1ಆ ಮೇಲೆ ಅವರು ಸಮುದ್ರದ ಆಚೇದಡದಲ್ಲಿದ್ದ ಗೆರಸೇನರ ಸೀಮೆಗೆ ತಲುಪಿದರು.
2ಯೇಸು ದೋಣಿಯಿಂದ ಇಳಿದು ಬಂದ ಕೂಡಲೆ ದೆವ್ವ ಹಿಡಿದ ಒಬ್ಬ ಮನುಷ್ಯನು ಸಮಾಧಿಯ ಗವಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು.
3ಅವನಿಗೆ ಸಮಾಧಿಯಲ್ಲಿನ ಗವಿಗಳೇ ವಾಸಸ್ಥಳವಾಗಿತ್ತು. ಅವನನ್ನು ಅನೇಕಸಾರಿ ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು ಬೇಡಿಗಳನ್ನು ತುಂಡುತುಂಡು ಮಾಡುಬಿಡುತಿದ್ದನು; ಅವನನ್ನು ಯಾರೂ ಯಾವ ಸರಪಣಿಯಿಂದಲೂ ಕಟ್ಟಲಾರದೆ ಹೋದರು; ಅವನನ್ನು ಹತೋಟಿಗೆ ತರುವುದಕ್ಕೆ ಯಾರಿಂದಲೂ ಆಗಲಿಲ್ಲ.
5ಅವನು ರಾತ್ರಿ ಮತ್ತು ಹಗಲು ಸಮಾಧಿಯ ಗವಿಗಳಲ್ಲಿ ಮತ್ತು ಗುಡ್ಡಗಳ ಮೇಲೆ ಆರ್ಭಟಿಸುತ್ತಾ ಚೂಪಾದ ಕಲ್ಲುಗಳಿಂದ ತನ್ನನ್ನು ಗಾಯಮಾಡಿಕೊಳ್ಳುತ್ತಾ ಇದ್ದನು.
6ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು,
7ಮಹಾಶಬ್ದದಿಂದ ಆರ್ಭಟಿಸಿ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಾಣೆ ನನ್ನನ್ನು ಹಿಂಸಿಸಬೇಡ ಎಂದು ನಿನ್ನನ್ನು ನಾನು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು.
8ಏಕೆಂದರೆ ಯೇಸು, “ಅಶುದ್ಧಾತ್ಮವೇ ಇವನನ್ನು ಬಿಟ್ಟುಹೋಗು” ಎಂದು ಆಜ್ಞಾಪಿಸಿದ್ದನು.
9ಯೇಸು, “ನಿನ್ನ ಹೆಸರು ಏನೆಂದು” ಅವನನ್ನು ಕೇಳಿದ್ದಕ್ಕೆ ಅವನು, “ನನ್ನ ಹೆಸರು ದಂಡು; ಯಾಕೆಂದರೆ ನಾವು ಬಹು ಮಂದಿ ಇದ್ದೇವೆ” ಎಂದು ಹೇಳಿ,
10ನಮ್ಮನ್ನು ಈ ಪ್ರಾಂತ್ಯದಿಂದ ಹೊರಡಿಸಬೇಡ ಎಂದು ಆತನನ್ನು ಬಹಳವಾಗಿ ಬೇಡಿಕೊಂಡವು.
11ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.
12ಆ ಅಶುದ್ಧಾತ್ಮಗಳು, “ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು” ಎಂದು ಆತನನ್ನು ಬೇಡಿಕೊಂಡವು.
13ಆತನು ಅವುಗಳಿಗೆ ಅನುಮತಿಸಲು ಆ ದೆವ್ವಗಳು ಆ ಮನುಷ್ಯನಿಂದ ಹೊರಗೆ ಬಂದು ಹಂದಿಗಳೊಳಗೆ ಪ್ರವೇಶಿಸಿದವು; ಅಲ್ಲಿ ಹೆಚ್ಚುಕಡಿಮೆ ಎರಡು ಸಾವಿರ ಹಂದಿಗಳಿದ್ದವು. ಆ ಹಂದಿಗಳು ಓಡಿ ಹೋಗಿ ಇಳಿಜಾರು ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಸತ್ತುಹೋದವು.
14ಅವುಗಳನ್ನು ಮೇಯಿಸುವವರು ಓಡಿಹೋಗಿ ನಡೆದಿರುವ ಸಂಗತಿಯನ್ನು ಆ ಊರಲ್ಲಿಯೂ ಪಕ್ಕದ ಹಳ್ಳಿಗಳಲ್ಲಿಯೂ ತಿಳಿಸಲು ಜನರು ನಡೆದ ಸಂಗತಿ ಏನೆಂದು ನೋಡುವುದಕ್ಕೆ ಹೊರಟು ಯೇಸು ಇದ್ದಲ್ಲಿಗೆ ಬಂದರು.
15ಆ ದೆವ್ವಹಿಡಿದಿದ್ದವನು ಅಂದರೆ ದೆವ್ವಗಳ ದಂಡಿನಿಂದ ಬಂಧಿಸಲ್ಪಟ್ಟವನು, ಬಟ್ಟೆಗಳನ್ನು ಹಾಕಿಕೊಂಡು ಸುಬುದ್ಧಿಯಿಂದ ಕುಳಿತಿರುವುದನ್ನು ನೋಡಿ ಹೆದರಿದರು.
16ನಡೆದ ಸಂಗತಿಯನ್ನು ನೋಡಿದ್ದವರು ಆ ದೆವ್ವಹಿಡಿದವನಿಗೆ ಸಂಭವಿಸಿದೆಲ್ಲವನ್ನು ಮತ್ತು ಹಂದಿಗಳ ವಿಷಯವನ್ನೂ ಅವರಿಗೆ ವಿವರಿಸಿದರು.
17ಆಗ ಅವರು ಯೇಸುವಿಗೆ ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.
18ಆತನು ದೋಣಿಯನ್ನು ಹತ್ತುವಾಗ ಆ ದೆವ್ವಗಳ ಬಂಧನದಿಂದ ಬಿಡುಗಡೆ ಹೊಂದಿದವನು, ನಾನು ನಿನ್ನ ಬಳಿಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿದನು.
19ಆದರೆ ಯೇಸು ಅವನ ಬೇಡಿಕೆಯನ್ನು ಒಪ್ಪದೆ ಅವನಿಗೆ, “ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಕರ್ತನು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಏನೇನು ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು” ಅಂದನು.
20ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ದೆಕಪೊಲಿ ಎಂಬ ಸೀಮೆಯಲ್ಲಿ ಸಾರುವುದಕ್ಕೆ ಪ್ರಾರಂಭಿಸಿದನು; ಎಲ್ಲರೂ ಆಶ್ಚರ್ಯಪಟ್ಟರು.
21ಯೇಸು ತಿರುಗಿ ದೋಣಿಯಲ್ಲಿ ಈಚೇದಡಕ್ಕೆ ಬಂದಾಗ ಜನರು ಬಹು ದೊಡ್ಡ ಗುಂಪಾಗಿ ಆತನ ಬಳಿಗೆ ಬಂದರು; ಆತನು ಸಮುದ್ರದ ದಡದಲ್ಲಿದ್ದನು.
22ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬವನು ಬಂದು ಯೇಸುವನ್ನು ಕಂಡು ಆತನ ಪಾದಗಳಿಗೆ ಬಿದ್ದು,
23“ನನ್ನ ಚಿಕ್ಕ ಮಗಳು ಈಗ ಸಾವಿನ ಅಂಚಿನಲ್ಲಿದ್ದಾಳೆ; ಆಕೆಯು ಗುಣಹೊಂದಿ ಬದುಕುವಂತೆ ದಯಮಾಡಿ ನೀನು ಬಂದು ಆಕೆಯ ಮೇಲೆ ನಿನ್ನ ಕೈಯಿಡಬೇಕು” ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು.
24ಯೇಸುವು ಅವನ ಸಂಗಡ ಹೋದನು; ಮತ್ತು ಬಹು ಜನರು ಆತನನ್ನು ನೂಕುತ್ತಾ ಹಿಂಬಾಲಿಸಿದರು.
25ಆಗ ಅಲ್ಲಿ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು ಇದ್ದಳು.
26ಅನೇಕ ವೈದ್ಯರ ಚಿಕಿತ್ಸೆಯಿಂದ ಆಕೆಯು ಬಹು ಕಷ್ಟವನ್ನು ಅನುಭವಿಸಿ, ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯಮಾಡಿದ್ದರೂ ಅವಳ ರೋಗ ಮಾತ್ರ ಹೆಚ್ಚುತ್ತಾ ಬಂದಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ.
27ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿದ್ದರಿಂದ, “ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆನು” ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು.
29ಮುಟ್ಟಿದ ಕೂಡಲೆ ಆಕೆಯ ರಕ್ತಸ್ರಾವವು ನಿಂತುಹೋದುದರಿಂದ ಆಕೆಯು, ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನ ಮನಸ್ಸಿನಲ್ಲಿ ತಿಳಿದುಕೊಂಡಳು.
30ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳಿದುಕೊಂಡು ಗುಂಪಿನಲ್ಲಿ ಹಿಂತಿರುಗಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಲು
31ಆತನ ಶಿಷ್ಯರು ಆತನಿಗೆ, “ನಿನ್ನ ಸುತ್ತಲೂ ಜನರು ಮುತ್ತಿಕೊಂಡು ನೂಕುವುದು ನಿನಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ?” ಎಂದರು.
32ಆದರೆ ಯೇಸು ಈ ಕೆಲಸ ಮಾಡಿದವರನ್ನು ನೋಡಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ,
33ಆ ಮಹಿಳೆ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಭಯದಿಂದ ನಡುಗುತ್ತಾ ಬಂದು ಆತನಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ತಿಳಿಸಿದಳು.
34ಆತನು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರುವೆ” ಎಂದು ಹೇಳಿದನು.
35ಆತನು ಇನ್ನೂ ಮಾತನಾಡುತ್ತಿರುವಾಗಲೇ ಸಭಾಮಂದಿರದ ಅಧಿಕಾರಿಯ ಕಡೆಯವರು ಬಂದು, “ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವಿ?” ಅಂದರು.
36ಅವರು ಆಡಿದ ಮಾತನ್ನು ಯೇಸು ಗಣನೆಗೆ ತಂದುಕೊಳ್ಳದೆ ಸಭಾಮಂದಿರದ ಅಧಿಕಾರಿಗೆ, “ಅಂಜಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು.
37ಮತ್ತು ಆತನು ಪೇತ್ರ, ಯಾಕೋಬ, ಮತ್ತು ಯಾಕೋಬನ ತಮ್ಮನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರುವುದಕ್ಕೆ ಅನುಮತಿಸಲಿಲ್ಲ.
38ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ಜನರ ಗದ್ದಲವನ್ನೂ ಕೆಲವರು ಅಳುವುದನ್ನೂ ಗೋಳಾಡುವುದನ್ನೂ ಆತನು ಕಂಡನು.
39ಆತನು ಒಳಕ್ಕೆ ಹೋಗಿ, “ನೀವು ಗದ್ದಲ ಮಾಡುವುದೂ ಅಳುವುದೂ ಯಾಕೆ? ಹುಡುಗಿ ಸತ್ತಿಲ್ಲ; ಅವಳು ನಿದ್ದೆಮಾಡುತ್ತಿದ್ದಾಳೆ” ಅನ್ನಲು,
40ಅವರು ಆತನನ್ನು ಪರಿಹಾಸ್ಯಮಾಡಿದರು. ಆದರೆ ಆತನು ಎಲ್ಲರನ್ನು ಹೊರಕ್ಕೆ ಕಳುಹಿಸಿ ಆ ಹುಡುಗಿಯ ತಂದೆತಾಯಿಗಳನ್ನೂ ತನ್ನೊಂದಿಗಿದ್ದವರನ್ನೂ ಹುಡುಗಿಯಿದ್ದಲ್ಲಿಗೆ ಕರೆದುಕೊಂಡು ಹೋಗಿ,
41ಅವಳ ಕೈಹಿಡಿದು, “ತಲಿಥಾಕೂಮ್” ಅಂದನು. ಈ ಮಾತಿಗೆ “ಅಮ್ಮಣ್ಣೀ, ಎದ್ದೇಳು ಎಂದು ನಾನು ಹೇಳುತ್ತೇನೆ” ಎಂದರ್ಥ.
42ಕೂಡಲೆ ಆ ಹುಡುಗಿ ಎದ್ದು ನಡೆದಾಡಿದಳು; ಆಕೆಯು ಹನ್ನೆರಡು ವರ್ಷ ವಯಸ್ಸಿನವಳು.
43ಅವರೆಲ್ಲರೂ ಬಹಳ ಆಶ್ಚರ್ಯದಿಂದ ಬೆರಗಾದರು. ಆ ಮೇಲೆ ಆತನು ಅವರಿಗೆ, ಇದು ಯಾರಿಗೂ ತಿಳಿಯಬಾರದೆಂದು ಕಟ್ಟಪ್ಪಣೆ ಮಾಡಿದನು. ಆ ಹುಡುಗಿಗೆ ಊಟ ಮಾಡಲು ಏನಾದರೂ ಕೊಡಿರಿ ಎಂದು ಹೇಳಿದನು.