Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಪೂರ್ವ

2 ಪೂರ್ವ 31

Help us?
Click on verse(s) to share them!
1ಇದಾದನಂತರ ನೆರೆದುಬಂದ ಇಸ್ರಾಯೇಲರೆಲ್ಲರೂ ಯೆಹೂದ ದೇಶದ ಪಟ್ಟಣಗಳಿಗೆ ಹೋಗಿ ಕಲ್ಲು ಕಂಬಗಳನ್ನು ಒಡೆದು, ಅಶೇರ ವಿಗ್ರಹ ಸ್ತಂಭಗಳನ್ನು ಕಡಿದುಹಾಕಿ, ಪೂಜಾಸ್ಥಳಗಳನ್ನೂ, ಯಜ್ಞವೇದಿಗಳನ್ನೂ ಹಾಳುಮಾಡಿಬಿಟ್ಟರು. ಯೆಹೂದ ಬೆನ್ಯಾಮೀನ್ ಪ್ರಾಂತ್ಯಗಳಲ್ಲದೆ ಎಫ್ರಾಯೀಮ್, ಮನಸ್ಸೆ ಪ್ರಾಂತ್ಯಗಳಲ್ಲಿಯೂ ಯಾವುದೊಂದನ್ನೂ ಉಳಿಸಲಿಲ್ಲ. ಆ ಮೇಲೆ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಸ್ವಾಸ್ತ್ಯವಿರುವ ಪಟ್ಟಣಗಳಿಗೆ ಹೋದರು.
2ಹಿಜ್ಕೀಯನು ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳವರನ್ನು ಅವರವರಿಗೆ ನೇಮಕವಾದ ಸೇವೆಗೆ ಅಂದರೆ, ಸರ್ವಾಂಗಹೋಮ, ಸಮಾಧಾನ ಯಜ್ಞ, ಇವುಗಳನ್ನು ಸಮರ್ಪಿಸುವುದಕ್ಕೂ ಯೆಹೋವನ ಪಾಳೆಯದ ದ್ವಾರಗಳಲ್ಲಿ ಸೇರಿ ಯೆಹೋವನನ್ನು ಆರಾಧಿಸುತ್ತಾ, ಕೀರ್ತಿಸುತ್ತಾ, ಕೃತಜ್ಞತಾಸ್ತುತಿಮಾಡುತ್ತಾ ಇರುವುದಕ್ಕೂ ನೇಮಿಸಿದನು.
3ಇದಲ್ಲದೆ, ಅರಸನು ಯೆಹೋವನ ಧರ್ಮಶಾಸ್ತ್ರದ ವಿಧಿಗನುಸಾರವಾಗಿ ಪ್ರಾತಃಕಾಲ, ಸಾಯಂಕಾಲ, ಸಬ್ಬತ್ ದಿನ, ಅಮಾವಾಸ್ಯೆ ಹಾಗು ಹಬ್ಬಗಳಲ್ಲಿ ಸಮರ್ಪಣೆಯಾಗತಕ್ಕ ಸರ್ವಾಂಗಹೋಮಗಳಿಗಾಗಿ ಆಗಬೇಕಾದ ಎಲ್ಲವನ್ನು ತನ್ನ ಸ್ವಂತ ಆಸ್ತಿಯಿಂದಲೇ ಸಲ್ಲಿಸಬೇಕು ಎಂದು ಸೂಚಿಸಿದನು.
4ಯಾಜಕರು ಮತ್ತು ಲೇವಿಯರು ಯೆಹೋವನ ಧರ್ಮಶಾಸ್ತ್ರದಲ್ಲಿ ಆಸಕ್ತರಾಗಿರುವುದಕ್ಕಾಗಿ ಅವರಿಗೆ ಸಲ್ಲತಕ್ಕ ಜೀವನಾಂಶವನ್ನು ಯೆರೂಸಲೇಮಿನಲ್ಲಿ ವಾಸಿಸುವ ಜನರು ಕೊಡಬೇಕೆಂತಲೂ ಗೊತ್ತುಮಾಡಿದನು.
5ಈ ರಾಜಾಜ್ಞೆಯು ಪ್ರಕಟವಾದ ಕೂಡಲೆ ಇಸ್ರಾಯೇಲರು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು ಮುಂತಾದ ಎಲ್ಲಾ ಹುಟ್ಟುವಳಿಗಳಲ್ಲಿಯೂ ಪ್ರಥಮಫಲವನ್ನು ರಾಶಿರಾಶಿಯಾಗಿ ತಂದುಕೊಟ್ಟರು ಮತ್ತು ತಮ್ಮ ಎಲ್ಲಾ ಆದಾಯದ ದಶಮಾಂಶವನ್ನೂ ಉದಾರವಾಗಿ ಸಲ್ಲಿಸಿದರು.
6ಯೆಹೂದದ ಪಟ್ಟಣಗಳಲ್ಲಿ ವಾಸಿಸುತ್ತಿರುವ ಇಸ್ರಾಯೇಲರೂ ಯೆಹೂದ್ಯರೂ ಕುರಿದನ ಹಿಂಡುಗಳಲ್ಲಿ ದಶಮಾಂಶವನ್ನು ಕೊಟ್ಟದ್ದಲ್ಲದೆ, ದೇವರಾದ ಯೆಹೋವನಿಗೆ ಸಮರ್ಪಣೆಯಾಗತಕ್ಕ ಪರಿಶುದ್ಧ ದ್ರವ್ಯಗಳಲ್ಲಿಯೂ ದಶಮಾಂಶವನ್ನು ತಂದು ರಾಶಿಮಾಡಿದರು.
7ಹೀಗೆ ರಾಶಿಮಾಡುವುದು ಮೂರನೆಯ ತಿಂಗಳಿಂದ ಪ್ರಾರಂಭವಾಯಿತು. ಏಳನೆಯ ತಿಂಗಳಲ್ಲಿ ಅದು ಮುಕ್ತಾಯಗೊಂಡಿತು ಅರಸನಾದ
8ಹಿಜ್ಕೀಯನೂ ಮತ್ತು ಪದಾಧಿಕಾರಿಗಳೂ ಬಂದು ಆ ರಾಶಿಗಳನ್ನು ನೋಡಿದಾಗ ಯೆಹೋವನನ್ನು ಕೊಂಡಾಡಿ ಆತನ ಪ್ರಜೆಗಳಾದ ಇಸ್ರಾಯೇಲರನ್ನು ಹರಸಿದರು.
9ಹಿಜ್ಕೀಯನೂ ಯಾಜಕರ ಮತ್ತು ಲೇವಿಯರ ಹತ್ತಿರ ಆ ರಾಶಿಗಳ ವಿಷಯದಲ್ಲಿ ವಿಚಾರಿಸಿದಾಗ,
10ಚಾದೋಕ್ ಸಂತಾನದ ಮಹಾಯಾಜಕನಾದ ಅಜರ್ಯನು ಅವನಿಗೆ, “ಜನರು ದೇವರಾದ ಯೆಹೋವನಿಗೋಸ್ಕರ ನೈವೇದ್ಯಕ್ಕಾಗಿ ಪ್ರತ್ಯೇಕಿಸತಕ್ಕದ್ದನ್ನು ಆತನ ಆಲಯಕ್ಕೆ ತಂದಂದಿನಿಂದ ಯೆಹೋವನು ತನ್ನ ಪ್ರಜೆಗಳಿಗೆ ಸಮೃದ್ಧಿಯಾಗಿ ಅನುಗ್ರಹಿಸಿದ್ದಾನೆ. ನಾವು ಉಂಡು ತೃಪ್ತರಾಗಿ ಇನ್ನೂ ಇಷ್ಟು ದೊಡ್ಡ ರಾಶಿಯನ್ನು ಉಳಿಸಿಕೊಂಡಿರುತ್ತಾರೆ” ಎಂದನು.
11ಆಗ ಹಿಜ್ಕೀಯನು ಯೆಹೋವನ ಆಲಯದಲ್ಲಿ ಕೊಠಡಿಗಳನ್ನು ಸಿದ್ಧಮಾಡಲು ಆಜ್ಞಾಪಿಸಿದನು.
12ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನೂ, ತಮ್ಮ ಆದಾಯದ ದಶಮಾಂಶವನ್ನೂ ಹಾಗು ದೇವರ ನೈವೇದ್ಯಕ್ಕಾಗಿ ಮುಡುಪಾಗಿ ಇಟ್ಟಿದ್ದನ್ನು ನಂಬಿಕೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಗೆ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು. ಅವನ ತಮ್ಮನಾದ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.
13ಅರಸನಾದ ಹಿಜ್ಕೀಯನ ಮತ್ತು ಯೆಹೋವನ ಆಲಯದ ಅಧಿಪತಿಯಾದ ಅಜರ್ಯನ ನಿಯಮದಂತೆ ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಕ್ಯ, ಮಹತ್, ಬೆನಾಯ ಇವರು ಕೋನನ್ಯನ ಮತ್ತು ಅವನ ತಮ್ಮನಾದ ಶಿಮ್ಮೀಯ ಕೈಕೆಳಗಿನ ಪಾರುಪತ್ಯಗಾರರಾಗಿದ್ದರು.
14ಮೂಡಣದಿಕ್ಕಿನ ದ್ವಾರಪಾಲಕನಾಗಿದ್ದ ಇಮ್ನನ ಮಗನಾದ ಕೋರೆ ಎಂಬ ಲೇವಿಯನು, ಜನರು ಸ್ವಂತ ಇಚ್ಛೆಯಿಂದ ದೇವರಿಗೆ ಕಾಣಿಕೆಯಾಗಿ ಸಮರ್ಪಿಸುತ್ತಿದ್ದ ವಸ್ತುಗಳ ಮೇಲ್ವಿಚಾರಕನಾಗಿದ್ದನು. ಅಲ್ಲದೆ ಯೆಹೋವನ ನೈವೇದ್ಯಕ್ಕಾಗಿ ಪ್ರತ್ಯೇಕಿಸಲ್ಪಟ್ಟ ದ್ರವ್ಯ, ಮಹಾಪರಿಶುದ್ಧ ವಸ್ತು, ಇವುಗಳನ್ನು ಹಂಚಿಕೊಡುವವನೂ ಆಗಿದ್ದನು.
15ಇವನ ಕೈಕೆಳಗೆ ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ, ಶೆಕನ್ಯ ಎಂಬುವವರಿದ್ದರು. ಇವರು ಯಾಜಕರ ಪಟ್ಟಣಗಳಲ್ಲಿದ್ದು, ನಂಬಿಕೆಯಿಂದ ತಮ್ಮ ಬಂಧುಗಳಿಗೆ ದೊಡ್ಡವರು ಚಿಕ್ಕವರು ಎಂಬ ಭೇದಮಾಡದೆ ಅವರವರ ವರ್ಗಗಳ ಪ್ರಕಾರ ಪಾಲುಕೊಡುತ್ತಿದ್ದರು.
16ಆಯಾ ಉದ್ಯೋಗ ವರ್ಗಗಳಿಗನುಸಾರವಾಗಿ ಅನುದಿನದ ಸೇವೆಗಾಗಿ ಯೆಹೋವನ ಆಲಯಕ್ಕೆ ಬರುತ್ತಿದ್ದ ಗಂಡಸರಲ್ಲಿ ಮೂರು ವರ್ಷ ವರ್ಷಕ್ಕಿಂತ ಹೆಚ್ಚು ವಯಸ್ಸುಳ್ಳವರ ಪಟ್ಟಿಯಲ್ಲಿ ಬರೆಯಲ್ಪಟ್ಟವರಿಗೆ ಮಾತ್ರ ಕೊಡುತ್ತಿರಲಿಲ್ಲ.
17ಆ ಪಟ್ಟಿಯಲ್ಲಿ ಗೋತ್ರಗಳಿಗೆ ಅನುಸಾರವಾಗಿಯೂ ಆಯಾ ಉದ್ಯೋಗ ವರ್ಗಗಳಿಗೆ ಅನುಸಾರವಾಗಿಯೂ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸುಳ್ಳ ಯಾಜಕರು, ಲೇವಿಯರು,
18ಅವರವರ ಹೆಂಡತಿಯರು, ಗಂಡುಹೆಣ್ಣು ಮಕ್ಕಳು, ಅಂತು ತಮ್ಮ ಉದ್ಯೋಗದ ನಿಮಿತ್ತ ತಮ್ಮನ್ನು ದೇವರಿಗೆ ನಂಬಿಕೆಯಿಂದ ಪ್ರತಿಷ್ಠಿಸಿಕೊಂಡ ಸಮೂಹದವರೂ ಅವರಿಗೆ ಸೇರಿದವರೆಲ್ಲರೂ ಲಿಖಿತರಾಗಿದ್ದರು.

19ಇದಲ್ಲದೆ, ಆರೋನನ ಸಂತಾನದವರಾದ ಯಾಜಕರು ಆಯಾ ಪಟ್ಟಣಗಳಿಗೆ ಸೇರಿದ ಹುಲ್ಲುಗಾವಲುಗಳಲ್ಲಿದ್ದವರಿಗೆ ಪಾಲುಕೊಡುತ್ತಿದ್ದರು. ಇವರು ಯಾಜಕ ಸಂತಾನದ ಎಲ್ಲಾ ಗಂಡಸರಿಗೂ, ಪಟ್ಟಿಯಲ್ಲಿ ಲಿಖಿತರಾದ ಎಲ್ಲಾ ಲೇವಿಯರಿಗೂ, ಸಿಕ್ಕತಕ್ಕ ಭಾಗಗಳನ್ನು ಹಂಚಿಕೊಡುವುದಕ್ಕೆ ಹೆಸರೆಸರಾಗಿ ನೇಮಿಸಲ್ಪಟ್ಟರೂ ಪುರುಷರಿದ್ದರು.
20ಹಿಜ್ಕೀಯನು ಯೆಹೂದದಲ್ಲೆಲ್ಲಾ ಇದೇ ವ್ಯವಸ್ಥೆಯನ್ನು ಮಾಡಿದನು. ಅವನು ತನ್ನ ದೇವರಾದ ಯೆಹೋವನಿಗೆ ಒಳ್ಳೆಯವನೂ, ನೀತಿವಂತನೂ, ನಂಬಿಗಸ್ತನೂ ಆಗಿ ನಡೆದನು.
21ಅವನು ತನ್ನ ದೇವರ ಒಲುಮೆಯನ್ನು ಪಡೆದುಕೊಳ್ಳುವುದಕ್ಕಾಗಿ ದೇವಾಲಯದ ಸೇವೆ ಮಾಡುವ, ಕಾರ್ಯದಲ್ಲಿಯೂ ಧರ್ಮಶಾಸ್ತ್ರವಿಧಿಗಳ ಸಂಬಂಧದಲ್ಲಿಯೂ, ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದಲೂ ಪ್ರಾಮಾಣಿಕನಾಗಿಯೂ ನಡೆದುಕೊಂಡು ಕೃತಾರ್ಥನಾದನು.