Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅರಣ್ಯ

ಅರಣ್ಯ 5

Help us?
Click on verse(s) to share them!
1ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
2“ಕುಷ್ಠರೋಗಿಗಳನ್ನು, ಸಾಂಕ್ರಾಮಿಕವಾದ ಚರ್ಮರೋಗ ಇರುವವರನ್ನು, ಮೇಹಸ್ರಾವವುಳ್ಳವರನ್ನು ಹಾಗು ಹೆಣದ ಸೋಂಕಿನಿಂದ ಅಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.
3ಅಂಥವರು ಗಂಡಸರೇ ಆಗಲಿ ಅಥವಾ ಹೆಂಗಸರೇ ಆಗಲಿ, ಅವರೆಲ್ಲರನ್ನೂ ಪಾಳೆಯದಿಂದ ಹೊರಗೆಹಾಕಬೇಕು. ನಾನೇ ಅವರ ಪಾಳೆಯದಲ್ಲಿ ವಾಸವಾಗಿರುವುದರಿಂದ ಅವರು ಅದನ್ನು ಅಪವಿತ್ರ ಮಾಡಬಾರದು.”
4ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಹಾಗೆಯೇ ಮಾಡಿದರು. ಇಸ್ರಾಯೇಲರು ಯೆಹೋವನಿಗೆ ವಿಧೇಯರಾಗಿ ಅಶುದ್ಧರಾದವರನ್ನೆಲ್ಲಾ ಪಾಳೆಯದಿಂದ ಹೊರಗೆ ಕಳುಹಿಸಿದರು.
5ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
6“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವುದರಿಂದ ಯೆಹೋವನಿಗೆ ದ್ರೋಹಮಾಡಿ ಅಪರಾಧಿಗಳಾದರೆ,
7ಅಂಥವರು ತಮ್ಮ ಅಪರಾಧವನ್ನು ಅರಿಕೆಮಾಡಬೇಕು. ಅದಲ್ಲದೆ ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಗೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಸೇರಿಸಿ ಕೊಡಬೇಕು.
8“ಆದರೆ ದಂಡವನ್ನು ತೆಗೆದುಕೊಳ್ಳುವವನು ಮೃತನಾಗಿ ಅವನ ಸಂಬಂಧಿಕರು ಯಾರೂ ಇಲ್ಲದಿದ್ದರೆ, ಆ ದ್ರವ್ಯವು ಯೆಹೋವನಿಗೆ ಸೇರಬೇಕು. ಆ ದ್ರವ್ಯ ಮತ್ತು ದೋಷಪರಿಹಾರಕ್ಕಾಗಿ ಸಮರ್ಪಿಸಲ್ಪಡುವ ಪ್ರಾಯಶ್ಚಿತ್ತದ ಟಗರು ಈ ಎರಡೂ ಯಾಜಕನಿಗೆ ಸೇರಬೇಕು.
9ಇಸ್ರಾಯೇಲರು ಪರಿಶುದ್ಧವಾದ ವಸ್ತುಗಳಿಂದ ಪ್ರತ್ಯೇಕಿಸಿ ತರುವ ಕಾಣಿಕೆಗಳೆಲ್ಲಾ ಯಾಜಕನಿಗೇ ಸಲ್ಲಬೇಕು.
10ಪ್ರತಿ ಮನುಷ್ಯನು ಯೆಹೋವನಿಗೆ ಮೀಸಲಾಗಿಟ್ಟದ್ದನ್ನು ಯಾವ ಯಾಜಕನಿಗೆ ತಂದು ಒಪ್ಪಿಸುತ್ತಾನೋ ಅದು ಆ ಯಾಜಕನದ್ದಾಗಿರುತ್ತದೆ.”
11ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
12“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ‘ಯಾರ ಹೆಂಡತಿ ತಪ್ಪು ದಾರಿ ಹಿಡಿದು ಗಂಡನಿಗೆ ಅಪನಂಬಿಗಸ್ತಳಾಗಿ,
13ಯಾರ ಕೈಗೆ ಸಿಕ್ಕದೆಯೂ ಸಾಕ್ಷಿ ಇಲ್ಲದೆಯೂ ರಹಸ್ಯವಾಗಿಯೇ ಪರಪುರುಷನೊಡನೆ ಸಂಗಮಿಸಿ ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾದ ಸಂದರ್ಭದಲ್ಲಿ,
14ಅಥವಾ ಅವಳು ಹಾಗೆ ಮಾಡದೆ ಅಶುದ್ಧಳಾಗದ ಸಂದರ್ಭದಲ್ಲಿಯೂ, ಆಕೆಯು ಕೆಟ್ಟುಹೋದಳೆಂಬ ಸಂಶಯ ಗಂಡನಿಗೆ ಬಂದರೆ,
15ಆಗ ಅವನು ಮಾಡಬೇಕಾದದ್ದೇನೆಂದರೆ, ಆ ಪುರುಷನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು ಮತ್ತು ಅವಳ ಸಂಗತಿಯನ್ನು ವಿಚಾರಿಸುವುದಕ್ಕಾಗಿ ಅವನು ಯಾಜಕನಿಗೆ ಮೂರು ಸೇರು ಜವೆಗೋದಿಯ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು. ಅದು ವ್ಯಭಿಚಾರ ಸಂಶಯವನ್ನು ಸೂಚಿಸುವುದಕ್ಕೂ ಮತ್ತು ಪಾಪವನ್ನು ಹೊರಪಡಿಸುವುದಕ್ಕೂ ಯೆಹೋವನಿಗೆ ನೈವೇದ್ಯವಾದ ಕಾಣಿಕೆಯಾದುದರಿಂದ ಆ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯ್ಯಲೂಬಾರದು, ಧೂಪವನ್ನು ಇಡಲೂಬಾರದು.
16“‘ಯಾಜಕನು ಅವಳನ್ನು ಕರೆದು ಯೆಹೋವನ ಸಮ್ಮುಖದಲ್ಲಿ ನಿಲ್ಲಿಸಬೇಕು.
17ಯಾಜಕನು ಮಣ್ಣಿನ ಪಾತ್ರೆಯಲ್ಲಿ ಪರಿಶುದ್ಧ ಜಲವನ್ನು ತೆಗೆದುಕೊಂಡು, ದೇವದರ್ಶನದ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು.
18ಯಾಜಕನು ಆ ಸ್ತ್ರೀಯನ್ನು ಯೆಹೋವನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆಯ ಮೇಲಿರುವ ಮುಸುಕನ್ನು ತೆಗೆದು, ಕೂದಲನ್ನು ಕೆದರಿಸಿ ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿ ಇಟ್ಟು, ಶಾಪವನ್ನುಂಟುಮಾಡುವ ವಿಷಕರವಾದ ಆ ನೀರನ್ನು ಯಾಜಕನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು.

19ಯಾಜಕನೂ ಅವಳಿಂದ ಪ್ರಮಾಣಮಾಡಿಸಿ ಹೀಗೆ ಹೇಳಬೇಕು, “ಒಬ್ಬ ಪರಪುರುಷನ ಸಂಗಮಮಾಡದಿದ್ದರೆ, ನಿನ್ನ ಗಂಡನನ್ನು ಬಿಟ್ಟು ನೀನು ಜಾರತ್ವ ಮಾಡದೇ ನಿರಪರಾಧಿಯಾಗಿದ್ದರೆ ಶಪಿಸಲ್ಪಟ್ಟ ವಿಷಕರವಾದ ಈ ನೀರು ನಿನಗೆ ಯಾವ ಹಾನಿಯನ್ನು ಮಾಡುವುದಿಲ್ಲ.
20ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಪರಪುರುಷನೊಡನೆ ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನೊಡನೆ ನೀನು ಸಂಗಮಿಸಿದ್ದರೆ,”
21“ಯೆಹೋವನು ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ, ನಿನ್ನ ಹೊಟ್ಟೆಯು ಉಬ್ಬುವಂತೆ ಮಾಡಿ ನಿನ್ನನ್ನು ನಿನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳನ್ನಾಗಿ ನೇಮಿಸಲಿ.
22ಶಾಪವನ್ನುಂಟುಮಾಡುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆಯು ಉಬ್ಬುವಂತೆ ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿ ಹೋಗುವಂತೆ ಮಾಡುವುದು.” ಅದಕ್ಕೆ ಆ ಸ್ತ್ರೀಯು, “ನಾನು ಅಪರಾಧಿಯಾಗಿದ್ದರೆ ಹಾಗೆಯೇ ಆಗಲಿ” ಎಂದು ಹೇಳಬೇಕು.
23“‘ಇದಲ್ಲದೆ ಯಾಜಕನು ಈ ಶಾಪವಚನಗಳನ್ನು ಸುರುಳಿಯಲ್ಲಿ ಬರೆದು, ವಿಷಕರ ಜಲದಲ್ಲಿ ಆ ಶಾಪವಚನವನ್ನು ತೊಳೆಯಬೇಕು.
24ಶಾಪವನ್ನುಂಟುಮಾಡುವ ವಿಷಕರವಾದ ನೀರನ್ನು ಆ ಸ್ತ್ರೀಗೆ ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ವಿಷಕರವಾಗುವುದು.
25ಬಳಿಕ ಯಾಜಕನು ಆ ಸ್ತ್ರೀಯ ಕೈಯಿಂದ ವ್ಯಭಿಚಾರದ ಸಂಶಯ ಸೂಚಕವಾದ ಕಾಣಿಕೆಯನ್ನು ತೆಗೆದುಕೊಂಡು, ಆ ಕಾಣಿಕೆಯನ್ನು ಯೆಹೋವನ ಸಮ್ಮುಖದಲ್ಲಿ ನೈವೇದ್ಯಮಾಡಿ ಯಜ್ಞವೇದಿಯ ಹತ್ತಿರ ತರಬೇಕು.
26ಆಗ ಯಾಜಕನು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಕಾಣಿಕೆಯಿಂದ ಒಂದು ಹಿಡಿಯನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಆ ನೀರನ್ನು ಸ್ತ್ರೀಗೆ ಕುಡಿಸಬೇಕು.
27ಅವಳು ಅಶುದ್ಧಳಾಗಿ ಗಂಡನಿಗೆ ದ್ರೋಹಮಾಡಿದವಳಾಗಿದ್ದರೆ ಆ ನೀರನ್ನು ಕುಡಿದ ನಂತರ ಆ ನೀರು ಅವಳೊಳಗೆ ಸೇರಿ ವಿಷವಾಗುವುದರಿಂದ ಅವಳ ಹೊಟ್ಟೆ ಉಬ್ಬುವುದು, ಅವಳ ತೊಡೆಗಳು ಕ್ಷೀಣವಾಗಿ ಹೋಗುವವು. ಆಗ ಆ ಸ್ತ್ರೀಯು ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗುವಳು.
28ಆದರೆ ಆ ಸ್ತ್ರೀಯು ಪರಿಶುದ್ಧಳಾಗಿ ನಿರಪರಾಧಿಯಾದ ಪಕ್ಷಕ್ಕೆ ಯಾವ ಹಾನಿಯನ್ನು ಅನುಭವಿಸದೆ ಸಂತಾನವನ್ನು ಪಡೆಯುವಳು.
29ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾದರೆ ಇಂತಹ ವ್ಯಭಿಚಾರದ ಸಂಶಯವನ್ನು ಪರಿಹರಿಸುವ ನಿಯಮ ಇದೇ.
30ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯ ಪಟ್ಟರೆ ಅವನು ಅವಳನ್ನು ಯೆಹೋವನ ಸಮ್ಮುಖದಲ್ಲಿ ತಂದು ನಿಲ್ಲಿಸಬೇಕು. ಯಾಜಕನು ಅವಳ ವಿಷಯದಲ್ಲಿ ಈ ವಿಧಿನಿಯಮವನ್ನು ನೆರವೇರಿಸಬೇಕು.
31ಆಗ ಗಂಡನು ನಿರಪರಾಧಿಯಾಗುವನು. ಆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು.’”