Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೋಹಾ - ಯೋಹಾ 1

ಯೋಹಾ 1:28-46

Help us?
Click on verse(s) to share them!
28ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಯಲ್ಲಿರುವ ಬೇಥಾನ್ಯ ಎಂಬ ಊರಿನಲ್ಲಿ ನಡೆಯಿತು.
29ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ, “ಅಗೋ, ಲೋಕದ ಪಾಪವನ್ನು ನಿವಾರಣೆ ಮಾಡಲು ದೇವರು ನೇಮಿಸಿದ ಯಜ್ಞದಕುರಿಮರಿ.
30‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ.
31ನನಗೂ ಆತನ ಗುರುತಿರಲಿಲ್ಲ. ಆದರೆ ಆತನನ್ನು ಇಸ್ರಾಯೇಲ್ಯರಿಗೆ ಪ್ರಕಟಪಡಿಸುವುದಕ್ಕೊಸ್ಕರ ನಾನು ನೀರಿನಲ್ಲಿ ದೀಕ್ಷಾಸ್ನಾನವನ್ನು ಮಾಡಿಸುವವನಾಗಿ ಬಂದೆನು.”
32ಇದಲ್ಲದೆ ಯೋಹಾನನು ಸಾಕ್ಷಿ ಕೊಟ್ಟು ಹೇಳಿದ್ದೇನೆಂದರೆ, “ದೇವರಾತ್ಮನು ಪರಲೋಕದಿಂದ ಪಾರಿವಾಳದಂತೆ ಇಳಿಯುವುದನ್ನು ಮತ್ತು ಆತನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು.
33ನನಗೂ ಆತನು ಯಾರೆಂಬುದು ತಿಳಿದಿರಲಿಲ್ಲ. ಆದರೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವುದಕ್ಕೆ ನನ್ನನ್ನು ಕಳುಹಿಸಿದಾತನು ‘ಯಾರ ಮೇಲೆ ಆತ್ಮನು ಇಳಿದುಬಂದು ನೆಲೆಯಾಗಿರುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವಾತನು’ ಎಂದು ತಾನೇ ನನಗೆ ಹೇಳಿದನು.
34ನಾನು ಅದನ್ನು ನೋಡಿದ್ದೇನೆ ಮತ್ತು ಈತನೇ ದೇವಕುಮಾರನೆಂದು ಸಾಕ್ಷಿ ಕೊಟ್ಟಿದ್ದೇನೆ” ಎಂದು ಹೇಳಿದನು.
35ಮರುದಿನ ಪುನಃ ಯೋಹಾನನೂ ತನ್ನ ಇಬ್ಬರು ಶಿಷ್ಯರೊಂದಿಗೆ ನಿಂತುಕೊಂಡಿದ್ದನು,
36ಆಗ ಅಲ್ಲಿ ಯೇಸು ಹೋಗುತ್ತಿರುವುದನ್ನು ನೋಡಿ, ಯೋಹಾನನೂ ಅಗೋ, “ಯಜ್ಞಕ್ಕೆ ದೇವರು ನೇಮಿಸಿರುವ ಕುರಿಮರಿ” ಎಂದು ಹೇಳಿದನು.
37ಆ ಇಬ್ಬರು ಶಿಷ್ಯರು ಯೋಹಾನನು ಹೇಳಿದ್ದನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು.
38ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು ಅವರು, “ರಬ್ಬಿಯೇ, (ಅಂದರೆ ಗುರುವೇ) ನೀನು ವಾಸಿಸುವುದು ಎಲ್ಲಿ?” ಎಂದು ಕೇಳಿದರು.
39ಆತನು ಅವರಿಗೆ, “ನೀವೇ ಬಂದು ನೋಡಿರಿ” ಎಂದು ಹೇಳಲು, ಅವರು ಹೋಗಿ ಆತನು ವಾಸಿಸುತ್ತಿದ್ದ ಸ್ಥಳವನ್ನು ನೋಡಿ ಆ ದಿನ ಆತನ ಸಂಗಡ ಇದ್ದರು. ಆಗ ಹೆಚ್ಚುಕಡಿಮೆ ಸಂಜೆ ನಾಲ್ಕು ಗಂಟೆಯಾಗಿತ್ತು.
40ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಆ ಇಬ್ಬರಲ್ಲಿ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಒಬ್ಬನು.
41ಇವನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡು ಅವನಿಗೆ “ನಾವು ಮೆಸ್ಸೀಯನನ್ನು ಕಂಡುಕೊಂಡೆವು” (ಮೆಸ್ಸೀಯನು ಎಂದರೆ ಕ್ರಿಸ್ತನು) ಎಂದು ಹೇಳಿ,
42ಅವನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಅವನನ್ನು ನೋಡಿ “ನೀನು ಯೋಹಾನನ ಮಗನಾದ ಸೀಮೋನನು. ಇನ್ನು ಮೇಲೆ ನೀನು ‘ಕೇಫ’ ಎಂದು ಕರೆಯಲ್ಪಡುವಿ” ಎಂದು ಹೇಳಿದನು. (ಕೇಫ ಎಂದರೆ ಪೇತ್ರ ಇಲ್ಲವೆ ಬಂಡೆ ಎಂದು ಅರ್ಥ)
43ಮರುದಿನ ಯೇಸು ಗಲಿಲಾಯಕ್ಕೆ ಹೋಗಬೇಕೆಂದಿರುವಾಗ ಫಿಲಿಪ್ಪನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದನು.
44ಈ ಫಿಲಿಪ್ಪನು, ಅಂದ್ರೆಯ ಮತ್ತು ಪೇತ್ರರ ಪಟ್ಟಣವಾದ ಬೆತ್ಸಾಯಿದದವನಾಗಿದ್ದನು.
45ಫಿಲಿಪ್ಪನು ನತಾನಯೇಲನನ್ನು ಕಂಡು ಅವನಿಗೆ “ಮೋಶೆಯು ಧರ್ಮಶಾಸ್ತ್ರದಲ್ಲಿ ಯಾರ ವಿಷಯವಾಗಿ ಬರೆದನೋ ಮತ್ತು ಪ್ರವಾದಿಗಳು ಯಾರ ವಿಚಾರವಾಗಿ ಬರೆದರೋ ಆತನು ನಮಗೆ ಸಿಕ್ಕಿದನು, ಆತನು ಯಾರೆಂದರೆ ಯೋಸೇಫನ ಮಗನಾದ ನಜರೇತಿನ ಯೇಸುವೇ” ಎಂದು ಹೇಳಿದನು.
46ನತಾನಯೇಲನು “ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ?” ಎಂದು ಕೇಳಲು, ಫಿಲಿಪ್ಪನು “ಬಂದು ನೋಡು,” ಅಂದನು.

Read ಯೋಹಾ 1ಯೋಹಾ 1
Compare ಯೋಹಾ 1:28-46ಯೋಹಾ 1:28-46