Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೆಹೆ

ಯೆಹೆ 23

Help us?
Click on verse(s) to share them!
1ಯೆಹೋವನು ಮತ್ತೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
2“ನರಪುತ್ರನೇ, ಒಬ್ಬ ತಾಯಿಯ ಮಕ್ಕಳಾದ ಇಬ್ಬರು ಹೆಂಗಸರಿದ್ದರು.
3ಅವರು ಐಗುಪ್ತದಲ್ಲಿ ವ್ಯಭಿಚಾರ ಮಾಡುತ್ತಿದ್ದರು. ಬಾಲ್ಯದಲ್ಲೇ ವ್ಯಭಿಚಾರ ಮಾಡಿದ್ದರಿಂದ ಅವರ ಸ್ತನಗಳು ಹಿಸುಕಲ್ಪಟ್ಟವು. ಎಳೆಯ ತೊಟ್ಟುಗಳು ನಸುಕಲ್ಪಟ್ಟವು.
4ಅವರ ಹೆಸರುಗಳೇನೆಂದರೆ: ಹಿರಿಯವಳ ಹೆಸರು ಒಹೊಲ ಮತ್ತು ಕಿರಿಯವಳ ಹೆಸರು ಒಹೊಲೀಬ. ಅವರು ನನ್ನವರಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೆತ್ತರು. ಒಹೊಲ ಸಮಾರ್ಯವನ್ನೂ, ಒಹೊಲೀಬ ಯೆರೂಸಲೇಮನ್ನೂ ಸೂಚಿಸತಕ್ಕ ಹೆಸರುಗಳಾಗಿವೆ.
5“ಒಹೊಲಳು ನನ್ನ ವಶವಾಗಿರುವಾಗಲೇ, ವ್ಯಭಿಚಾರ ಮಾಡಿದಳು. ಅವಳು ತನ್ನ ಪ್ರಿಯರನ್ನು, ತನ್ನ ನೆರೆಯವರಾದ ಅಶ್ಶೂರ್ಯರನ್ನು,
6ಅವರೆಲ್ಲರೂ ನೇರಳೆ ಬಣ್ಣದಿಂದ ಹೊದಿಸಲ್ಪಟ್ಟ ಯೋಧರೂ, ಅಧಿಕಾರಸ್ಥರೂ, ಅಪೇಕ್ಷಿಸತಕ್ಕ ಎಲ್ಲಾ ಯುವಕರೂ, ಕುದರೆಗಳ ಮೇಲೆ ಸವಾರಿಮಾಡುವ ರಾಹುತರೂ ಆಗಿರುವವರನ್ನು ಮೋಹಿಸಿದಳು.
7ಅವರಿಗೆ ತನ್ನನ್ನು ವ್ಯಭಿಚಾರಿಣಿಯಾಗಿ ಒಪ್ಪಿಸಿದಳು; ಅವರೆಲ್ಲರೂ ಅಶ್ಶೂರ್ಯರಲ್ಲಿ ಉತ್ತಮೋತ್ತಮರು; ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನು ಅಪವಿತ್ರಪಡಿಸಿಕೊಂಡಳು.
8ಅವಳು ಐಗುಪ್ತದಲ್ಲಿ ವಾಸಿಸುವ ದಿನದವರೆಗೂ ತನ್ನ ವ್ಯಭಿಚಾರವನ್ನು ಬಿಡಲಿಲ್ಲ; ಅವಳ ಬಾಲ್ಯದಲ್ಲಿಯೇ ಅಲ್ಲಿನವರು ಅವಳೊಂದಿಗೆ ಮಲಗಿ, ಅವಳ ಎಳೆಯ ತೊಟ್ಟುಗಳನ್ನು ಒತ್ತಿ, ಅವಳ ಸಂಗಡ ವ್ಯಭಿಚಾರಿಕೆಯನ್ನು ಹೆಚ್ಚೆಚ್ಚಾಗಿ ನಡೆಸಿದರು.
9“ಆದಕಾರಣ ನಾನು ಅವಳನ್ನು ಅವಳ ಪ್ರಿಯರ ಕೈಗೆ ಅಂದರೆ ಅವಳು ಮೋಹಿಸಿದ ಅಶ್ಶೂರ್ಯರ ಕೈಗೆ ಒಪ್ಪಿಸಿದೆನು.
10ಇವರು ಅವಳ ಬೆತ್ತಲೆತನವನ್ನು ಬಯಲು ಪಡಿಸಿದರು ಮತ್ತು ಅವಳ ಗಂಡು, ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗಿ ಅವರನ್ನು ಖಡ್ಗದಿಂದ ಸಂಹರಿಸಿದರು. ನ್ಯಾಯತೀರ್ಪು ಮಾಡುವಾಗ ಹೆಂಗಸರಲ್ಲಿ ಅವಳಿಗೆ ಕೆಟ್ಟ ಹೆಸರು ಬಂದಿತು.”
11“ಅವಳ ತಂಗಿಯಾದ ಒಹೊಲೀಬಳು ಇದನ್ನು ನೋಡಿದಾಗ ಅವಳಿಗಿಂತ ಅಧಿಕವಾಗಿ ಮೋಹಗೊಂಡು, ಅಕ್ಕನ ವ್ಯಭಿಚಾರಕ್ಕಿಂತ ಹೆಚ್ಚಾದ ವ್ಯಭಿಚಾರವನ್ನು ನಡೆಸಿ, ಅವಳನ್ನು ಮೀರುವಷ್ಟು ಕೆಟ್ಟವಳಾದಳು.
12ಇವಳು ತನ್ನ ನೆರೆಯವರಾದ ಅಶ್ಶೂರ್ಯರನ್ನೂ, ನಾಯಕರನ್ನೂ, ಅಧಿಕಾರಿಗಳನ್ನು ವಿಚಿತ್ರವಾಗಿ ಉಡುಪು ಧರಿಸಿ ಕುದರೆಗಳ ಮೇಲೆ ಸವಾರಿಮಾಡುವ ರಾಹುತರನ್ನು, ಸುಂದರವಾದ ಯುವಕರನ್ನು ಮೋಹಿಸಿದಳು.
13ಇವಳೂ ಅಪವಿತ್ರಳಾಗಿ ಹೋದದ್ದನ್ನು ನೋಡಿದೆನು. ಅವರಿಬ್ಬರು ಒಂದೇ ಮಾರ್ಗವನ್ನು ಹಿಡಿದವರು.
14“ಇವಳು ತನ್ನ ವ್ಯಭಿಚಾರವನ್ನು ಇನ್ನೂ ಹೆಚ್ಚಿಸಿದಳು; ಗೋಡೆಯ ಮೇಲೆ ಚಿತ್ರಿಸಲ್ಪಟ್ಟ ಕಸ್ದೀಯರ ಪುರುಷರನ್ನು ನೋಡಿದಳು.
15ಅವರು ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ, ತಲೆಗೆ ರುಮಾಲನ್ನು ಧರಿಸಿ, ನೋಟಕ್ಕೆ ಸರದಾರರಂತಿದ್ದ ತಮ್ಮ ಸ್ವದೇಶವಾದ ಕಸ್ದೀಯಕ್ಕೆ ಸೇರಿದ ಬಾಬೆಲಿನ ಪುತ್ರರ ಹಾಗಿರುವ ಆಕಾರಗಳು ಗೋಡೆಯಲ್ಲಿ ಕಿರುಮಂಜಿಯಿಂದ ಚಿತ್ರಿಸಿರುವುದನ್ನು ನೋಡಿದ ಕೂಡಲೆ,
16ಇವಳು ಮೋಹಗೊಂಡು, ಕಸ್ದೀಯ ದೇಶಕ್ಕೆ ದೂತರನ್ನು ಕಳುಹಿಸಿದಳು.
17ಆಗ ಬಾಬೆಲಿನವರು ಇವಳ ಪ್ರೀತಿಯ ಮಂಚವನ್ನೇರಿ ತಮ್ಮ ವ್ಯಭಿಚಾರಿಕೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಅಪವಿತ್ರವಾಗಲು, ಅವಳಿಗೆ ಈ ಬಗ್ಗೆ ಜಿಗುಪ್ಸೆಯಾಯಿತು.
18ಹೀಗೆ ಇವಳು ವ್ಯಭಿಚಾರವನ್ನು ಮಾಡಿ, ತನ್ನ ಬೆತ್ತಲೆತನವನ್ನು ಬಯಲುಪಡಿಸಿಕೊಂಡಾಗ, ತನ್ನ ಪ್ರೀತಿಯು ಮೊದಲು ಇವಳ ಅಕ್ಕನಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು.

19ಆದರೂ ಇವಳು ತಾನು ಐಗುಪ್ತ ದೇಶದಲ್ಲಿ ವ್ಯಭಿಚಾರಿಯಾಗಿದ್ದ ತನ್ನ ಎಳೆಯ ಪ್ರಾಯವನ್ನು ಜ್ಞಾಪಕಮಾಡಿಕೊಂಡು, ತನ್ನ ವ್ಯಭಿಚಾರವನ್ನು ಇನ್ನೂ ಹೆಚ್ಚಿಸಿದಳು.
20ಕತ್ತೆಗಳಂತೆ ಬೆದೆಯುಳ್ಳವರೂ, ಕುದುರೆಗಳಂತೆ ದಾಟುವವರೂ ಆದ ಕಸ್ದೀಯ ವೀರರನ್ನು ಮೋಹಿಸಿದಳು.
21ಹೀಗೆ ಐಗುಪ್ತ್ಯರಿಂದ ನಿನ್ನ ಯೌವನದ ಸ್ತನಗಳ ತೊಟ್ಟುಗಳನ್ನು ಬತ್ತಿಸಿಕೊಂಡ, ನಿನ್ನ ಯೌವನದ ದುಷ್ಕರ್ಮವನ್ನು ನೆನಪಿಗೆ ತಂದುಕೋ.”
22ಆದುದರಿಂದ ಒಹೊಲೀಬಳೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ಯಾರಿಂದ ನಿನ್ನ ಆಶೆ ತೊಲಗಿತೋ, ಆ ನಿನ್ನ ಪ್ರಿಯನನ್ನು ನಾನು ನಿನ್ನ ವಿರುದ್ಧವಾಗಿ ಎಬ್ಬಿಸುತ್ತೇನೆ. ನಾನು ಅವರನ್ನು ಪ್ರತಿಯೊಂದು ಕಡೆಯಲ್ಲಿಯೂ ನಿನ್ನ ವಿರುದ್ಧವಾಗಿ ತರುತ್ತೇನೆ.
23ಬಾಬಿಲೋನಿನವರು, ಎಲ್ಲಾ ಕಸ್ದೀಯರು, ಪೆಕೋದಿನವರು, ಷೋಯದವರು, ಕೋಯದವರು ಮತ್ತು ಎಲ್ಲಾ ಅಶ್ಶೂರ್ಯರೆಲ್ಲರೊಂದಿಗೂ ಅವರೆಲ್ಲಾ ಅಪೇಕ್ಷಿಸುವಂತಹ ಯೌವನಸ್ಥರೂ, ಸೈನ್ಯಾಧಿಪತಿಗಳೂ, ಅಧಿಕಾರಸ್ಥರೂ, ಯುದ್ಧವೀರರು, ಖ್ಯಾತಿ ಹೊಂದಿದವರೂ, ಎಲ್ಲರೂ ಕುದರೆಗಳ ಮೇಲೆ ಬೀಳುವಂತೆ ಮಾಡುವೆನು.
24ಅವರು ರಥಗಳ ಸಂಗಡವಾಗಿಯೂ, ಬಂಡಿಗಳ ಸಂಗಡ ಜನಗಳ ಸಮೂಹದ ಸಂಗಡ, ಬಲವುಳ್ಳವರಾಗಿ ನಿನ್ನ ವಿರುದ್ಧವಾಗಿ ಬರುವರು; ಸುತ್ತಲೂ ಗುರಾಣಿಗಳನ್ನೂ, ಶಿರಸ್ತ್ರಾಣವನ್ನೂ, ಹಿಡಿದು ನಿನಗೆ ವಿರುದ್ಧವಾಗಿರುವೆನು. ಇದಲ್ಲದೆ ನಾನು ಅವರಿಗೆ ನ್ಯಾಯ ತೀರಿಸುವ ಅಧಿಕಾರವನ್ನು ಕೊಡುವೆನು. ಅವರು ತಮ್ಮ ನ್ಯಾಯಾನುಸಾರವಾಗಿ ನ್ಯಾಯತೀರಿಸುವರು.
25ನಾನು ನನ್ನ ರೋಷವನ್ನು ನಿನ್ನ ಮೇಲೆ ಸುರಿಯಲು, ಅವರು ನಿನ್ನಲ್ಲಿ ಕೋಪವನ್ನು ತೀರಿಸಿಕೊಳ್ಳುವರು; ನಿನ್ನ ಮೂಗು, ಕಿವಿಗಳನ್ನು ಕತ್ತರಿಸಿಬಿಡುವರು; ನಿನ್ನಲ್ಲಿ ಉಳಿದವರು ಖಡ್ಗಕ್ಕೆ ತುತ್ತಾಗುವುರು; ನಿನ್ನ ಗಂಡು ಮತ್ತು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನ ಜನಶೇಷವು ಅಗ್ನಿಗೆ ಆಹುತಿಯಾಗುವುದು.
26ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸುಂದರ ಒಡವೆಗಳನ್ನು ಕಸಿದುಕೊಳ್ಳುವರು.
27ಹೀಗೆ ನಾನು ನಿನ್ನ ದುಷ್ಕರ್ಮವನ್ನು, ನೀನು ಐಗುಪ್ತದಲ್ಲಿ ಇದ್ದಂದಿನಿಂದ ನಡೆದು ಬಂದ ನಿನ್ನ ವ್ಯಭಿಚಾರವನ್ನೂ ನಿನ್ನಿಂದ ತೊಲಗಿಸುವೆನು; ಆ ಮೇಲೆ ನೀನು ಅವರ ಕಡೆಗೆ ಇನ್ನು ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತಾರದೆ ಇರುವಿ.”
28ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನೀನು ಯಾರನ್ನು ಹಗೆಮಾಡುತ್ತೀಯೋ, ನಿನ್ನ ಆಶೆಯು ಯಾರಿಂದ ಹಿಂದಿರುಗಿತೋ ಅವರ ಕೈಗೆ ನಿನ್ನನ್ನು ನಾನು ಒಪ್ಪಿಸಲು,
29ಅವರು ನಿನ್ನಲ್ಲಿ ಹಗೆ ತೀರಿಸಿಕೊಂಡು, ನೀನು ದುಡಿದದ್ದನ್ನೆಲ್ಲಾ ಅಪಹರಿಸಿ, ನಿನ್ನನ್ನು ಬರಿದುಮಾಡಿ ಬಿಡುವರು; ಹೀಗೆ ನಾಚಿಕೆಗೀಡಾದ ನಿನ್ನ ವ್ಯಭಿಚಾರವು, ಹೌದು, ನಿನ್ನ ದುಷ್ಕರ್ಮವು ಮತ್ತು ವ್ಯಭಿಚಾರವೂ ಬಯಲಿಗೆ ಬರುವುದು.
30“ಈ ವಿಪತ್ತುಗಳು ನಿನಗೆ ಸಂಭವಿಸುವುದಕ್ಕೆ, ನೀನು ಜನಾಂಗಗಳನ್ನು ಮೋಹಿಸಿ, ಅವರ ವಿಗ್ರಹಗಳಿಂದ ನಿನ್ನನ್ನು ಅಪವಿತ್ರ ಮಾಡಿಕೊಂಡದ್ದೇ ಕಾರಣ.
31ನೀನು, ನಿನ್ನ ಅಕ್ಕನ ಮಾರ್ಗದಲ್ಲಿ ನಡೆದುಕೊಂಡಿದ್ದರಿಂದ ಅವಳು ಕುಡಿದ ಪಾತ್ರೆಯನ್ನೇ ನಿನ್ನ ಕೈಗೆ ಕೊಡುವೆನು.”
32ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಉದ್ದವೂ, ಅಗಲವೂ, ಬಹಳ ತುಂಬುವ, ನಿನ್ನ ಅಕ್ಕನ ಪಾತ್ರೆಯಲ್ಲಿ ನೀನು ಕುಡಿದು, ಹಾಸ್ಯಕ್ಕೂ, ಕುಚೋದ್ಯಕ್ಕೂ ಗುರಿಯಾಗುವಿ.
33ಸಮಾರ್ಯಳೆಂಬ ನಿನ್ನ ಅಕ್ಕನು ಕುಡಿದ ಪಾತ್ರೆಯಿಂದಲೇ ವಿಸ್ಮಯವೂ, ನಾಶವೂ ಆಗುವುದು. ನೀನು ಅಮಲಿನಿಂದಲೂ, ದುಃಖದಿಂದಲೂ ತುಂಬಿರುವೆ.
34“ನೀನು ಅದರಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿಯುವಿ. ಅದನ್ನು ಬೋಕಿಗಳ ಹಾಗೆ ಒಡೆದುಹಾಕುವೆ ಮತ್ತು ನಿನ್ನ ಸ್ತನಗಳನ್ನು ಕಿತ್ತುಕೊಳ್ಳುವಿ. ಏಕೆಂದರೆ ನಾನೇ ಅದನ್ನು ಹೇಳಿದ್ದೇನೆ” ಎಂಬುದು ಕರ್ತನಾದ ಯೆಹೋವನ ನುಡಿ.
35ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ನನ್ನನ್ನು ಬೆನ್ನಿನ ಹಿಂದೆ ಮರೆಮಾಡಿ, ಮರೆತುಬಿಟ್ಟಿದ್ದರಿಂದ ನಿನ್ನ ದುಷ್ಕರ್ಮದ ಮತ್ತು ವ್ಯಭಿಚಾರದ ಫಲವನ್ನು ನೀನೇ ಅನುಭವಿಸಬೇಕು.”
36ಯೆಹೋವನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಒಹೊಲಳಿಗೂ, ಒಹೊಲೀಬಳಿಗೂ ನ್ಯಾಯತೀರುಸುವೆಯೋ? ಅವರ ದುರಾಚಾರಗಳನ್ನು ಅವರಿಗೆ ತಿಳಿಸು.

37ಅವರು ವ್ಯಭಿಚಾರ ಮಾಡಿದ್ದಾರೆ, ಅವರ ಕೈ ರಕ್ತಮಯವಾಗಿದೆ, ತಮ್ಮ ವಿಗ್ರಹಗಳಿಂದ ವ್ಯಭಿಚಾರಮಾಡಿದ್ದಾರೆ, ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬದಲಾಗಿ ಆಹುತಿಕೊಟ್ಟಿದ್ದಾರೆ.
38ಇದನ್ನು ಮಾಡಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಅಪವಿತ್ರ ಪಡಿಸಿ, ನಾನು ನೇಮಿಸಿದ ಸಬ್ಬತ್ ದಿನವನ್ನು ಅಪವಿತ್ರ ಮಾಡಿದ್ದಾರೆ.
39ತಮ್ಮ ಮಕ್ಕಳನ್ನು ಕೊಂದು, ತಮ್ಮ ವಿಗ್ರಹಗಳಿಗೆ ಅರ್ಪಿಸಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಸೇರಿ ಅಪವಿತ್ರ ಮಾಡಿದರು; ಇಗೋ, ನನ್ನ ಮಂದಿರದ ಒಳಗೆ ಇದನ್ನು ನಡೆಸಿದ್ದಾರೆ.
40“ದೂತನನ್ನು ಕಳುಹಿಸಿ, ಪುರುಷರನ್ನು ದೂರದಿಂದ ಕರೆಯಿಸಿಕೊಂಡರು; ಇಗೋ, ಅವರು ಬಂದರು; ಎಲೈ ಹೆಂಗಸೇ, ಅವರಿಗಾಗಿ ನೀನು ಸ್ನಾನಮಾಡಿ ಕಣ್ಣಿಗೆ ಕಾಡಿಗೆ ಹಚ್ಚಿ, ನಿನ್ನನ್ನು ಆಭರಣಗಳಿಂದ ಶೃಂಗರಿಸಿಕೊಂಡೆ.
41ವೈಭವದ ಮಂಚದ ಮೇಲೆ ಕುಳಿತುಕೊಂಡೆ. ಅವರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿರುವೆ.
42“ಅಲ್ಲಿ ವಿನೋದ ಪ್ರಿಯರ ದೊಡ್ಡ ಗುಂಪಿನ ಶಬ್ದವು ಇತ್ತು. ಮರುಭೂಮಿಯಿಂದ ಕುಡುಕರನ್ನೂ ಕರೆಯಿಸಿಕೊಂಡು ಅವರು ನಾಡಿನ ಜನರೊಂದಿಗೆ ಸೇರಿ, ನಿನ್ನ ಕೈಗೆ ಕಡಗವನ್ನು ತೊಡಿಸಿ, ತಲೆಗೆ ಸುಂದರ ಕಿರೀಟವನ್ನಿಟ್ಟರು.
43ಆಗ ನಾನು, ‘ಆಹಾ, ಕಳೆಗುಂದಿದವಳಿಗೆ ಇನ್ನೂ ವ್ಯಭಿಚಾರವೇ! ಇವರು ಅವಳೊಂದಿಗೆ, ಅವಳು ಇವರೊಂದಿಗೆ ವ್ಯಭಿಚಾರ ಮಾಡುತ್ತಾರಲ್ಲಾ’ ಅಂದುಕೊಂಡೆನು.
44ವ್ಯಭಿಚಾರಿಯನ್ನು ಸೇರುವ ಹಾಗೆ ಈ ಜನರು ಅವಳನ್ನು ಸೇರಿದರು; ಹೌದು, ಕೆಟ್ಟ ಹೆಂಗಸರಾದ ಒಹೊಲಳನ್ನೂ ಮತ್ತು ಒಹೊಲೀಬಳನ್ನೂ ಸೇರಿದರು.
45ನೀತಿಯುಳ್ಳ ಮನುಷ್ಯರು ಅವರಿಗೆ ನ್ಯಾಯತೀರಿಸಿ, ವ್ಯಭಿಚಾರಿಣಿಯರಿಗೂ, ರಕ್ತಸುರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಮಯವಾಗಿದೆ.”
46ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಈ ಹೆಂಗಸರ ವಿರುದ್ಧವಾಗಿ ಸಭೆಯನ್ನು ಸೇರಿಸಿ, ಇವರನ್ನು ಸೂರೆಗೆ ಸಿಕ್ಕಿಸಿ, ಎಲ್ಲರಿಗೂ ಭಯಾಸ್ಪದವಾಗುವಂತೆ ಮಾಡುವೆನು.
47ಸಭೆಯವರು ಇವರ ಮೇಲೆ ಕಲ್ಲೆಸೆದು, ಕತ್ತಿಗಳಿಂದ ಇವರನ್ನು ಸಂಹರಿಸಿ, ಇವರ ಗಂಡು ಮತ್ತು ಹೆಣ್ಣು ಮಕ್ಕಳನ್ನು ಕೊಂದು, ಇವರ ಮನೆಗಳನ್ನು ಬೆಂಕಿಯಿಂದ ಸುಟ್ಟುಬಿಡುವರು.
48“ಹೀಗೆ ನಾನು ದೇಶದೊಳಗಿಂದ ದುಷ್ಕರ್ಮವನ್ನು ತೊಲಗಿಸುವೆನು; ಇದರಿಂದ ಸಮಸ್ತ ಸ್ತ್ರೀಯರಿಗೂ ನಿಮ್ಮ ದುಷ್ಕರ್ಮವನ್ನು ಅನುಸರಿಸಬಾರದೆಂದು ಬುದ್ಧಿ ಬರುವುದು.
49ನಿಮ್ಮ ದುಷ್ಕರ್ಮದ ಫಲವನ್ನು ನಿಮಗೇ ತಿನ್ನಿಸುವರು; ನಿಮ್ಮ ವಿಗ್ರಹಗಳಿಂದಾದ ನಿಮ್ಮ ಪಾಪವನ್ನು ನೀವು ಅನುಭವಿಸುವಿರಿ. ನಾನೇ ಕರ್ತನಾದ ಯೆಹೋವನು” ಎಂದು ತಿಳಿದುಕೊಳ್ಳುವಿರಿ.