Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೆಹೆ

ಯೆಹೆ 16

Help us?
Click on verse(s) to share them!
1ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
2“ನರಪುತ್ರನೇ, ನೀನು ಯೆರೂಸಲೇಮಿಗೆ ಅದರ ಅಸಹ್ಯಕಾರ್ಯಗಳನ್ನು ತಿಳಿಯಪಡಿಸಿ ಹೀಗೆ ನುಡಿ,
3ಕರ್ತನಾದ ಯೆಹೋವನು ಯೆರೂಸಲೇಮ್ ಎಂಬಾಕೆಗೆ ಈ ಮಾತನ್ನು ಹೇಳಿಕಳುಹಿಸಿದ್ದಾನೆ, ‘ನೀನು ಹುಟ್ಟಿದ್ದು ಕಾನಾನ್ ದೇಶದಲ್ಲಿ, ಅದೇ ನಿನ್ನ ಜನ್ಮಭೂಮಿ, ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು.
4ನಿನ್ನ ಜನನವನ್ನು ಕುರಿತು ಏನು ಹೇಳಲಿ! ನೀನು ಹುಟ್ಟಿದ ದಿನದಲ್ಲಿ ತಾಯಿಯು ನಿನ್ನ ಹೊಕ್ಕಳು ಕೊಯ್ದು ಕಟ್ಟಲಿಲ್ಲ, ನಿನ್ನನ್ನು ನೀರಿನಿಂದ ತೊಳೆದು ಶುಚಿಮಾಡಲಿಲ್ಲ, ನಿನಗೆ ಉಪ್ಪನ್ನು ಸ್ವಲ್ಪವೂ ಸವರಲಿಲ್ಲ, ನಿನ್ನನ್ನು ಬಟ್ಟೆಯಲ್ಲು ಸುತ್ತಲಿಲ್ಲ.
5ನಿನ್ನನ್ನು ಕಟಾಕ್ಷಿಸಿ, ಕರುಣಿಸಿ ಯಾರೂ ನಿನಗೆ ಇಂಥಾ ಸಹಾಯ ಮಾಡಲಿಲ್ಲ; ನಿನ್ನ ಜನನ ದಿನದಲ್ಲಿ ನೀನು ಹೇಸಿಗೆಯಾಗಿದ್ದೆ, ನಿನ್ನನ್ನು ಬಯಲಿನಲ್ಲಿ ಬಿಸಾಡಿ ಬಿಟ್ಟರು.’
6“‘ನಾನು ಹಾದುಹೋಗುತ್ತಾ, ನಿನ್ನ ರಕ್ತದಲ್ಲೇ ಹೊರಳಾಡುತ್ತಿದ್ದ ನಿನ್ನನ್ನು ನೋಡಿ, ನೀನು ರಕ್ತದಿಂದ ಹೊಲೆಯಾಗಿದ್ದರೂ ಬದುಕು’ ಎಂದು ಹೇಳಿದೆನು. ಹೌದು, ‘ನೀನು ರಕ್ತದಿಂದ ಹೊಲೆಯಾಗಿದ್ದರೂ ಬದುಕು’ ಎಂದು ಹೇಳಿ ಬದುಕಿಸಿದೆನು.
7‘ಭೂಮಿಯಲ್ಲಿ ಮೊಳೆಯುವ ಮೊಳಿಕೆಯನ್ನೋ ಎಂಬಂತೆ ನಾನು ನಿನ್ನನ್ನು ಬೆಳೆಯಿಸಲು, ನೀನು ಬಲಿತು ಪ್ರಾಯತುಂಬಿ ಅತಿಸುಂದರಿಯಾದಿ; ನಿನಗೆ ಸ್ತನಗಳು ಮೂಡಿದವು, ನಿನ್ನ ಕೂದಲು ಉದ್ದವಾಯಿತು; ಆದರೆ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದೆ.
8ನಾನು ಹಾದುಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ಧಳಾಗಿದ್ದಿ; ಆಗ ನಾನು ನನ್ನ ಹೊದಿಕೆಯನ್ನು ನಿನಗೆ ಹೊದಿಸಿ ನಿನ್ನ ಮಾನವನ್ನು ಕಾಪಾಡಿದೆನು; ಇದಲ್ಲದೆ ನಾನು ನಿನಗೆ ಪ್ರಮಾಣಮಾಡಿ ಒಡಂಬಡಿಕೆ ಮಾಡಿಕೊಂಡೆ ಆದುದರಿಂದ ನೀನು ನನ್ನವಳಾದೆ’” ಇದು ಕರ್ತನಾದ ಯೆಹೋವನ ನುಡಿ.
9“ಆಗ ನಾನು ನೀರಿನಲ್ಲಿ ನಿನ್ನನ್ನು ಸ್ನಾನಮಾಡಿಸಿ ನಿನ್ನ ಮೇಲಣ ರಕ್ತವನ್ನು ತೊಳೆದುಬಿಟ್ಟು ನಿನಗೆ ತೈಲವನ್ನು ಹಚ್ಚಿದೆನು.
10ಇದಲ್ಲದೆ ನಾನು ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲಪ್ರಾಣಿಯ ಕೆಂಪು ಚರ್ಮದ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ, ನಯವಾದ ನಾರು ಮಡಿಯನ್ನು ನಿನಗೆ ಉಡಿಸಿ, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆನು.
11ಮತ್ತು ನಾನು ನಿನ್ನ ಕೈಗಳಿಗೆ ಬಳೆಗಳನ್ನು, ಕಂಠಕ್ಕೆ ಮಾಲೆಯನ್ನು,
12ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರ ಕಿರೀಟವನ್ನು ಇಟ್ಟು, ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆನು.
13ನಿನ್ನ ಒಡವೆಗಳು ಬೆಳ್ಳಿಬಂಗಾರದವು; ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ಬಟ್ಟೆ; ನಿನ್ನ ಆಹಾರವು ಗೋದಿಹಿಟ್ಟು, ಜೇನು, ಎಣ್ಣೆ; ನಿನ್ನ ಲಾವಣ್ಯವು, ಅತಿಮನೋಹರ; ನೀನು ವೃದ್ಧಿಗೊಂಡು ರಾಣಿಯಾದೆ.
14ನಾನು ನಿನಗೆ ಅನುಗ್ರಹಿಸಿದ ನನ್ನ ವೈಭವದಿಂದ ನಿನ್ನ ಸೌಂದರ್ಯವು ಪರಿಪೂರ್ಣವಾಯಿತು; ನಿನ್ನ ಚೆಲುವು ಹೆಸರುವಾಸಿಯಾಗಿ ಜನಾಂಗಗಳಲ್ಲಿ ಹಬ್ಬಿತು” ಇದು ಕರ್ತನಾದ ಯೆಹೋವನ ನುಡಿ.
15“ಆದರೆ ನೀನು ನಿನ್ನ ಸೌಂದರ್ಯದಲ್ಲಿಯೇ ನಂಬಿಕೆಯಿಟ್ಟು, ನಾನು ಪ್ರಸಿದ್ಧಳಾಗಿದ್ದೇನಲ್ಲಾ ಎಂದು ಉಬ್ಬಿಕೊಂಡು ವ್ಯಭಿಚಾರಮಾಡಿದಿ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ವ್ಯಭಿಚಾರಮಾಡಿದೆ, ಪ್ರತಿಯೊಬ್ಬನ ಸಂಗಡ ವ್ಯಭಿಚಾರಕ್ಕೆ ಒಳಗಾದೆ.
16ನೀನು ಪೂಜಾ ಸ್ಥಾನಗಳನ್ನು ಕಟ್ಟಿಕೊಂಡು ನಿನ್ನ ಚಿತ್ರವಿಚಿತ್ರ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ ಅಲ್ಲಿ ವ್ಯಭಿಚಾರ ನಡಿಸಿದೆ. ಇದು ನಡೆಯತಕ್ಕದ್ದಲ್ಲ. ಆಗಬಾರದಾಗಿತ್ತು.
17ಮತ್ತು ನಾನು ನನ್ನ ಬೆಳ್ಳಿ ಬಂಗಾರದಿಂದ ನಿನಗೆ ಮಾಡಿಸಿಕೊಟ್ಟಿದ್ದ ನಿನ್ನ ಚಂದವಾದ ಆಭರಣಗಳನ್ನು ನೀನು ತೆಗೆದು ಅವುಗಳಿಂದ ಪುರುಷ ಮೂರ್ತಿಗಳನ್ನು ರೂಪಿಸಿಕೊಂಡು ಅವುಗಳೊಡನೆ ವ್ಯಭಿಚಾರ ಮಾಡಿದೆ.
18ನಿನ್ನ ಕಸೂತಿಯ ಬಟ್ಟೆಗಳನ್ನು ತೆಗೆದು ಮೂರ್ತಿಗಳಿಗೆ ಹೊದಿಸಿ, ಅವುಗಳ ಮುಂದೆ ನನ್ನ ತೈಲವನ್ನೂ ನನ್ನ ಧೂಪವನ್ನೂ ಅರ್ಪಿಸಿದೆ.

19ನಾನು ನಿನಗೆ ಕೊಟ್ಟ ರೊಟ್ಟಿಯನ್ನೂ, ನಿನ್ನ ಆಹಾರಕ್ಕೆ ನಾನು ಒದಗಿಸಿದ ಗೋದಿಹಿಟ್ಟು, ಎಣ್ಣೆ, ಜೇನು ಇವುಗಳನ್ನೂ ನೀನು ಆ ಮೂರ್ತಿಗಳ ಮುಂದೆ ಸುಗಂಧಹೋಮ ಮಾಡಿದೆ; ಅಯ್ಯೋ, ಹೀಗಾಯಿತಲ್ಲ!” ಇದು ಕರ್ತನಾದ ಯೆಹೋವನ ನುಡಿ.
20“ಇದಲ್ಲದೆ ನೀನು ನನಗೆ ಹೆತ್ತ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹಿಡಿದು ಮೂರ್ತಿಗಳಿಗೆ ಆಹಾರವಾಗಲೆಂದು ಯಜ್ಞಮಾಡಿದೆ. ನಿನ್ನ ವ್ಯಭಿಚಾರವು ಅಲ್ಪಕಾರ್ಯವೆಂದು ಭಾವಿಸಿದಿಯೋ?
21ಅದನ್ನೂ ಮೀರಿಸಬೇಕೆಂದು ನೀನು ನನ್ನ ಮಕ್ಕಳನ್ನು ಹತಿಸಿ, ಆಹುತಿಕೊಟ್ಟು ಮೂರ್ತಿಗಳಿಗೆ ಅರ್ಪಿಸಿದಿಯೋ?
22ಈ ನಿನ್ನ ಅಸಹ್ಯಕಾರ್ಯಗಳನ್ನೂ, ವ್ಯಭಿಚಾರವನ್ನು ನೀನು ಪದೇ ಪದೇ ನಡೆಸುತ್ತಿದ್ದಾಗ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದ ನಿನ್ನ ಎಳೆತನವನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳಲಿಲ್ಲ.
23ಅಯ್ಯೋ, ನಿನ್ನ ಗತಿಯನ್ನು ಏನು ಹೇಳಲಿ!” ಎಂಬುದು ಕರ್ತನಾದ ಯೆಹೋವನ ನುಡಿ.
24“ನೀನು ಈ ದುಷ್ಕೃತ್ಯಗಳನ್ನೆಲ್ಲಾ ನಡೆಸಿದ್ದಲ್ಲದೆ ಪ್ರತಿಯೊಂದು ಚೌಕದಲ್ಲಿ ಮಂಟಪವನ್ನು ಮಾಡಿ ಜಗಲಿಯನ್ನು ಕಟ್ಟಿಕೊಂಡಿರುವೆ.
25ಒಂದೊಂದು ಬೀದಿಯ ಕೊನೆಯಲ್ಲಿಯೂ ನೀನು ಜಗಲಿಯನ್ನು ಕಟ್ಟಿಕೊಂಡು, ನಿನ್ನ ಸೌಂದರ್ಯವನ್ನು ನೀಚ ಕೆಲಸಕ್ಕೆ ಒಪ್ಪಿಸಿ, ಹಾದುಹೋಗುವವರೆಲ್ಲರನ್ನು ಸೇರಿಸಿ ವ್ಯಭಿಚಾರವನ್ನು ಹೆಚ್ಚಾಗಿ ನಡೆಸಿರುವೆ.
26ನಿನ್ನ ನೆರೆಯವರೂ ಅತಿಕಾಮಿಗಳೂ ಆದ ಐಗುಪ್ತ್ಯರೊಂದಿಗೆ ಸಹ ನೀನು ಬೆರೆತು ಹೆಚ್ಚಾಗಿ ವ್ಯಭಿಚಾರಮಾಡಿ ನನ್ನನ್ನು ರೇಗಿಸಿರುವೆ.
27ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನ ಆಹಾರವನ್ನು ಕಡಿಮೆಮಾಡಿದೆನು; ನಿನ್ನನ್ನು ದ್ವೇಷಿಸಿ ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯದ ಕುಮಾರ್ತೆಯರ ಕೈಗೆ ನಿನ್ನನ್ನು ಸಿಕ್ಕಿಸಿದೆನು.
28ಮತ್ತು ಇಷ್ಟೂ ಸಾಲದೆಂದು ಅಶ್ಶೂರ್ಯರೊಂದಿಗೂ ವ್ಯಭಿಚಾರಮಾಡಿದಿ; ಹೌದು, ಅವರೊಡನೆ ವ್ಯಭಿಚಾರಮಾಡಿದರೂ ನಿನಗೆ ತೃಪ್ತಿಯಾಗಲಿಲ್ಲ.
29ಇದಲ್ಲದೆ ನೀನು ತುಂಬಾ ವ್ಯಾಪಾರವುಳ್ಳ ಕಸ್ದೀಯ ದೇಶಕ್ಕೆ ಸೇರಿ, ಅಲ್ಲಿಯೂ ಬಹಳ ವ್ಯಭಿಚಾರಮಾಡಿದೆ, ಆದರೂ ನಿನಗೆ ತೃಪ್ತಿಯಾಗಲಿಲ್ಲ.”
30ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಿನ್ನ ಮನಸ್ಸು ಮೋಹಕ್ಕೆ ಎಷ್ಟೋ ಸೋತಿದೆ! ಇಷ್ಟೆಲ್ಲಾ ದುಷ್ಕೃತ್ಯಗಳನ್ನು ನಡೆಸಿ ಕಟ್ಟಿಲ್ಲದ ಜಾರಸ್ತ್ರೀಯಾಗಿರುವೆ.
31ಒಂದೊಂದು ಬೀದಿಯ ಕೊನೆಯಲ್ಲಿಯೂ ನೀನು ಗದ್ದುಗೆಯನ್ನು ಕಟ್ಟಿ, ಎಲ್ಲಾ ಚೌಕಗಳಲ್ಲಿ ಜಗಲಿಯನ್ನು ಸ್ಥಾಪಿಸಿಕೊಂಡಿರುವೆ; ದೊರೆತದ್ದನ್ನು ಕಡಿಮೆಯೆಂದು ತಿರಸ್ಕರಿಸುವ ವ್ಯಭಿಚಾರಿಯಂತೆ ನೀನು ನಡೆಯುವವಳಲ್ಲ.
32“ನೀನು ವ್ಯಭಿಚಾರಮಾಡುವ ಪತಿವ್ರತೆ! ಗಂಡನಿಗೆ ಬದಲಾಗಿ ಅನ್ಯರನ್ನು ಸೇರುವ ಜಾರಿಣಿ!
33ಎಲ್ಲಾ ಕಡೆ ವ್ಯಭಿಚಾರಿ ಸ್ತ್ರೀಗೆ ಹಣಕೊಡುವುದುಂಟು; ನೀನಾದರೋ ನಿನ್ನ ಪ್ರಿಯರಿಗೆಲ್ಲ ನೀನೇ ಹಣವನ್ನು ಕೊಡುತ್ತಿರುವೆ; ಅವರು ಎಲ್ಲಾ ಕಡೆಯಿಂದಲೂ ಬಂದು ನಿನ್ನಲ್ಲಿ ವ್ಯಭಿಚಾರಮಾಡುವಂತೆ ಅವರಿಗೆ ಬಹುಮಾನ ಕೊಡುತ್ತಿರುವೆ.
34ನಿನ್ನ ವ್ಯಭಿಚಾರಕ್ಕೂ, ಇತರ ವೇಶ್ಯೆಯರ ವ್ಯಭಿಚಾರಕ್ಕೂ ವ್ಯತ್ಯಾಸವುಂಟು; ನಿನ್ನಲ್ಲಿ ವ್ಯಭಿಚಾರ ಮಾಡಲಿಕ್ಕೆ ಯಾರೂ ನಿನ್ನ ಹಿಂದೆ ಬಾರರು; ನೀನೇ ಕೊಡುತ್ತೀಯೇ ಹೊರತು ನಿನಗೇನೂ ಸಿಕ್ಕದು; ನಿನ್ನ ದುರಾಚಾರವು ವಿಪರೀತವೇ!”
35ಹೀಗಿರಲು ವ್ಯಭಿಚಾರಿಯೇ, ಯೆಹೋವನ ಈ ವಾಕ್ಯವನ್ನು ಕೇಳು,
36ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ಮಿತಿಮೀರಿದ ನಿನ್ನ ಕಾಮಾತುರ, ನಿನ್ನಲ್ಲಿ ವ್ಯಭಿಚಾರಮಾಡಿದ ನಿನ್ನ ಪ್ರಿಯರ ಮೂಲಕ ನಿನಗಾದ ಮಾನಭಂಗ, ನಿನ್ನ ಎಲ್ಲಾ ಅಸಹ್ಯ ವಿಗ್ರಹಗಳು, ನೀನು ಅವುಗಳಿಗೆ ಅರ್ಪಿಸಿದ ನಿನ್ನ ಮಕ್ಕಳ ರಕ್ತ,

37ಇವುಗಳನ್ನು ನಾನು ನೋಡಿ, ನೀನು ಸಂಭೋಗಿಸಿದ ನಿನ್ನ ಎಲ್ಲಾ ಮಿಂಡರನ್ನೂ, ನೀನು ಮೋಹಿಸಿದ ಸಮಸ್ತರನ್ನೂ ನೀನು ಹಗೆಮಾಡಿದ ಎಲ್ಲರೊಂದಿಗೆ ಸುತ್ತುಮುತ್ತಲು ನಿನ್ನ ವಿರುದ್ಧವಾಗಿ ಕೂಡಿಸಿ, ಅವರ ಕಣ್ಣೆದುರಿಗೆ ನಿನ್ನನ್ನು ಬೆತ್ತಲೆಗೈದು ನಿನ್ನ ಮಾನವನ್ನು ಬಟ್ಟಬಯಲು ಮಾಡುವೆನು.
38ವ್ಯಭಿಚಾರ ಮಾಡುವಂಥ, ರಕ್ತಸುರಿಸುವಂಥ ಹೆಂಗಸರಿಗೆ ತಕ್ಕ ದಂಡನೆಗಳನ್ನು ನಾನು ನಿನಗೆ ವಿಧಿಸಿ ಕೋಪೋದ್ರೇಕದಿಂದಲೂ, ರೋಷಾವೇಶದಿಂದಲೂ ನಿನ್ನ ರಕ್ತವನ್ನು ಸುರಿಸುವೆನು.
39ನಾನು ನಿನ್ನನ್ನು ಸುತ್ತಲಿನವರ ಕೈವಶಮಾಡುವೆನು; ಅವರು ನಿನ್ನ ಮಂಟಪವನ್ನು ಕೆಡವಿ, ನಿನ್ನ ಜಗಲಿಗಳನ್ನು ಒಡೆದು, ನಿನ್ನ ಬಟ್ಟೆಗಳನ್ನು ಕಿತ್ತು ನಿನ್ನ ಒಡವೆಗಳನ್ನು ಸುಲಿದುಕೊಂಡು, ನಿನ್ನನ್ನು ಬಟ್ಟಬರಿದಾಗಿ ಬಿಟ್ಟುಹೋಗುವರು.
40ಅವರು ನಿನ್ನ ವಿಚಾರವಾಗಿ ನ್ಯಾಯಸಭೆಯನ್ನು ಕೂಡಿಸಿ, ನಿನ್ನನ್ನು ಕಲ್ಲೆಸೆದು ಕೊಲ್ಲುವರು, ಕತ್ತಿಗಳಿಂದ ಹತಿಸುವರು.
41ನಿನ್ನ ಮನೆಗಳನ್ನು ಬೆಂಕಿಯಿಂದ ಸುಡುವರು; ಬಹುಮಂದಿ ಹೆಂಗಸರ ಕಣ್ಣೆದುರಿನಲ್ಲಿ ನಿನ್ನನ್ನು ದಂಡಿಸುವರು; ನೀನು ನಿನ್ನ ಸೂಳೆತನವನ್ನು ನಿಲ್ಲಿಸಿಬಿಡುವಂತೆ ನಾನು ಮಾಡುವೆನು; ನೀನು ನಿನ್ನ ಮಿಂಡರಿಗೆ ಇನ್ನು ಹಣಕೊಡದಿರುವಿ.
42ಹೀಗೆ ನಾನು ನಿನ್ನ ಮೇಲಣ ಸಿಟ್ಟನ್ನು ತೀರಿಸಲು, ನನ್ನ ರೋಷವು ನಿನ್ನ ಕಡೆಯಿಂದ ತೊಲಗಿ ಬಿಡುವುದು; ನಾನು ಶಾಂತನಾಗಿ ಇನ್ನು ಮೇಲೆ ಕೋಪಗೊಳ್ಳೆನು.
43“ನೀನು ನಿನ್ನ ಯೌವನ ಕಾಲವನ್ನು ಜ್ಞಾಪಕಮಾಡಿಕೊಳ್ಳದೆ, ಈ ದುಷ್ಕೃತ್ಯಗಳನ್ನೆಲ್ಲಾ ನಡೆಸಿ ನನ್ನನ್ನು ರೇಗಿಸಿದ್ದರಿಂದ ಇಗೋ, ನಾನು ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು; ನೀನು ಲೆಕ್ಕವಿಲ್ಲದ ದುರಾಚಾರಗಳನ್ನು ನಡೆಸಿದ್ದಲ್ಲದೆ ಈ ಅಸಹ್ಯ ಕಾರ್ಯವನ್ನೂ ಮಾಡಿರುವೆ” ಇದು ಕರ್ತನಾದ ಯೆಹೋವನ ನುಡಿ.
44“ಆಹಾ, ಗಾದೆಗಳಲ್ಲಿ ಜಾಣರು ‘ತಾಯಿಯಂತೆ ಮಗಳು’ ಎಂಬ ಗಾದೆಯನ್ನು ನಿನ್ನ ವಿಷಯವಾಗಿ ನುಡಿಯುವರು.
45ಗಂಡನಿಗೂ, ಮಕ್ಕಳಿಗೂ ಬೇಸರಪಡುವವಳಾದ ನಿನ್ನ ತಾಯಿಗೆ ನೀನು ತಕ್ಕ ಮಗಳು; ಗಂಡನಿಗೂ, ಮಕ್ಕಳಿಗೂ ಬೇಸರಪಡುವವರಾದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ; ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು.
46ನಿನ್ನ ಉತ್ತರಕ್ಕೆ ತನ್ನ ಕುಮಾರ್ತೆಯರೊಂದಿಗೆ ವಾಸಿಸುವ ಸಮಾರ್ಯ ನಿನ್ನ ಅಕ್ಕ, ನಿನ್ನ ದಕ್ಷಿಣಕ್ಕೆ ನಿನ್ನ ಕುಮಾರ್ತೆಯರೊಂದಿಗೆ ವಾಸಿಸುವ ಸೊದೋಮ್ ನಿನ್ನ ತಂಗಿ.
47ಆದರೆ ನೀನು ನಡೆದ ದುರ್ಮಾರ್ಗವು ಅವರು ನಡೆದಂಥದಲ್ಲ, ನಿನ್ನ ಅಸಹ್ಯಕಾರ್ಯಗಳು ಅವರು ನಡೆಸಿದಂಥವುಗಳಲ್ಲ, ಅವರ ದುರ್ನಡತೆಯು ಅತ್ಯಲ್ಪವೆಂದು ಸರ್ವದಾ ಅವರಿಗಿಂತ ಬಹುಕೆಟ್ಟವಳಾಗಿ ನಡೆದುಕೊಂಡೆ.”
48ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನೀನೂ ನಿನ್ನ ಕುಮಾರ್ತೆಯರೂ ನಡೆದಂತೆ ಸೊದೋಮೆಂಬ ನಿನ್ನ ತಂಗಿಯಾಗಲಿ, ಆಕೆಯ ಕುಮಾರ್ತೆಯರಾಗಲಿ ನಡೆಯಲಿಲ್ಲ.
49ಸೊದೋಮೆಂಬ ನಿನ್ನ ತಂಗಿಯ ದೋಷವನ್ನು ನೋಡು; ಹೆಮ್ಮೆಪಡುವುದು, ಹೊಟ್ಟೆತುಂಬಿಸಿಕೊಳ್ಳುವುದು, ಸ್ವಂತ ಸುಖದಲ್ಲಿ ಮುಳುಗಿರುವುದು, ಇವು ಆಕೆಯಲ್ಲಿಯೂ ಮತ್ತು ಆಕೆಯ ಕುಮಾರ್ತೆಯರಲ್ಲಿಯೂ ಇದ್ದವು. ಅಲ್ಲದೆ ಆಕೆಯು ದೀನದರಿದ್ರರಿಗೆ ಬೆಂಬವಾಗಿರಲಿಲ್ಲ.
50ಅವರು ಸೊಕ್ಕೇರಿ ನನ್ನ ಕಣ್ಣೆದುರಿಗೆ ಅಸಹ್ಯಾಚಾರಗಳನ್ನು ನಡೆಸಿದರು; ನಾನು ಅದನ್ನು ನೋಡಿ ಅವರನ್ನು ನಿರ್ಮೂಲ ಮಾಡಿದೆನು.
51ಸಮಾರ್ಯವೆಂಬಾಕೆಯು ಕೂಡ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯಕಾರ್ಯಗಳನ್ನು ನಡೆಸಿರುವೆ; ನೀನು ಮಾಡಿದ ಲೆಕ್ಕವಿಲ್ಲದ ದುರಾಚಾರಗಳಿಂದ ಅವರನ್ನು ನಿರ್ದೋಷಿಗಳೆಂದು ತೋರ್ಪಡಿಸಿರುವೆ.
52ನಿನ್ನ ದೋಷಗಳೇ ನಿನ್ನ ಅಕ್ಕತಂಗಿಯರ ಪಕ್ಷವಾಗಿ ನಿಂತಿದ್ದರಿಂದ ನೀನು ನಾಚಿಕೆಪಡು; ಅವರಿಗಿಂತ ಅಧಿಕವಾಗಿ ನೀನು ಮಾಡಿದ ಅಸಹ್ಯ ಪಾಪಗಳ ಮೂಲಕ ಅವರು ನಿನಗಿಂತ ಉತ್ತಮರೆಂದು ಕಂಡುಬಂದಿದ್ದಾರೆ; ಹೌದು, ನೀನು ಲಜ್ಜೆಪಡು, ನಾಚಿಕೆಗೊಳ್ಳು; ನಿನ್ನ ಅಕ್ಕತಂಗಿಯರನ್ನು ನಿರ್ದೋಷಿಗಳೆಂದು ತೋರ್ಪಡಿಸಿರುವೆ.
53“ಸೊದೋಮ್ ಮತ್ತು ಆಕೆಯ ಕುಮಾರ್ತೆಯರು, ಸಮಾರ್ಯ ಮತ್ತು ಆಕೆಯ ಕುಮಾರ್ತೆಯರು, ಇವರ ದುರಾವಸ್ಥೆಯನ್ನು ನಾನು ತಪ್ಪಿಸುವೆನು, ಅದರೊಂದಿಗೆ ನಿನ್ನ ದುರಾವಸ್ಥೆಯನ್ನೂ ತಪ್ಪಿಸುವೆನು.
54ಹೀಗಿರಲು ನೀನು ನಿನ್ನ ಲೆಕ್ಕವಿಲ್ಲದ ದುಷ್ಕೃತ್ಯಗಳ ಮೂಲಕ ಅವರನ್ನು ಸಂತೈಸಿದ್ದರಿಂದ ಲಜ್ಜೆಪಡುವಿ, ನಾಚಿಕೆಗೊಳ್ಳುವಿ.

55ಆಗ ಸಮಾರ್ಯ ಮತ್ತು ಸೊದೋಮ್ ಎಂಬ ನಿನ್ನ ಅಕ್ಕತಂಗಿಯರೂ ಮತ್ತು ಅವರ ಕುಮಾರ್ತೆಯರೂ ತಮ್ಮ ಪೂರ್ವಸ್ಥಿತಿಗೆ ಸೇರುವರು, ನೀನೂ ನಿನ್ನ ಕುಮಾರ್ತೆಯರೂ ನಿಮ್ಮ ಪೂರ್ವಸ್ಥಿತಿಗೆ ಸೇರುವಿರಿ.
56ಅರಾಮಿನ ಕುಮಾರ್ತೆಯರು ಮತ್ತು ಆಕೆಯ ಸುತ್ತಮುತ್ತಲಿನ ಸಮಸ್ತರು, ನಿನ್ನನ್ನು ಎಲ್ಲೆಲ್ಲೂ ಹೀನೈಸುತ್ತಿರುವ ಫಿಲಿಷ್ಟಿಯದ ಕುಮಾರ್ತೆಯರು, ಇವರೆಲ್ಲರ ದೂಷಣೆಗೆ ನೀನು ಗುರಿಯಾಗುವುದಕ್ಕೆ ಮೊದಲು,
57ನಿನ್ನ ಕೆಟ್ಟತನವು ಬಯಲಿಗೆ ಬರುವುದಕ್ಕೆ ಮೊದಲು, ಆ ನಿನ್ನ ಗರ್ವಕಾಲದಲ್ಲಿ ಅರಾಮ್ಯರ ಪುತ್ರಿಯರಿಂದಲೂ ಮತ್ತು ಫಿಲಿಷ್ಟಿಯರ ಪುತ್ರಿಯರಿಂದಲೂ ನಿನ್ನ ಹೆಸರು ಅವರ ಬಾಯಲ್ಲಿ ಬರಲೇ ಇಲ್ಲ.
58ಈಗ ನಿನ್ನ ದುರ್ನಡತೆಯ ಮತ್ತು ದುರಾಚಾರಗಳ ಫಲವನ್ನು ನೀನು ಅನುಭವಿಸಬೇಕಾಗಿ ಬಂತು” ಇದು ಯೆಹೋವನ ನುಡಿ.
59ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ಒಡಂಬಡಿಕೆಯನ್ನು ಮೀರಿ ನಿನ್ನ ಆಣೆಯನ್ನು ತಿರಸ್ಕರಿಸಿರುವೆ ನೀನು ಮಾಡಿದ್ದಕ್ಕೆ ತಕ್ಕದ್ದನ್ನು ನಾನು ನಿನಗೆ ಮಾಡುವೆನು.
60ಆದರೂ ನಾನು ನಿನ್ನ ಯೌವನಕಾಲದಲ್ಲಿ ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕಕ್ಕೆ ತಂದುಕೊಂಡು, ನಿನ್ನ ಸಂಗಡ ಎಂದಿಗೂ ತಪ್ಪದ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡು ದೃಢೀಕರಿಸುವೆನು.
61ಇದಕ್ಕನುಸಾರ ನಾನು ಕುಮಾರ್ತೆಯರನ್ನೋ ಎಂಬಂತೆ ನಿನಗೆ ದಯಪಾಲಿಸುವ ನಿನ್ನ ಅಕ್ಕಂದಿರೂ ಮತ್ತು ತಂಗಿಯರೂ ನಿನ್ನಲ್ಲಿ ಸೇರಿಕೊಳ್ಳುವಾಗ ನೀನು ನಿನ್ನ ದುರ್ಮಾರ್ಗಗಳನ್ನು ನೆನಪಿಸಿಕೊಂಡು ನಾಚಿಕೆಪಡುವಿ; ಈ ನನ್ನ ದಯೆ ನಿನ್ನ ಹಿಂದಿನ ಒಡಂಬಡಿಕೆಯ ಫಲವಲ್ಲ.
62ನಾನು ಈ ಒಡಂಬಡಿಕೆಯನ್ನು ನಿನ್ನೊಂದಿಗೆ ಮಾಡಿಕೊಳ್ಳುವಾಗ ನಾನೇ ಯೆಹೋವನು ಎಂದು ಗೊತ್ತಾಗುವುದು.
63ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ಜ್ಞಾಪಕಕ್ಕೆ ತಂದು ನಾಚಿಕೆಪಟ್ಟು ನಿನ್ನ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವಿ” ಇದು ಕರ್ತನಾದ ಯೆಹೋವನ ನುಡಿ.