Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 18

ಲೂಕ 18:20-43

Help us?
Click on verse(s) to share them!
20‘ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’ ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.
21ಅದಕ್ಕವನು, “ನಾನು ಬಾಲ್ಯದಿಂದಲೂ ಇವೆಲ್ಲನ್ನು ಸರಿಯಾಗಿ ಪಾಲಿಸುತ್ತಾ ಬಂದಿದ್ದೇನೆ” ಎಂದು ಹೇಳಿದನು.
22ಯೇಸು ಅದನ್ನು ಕೇಳಿ ಅವನಿಗೆ, “ಇನ್ನೂ ನಿನಗೆ ಒಂದು ಕೊರತೆಯಿದೆ. ನಿನಗಿರುವುದನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು, ಪರಲೋಕದಲ್ಲಿ ನಿನಗೆ ಸಂಪತ್ತುಂಟಾಗುವುದು. ತರುವಾಯ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
23ಅವನು ಬಹಳ ಐಶ್ವರ್ಯವಂತನಾಗಿದ್ದದರಿಂದ ಇದನ್ನು ಕೇಳಿ ಬಹಳ ದುಃಖಪಟ್ಟನು.
24ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ.
25ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ” ಅಂದನು.
26ಈ ಮಾತನ್ನು ಕೇಳಿದವರು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು?” ಎಂದು ಕೇಳಲು,
27ಆತನು, “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ” ಅಂದನು.
28ಆಗ ಪೇತ್ರನು, “ಇಗೋ, ನಾವು ನಮ್ಮ ನಮ್ಮ ಮನೆ ಮಾರುಗಳನ್ನು ಬಿಟ್ಟು ನಿನ್ನ ಹಿಂಬಾಲಿಸಿದೆವು” ಎಂದು ಹೇಳಲು,
29ಆತನು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯಕ್ಕಾಗಿ ಮನೆಯನ್ನಾಗಲಿ, ಹೆಂಡತಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಗಳನ್ನಾಗಲಿ, ಮಕ್ಕಳನ್ನಾಗಲಿ ತ್ಯಜಿಸುತ್ತಾನೋ,
30ಅವನಿಗೆ ಈ ಲೋಕದಲ್ಲಿ ಅನೇಕ ಪಾಲು ಹೆಚ್ಚಾಗಿ ಸಿಕ್ಕೇ ಸಿಕ್ಕುತ್ತವೇ. ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು” ಎಂದು ಹೇಳಿದನು.
31ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಅವರಿಗೆ, “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ ಮತ್ತು ಮನುಷ್ಯಕುಮಾರನ ವಿಷಯದಲ್ಲಿ ಪ್ರವಾದಿಗಳು ಬರೆದದ್ದೆಲ್ಲಾ ಅವನಲ್ಲಿ ನೆರವೇರುವುದು.
32ಹೇಗೆಂದರೆ, ಅವನನ್ನು ಅನ್ಯಜನರ ಕೈಗೆ ಒಪ್ಪಿಸುವರು, ಅವರು ಅವನನ್ನು ಅಪಹಾಸ್ಯ ಮಾಡುವರು, ಬೈಯುವರು, ಉಗುಳುವರು,
33ಕೊರಡೆಗಳಿಂದ ಹೊಡೆಯುವರು, ಕೊಲ್ಲುವರು ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.
34ಅವರು ಈ ಸಂಗತಿಗಳಲ್ಲಿ ಒಂದನ್ನಾದರೂ ಗ್ರಹಿಸಲಿಲ್ಲ, ಈ ಮಾತುಗಳು ಅವರಿಗೆ ಮರೆಯಾಗಿದ್ದವು, ಆತನು ಏನು ಹೇಳುತ್ತಿದ್ದಾನೆಂದು ಅವರಿಗೆ ತಿಳಿಯಲಿಲ್ಲ.
35ಆತನು ಯೆರಿಕೋವಿನ ಸಮೀಪಕ್ಕೆ ಬಂದಾಗ ದಾರಿಯ ಬಳಿಯಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದ ಒಬ್ಬ ಕುರುಡನು,
36ಗುಂಪಾಗಿ ಹೋಗುತ್ತಿದ್ದ ಜನರ ಶಬ್ದವನ್ನು ಕೇಳಿ ಇದೇನು ಎಂದು ವಿಚಾರಿಸಿದನು.
37ಅವರು ಅವನಿಗೆ, ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ತಿಳಿಸಿದಾಗ,
38ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಂಡನು.
39ಮುಂದೆ ಹೋಗುತ್ತಿದ್ದವರು ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಮತ್ತಷ್ಟು ಬೇಡಿಕೊಂಡನು.
40ಆಗ ಯೇಸು ನಿಂತು, ಅವನನ್ನು ತನ್ನ ಬಳಿಗೆ ಕರೆತರುವುದಕ್ಕೆ ಅಪ್ಪಣೆಕೊಟ್ಟನು. ಅವನು ಹತ್ತಿರಕ್ಕೆ ಬಂದಾಗ,
41ಆತನು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ?” ಎಂದು ಕೇಳಲು, ಅವನು, “ನನಗೆ ಕಣ್ಣುಕಾಣುವಂತೆ ಮಾಡು ಕರ್ತನೇ” ಅಂದನು.
42ಯೇಸು ಅವನಿಗೆ, “ನಿನಗೆ ಕಣ್ಣುಕಾಣುವಂತಾಗಲಿ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿದೆ” ಎಂದು ಹೇಳಿದನು.
43ತಕ್ಷಣವೇ ಅವನಿಗೆ ಕಣ್ಣು ಕಾಣಿಸಿದವು, ಅವನು ದೇವರನ್ನು ಕೊಂಡಾಡುತ್ತಾ ಯೇಸುವಿನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.

Read ಲೂಕ 18ಲೂಕ 18
Compare ಲೂಕ 18:20-43ಲೂಕ 18:20-43