1ಅಬೀಮೆಲೆಕನ ಮರಣದ ತರುವಾಯ ಇಸ್ಸಾಕಾರ್ ಕುಲದ ಪೂವನ ಮಗನೂ, ದೋದೋವಿನ ಮೊಮ್ಮಗನೂ ಆಗಿದ್ದ ತೋಲನು ಇಸ್ರಾಯೇಲ್ಯರನ್ನು ರಕ್ಷಿಸಿವುದಕ್ಕೋಸ್ಕರ ಎದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ಶಾಮೀರೆಂಬ ಊರಲ್ಲಿ ವಾಸವಾಗಿದ್ದನು.
2ಇಪ್ಪತ್ತಮೂರು ವರ್ಷಗಳವರೆಗೆ ಇಸ್ರಾಯೇಲರನ್ನು ಪಾಲಿಸಿದ ನಂತರ, ಅವನು ಸತ್ತು ಶಾಮೀರಿನಲ್ಲಿ ಹೂಣಲ್ಪಟ್ಟನು.
3ತೋಲನ ಮರಣದ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಾಯೇಲರನ್ನು ಇಪ್ಪತ್ತೆರಡು ವರ್ಷ ಪಾಲಿಸಿದನು.
4ಇವನಿಗೆ ಮೂವತ್ತು ಮಂದಿ ಮಕ್ಕಳಿದ್ದರು. ಇವರಿಗೆ ಮೂವತ್ತು ಸವಾರಿ ಕತ್ತೆಗಳೂ, ಗಿಲ್ಯಾದ್ ದೇಶದಲ್ಲಿ ಮೂವತ್ತು ಊರುಗಳೂ ಇದ್ದವು. ಅವುಗಳಿಗೆ ಇಂದಿನ ವರೆಗೂ ಯಾಯೀರನ ಗ್ರಾಮಗಳೆಂದು ಹೆಸರಿದೆ.
5ಯಾಯೀರನು ಸತ್ತು ಕಾಮೋನಿನಲ್ಲಿ ಹೂಣಲ್ಪಟ್ಟನು.
6ಇಸ್ರಾಯೇಲರು ಪುನಃ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. ಅವರು ಆತನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನೂ, ಅರಾಮ್ಯರು, ಚೀದೋನ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಇವರ ದೇವತೆಗಳನ್ನೂ ಪೂಜಿಸತೊಡಗಿದರು. ಯೆಹೋವನನ್ನು ಮರೆತು ಆತನನ್ನು ಆರಾಧಿಸುವುದನ್ನು ಬಿಟ್ಟೇಬಿಟ್ಟರು.
7ಆದುದರಿಂದ ಆತನು ಇಸ್ರಾಯೇಲರ ಮೇಲೆ ಕೋಪಗೊಂಡು ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಒಪ್ಪಿಸಿಬಿಟ್ಟನು.
8ಇವರು ಅಂದಿನಿಂದ ಹದಿನೆಂಟು ವರ್ಷಗಳ ವರೆಗೆ ಯೊರ್ದನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಾಯೇಲರನ್ನು ಬಹಳವಾಗಿ ಪೀಡಿಸುತ್ತಾ, ಕುಗ್ಗಿಸುತ್ತಾ ಇದ್ದರು. ಈ ದೇಶವು ಮೊದಲು ಅಮೋರಿಯರದಾಗಿತ್ತು.
9ಇದಲ್ಲದೆ ಅಮ್ಮೋನಿಯರು ಯೊರ್ದನ್ ಹೊಳೆಯನ್ನು ದಾಟಿ, ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಕುಲಗಳೊಡನೆ ಯುದ್ಧಮಾಡಿದ್ದರಿಂದ ಇಸ್ರಾಯೇಲರಿಗೆ ಬಹಳ ಕಷ್ಟವಾಯಿತು.
10ಆಗ ಅವರು ಯೆಹೋವನಿಗೆ, “ನಾವು ನಮ್ಮ ದೇವರಾದ ನಿನ್ನನ್ನು ಬಿಟ್ಟು, ಬಾಳನ ಪ್ರತಿಮೆಗಳನ್ನು ಪೂಜಿಸಿ, ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಮೊರೆಯಿಟ್ಟರು.
11ಆತನು ಅವರಿಗೆ, “ಐಗುಪ್ತ, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, ಚೀದೋನ್ಯ, ಅಮಾಲೇಕ್ಯ, ಮಾವೋನ್ಯ ಇವೇ
12ಮೊದಲಾದ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವರಿಂದ ನಿಮ್ಮನ್ನು ಬಿಡಿಸಿದರೂ
13ನೀವು ಪುನಃ ನನ್ನನ್ನು ಬಿಟ್ಟು, ಅನ್ಯದೇವತೆಗಳನ್ನು ಸೇವಿಸುತ್ತಾ ಬಂದಿರಿ. ಆದುದರಿಂದ ನಾನು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದೇ ಇಲ್ಲ.
14ಹೋಗಿ, ನೀವು ಆರಿಸಿಕೊಂಡ ದೇವತೆಗಳಿಗೆ ಮೊರೆಯಿಡಿರಿ; ಅವು ನಿಮ್ಮನ್ನು ಈ ಇಕ್ಕಟ್ಟಿನಿಂದ ಬಿಡಿಸಲಿ” ಅಂದನು.
15ಅವರು ತಿರುಗಿ ಯೆಹೋವನಿಗೆ, “ನಾವು ಪಾಪ ಮಾಡಿದ್ದೇವೆ; ನಿನಗೆ ಸರಿಕಾಣುವ ಪ್ರಕಾರ ನಮಗೆ ಮಾಡು; ಆದರೆ ಈ ಸಾರಿ ಹೇಗೂ ನಮ್ಮನ್ನು ರಕ್ಷಿಸಬೇಕು” ಎಂದು ಮೊರೆಯಿಟ್ಟು ಅನ್ಯದೇವತೆಗಳನ್ನು ತಮ್ಮಲ್ಲಿಂದ ತೆಗೆದು ಹಾಕಿ ಯೆಹೋವನನ್ನು ಸೇವಿಸುವವರಾದರು.
16ಆಗ ಆತನ ಮನಸ್ಸು ಇಸ್ರಾಯೇಲರ ಸಂಕಟದ ನಿಮಿತ್ತ ಬಹಳವಾಗಿ ನೊಂದಿತು.
17ಅಮ್ಮೋನಿಯರು ದಂಡೆತ್ತಿ ಬಂದು ಗಿಲ್ಯಾದಿನಲ್ಲಿ ಇಳಿದುಕೊಳ್ಳಲು ಇಸ್ರಾಯೇಲರು ಸೇರಿ ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು.
18ಗಿಲ್ಯಾದಿನ ಜನರೂ ಅಧಿಪತಿಗಳೂ, “ನಮ್ಮಲ್ಲಿ ಅಮ್ಮೋನಿಯರೊಡನೆ ಯುದ್ಧಕ್ಕೆ ಕೈಹಾಕುವವನು ಯಾರು? ಅಂಥವನನ್ನು ಗಿಲ್ಯಾದಿನವರೆಲ್ಲರ ಮೇಲೆ ನಾಯಕನನ್ನಾಗಿ ಮಾಡುವೆವು” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.