Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೋಹಾ - ಯೋಹಾ 1

ಯೋಹಾ 1:19-37

Help us?
Click on verse(s) to share them!
19ಯೆಹೂದ್ಯರು ಯೆರೂಸಲೇಮಿನಿಂದ ಯಾಜಕರನ್ನೂ, ಲೇವಿಯರನ್ನೂ ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿದ್ದಕ್ಕೆ,
20ಅವನು ಮರೆಮಾಡದೆ ಎಲ್ಲರ ಮುಂದೆ, “ನಾನು ಕ್ರಿಸ್ತನಲ್ಲ,” ಎಂದು ಹೇಳಿದನು.
21ಅದಕ್ಕೆ ಅವರು, “ಹಾಗಾದರೆ ನೀನು ಯಾರು? ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ” ಅಂದನು. “ನೀನು ಬರಬೇಕಾದ ಆ ಪ್ರವಾದಿಯೋ?” ಎಂದು ಕೇಳಿದ್ದಕ್ಕೆ “ಅಲ್ಲ,” ಅಂದನು.
22ಆಗ ಅವರು, “ಹಾಗಾದರೆ ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡಬೇಕಲ್ಲಾ. ನಿನ್ನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದು ಕೇಳಿದರು.
23ಅದಕ್ಕೆ ಯೋಹಾನನು, “ಪ್ರವಾದಿಯಾದ ಯೆಶಾಯನು ಹೇಳಿದಂತೆ, ‘ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಧ್ವನಿಯೇ ನಾನು’” ಎಂದು ಉತ್ತರ ಕೊಟ್ಟನು.
24ಅಲ್ಲಿ ಬಂದವರು ಫರಿಸಾಯರ ಕಡೆಯವರಾಗಿದ್ದರು.
25ಅವರು ಅವನಿಗೆ, “ನೀನು ಕ್ರಿಸ್ತನಾಗಲಿ, ಎಲೀಯನಾಗಲಿ ಆ ಪ್ರವಾದಿಯಾಗಲಿ ಆಗಿರದಿದ್ದರೆ, ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.
26ಅದಕ್ಕೆ ಯೋಹಾನನು, “ನಾನು ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನೀವು ಅರಿಯದೆ ಇರುವ ಒಬ್ಬಾತನು ನಿಮ್ಮ ಮಧ್ಯದಲ್ಲಿದ್ದಾನೆ.
27ಆತನೇ ನನ್ನ ನಂತರ ಬರತಕ್ಕವನು. ಆತನ ಚಪ್ಪಲಿಗಳ ಪಟ್ಟಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಅಂದನು.
28ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಯಲ್ಲಿರುವ ಬೇಥಾನ್ಯ ಎಂಬ ಊರಿನಲ್ಲಿ ನಡೆಯಿತು.
29ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ, “ಅಗೋ, ಲೋಕದ ಪಾಪವನ್ನು ನಿವಾರಣೆ ಮಾಡಲು ದೇವರು ನೇಮಿಸಿದ ಯಜ್ಞದಕುರಿಮರಿ.
30‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ.
31ನನಗೂ ಆತನ ಗುರುತಿರಲಿಲ್ಲ. ಆದರೆ ಆತನನ್ನು ಇಸ್ರಾಯೇಲ್ಯರಿಗೆ ಪ್ರಕಟಪಡಿಸುವುದಕ್ಕೊಸ್ಕರ ನಾನು ನೀರಿನಲ್ಲಿ ದೀಕ್ಷಾಸ್ನಾನವನ್ನು ಮಾಡಿಸುವವನಾಗಿ ಬಂದೆನು.”
32ಇದಲ್ಲದೆ ಯೋಹಾನನು ಸಾಕ್ಷಿ ಕೊಟ್ಟು ಹೇಳಿದ್ದೇನೆಂದರೆ, “ದೇವರಾತ್ಮನು ಪರಲೋಕದಿಂದ ಪಾರಿವಾಳದಂತೆ ಇಳಿಯುವುದನ್ನು ಮತ್ತು ಆತನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು.
33ನನಗೂ ಆತನು ಯಾರೆಂಬುದು ತಿಳಿದಿರಲಿಲ್ಲ. ಆದರೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವುದಕ್ಕೆ ನನ್ನನ್ನು ಕಳುಹಿಸಿದಾತನು ‘ಯಾರ ಮೇಲೆ ಆತ್ಮನು ಇಳಿದುಬಂದು ನೆಲೆಯಾಗಿರುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವಾತನು’ ಎಂದು ತಾನೇ ನನಗೆ ಹೇಳಿದನು.
34ನಾನು ಅದನ್ನು ನೋಡಿದ್ದೇನೆ ಮತ್ತು ಈತನೇ ದೇವಕುಮಾರನೆಂದು ಸಾಕ್ಷಿ ಕೊಟ್ಟಿದ್ದೇನೆ” ಎಂದು ಹೇಳಿದನು.
35ಮರುದಿನ ಪುನಃ ಯೋಹಾನನೂ ತನ್ನ ಇಬ್ಬರು ಶಿಷ್ಯರೊಂದಿಗೆ ನಿಂತುಕೊಂಡಿದ್ದನು,
36ಆಗ ಅಲ್ಲಿ ಯೇಸು ಹೋಗುತ್ತಿರುವುದನ್ನು ನೋಡಿ, ಯೋಹಾನನೂ ಅಗೋ, “ಯಜ್ಞಕ್ಕೆ ದೇವರು ನೇಮಿಸಿರುವ ಕುರಿಮರಿ” ಎಂದು ಹೇಳಿದನು.
37ಆ ಇಬ್ಬರು ಶಿಷ್ಯರು ಯೋಹಾನನು ಹೇಳಿದ್ದನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು.

Read ಯೋಹಾ 1ಯೋಹಾ 1
Compare ಯೋಹಾ 1:19-37ಯೋಹಾ 1:19-37