Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ನ್ಯಾಯ

ನ್ಯಾಯ 20

Help us?
Click on verse(s) to share them!
1ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಪ್ರಾಂತ್ಯಗಳಲ್ಲಿಯೂ, ಗಿಲ್ಯಾದಿನಲ್ಲಿಯೂ ಇರುವ ಇಸ್ರಾಯೇಲರೆಲ್ಲರೂ ಏಕಮನಸ್ಸಿನಿಂದ ಹೊರಟು ಮಿಚ್ಪೆಗೆ ಬಂದು ಯೆಹೋವನ ಸನ್ನಿಧಿಯಲ್ಲಿ ಸಭೆ ಸೇರಿದರು.
2ಆ ದೇವಜನರ ಸಭೆಯಲ್ಲಿ ಎಲ್ಲಾ ಕುಲಾಧಿಪತಿಗಳೂ, ಯುದ್ಧಸನ್ನದ್ಧರಾದ ನಾಲ್ಕು ಲಕ್ಷ ಕಾಲಾಳುಗಳೂ ಇದ್ದರು.
3ಇಸ್ರಾಯೇಲರು ಕೂಡಿಕೊಂಡು ಮಿಚ್ಪೆಗೆ ಬಂದಿದ್ದಾರೆಂಬ ವರ್ತಮಾನವು ಬೆನ್ಯಾಮೀನ್ಯರಿಗೆ ಮುಟ್ಟಿತು. ಇಸ್ರಾಯೇಲರು, “ಈ ದುಷ್ಟತನವು ಹೇಗೆ ನಡೆಯಿತೆಂದು ತಿಳಿಸಿರಿ” ಎಂದು ಕೇಳಲು
4ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು, “ನಾನು ನನ್ನ ಉಪಪತ್ನಿಯ ಸಹಿತವಾಗಿ ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ಒಂದು ರಾತ್ರಿ ಉಳಿದುಕೊಂಡೆನು.
5ಆ ಊರಿನ ಜನರು ನನ್ನನ್ನು ಕೊಲ್ಲಬೇಕೆಂದು ಅದೇ ರಾತ್ರಿ ನಾನು ಇಳಿದುಕೊಂಡಿದ್ದ ಮನೆಯನ್ನು ಸುತ್ತಿಕೊಂಡರು, ಮತ್ತು ನನ್ನ ಉಪಪತ್ನಿಯನ್ನು ಭಂಗಪಡಿಸಿದರು, ಆಕೆಯು ಸತ್ತುಹೋದಳು.
6ಅವರು ಇಸ್ರಾಯೇಲರಲ್ಲಿ ನಡೆಸಿದ ಇಂಥ ಕೆಟ್ಟ ಮತ್ತು ಕ್ರೂರ ಕೆಲಸವು ಎಲ್ಲರಿಗೂ ಗೊತ್ತಾಗಲೆಂದು ನಾನು ಆಕೆಯ ಶವವನ್ನು ತುಂಡುಮಾಡಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದೆನು.
7ಇಲ್ಲಿ ಕೂಡಿರುವ ಎಲ್ಲಾ ಇಸ್ರಾಯೇಲರೇ, ಈಗ ನಿಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಹೇಳಿರಿ” ಅಂದನು.
8ಇದನ್ನು ಕೇಳಿ ಜನರು ಏಕಮನಸ್ಸಿನಿಂದ, “ನಮ್ಮಲ್ಲಿ ಯಾವನೂ ತನ್ನ ಗುಡಾರಕ್ಕೆ ಹೋಗಬಾರದು; ತನ್ನ ಮನೆಗೆ ಹಿಂದಿರುಗದಿರಲಿ.
9ನಾವು ಚೀಟು ಹಾಕೋಣ; ಅದು ಬಿದ್ದ ಪ್ರಕಾರವೇ ಗಿಬೆಯದವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ.
10ಇಸ್ರಾಯೇಲ್ಯರ ಕುಲಗಳಲ್ಲಿ ನೂರಕ್ಕೆ ಹತ್ತು, ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಈ ಪ್ರಕಾರ ಜನರನ್ನು ಆರಿಸಿಕೊಂಡು ಅವರನ್ನು ಆಹಾರ ತರುವುದಕ್ಕಾಗಿ ಕಳುಹಿಸೋಣ. ಅವರು ಬಂದ ಮೇಲೆ ಬೆನ್ಯಾಮೀನ್ಯರಾದ ಗಿಬೆಯದವರು ಇಸ್ರಾಯೇಲರಲ್ಲಿ ನಡೆಸಿದ ದುಷ್ಟ ಕಾರ್ಯಕ್ಕಾಗಿ ಅವರಿಗೆ ದಂಡನೆಮಾಡೋಣ” ಅಂದುಕೊಂಡರು.
11ಹೀಗೆ ಅವರೆಲ್ಲರೂ ಏಕಮನಸ್ಸಿನಿಂದ ಆ ಪಟ್ಟಣಕ್ಕೆ ವಿರೋಧವಾಗಿ ಕೂಡಿಕೊಂಡರು.
12ಅವರು ಬೆನ್ಯಾಮೀನ್ಯರ ಸಮಸ್ತ ಕುಲದವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ನಿಮ್ಮಲ್ಲಿ ನಡೆದ ಈ ದುಷ್ಕೃತ್ಯ ಎಂಥದು?
13ಈಗ ಗಿಬೆಯ ಊರಲ್ಲಿರುವ ಆ ದುಷ್ಟರನ್ನು ನಮಗೆ ಒಪ್ಪಿಸಿರಿ; ನಾವು ಅವರನ್ನು ಕೊಂದು ಇಸ್ರಾಯೇಲರ ಮಧ್ಯದಿಂದ ಇಂಥ ದುಷ್ಟತನವನ್ನು ತೆಗೆದುಹಾಕುತ್ತೇವೆ” ಎಂದು ಹೇಳಿದರು.
14ಆದರೆ ಬೆನ್ಯಾಮೀನ್ಯರು ತಮ್ಮ ಬಂಧುಗಳ ಮಾತಿಗೆ ಕಿವಿಗೊಡದೆ ತಮ್ಮ ಎಲ್ಲಾ ಊರುಗಳಿಂದ ಗಿಬೆಯಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಕ್ಕೆ ಸನ್ನದ್ಧರಾದರು.
15ಆ ದಿನದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ಧರಾಗಿ ಸೇರಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.
16ಈ ಎಲ್ಲಾ ಜನರಲ್ಲಿ ಏಳುನೂರು ಜನರು ಎಡಚರಾದ ಯುದ್ಧವೀರರಿದ್ದರು. ಅವರಲ್ಲಿ ಪ್ರತಿಯೊಬ್ಬರು ಕೂದಲೆಳೆಯಷ್ಟು ಗುರಿತಪ್ಪದ ಹಾಗೆ ಕವಣೆಯನ್ನು ಹೊಡೆಯುವುದರಲ್ಲಿ ನಿಪುಣರಾಗಿದ್ದರು.
17ಬೆನ್ಯಾಮೀನ್ಯರಲ್ಲದ ಇಸ್ರಾಯೇಲರಲ್ಲಿ ನಾಲ್ಕು ಲಕ್ಷ ಯೋಧರಿದ್ದರು; ಇವರೆಲ್ಲರೂ ವೀರರಾಗಿದ್ದರು.
18ಇಸ್ರಾಯೇಲ್ಯರು ಬೇತೇಲಿಗೆ ಹೋಗಿ, “ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ದೇವರಾದ ಯೆಹೋವನನ್ನು ಕೇಳಲು ಆತನು, “ಮೊದಲು ಯೆಹೂದ ಕುಲದವರು ಹೋಗಲಿ” ಎಂದು ಹೇಳಿದನು.

19ಇಸ್ರಾಯೇಲ್ಯರು ಬೆಳಗ್ಗೆ ಹೊರಟುಹೋಗಿ ಗಿಬೆಯದ ಎದುರಿನಲ್ಲಿ ಪಾಳೆಯಮಾಡಿಕೊಂಡು,
20ಬೆನ್ಯಾಮೀನ್ಯರೊಡನೆ ಯುದ್ಧಮಾಡುವುದಕ್ಕೋಸ್ಕರ ಸಿದ್ಧರಾಗಿ, ಗಿಬೆಯದ ಎದುರಿನಲ್ಲಿ ವ್ಯೂಹಕಟ್ಟಿ ನಿಂತರು.
21ಆ ದಿನದಲ್ಲಿ ಬೆನ್ಯಾಮೀನ್ಯರು ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ನೆಲಕ್ಕುರುಳಿಸಿದರು.
22ಇಸ್ರಾಯೇಲ್ಯರು ತಿರುಗಿ ಧೈರ್ಯ ತಂದುಕೊಂಡು ಮೊದಲನೆಯ ದಿನದಲ್ಲಿ ವ್ಯೂಹಕಟ್ಟಿದ ಸ್ಥಳದಲ್ಲೇ ತಿರುಗಿ ವ್ಯೂಹಕಟ್ಟಿ ಯುದ್ಧಕ್ಕೆ ನಿಂತರು.
23ಇಸ್ರಾಯೇಲ್ಯರು ಹೋಗಿ ಯೆಹೋವನ ಮುಂದೆ ಅಳುತ್ತಾ, “ನಾವು ತಿರುಗಿ ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಮಾಡಬೇಕೋ?” ಎಂದು ಕೇಳಲು, ಆತನು, “ಹೋಗಿ ಯುದ್ಧಮಾಡಿರಿ” ಅಂದನು.
24ಆದ್ದರಿಂದ ಅವರು ಎರಡನೆಯ ದಿನದಲ್ಲಿಯೂ ಯುದ್ಧಕ್ಕೆ ಸಿದ್ಧರಾಗಿ ಬೆನ್ಯಾಮೀನ್ಯರ ಸಮೀಪಕ್ಕೆ ಬಂದರು.
25ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರನ್ನು ನೆಲಕ್ಕೆ ಉರುಳಿಸಿದರು.
26ಆಗ ಇಸ್ರಾಯೇಲ್ಯರೆಲ್ಲರೂ, ಎಲ್ಲಾ ಜನರೂ ಬೇತೇಲಿಗೆ ಹೋಗಿ ಅಲ್ಲಿ ಯೆಹೋವನ ಮುಂದೆ ಅಳುತ್ತಾ ಬಿದ್ದು ಸಾಯಂಕಾಲದ ವರೆಗೆ ಉಪವಾಸಮಾಡಿದರು. ಅಲ್ಲಿ ಅವರು ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನ ಯಜ್ಞಗಳನ್ನೂ ಸಮರ್ಪಿಸಿದರು.
27ಆ ಕಾಲದಲ್ಲಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಊರೊಳಗಿತ್ತು;
28ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕಸೇವೆಮಾಡುತ್ತಿದ್ದನು. ಹೀಗಿರುವುದರಿಂದ ಇಸ್ರಾಯೇಲ್ಯರು, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಕ್ಕೆ ಹೋಗಬೇಕೋ, ಬೇಡವೋ?” ಎಂದು ಯೆಹೋವನನ್ನು ಕೇಳಿದರು. ಆತನು ಅವರಿಗೆ, “ಹೋಗಿರಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು” ಅಂದನು.
29ಆಗ ಇಸ್ರಾಯೇಲ್ಯರು ಗಿಬೆಯದ ಸುತ್ತಲೂ ಕೆಲವರನ್ನು ಹೊಂಚು ಹಾಕುವುದಕ್ಕೆ ಇರಿಸಿ,
30ಉಳಿದವರು ಬೆನ್ಯಾಮೀನ್ಯರ ಸಂಗಡ ಕಾದಾಡುವುದಕ್ಕೋಸ್ಕರ ಮುಂಚಿನಂತೆ ಮೂರನೆಯ ದಿನದಲ್ಲಿಯೂ ಗಿಬೆಯದ ಸಮೀಪದಲ್ಲಿ ವ್ಯೂಹಕಟ್ಟಿದರು.
31ಬೆನ್ಯಾಮೀನ್ಯರು ಇಸ್ರಾಯೇಲ್ಯರೊಡನೆ ಯುದ್ಧಮಾಡವುದಕ್ಕಾಗಿ ಪಟ್ಟಣವನ್ನು ಬಿಟ್ಟು ಊರೊಳಕ್ಕೆ ಬಂದರು. ಅವರು ಮೊದಲಿನಂತೆ ಜನರನ್ನು ಕೊಲ್ಲುವುದಕ್ಕೆ ಪ್ರಾರಂಭಿಸಿ ಬೇತೇಲಿಗೂ, ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಮಾಡಿದರು.
32ಬೆನ್ಯಾಮೀನ್ಯರು, “ಅವರು ಮುಂಚಿನಂತೆ ಈಗಲೂ ಸೋತುಹೋಗುತ್ತಾರೆ” ಎಂದು ಅಂದುಕೊಂಡರು. ಇಸ್ರಾಯೇಲ್ಯರಾದರೋ, “ಅವರು ತಮ್ಮ ಪಟ್ಟಣಕ್ಕೆ ದೂರವಾಗುವಂತೆ ನಾವು ಸ್ವಲ್ಪ ದೂರ ಓಡಿಹೋಗೋಣ” ಎಂದು ಮಾತನಾಡಿಕೊಂಡು,
33ತಾವು ಮೊದಲು ನಿಂತ ಸ್ಥಳದಿಂದ ಓಡತೊಡಗಿದರು. ಬಾಳ್‌ತಾಮರಿಗೆ ಮುಟ್ಟಿದ ಕೂಡಲೆ ಅಲ್ಲಿ ನಿಂತು ತಿರುಗಿ ಯುದ್ಧವನ್ನು ಪ್ರಾರಂಭಿಸಿದರು. ಅಷ್ಟರಲ್ಲಿ ಹೊಂಚಿ ನೋಡುತ್ತಿದ್ದವರು ತಾವು ಅಡಗಿಕೊಂಡಿದ್ದ ಗಿಬೆಯದ ಮೈದಾನದಿಂದ ಎದ್ದು
34ಪಟ್ಟಣದ ಮುಂದೆ ಬಂದರು; ಅವರು ಸುಮಾರು ಹತ್ತು ಸಾವಿರ ಮಂದಿ ಯುದ್ಧವೀರರು. ಯುದ್ಧವು ಬಹುಘೋರವಾಯಿತು. ತಮಗೆ ಅಪಾಯವು ಒದಗಿ ಬಂದಿದೆ ಎಂಬುದು ಬೆನ್ಯಾಮೀನ್ಯರಿಗೆ ಇನ್ನೂ ಗೊತ್ತಾಗಿರಲಿಲ್ಲ.
35ಯೆಹೋವನು ಇಸ್ರಾಯೇಲರಿಗೆ ಜಯವನ್ನು ಕೊಟ್ಟಿದ್ದರಿಂದ ಅವರು ಆ ದಿನದಲ್ಲಿ ಇಪ್ಪತ್ತೈದು ಸಾವಿರದ ನೂರು ಮಂದಿ ಬೆನ್ಯಾಮೀನ್ಯರ ಯೋಧರನ್ನು ಹತಮಾಡಿದರು.
36ತಾವು ಸೋತುಹೋದೆವೆಂಬುದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. ಇಸ್ರಾಯೇಲ್ಯರು ತಾವು ಗಿಬೆಯದ ಸಮೀಪದಲ್ಲಿ ಹೊಂಚು ಹಾಕುವುದಕ್ಕಾಗಿ ಇಟ್ಟ ಜನರಲ್ಲಿ ಭರವಸವುಳ್ಳವರಾಗಿದ್ದರಿಂದ, ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು.

37ಅಷ್ಟರಲ್ಲಿ ಅಡಗಿಕೊಂಡಿದ್ದವರು ಎದ್ದು ಗಿಬೆಯಕ್ಕೆ ಶೀಘ್ರವಾಗಿ ಹೋಗಿ, ಅದರೊಳಗಿದ್ದವರೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು.
38ಅಡಗಿದ್ದವರು ಊರಿಗೆ ಬೆಂಕಿಹೊತ್ತಿಸಿ ಹೊಗೆ ಏರಿಹೋಗುವಂತೆ ಮಾಡಿದ ಮೇಲೆ, ಓಡಿಹೋಗುತ್ತಿದ್ದವರು ಪುನಃ ಯುದ್ಧಕ್ಕೆ ನಿಲ್ಲಬೇಕೆಂದು ಹೊಂಚು ಹಾಕುವವರೂ ಹಾಗು ಉಳಿದ ಇಸ್ರಾಯೇಲರೂ ತಮ್ಮ ತಮ್ಮೊಳಗೆ ಮೊದಲೇ ಗೊತ್ತುಮಾಡಿಕೊಂಡಿದ್ದರು.
39ಬೆನ್ಯಾಮೀನ್ಯರಾದರೋ, “ಇಸ್ರಾಯೇಲ್ಯರು ಮುಂಚಿನಂತೆ ನಮ್ಮ ಮುಂದೆ ಸೋತುಹೋದರು” ಎಂದು ತಿಳಿದು ಅವರನ್ನು ಹತಮಾಡಲು ಪ್ರಾರಂಭಿಸಿ, ಸುಮಾರು ಮೂವತ್ತು ಮಂದಿಯನ್ನು ಕೊಂದುಹಾಕಿದರು.
40ಆದರೆ ಪಟ್ಟಣದಿಂದ ಹೊಗೆ ಎದ್ದು ಸ್ತಂಭದೋಪಾದಿಯಲ್ಲಿ ಕಾಣಿಸಿಕೊಳ್ಳಲು ಇಸ್ರಾಯೇಲರು ತಿರುಗಿ ನಿಂತರು.
41ಬೆನ್ಯಾಮೀನ್ಯರು ಹಿಂದಿರುಗಿ ನೋಡಿ ತಮ್ಮ ಪಟ್ಟಣವು ಬೆಂಕಿಯಿಂದ ಸುಟ್ಟುಹೋಗುವುದನ್ನು ಕಂಡು ತಮಗೆ ಅಪಾಯ ಉಂಟಾಗುವುದೆಂದು ಕಳವಳಗೊಂಡರು.
42ಅವರು ಇಸ್ರಾಯೇಲರಿಗೆ ಬೆನ್ನು ತೋರಿಸಿ ಅರಣ್ಯಮಾರ್ಗವಾಗಿ ಓಡಿಹೋದರು. ಆದರೆ ಯುದ್ಧವೀರರು ಅವರನ್ನು ಹಿಂದಟ್ಟಿದ್ದರಿಂದಲೂ, ಪಟ್ಟಣಕ್ಕೆ ಬೆಂಕಿ ಹೊತ್ತಿಸಿದವರು ಹೊರಗೆ ಬಂದುಬಿಟ್ಟಿದ್ದರಿಂದಲೂ, ಅವರು ಇಬ್ಬರ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡರು.
43ಇಸ್ರಾಯೇಲರು ಅವರನ್ನು ಸುತ್ತಿಕೊಂಡು, ಎಲ್ಲಿಯೂ ಓಡಿಹೋಗದಂತೆ, ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿರುವ ಮೆನೂಹದಲ್ಲಿ ತುಳಿದುಹಾಕಿಬಿಟ್ಟರು.
44ಈ ಪ್ರಕಾರ ಬೆನ್ಯಾಮೀನ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರು ಹತರಾದರು.
45ಇದಲ್ಲದೆ ಅವರು ಅರಣ್ಯದಲ್ಲಿರುವ ರಿಮ್ಮೋನ್ ಗಿರಿಗೆ ಓಡಿಹೋಗುವಾಗ ಹಕ್ಕಲು ತೆನೆಗಳನ್ನೋ ಎಂಬಂತೆ ಐದು ಸಾವಿರ ಜನರನ್ನು ರಾಜಮಾರ್ಗಗಳಲ್ಲಿ ಕೊಂದು ಹಾಕಿದರು. ಅಲ್ಲಿಂದ ಗಿದೋಮಿನವರೆಗೆ ಹಿಂದಟ್ಟಿ ತಿರುಗಿ ಎರಡು ಸಾವಿರ ಜನರನ್ನು ಹತಮಾಡಿದರು.
46ಹೀಗೆ ಆ ದಿನ ಬೆನ್ಯಾಮೀನ್ಯರಲ್ಲಿ ಇಪ್ಪತ್ತೈದು ಸಾವಿರ ಯುದ್ಧಸನ್ನದ್ಧರಾದ ಸೈನಿಕರು ಸಂಹರಿಸಲ್ಪಟ್ಟರು.
47ಆದರೆ ಆರು ನೂರು ಮಂದಿ ಅರಣ್ಯಮಾರ್ಗವಾಗಿ ಓಡಿಹೋಗಿ, ರಿಮ್ಮೋನ್ ಗಿರಿಯನ್ನು ಸೇರಿ ಅಲ್ಲಿ ನಾಲ್ಕು ತಿಂಗಳಿದ್ದರು.
48ಇಸ್ರಾಯೇಲರು ಪುನಃ ಹಿಂತಿರುಗಿ ಬಂದು ಬೆನ್ಯಾಮೀನ್ ದೇಶದ ಉಳಿದ ಗ್ರಾಮನಗರಗಳಿಗೆ ಹೋಗಿ ಅವುಗಳ ನಿವಾಸಿಗಳನ್ನೂ, ದನಕುರಿಗಳನ್ನೂ, ಸಿಕ್ಕಿದ್ದೆಲ್ಲವನ್ನು ಸಂಹರಿಸಿ ಎಲ್ಲಾ ಊರುಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು.