Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಸಮು

2 ಸಮು 2

Help us?
Click on verse(s) to share them!
1ಅನಂತರ ದಾವೀದನು ಯೆಹೋವನನ್ನು, “ನಾನು ಯೆಹೂದ ದೇಶದ ಯಾವುದಾದರು ಒಂದು ಪಟ್ಟಣಕ್ಕೆ ಹೋಗಬಹುದೋ?” ಎಂದು ಕೇಳಲು ಆತನು ಹೋಗಬಹುದು ಅಂದನು. ಅವನು ತಿರುಗಿ, “ಯಾವ ಊರಿಗೆ ಹೋಗಲಿ?” ಎಂದು ಕೇಳಿದ್ದಕ್ಕೆ ಹೆಬ್ರೋನಿಗೆ ಹೋಗು ಎಂದು ಉತ್ತರ ಸಿಕ್ಕಿತು.
2ಆಗ ದಾವೀದನು ತನ್ನ ಇಬ್ಬರು ಹೆಂಡತಿಯರಾದ ಇಜ್ರೇಲಿನ ಅಹೀನೋವಮಳನ್ನೂ, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳನ್ನೂ ಕರೆದುಕೊಂಡು ಅಲ್ಲಿಗೆ ಹೋದನು.
3ದಾವೀದನ ಜನರೂ ತಮ್ಮ ತಮ್ಮ ಕುಟುಂಬಗಳನ್ನು ಕರೆದುಕೊಂಡು ಅವನ ಜೊತೆಯಲ್ಲಿ ಹೋಗಿ ಹೆಬ್ರೋನಿಗೆ ಸೇರಿದ ಊರುಗಳಲ್ಲಿ ವಾಸಮಾಡಿದರು.
4ತರುವಾಯ ಯೆಹೂದ್ಯರು ಅಲ್ಲಿಗೆ ಬಂದು ದಾವೀದನನ್ನು ಅಭಿಷೇಕಿಸಿ, ತಮ್ಮ ಕುಲಕ್ಕೆ ಅರಸನನ್ನಾಗಿ ಮಾಡಿಕೊಂಡರು. ಸೌಲನ ಶವವನ್ನು ಸಮಾಧಿಮಾಡಿದವರು ಯಾಬೇಷ್ ಗಿಲ್ಯಾದ್ ದೇಶದವರೇ ಎಂಬ ಸಂಗತಿಯು ದಾವೀದನಿಗೆ ಗೊತ್ತಾಯಿತು.
5ಆಗ ದಾವೀದನು ಅವರ ಬಳಿಗೆ ದೂತರನ್ನು ಕಳುಹಿಸಿ, “ನೀವು ನಿಷ್ಠೆಯಿಂದ ನಿಮ್ಮ ಒಡೆಯನಾದ ಸೌಲನ ಶವವನ್ನು ಸಮಾಧಿ ಮಾಡಿದ್ದಕ್ಕಾಗಿ ನಿಮಗೆ ಯೆಹೋವನ ಆಶೀರ್ವಾದವುಂಟಾಗಲಿ.
6ಯೆಹೋವನ ಒಡಂಬಡಿಕೆಯ ನಂಬಿಕೆ ಮತ್ತು ಸತ್ಯ ನಿಮ್ಮೊಂದಿಗಿರಲಿ. ಈ ಕಾರ್ಯಕ್ಕಾಗಿ ನಾನೂ ನಿಮಗೆ ಉಪಕಾರ ಮಾಡುವೆನು.
7ಯೆಹೂದ್ಯರು ನನ್ನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡಿದ್ದಾರೆ. ನಿಮ್ಮ ಅರಸನಾದ ಸೌಲನು ಸತ್ತುಹೋದರೂ ನೀವು ಶೂರರಾಗಿರಿ, ನಿಮ್ಮ ಕೈಗಳು ಜೋಲುಬೀಳದಿರಲಿ” ಎಂದು ಹೇಳಿ ಕಳುಹಿಸಿದನು.
8ಸೌಲನ ಸೇನಾಧಿಪತಿಯೂ ನೇರನ ಮಗನೂ ಆದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ಹೊಳೆಯ ಆಚೆಯಲ್ಲಿರುವ ಮಹನಯಿಮಿಗೆ ಕರೆದುಕೊಂಡು ಹೋಗಿ
9ಅವನನ್ನು ಗಿಲ್ಯಾದ್, ಆಶೇರ್, ಇಜ್ರೇಲ, ಎಫ್ರಾಯೀಮ್, ಬೆನ್ಯಾಮೀನ ಜನರಿಗೂ ಬೇರೆ ಎಲ್ಲಾ ಇಸ್ರಾಯೇಲರಿಗೂ ಅರಸನನ್ನಾಗಿ ಮಾಡಿದನು.
10ಸೌಲನ ಮಗನಾದ ಈಷ್ಬೋಶೆತನು ನಲ್ವತ್ತು ವರ್ಷದವನಾದಾಗ ಇಸ್ರಾಯೇಲರನ್ನು ಆಳತೊಡಗಿ ಎರಡು ವರ್ಷ ರಾಜ್ಯಭಾರ ಮಾಡಿದನು. ಯೆಹೂದ್ಯರು ಮಾತ್ರ ದಾವೀದನನ್ನು ಹಿಂಬಾಲಿಸಿದರು.
11ದಾವೀದನು ಹೆಬ್ರೋನಿನಲ್ಲಿ ಯೆಹೂದ್ಯರ ಅರಸನಾಗಿದ್ದದ್ದು ಏಳು ವರ್ಷ ಆರು ತಿಂಗಳುಗಳು.
12ಒಂದು ದಿನ ನೇರನ ಮಗನಾದ ಅಬ್ನೇರನೂ, ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದರು.
13ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರು ಹೊರಟು ಅವರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿ, ಒಂದು ಗುಂಪು ಕೆರೆಯ ಈಚೆಯಲ್ಲಿಯೂ ಇನ್ನೊಂದು ಗುಂಪು ಆಚೆಯಲ್ಲಿಯೂ ಕುಳಿತುಕೊಂಡರು.
14ಆಗ ಅಬ್ನೇರನು ಯೋವಾಬನಿಗೆ, “ಎರಡು ಕಡೆಯ ತರುಣರು ಎದ್ದು ನಮ್ಮ ಮುಂದೆ ಸ್ಪರ್ಧಿಸಲಿ” ಎಂದು ಹೇಳಲು ಯೋವಾಬನು, “ಆಗಲಿ” ಅಂದನು.
15ಆಗ ಸೌಲನ ಮಗನಾದ ಈಷ್ಬೋಶೆತನ ಕಡೆಯವರಾದ ಹನ್ನೆರಡು ಮಂದಿ ಬೆನ್ಯಾಮೀನ್ಯರು, ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಸಮಸಂಖ್ಯೆಯಾಗಿ ಹೊರಟು ಬಂದರು.
16ಅವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಎದುರಾಳಿಯ ತಲೆಹಿಡಿದು, ಕತ್ತಿಯಿಂದ ಪಕ್ಕೆಯಲ್ಲಿ ತಿವಿದಿದ್ದರಿಂದ ಎಲ್ಲರೂ ಸತ್ತು ಬಿದ್ದರು. ಆದ್ದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ “ಹೆಲ್ಕಾತ್ ಹಸ್ಸೂರಿಂ” ಎಂದು ಹೆಸರಾಯಿತು.
17ಅನಂತರ ಆ ದಿನ ಘೋರ ಯುದ್ಧವಾಯಿತು. ಅಬ್ನೇರನೂ ಇಸ್ರಾಯೇಲ್ಯರೂ ದಾವೀದನ ಸೇವಕರಿಂದ ಸೋಲಿಸಲ್ಪಟ್ಟರು.
18ಚೆರೂಯಳ ಮೂರು ಮಂದಿ ಮಕ್ಕಳಾದ ಯೋವಾಬ, ಅಬೀಷೈ, ಅಸಾಹೇಲ ಎಂಬುವರು ಅಲ್ಲಿಗೆ ಬಂದಿದ್ದರು. ಅಸಾಹೇಲನು ಅಡವಿಯ ಜಿಂಕೆಯಂತೆ ಚುರುಕು ಕಾಲಿನವನಾಗಿದ್ದನು.

19ಇವನು ಎಡಕ್ಕಾದರೂ ಬಲಕ್ಕಾದರೂ ತಿರುಗದೇ ಅಬ್ನೇರನನ್ನು ಹಿಂದಟ್ಟಿದನು.
20ಅಬ್ನೇರನು ಹಿಂತಿರುಗಿ ನೋಡಿ, “ನೀನು ಅಸಾಹೇಲನೋ?” ಎಂದು ಕೇಳಿದ್ದಕ್ಕೆ ಅವನು ಹೌದೆಂದು ಉತ್ತರಕೊಟ್ಟನು.
21ಆಗ ಅಬ್ನೇರನು ಅವನಿಗೆ, “ನನ್ನನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ತಿರುಗಿಕೊಂಡು ಯುವಕರಲ್ಲೊಬ್ಬನನ್ನು ಹಿಡಿದು ಸುಲಿದುಕೋ” ಎಂದು ಹೇಳಿದನು. ಆದರೆ ಅಸಾಹೇಲನು ಒಪ್ಪಲಿಲ್ಲ.
22ಅಬ್ನೇರನು ತಿರುಗಿ ಅಸಾಹೇಲನಿಗೆ, “ನನ್ನನ್ನು ಬಿಟ್ಟು ಹೋಗು, ನಾನೇಕೆ ನಿನ್ನನ್ನು ನೆಲಕ್ಕುರುಳಿಸಬೇಕು? ಹಾಗೆ ಮಾಡಿದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮುಖ ತೋರಿಸಲಿ” ಅಂದನು.
23ಅಸಾಹೇಲನು ಬಿಟ್ಟು ಹೋಗುವುದಕ್ಕೆ ಒಪ್ಪದ ಕಾರಣ ಅಬ್ನೇರನು ಬರ್ಜಿಯನ್ನು ಹಿಂದಿನಿಂದ ಅವನ ಹೊಟ್ಟೆಯೊಳಗೆ ತಿವಿದನು. ಬರ್ಜಿಯು ಅವನ ಬೆನ್ನಿನಿಂದ ಹಾಯ್ದು ಹೊರಗೆ ಬಂದಿತು. ಅವನು ಕೂಡಲೇ ಅಲ್ಲೇ ಬಿದ್ದು ಸತ್ತನು. ಅಸಾಹೇಲನು ಸತ್ತು ಬಿದ್ದ ಸ್ಥಳಕ್ಕೆ ಬಂದವರೆಲ್ಲರೂ ಅಲ್ಲೇ ನಿಂತರು.
24ಆದರೆ ಯೋವಾಬನೂ, ಅಬೀಷೈಯೂ ಅಬ್ನೇರನನ್ನು ಹಿಂದಟ್ಟಿದರು. ಹೀಗೆ ಅವರು “ಅಮ್ಮಾ” ಎಂಬ ಗುಡ್ಡಕ್ಕೆ ಬರುವಷ್ಟರಲ್ಲಿ ಸೂರ್ಯಾಸ್ತಮಾನವಾಯಿತು. ಆ ಗುಡ್ಡವು ಗಿಬ್ಯೋನಿನ ಅರಣ್ಯ ಮಾರ್ಗದ ಬಳಿಯಲ್ಲಿರುವ ಗೀಯದ ಎದುರಿನಲ್ಲಿರುತ್ತದೆ.
25ಬೆನ್ಯಾಮೀನ್ಯರು ಒಂದೇ ಗುಂಪಾಗಿ ಕೂಡಿಕೊಂಡು ಅಬ್ನೇರನ ಬಳಿಗೆ ಬಂದು ಗುಡ್ಡದ ಮೇಲೆ ನಿಂತರು.
26ಆಗ ಅಬ್ನೇರನು, “ಯೋವಾಬನನ್ನು ಕತ್ತಿಯು ಯಾವಾಗಲೂ ತಿನ್ನುತ್ತಲೇ ಇರಬೇಕೋ? ಹಗೆತನವೇ ಇದರ ಅಂತ್ಯಫಲವೆಂದು ನಿನಗೆ ಗೊತ್ತಾಗಲಿಲ್ಲವೋ? ಸಹೋದರರನ್ನು ಹಿಂದಟ್ಟುವುದು ಸಾಕೆಂದು ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವಿ” ಎಂದನು.
27ಅದಕ್ಕೆ ಯೋವಾಬನು, “ದೇವರ ಜೀವದಾಣೆ, ಈಗ ನೀನು ಈ ಮಾತುಗಳನ್ನು ಹೇಳದಿದ್ದರೆ ಜನರು ನಾಳೆ ಬೆಳಗಾಗುವವರೆಗೆ ತಮ್ಮ ಬಂಧುಗಳನ್ನು ಹಿಂದಟ್ಟದೆ ಬಿಡುವುದಿಲ್ಲ” ಎಂದು ಉತ್ತರಕೊಟ್ಟು ಕೂಡಲೇ ತುತ್ತೂರಿಯನ್ನು ಊದಿಸಿದನು.
28ಆಗ ಅವರು ಇಸ್ರಾಯೇಲ್ಯರನ್ನು ಹಿಂದಟ್ಟದೆ ಬಿಟ್ಟಿದ್ದರಿಂದ ಯುದ್ಧವು ನಿಂತುಹೋಯಿತು.
29ಅಬ್ನೇರನೂ ಅವನ ಜನರೂ ಅರಾಬಾ ತಗ್ಗಿನಲ್ಲಿ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಯೊರ್ದನ್ ಹೊಳೆದಾಟಿ, ಬಿಥ್ರೋನ ಕಣಿವೆಯನ್ನು ಹಾದು, ಮಹನಯಿಮಿಗೆ ಸೇರಿದರು.
30ಯೋವಾಬನು ಅಬ್ನೇರನನ್ನು ಹಿಂದಟ್ಟದೆ ಬಿಟ್ಟು, ಹಿಂದಿರುಗಿ ಬಂದು, ಜನರನ್ನು ಸೇರಿಸಿ ಲೆಕ್ಕಮಾಡಿದಾಗ ಅವರಲ್ಲಿ ದಾವೀದನ ಹತ್ತೊಂಬತ್ತು ಮಂದಿ ಸೈನಿಕರೂ ಅಸಾಹೇಲನೂ ಇರಲಿಲ್ಲ.
31ಆದರೆ ದಾವೀದನ ಸೈನಿಕರು ಅಬ್ನೇರನ ಜನರಾಗಿರುವ ಬೆನ್ಯಾಮೀನ್ಯರಲ್ಲಿ ಮುನ್ನೂರ ಅರವತ್ತು ಮಂದಿಯನ್ನು ಕೊಂದಿದ್ದರು.
32ಅವರು ಅಸಾಹೇಲನ ಶವವನ್ನು ತಂದು ಅದನ್ನು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅನಂತರ ಯೋವಾಬನೂ, ಅವನ ಜನರೂ ರಾತ್ರಿಯೆಲ್ಲಾ ಪ್ರಯಾಣಮಾಡಿ ಹೆಬ್ರೋನಿಗೆ ಬಂದರು. ಆಗ ಸೂರ್ಯೋದಯವಾಯಿತು.