Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 1

ಲೂಕ 1:18-30

Help us?
Click on verse(s) to share them!
18ಜಕರೀಯನು ಆ ದೂತನಿಗೆ, “ಈ ಮಾತು ನೆರವೇರುವುದೆಂದು ನಾನು ತಿಳಿದುಕೊಳ್ಳುವುದಾದರೂ ಹೇಗೆ? ನಾನು ಮುದುಕನು; ನನ್ನ ಹೆಂಡತಿಗೂ ಮುಪ್ಪಿನ ವಯಸ್ಸು” ಎಂದು ಹೇಳಿದನು.
19ಅದಕ್ಕೆ ಆ ದೂತನು, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನೊಂದಿಗೆ ಮಾತನಾಡಿ ಈ ಶುಭವಾರ್ತೆಯನ್ನು ನಿನಗೆ ತಿಳಿಸುವುದಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ.
20ಇಗೋ, ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವುದು; ಆದರೆ ನೀನು ಇದನ್ನು ನಂಬದೆಹೋದುದರಿಂದ ಅದೆಲ್ಲಾ ಸಂಭವಿಸುವ ದಿನದ ವರೆಗೂ ಮಾತನಾಡಲಾರದೆ ಮೂಕನಾಗಿರುವೆ” ಎಂದು ಅವನಿಗೆ ಉತ್ತರಕೊಟ್ಟನು.
21ಇತ್ತ ಜನರು ಜಕರೀಯನಿಗಾಗಿ ಕಾದುಕೊಂಡಿದ್ದು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.
22ಅವನು ಹೊರಗೆ ಬಂದಾಗ ಅವರ ಕೂಡ ಏನೂ ಮಾತನಾಡಲಾರದೆ ಇರಲು ಅವರು, ಇವನಿಗೆ ದೇವಾಲಯದಲ್ಲಿ ಏನೋ ದಿವ್ಯ ದರ್ಶನವಾಗಿರಬೇಕು ಎಂದು ತಿಳಿದುಕೊಂಡರು. ಜಕರೀಯನು ಅವರಿಗೆ ಕೈಸನ್ನೆ ಮಾಡುತ್ತಾ ಮೂಕನಾಗಿಯೇ ಇದ್ದನು.
23ಆತನ ಯಾಜಕವರ್ಗದ ಸೇವೆಯ ದಿನಗಳು ಮುಗಿದ ನಂತರ ಜಕರೀಯನು ತನ್ನ ಮನೆಗೆ ಹೋದನು.
24ಕೆಲವು ದಿನಗಳಾದ ನಂತರ ಅವನ ಹೆಂಡತಿಯಾದ ಎಲಿಸಬೇತಳು ಬಸುರಾಗಿ ಐದು ತಿಂಗಳು ಮನೆಯಲ್ಲೇ ಮರೆಯಾಗಿದ್ದಳು.
25“ಕರ್ತನು ಈ ವಯಸ್ಸಿನಲ್ಲಿ ನನ್ನನ್ನು ಕಟಾಕ್ಷಿಸಿ, ನನಗೆ ಈ ರೀತಿಯಾಗಿ ಮಾಡಿ, ಜನರ ಮಧ್ಯದಲ್ಲಿ ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನಲ್ಲಾ” ಎಂದು ಹೇಳಿದಳು.
26ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಯ, ನಜರೇತೆಂಬ ಊರಿಗೆ, ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದನು;
27ಆ ಕನ್ನಿಕೆಯ ಹೆಸರು ಮರಿಯಳು; ಆಕೆಗೆ ದಾವೀದನ ಮನೆತನದ ಯೋಸೇಫನೆಂಬ ಪುರುಷನೊಂದಿಗೆ ನಿಶ್ಚಿತಾರ್ಥವಾಗಿತ್ತು.
28ಆ ದೂತನು ಆಕೆಯ ಬಳಿಗೆ ಬಂದು “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ ಕರ್ತನು ನಿನ್ನ ಸಂಗಡ ಇದ್ದಾನೆ” ಅಂದನು.
29ಆಕೆಯು ಆ ಮಾತಿಗೆ ತಬ್ಬಿಬ್ಬಾಗಿ, ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿದ್ದಳು.
30ಆ ದೂತನು ಆಕೆಗೆ, “ಮರಿಯಳೇ, ಹೆದರಬೇಡ; ನಿನಗೆ ದೇವರ ಕೃಪೆ ದೊರಕಿದೆ.

Read ಲೂಕ 1ಲೂಕ 1
Compare ಲೂಕ 1:18-30ಲೂಕ 1:18-30