ಕರೆದುಕೊಂಡು ಹೋದರು.
41ಆಗ ಇಸ್ರಾಯೇಲರೆಲ್ಲರೂ ಅರಸನ ಮುಂದೆ ಬಂದು ಅವನನ್ನು, “ನಮ್ಮ ಸಹೋದರರಾದ ಯೆಹೂದ್ಯರು ನಮಗೆ ತಿಳಿಸದೆ ತಾವೆ ಹೋಗಿ ಅರಸನನ್ನೂ, ಅವನ ಮನೆಯವರನ್ನೂ, ಅವನೊಡನೆ ಇದ್ದ ಜನರನ್ನೂ ಯೊರ್ದನ್ ನದಿ ದಾಟಿಸಿ ಕರೆದುಕೊಂಡು ಬಂದದ್ದೇಕೆ?” ಎಂದು ಕೇಳಿದರು.
42ಅದಕ್ಕೆ ಯೆಹೂದ್ಯರು ಇಸ್ರಾಯೇಲರಿಗೆ, “ಅರಸನು ನಮಗೆ ಸಮೀಪದ ಬಂಧು. ನೀವು ಅದಕ್ಕಾಗಿ ಕೋಪಗೊಳ್ಳುವುದೇಕೆ? ನಾವೇನು ಅರಸನ ಹಣದಿಂದ ಊಟಮಾಡಿದೆವೋ? ಅವನು ನಮಗೆ ಏನಾದರೂ ಕೊಟ್ಟನೋ?” ಎಂದು ಉತ್ತರ ಕೊಟ್ಟರು.
43ಆಗ ಇಸ್ರಾಯೇಲರು ಯೆಹೂದ್ಯರಿಗೆ, “ಅರಸನಲ್ಲಿ ನಮಗೆ ಹತ್ತು ಪಾಲು ಉಂಟಲ್ಲಾ, ದಾವೀದನ ವಿಷಯದಲ್ಲೂ ನಮಗೆ ಹೆಚ್ಚು ಹಕ್ಕು ಉಂಟು. ಹೀಗಿರುವುದರಿಂದ ನೀವು ನಮ್ಮನ್ನು ಕಡೆಗಾಣಿಸಿದ್ದೇಕೆ? ನಮ್ಮ ಅರಸನನ್ನು ಕರೆದುಕೊಂಡು ಬರುವ ವಿಷಯದಲ್ಲಿ ಮೊದಲು ಮಾತನಾಡಿದವರು ನಾವಲ್ಲವೋ?” ಎಂದರು. ಇಸ್ರಾಯೇಲರ ಮಾತುಗಳಿಗಿಂತ ಯೆಹೂದ್ಯರ ಮಾತುಗಳು ಕಠಿಣವಾಗಿದ್ದವು.