Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 12

ಲೂಕ 12:4-21

Help us?
Click on verse(s) to share them!
4“ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ, ದೇಹವನ್ನು ಕೊಲ್ಲುವವರಿಗೆ ಭಯಪಡಬೇಡಿ. ಕೊಂದು ಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು.
5ಆದರೆ ನೀವು ಯಾರಿಗೆ ಭಯಪಡಬೇಕೆಂದು ತೋರಿಸುತ್ತೇನೆ, ಕೇಳಿ. ಸತ್ತ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳಾತನಿಗೆ ಹೆದರಬೇಕು. ಹೌದು ಆತನಿಗೇ ಭಯಪಡಬೇಕೆಂದು ನಿಮಗೆ ಒತ್ತಿಹೇಳುತ್ತೇನೆ.
6ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲ? ಆದಾಗ್ಯೂ ಅವುಗಳಲ್ಲಿ ಒಂದನ್ನೂ ದೇವರು ಮರೆತುಹೋಗುವುದಿಲ್ಲ.
7ಅಷ್ಟುಮಾತ್ರವಲ್ಲ, ನಿಮ್ಮ ತಲೆ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ, ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.
8“ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಮನುಷ್ಯಕುಮಾರನು ಸಹ ಆ ವ್ಯಕ್ತಿಯನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು.
9ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು.
10ಮನುಷ್ಯಕುಮಾರನ ವಿರುದ್ಧ ಮಾತನಾಡುವ ಪ್ರತಿಯೊಬ್ಬನಿಗೆ ಕ್ಷಮಾಪಣೆಯಾಗುವುದು. ಆದರೆ ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮಾಪಣೆಯಿಲ್ಲ.
11ಅವರು ನಿಮ್ಮನ್ನು ಸಭಾಮಂದಿರಗಳಿಗೂ, ಸಭಾಮಂದಿರಗಳ ಅಧಿಕಾರಿಗಳ ಎದುರಿಗೂ, ಅಧಿಪತಿಗಳ ಎದುರಿಗೂ, ಹಿಡಿದುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರ ಕೊಡಬೇಕು? ಏನು ಹೇಳಬೇಕು? ಎಂದು ಚಿಂತೆಮಾಡಬೇಡಿರಿ.
12ಏಕೆಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು” ಅಂದನು.
13ಆಗ ಜನರಲ್ಲಿ ಒಬ್ಬನು, “ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡುವಂತೆ ನನ್ನ ಅಣ್ಣನಿಗೆ ಹೇಳು” ಎಂದು ಯೇಸುವನ್ನು ಕೇಳಿಕೊಳ್ಳಲು,
14ಅದಕ್ಕೆ ಯೇಸು, “ಮನುಷ್ಯನೇ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು?” ಎಂದು ಅವನನ್ನು ಕೇಳಿ,
15ಜನರಿಗೆ, “ಎಲ್ಲಾ ದುರಾಶೆಗಳಿಂದಲು ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ” ಎಂದು ಹೇಳಿ, ಒಂದು ಸಾಮ್ಯವನ್ನು ಹೇಳಿದನು.
16ಅದೇನೆಂದರೆ “ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆ ಬೆಳೆಯಿತು.
17ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವುದಕ್ಕೆ ನನಗೆ ಸ್ಥಳವಿಲ್ಲವಲ್ಲಾ?’ ಎಂದು ಆಲೋಚಿಸಿ,
18‘ಒಂದು ಕೆಲಸ ಮಾಡುತ್ತೇನೆ. ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು,
19ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.
20“ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.
21ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ” ಅಂದನು.

Read ಲೂಕ 12ಲೂಕ 12
Compare ಲೂಕ 12:4-21ಲೂಕ 12:4-21