Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ನೆಹೆ

ನೆಹೆ 9

Help us?
Click on verse(s) to share them!
1ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಇಸ್ರಾಯೇಲರು ಉಪವಾಸವಾಗಿದ್ದು ಗೋಣೀತಟ್ಟನ್ನು ಕಟ್ಟಿಕೊಂಡು ತಮ್ಮ ಮೇಲೆ ಮಣ್ಣುಹಾಕಿಕೊಂಡು ನೆರೆದು ಬಂದರು.
2ಇಸ್ರಾಯೇಲ್ ಸಂತಾನದವರು ಎಲ್ಲಾ ಅನ್ಯಕುಲದವರಿಂದ ತಮ್ಮನ್ನು ಬೇರ್ಪಡಿಸಿಕೊಂಡು, ಎದ್ದು ನಿಂತುಕೊಂಡು ತಮ್ಮ ಪಾಪಗಳನ್ನೂ, ತಮ್ಮ ಪೂರ್ವಿಕರ ಪಾಪಗಳನ್ನೂ ಆತನಿಗೆ ಅರಿಕೆಮಾಡಿದರು.
3ಅವರು ಮೂರು ತಾಸುಗಳವರೆಗೂ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡು ತಮ್ಮ ದೇವರಾದ ಯೆಹೋವನ ಧರ್ಮನಿಯಮಗಳ ಗ್ರಂಥವನ್ನು ಪಾರಾಯಣಮಾಡಿದರು. ತರುವಾಯ ಇನ್ನೂ ಮೂರು ತಾಸು ತಮ್ಮ ದೇವರಾದ ಯೆಹೋವನಿಗೆ ಅಡ್ಡ ಬಿದ್ದು ಪಾಪಗಳನ್ನು ಅರಿಕೆಮಾಡಿದರು.
4ಯೇಷೂವ, ಬಾನೀ ಕದ್ಮೀಯೇಲ್, ಶೆಬನ್ಯ, ಬುನ್ನೀ, ಶೇರೇಬ್ಯ, ಬಾನೀ, ಕೆನಾನೀ ಎಂಬುವವರು ಲೇವಿಯರು ಮೆಟ್ಟಿಲುಗಳ ಮೇಲೆ ನಿಂತು ಮಹಾಶಬ್ದದಿಂದ ತಮ್ಮ ದೇವರಾದ ಯೆಹೋವನಿಗೆ ಮೊರೆಯಿಟ್ಟರು.
5ಆನಂತರ ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬುವವರು, “ಏಳಿರಿ, ನಮ್ಮ ದೇವರಾದ ಯೆಹೋವನಿಗೆ ಯುಗಯುಗಕ್ಕೂ ಸ್ತೋತ್ರವನ್ನು ಸಲ್ಲಿಸಿರಿ. ಯೆಹೋವನೇ, ಸರ್ವಸ್ತುತಿ ಕೀರ್ತನೆಗಳಿಗೂ ಮೀಗಿಲಾಗಿರುವ ನಿನ್ನ ಮಹಾನಾಮಕ್ಕೆ ಮಹಿಮೆಯುಂಟಾಗಲಿ.
6ಯೆಹೋವನೇ ನೀನೊಬ್ಬನೇ ದೇವರು; ನೀನು ಉನ್ನತೋನ್ನತವಾದ ಆಕಾಶವನ್ನೂ, ಅದರ ಸೈನ್ಯವನ್ನೂ, ಭೂಮಿಯನ್ನೂ ಅದರ ಮೇಲಿರುವುದನ್ನೂ, ಸಮುದ್ರಗಳನ್ನೂ ಎಲ್ಲಾ ಜಲಚರಗಳನ್ನೂ ಉಂಟುಮಾಡಿ, ಸಮಸ್ತ ಪ್ರಾಣಿಗಳಿಗೂ ಜೀವಕೊಡುವಾತನಾಗಿರುತ್ತೀ. ಆಕಾಶಸೈನ್ಯದವರು ನಿನ್ನನ್ನು ಆರಾಧಿಸುತ್ತಾರೆ.
7ಯೆಹೋವನೇ, ಅಬ್ರಾಮನನ್ನು ಆರಿಸಿಕೊಂಡು ಕಸ್ದೀಯರ ಊರ್ ಎಂಬ ಪಟ್ಟಣದಿಂದ ಬರಮಾಡಿ, ಅವನಿಗೆ ಅಬ್ರಹಾಮನೆಂಬ ಹೆಸರನ್ನು ಕೊಟ್ಟ ದೇವರು ನೀನೇ.
8ಅವನು ಯಥಾರ್ಥಚಿತ್ತನೆಂದು ಕಂಡು ಅವನಿಗೆ, ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜ್ಜೀಯರು, ಯೆಬೂಸಿಯರು, ಗಿರ್ಗಾಷಿಯರು ಇವರ ದೇಶವನ್ನು ನಿನ್ನ ಸಂತಾನದವರಿಗೆ ಕೊಡುತ್ತೇನೆಂದು ವಾಗ್ದಾನಮಾಡಿ ಅದನ್ನು ನೆರವೇರಿಸಿದ್ದರಿಂದ ನೀನು ನೀತಿಸ್ವರೂಪನು.
9ಐಗುಪ್ತ ದೇಶದಲ್ಲಿ ನಮ್ಮ ಪೂರ್ವಿಕರಿಗಿದ್ದ ಕಷ್ಟವನ್ನು ನೋಡಿ, ಕೆಂಪುಸಮುದ್ರದ ಬಳಿಯಲ್ಲಿ ಅವರು ಮೊರೆಯಿಟ್ಟಾಗ ನೀನು ಆಲಿಸಿದಿ.
10ಐಗುಪ್ತ್ಯರು ಗರ್ವಿಗಳಾಗಿ ನಮ್ಮ ಪೂರ್ವಿಕರನ್ನು ಕುಗ್ಗಿಸಿದಾಗ, ನೀನು ಫರೋಹನಲ್ಲಿಯೂ, ಅವನ ಸೇವಕರಲ್ಲಿಯು, ಅವನ ದೇಶದ ಜನರಲ್ಲಿಯೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನು ನಡೆಸಿ ಈಗ ನಿನಗಿರುವ ಕೀರ್ತಿಯನ್ನು ಸ್ಥಾಪಿಸಿಕೊಂಡಿರುವೆ.
11ನಮ್ಮ ಪೂರ್ವಿಕರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ಹಾದುಹೋಗುವಂತೆ ಅವರ ಮುಂದೆ ಸಮುದ್ರವನ್ನು ಭೇದಿಸಿದ್ದೀ. ಅವರನ್ನು ಹಿಂದಟ್ಟಿದವರನ್ನು ಕಲ್ಲಿನಂತೆ ಮಹಾಜಲರಾಶಿಯ ತಳದಲ್ಲಿ ಮುಳುಗಿಸಿಬಿಟ್ಟೆ.
12ಹಗಲಿನಲ್ಲಿ ಮೇಘಸ್ತಂಭವಾಗಿಯೂ, ರಾತ್ರಿ ವೇಳೆಯಲ್ಲಿ ಅವರು ನಡೆಯತಕ್ಕ ದಾರಿಯಲ್ಲಿ ಬೆಳಕುಕೊಡುವುದಕ್ಕೆ ಅಗ್ನಿಸ್ತಂಭವಾಗಿಯೂ ಅವರ ಮುಂದೆ ನೀನು ನಡೆದೆ.
13ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದು ಆಕಾಶದ ಕಡೆಯಿಂದ ಅವರೊಡನೆ ಮಾತನಾಡಿ, ಅವರಿಗೆ ನೀತಿನಿಯಮಗಳನ್ನೂ, ಯಥಾರ್ಥ ಧರ್ಮೋಪದೇಶವನ್ನೂ, ಶ್ರೇಷ್ಠವಾದ ಆಜ್ಞಾವಿಧಿಗಳನ್ನೂ ಅನುಗ್ರಹಿಸಿದೆ.
14ನಿನ್ನ ಸೇವಕನಾದ ಮೋಶೆಯ ಮುಖಾಂತರ ನಿನಗೆ ಮೀಸಲಾದ ಸಬ್ಬತೆಂಬ ವಿಶ್ರಾಂತಿ ದಿನವನ್ನು ಅವರಿಗೆ ಪ್ರಕಟಿಸಿ, ಆಜ್ಞಾವಿಧಿನಿಯಮಗಳನ್ನೂ ಅವರಿಗೆ ಕಲಿಸಿದೆ.
15ಅವರಿಗೆ ಹಸಿವಾದಾಗ ಪರಲೋಕದಿಂದ ಆಹಾರವನ್ನು ಕೊಟ್ಟು, ಬಾಯಾರಿದಾಗ ಬಂಡೆಯೊಳಗಿಂದ ನೀರನ್ನು ಬರಮಾಡಿ, ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ನೀವು ಸೇರಿ ಅದನ್ನು ಸ್ವಾಧೀನಮಾಡಿಕೊಳ್ಳಿರಿ ಎಂದು ಅವರಿಗೆ ಆಜ್ಞಾಪಿಸಿದೆ.
16ಆದರೂ ನಮ್ಮ ಪೂರ್ವಿಕರು ಗರ್ವಿಗಳಾಗಿ ಹಠಹಿಡಿದು, ನಿನ್ನ ಆಜ್ಞೆಗಳಿಗೆ ಅವಿಧೇಯರಾದರು.
17ನೀನು ಅವರ ಮಧ್ಯದಲ್ಲಿ ಮಾಡಿದ ಮಹತ್ಕಾರ್ಯಗಳನ್ನು ಅವರು ಬೇಗನೆ ಮರೆತು, ನಿನ್ನ ಮಾತಿಗೆ ಕಿವಿಗೊಡದೆ ಹಠಹಿಡಿದು, ತಮಗೊಬ್ಬ ನಾಯಕನನ್ನು ನೇಮಿಸಿಕೊಂಡು, ಮೊದಲಿನಂತೆ ದಾಸರಾಗಿರುವುದಕ್ಕಾಗಿ ಐಗುಪ್ತಕ್ಕೆ ಹಿಂದಿರುಗಬೇಕೆಂದಿದ್ದರು. ಆದರೆ ನೀನಾದರೋ ಪಾಪಗಳನ್ನು ಕ್ಷಮಿಸುವವನೂ, ಕನಿಕರ ದಯೆಗಳುಳ್ಳವನೂ, ದೀರ್ಘಶಾಂತನೂ, ಕೃಪಾಳುವೂ ಆಗಿರುವ ದೇವರಾಗಿರುವುದರಿಂದ ನೀನು ಅವರ ಕೈಬಿಡಲಿಲ್ಲ.
18ಅವರು ತಮಗೆ ಎರಕದ ಬಸವನನ್ನು ಮಾಡಿಕೊಂಡು, ‘ಇಸ್ರಾಯೇಲರೇ, ನಿಮ್ಮನ್ನು ಐಗುಪ್ತದಿಂದ ಕರೆದುಕೊಂಡು ಬಂದ ದೇವರು ಇದೇ’ ಎಂದು ಹೇಳಿ ನಿನ್ನನ್ನು ಅಸಡ್ಡೆಮಾಡಿದಾಗಲೂ,

19ಕರುಣಾನಿಧಿಯಾದ ನೀನು ಅವರನ್ನು ಅರಣ್ಯದಲ್ಲಿ ಕೈಬಿಡಲಿಲ್ಲ, ಹಗಲಿನಲ್ಲಿ ಅವರಿಗೆ ದಾರಿ ತೋರಿಸುತ್ತಿದ್ದ ಮೇಘಸ್ತಂಭವೂ, ರಾತ್ರಿವೇಳೆಯಲ್ಲಿ ಅವರು ನಡೆಯತಕ್ಕ ದಾರಿಯಲ್ಲಿ ಬೆಳಕುಕೊಡುತ್ತಿದ್ದ ಅಗ್ನಿಸ್ತಂಭವೂ, ಅವರನ್ನು ಬಿಟ್ಟುಹೋಗದಂತೆ ಮಾಡಿದೆ.
20ಅವರನ್ನು ಉಪದೇಶಿಸಲು ನೀನು ನಿನ್ನ ಒಳ್ಳೆಯ ಆತ್ಮನನ್ನು ಕೊಟ್ಟೆ. ಅವರ ಬಾಯಿಂದ ಮನ್ನವನ್ನು ಹಿಂದೆಗೆಯಲಿಲ್ಲ. ಬಾಯಾರಿದಾಗ ಅವರಿಗೆ ನೀರನ್ನು ಕೊಟ್ಟೆ.
21ನಲ್ವತ್ತು ವರ್ಷ ಅವರನ್ನು ಅರಣ್ಯದಲ್ಲಿ ಸಾಕುತ್ತಾ ಇದ್ದೆ. ಅವರಿಗೆ ಯಾವ ಕೊರತೆಯೂ ಆಗಲಿಲ್ಲ. ಅವರ ಬಟ್ಟೆಗಳು ಹರಿದುಹೋಗಲಿಲ್ಲ, ಅವರ ಕಾಲುಗಳು ನೋವಿನಿಂದ ಊದಿಕೊಳ್ಳಲಿಲ್ಲ.
22ರಾಜ್ಯಗಳನ್ನೂ, ಜನಾಂಗಗಳನ್ನು ಅವರಿಗೆ ವಶಪಡಿಸಿ, ಆ ರಾಜ್ಯಗಳನ್ನು ಅವರಿಗೆ ಸ್ವತ್ತಾಗಿ ಹಂಚಿಕೊಟ್ಟೆ. ಹೀಗೆ ಅವರು ಹೆಷ್ಬೋನಿನ ಅರಸನಾದ ಸೀಹೋನ್, ಬಾಷಾನಿನ ಅರಸನಾದ ಓಗ್ ಇವರ ಪ್ರಾಂತ್ಯಗಳನ್ನು ಸ್ವಾಧೀನಪಡಿಸಿಕೊಂಡರು.
23ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸಿ, ನೀವು ಈ ದೇಶದೊಳಕ್ಕೆ‍ ಪ್ರವೇಶಿಸಿ ಅದನ್ನು ಸ್ವಾಧೀನಮಾಡಿಕೊಳ್ಳುವಿರಿ ಎಂದು ಅವರ ಪೂರ್ವಿಕರಿಗೆ ವಾಗ್ದಾನಮಾಡಿದ್ದ ದೇಶಕ್ಕೆ ಅವರನ್ನು ಬರಮಾಡಿದೆ.
24ಅವರು ಆ ದೇಶದಲ್ಲಿ ಹೋಗಿ ಸೇರಿಕೊಂಡು ಅದನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶನಿವಾಸಿಗಳಾಗಿದ್ದ ಕಾನಾನ್ಯರನ್ನು ಕುಗ್ಗಿಸಿ ಮನಸ್ಸಿಗೆ ಬಂದಂತೆ ನಡಿಸುವ ಹಾಗೆ ಆ ದೇಶದ ರಾಜರನ್ನೂ ಪ್ರಜೆಗಳನ್ನೂ ಅವರ ಕೈಗೆ ಒಪ್ಪಿಸಿದೆ.
25ಅವರು ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನೂ, ಸಾರವುಳ್ಳ ಭೂಮಿಯನ್ನೂ, ಸಮಸ್ತ ವಿಧವಾದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ, ತೋಡಿದ ಬಾವಿಗಳನ್ನೂ, ದ್ರಾಕ್ಷಿತೋಟಗಳನ್ನೂ, ಎಣ್ಣೇಮರಗಳ ತೋಪುಗಳನ್ನೂ, ಹೆಚ್ಚಾದ ಹಣ್ಣಿನ ಮರ ಇವುಗಳನ್ನೂ ವಶಮಾಡಿಕೊಂಡು ಚೆನ್ನಾಗಿ ತಿಂದು, ಕುಡಿದು ತೃಪ್ತರಾಗಿ ಕೊಬ್ಬಿ, ನೀನು ಕೊಟ್ಟ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದರು.
26ಆಗ ಅವರು ನಿನಗೆ ಅವಿಧೇಯರಾಗಿ ತಿರುಗಿ ಬಿದ್ದು ನಿನ್ನ ಧರ್ಮೋಪದೇಶವನ್ನು ಉಲ್ಲಂಘಿಸಿ ತಮ್ಮನ್ನು ಎಚ್ಚರಿಸುವುದಕ್ಕೂ ನಿನ್ನ ಕಡೆಗೆ ತಿರುಗಿಸುವುದಕ್ಕೂ ಪ್ರಯತ್ನಿಸುತ್ತಿದ್ದ ನಿನ್ನ ಪ್ರವಾದಿಗಳನ್ನು ಕೊಂದು ಹಾಕಿ ನಿನ್ನನ್ನು ಅಸಡ್ಡೆಮಾಡಿದರು.
27ಆದ್ದರಿಂದ ನೀನು ಅವರನ್ನು ದಂಡಿಸುವ ವಿರೋಧಿಗಳ ಕೈಗೆ ಒಪ್ಪಿಸಿದೆ. ಅವರು ತಮ್ಮ ಕಷ್ಟಕಾಲದಲ್ಲಿ ನಿನಗೆ ಮೊರೆಯಿಡಲು ಪರಲೋಕದಿಂದ ನೀನು ಅವರಿಗೆ ಕಿವಿಗೊಟ್ಟು ನಿನ್ನ ಕರುಣಾತಿಶಯದಿಂದ ರಕ್ಷಕರನ್ನು ಕಳುಹಿಸಿ ವಿರೋಧಿಗಳ ಕೈಯಿಂದ ಅವರನ್ನು ಪಾರುಮಾಡಿದೆ.
28ಉಪಶಮನವನ್ನು ಪಡೆದ ಮೇಲೆ ಅವರು ತಿರುಗಿ ದ್ರೋಹಿಗಳಾಗಿ ನಡೆಯುತ್ತಿರುವುದನ್ನು ನೀನು ಕಂಡು ಅವರ ಮೇಲೆ ದೊರೆತನ ನಡೆಸತಕ್ಕ ವೈರಿಗಳ ಕೈಗೆ ಅವರನ್ನು ಒಪ್ಪಿಸಿದೆ. ಆಗ ಅವರು ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು ಪುನಃ ಪರಲೋಕದಿಂದ ನೀನು ಕೇಳಿ ನಿನ್ನ ಕರುಣಾತಿಶಯದಿಂದ ಅವರನ್ನು ಅನೇಕಾವರ್ತಿ ರಕ್ಷಿಸಿದೆ.
29ನಿನ್ನ ಧರ್ಮೋಪದೇಶಕ್ಕೆ ಪುನಃ ಮನಗೊಟ್ಟು ಬನ್ನಿರಿ ಎಂದು ಎಷ್ಟೋ ಖಂಡಿತವಾಗಿ ಅವರನ್ನು ಎಚ್ಚರಿಸಿದೆ. ಆದರೂ ಅವರು ಲಾಲಿಸದೆ ಗರ್ವಿಗಳೂ, ನಿನ್ನ ಆಜ್ಞೆಗಳಿಗೆ ಅವಿಧೇಯರೂ ಆದರು. ಕೈಕೊಳ್ಳುವ ಮನುಷ್ಯನಿಗೆ ಜೀವಾಧಾರವಾಗಿರುವ ನಿನ್ನ ವಿಧಿನ್ಯಾಯಗಳನ್ನು ಮೀರಿ ಪಾಪಮಾಡಿ ಮೊಂಡು ಬಿದ್ದು ನಿನ್ನ ಮಾತುಗಳನ್ನು ಕೇಳದೆ ಹೋದರು.
30ನೀನು ಅನೇಕ ವರ್ಷಗಳ ತನಕ ಅವರ ವಿಷಯದಲ್ಲಿ ತಾಳ್ಮೆಯುಳ್ಳವನಾಗಿ ಪ್ರವಾದಿಗಳ ಮುಖಾಂತರ ಮಾತನಾಡುತ್ತಿದ್ದ ನಿನ್ನ ಆತ್ಮನಿಂದ ಅವರನ್ನು ಎಷ್ಟು ಎಚ್ಚರಿಸುತ್ತಿದ್ದರೂ ಅವರು ಕಿವಿಗೊಡದೆ ಹೋದ ಮೇಲೆ ನೀನು ಅವರನ್ನು ಅನ್ಯದೇಶಗಳವರ ಕೈಗೆ ಒಪ್ಪಿಸಿಬಿಟ್ಟೆ.
31ಆದರೆ ನೀನು ದಯೆಯೂ ಕನಿಕರವೂ ಉಳ್ಳ ದೇವರಾಗಿರುವುರಿಂದ ನಿನ್ನ ಮಹಾಕೃಪಾನುಸಾರವಾಗಿ ಅವರನ್ನು ನಾಶಮಾಡಲಿಲ್ಲ, ಕೈಬಿಡಲೂ ಇಲ್ಲ.
32ನಮ್ಮ ದೇವರೇ, ಮಹೋನ್ನತನೂ, ಪರಾಕ್ರಮಿಯೂ, ಭಯಂಕರನೂ ಆಗಿರುವಾತನೇ, ಕೃಪಾವಾಗ್ದಾನಗಳನ್ನು ನೆರವೇರಿಸುವ ದೇವರೇ, ಅಶ್ಶೂರದ ರಾಜರ ಕಾಲದಿಂದ ಇಂದಿನವರೆಗೂ ನಮ್ಮ ಅರಸರಿಗೂ, ಪ್ರಭುಗಳಿಗೂ, ಯಾಜಕರಿಗೂ, ಪ್ರವಾದಿಗಳಿಗೂ, ಪೂರ್ವಿಕರಿಗೂ ನಿನ್ನ ಎಲ್ಲಾ ಪ್ರಜೆಗಳಿಗೂ ಪ್ರಾಪ್ತವಾದ ಕಷ್ಟವು ಅಲ್ಪವು ಎಂದು ಎಣಿಸಬೇಡ.
33ನೀನು ನಮ್ಮ ಮೇಲೆ ಎಷ್ಟು ಕೇಡನ್ನು ಬರಮಾಡಿದರೂ ನೀನು ನೀತಿಸ್ವರೂಪನೇ. ನೀನು ಸತ್ಯವನ್ನೇ ನಡಿಸಿದೆ. ನಾವಾದರೋ ದುಷ್ಟರು.
34ನಮ್ಮ ಅರಸರೂ, ಪ್ರಭುಗಳೂ, ಯಾಜಕರೂ, ಹಿರಿಯರೂ ನಿನ್ನ ಧರ್ಮೋಪದೇಶವನ್ನು ಅನುಸರಿಸಲಿಲ್ಲ, ನಿನ್ನ ಆಜ್ಞೆಗಳಿಗೆ ಕಿವಿಗೊಡಲಿಲ್ಲ. ನೀನು ಎಚ್ಚರಿಸಿ ಹೇಳಿದ ಮಾತುಗಳನ್ನು ಗಮನಿಸಲಿಲ್ಲ.
35ಅವರು ಸ್ವರಾಜ್ಯದಲ್ಲಿದ್ದುಕೊಂಡು ನೀನು ದಯಪಾಲಿಸಿದ ಸಮೃದ್ಧಿಯನ್ನು ಅನುಭವಿಸುತ್ತಾ ನಿನ್ನ ಅನುಗ್ರಹದಿಂದ ದೊರಕಿದ ಫಲವತ್ತಾದ ವಿಶಾಲವಾದ ದೇಶದಲ್ಲಿ ವಾಸಿಸುತ್ತಾ ಇರುವಾಗ ನಿನ್ನನ್ನು ಆರಾಧಿಸದೆಯೂ ತಮ್ಮ ದುಷ್ಕೃತ್ಯಗಳನ್ನು ಬಿಡದೆಯೂ ಇದ್ದುದರಿಂದಲೇ ನಾವು ಈಗ ದಾಸರಾಗಿದ್ದೇವೆ.
36ನೀನು ನಮ್ಮ ಪೂರ್ವಿಕರಿಗೆ, ಇದರ ಉತ್ಪನ್ನವನ್ನೂ, ಸಮೃದ್ಧಿಯನ್ನೂ ಅನುಭವಿಸಿರಿ ಎಂದು ಹೇಳಿ ಕೊಟ್ಟ ದೇಶದಲ್ಲೇ ನಾವು ದಾಸರಾಗಿರಬೇಕಾಗಿ ಬಂದಿದೆ.

37ನಮ್ಮ ಪಾಪಗಳ ನಿಮಿತ್ತವಾಗಿ ನಿನ್ನಿಂದ ನಮ್ಮ ಮೇಲೆ ನೇಮಿಸಲ್ಪಟ್ಟ ರಾಜರಿಗೆ ಈ ದೇಶದ ಹೇರಳವಾದ ಹುಟ್ಟುವಳಿಯು ಹೋಗುತ್ತಾ ಇದೆ. ದೈಹಿಕವಾಗಿ ನಮ್ಮ ಮೇಲೆ ಹಾಗೂ ನಮ್ಮ ಪಶುಗಳ ಮೇಲೆ ಅವರು ಮನಸ್ಸಿಗೆ ಬಂದಂತೆ ಅಧಿಕಾರ ನಡಿಸುತ್ತಿದ್ದಾರೆ. ನಾವು ಮಹಾಸಂಕಟದಲ್ಲಿದ್ದೇವೆ” ಎಂದು ಪ್ರಾರ್ಥಿಸಿದರು.
38ಈ ಎಲ್ಲಾ ಕಾರಣಗಳನ್ನು ನಾವು ನೆನಪುಮಾಡಿಕೊಂಡು ಲೇಖನ ರೂಪವಾದ ಪ್ರತಿಜ್ಞೆಯನ್ನು ಸ್ಥಿರಮಾಡಿಕೊಂಡಿದ್ದೇವೆ. ಅದಕ್ಕೆ ನಮ್ಮ ಪ್ರಭುಗಳೂ, ಲೇವಿಯರೂ, ಯಾಜಕರೂ ಸಹಿಮಾಡಿ ಮುದ್ರೆ ಹಾಕಿರುವರು.