Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಮಾರ್ಕ - ಮಾರ್ಕ 8

ಮಾರ್ಕ 8:6-26

Help us?
Click on verse(s) to share them!
6ಆಗ ಯೇಸು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು, ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ ಅವುಗಳನ್ನು ಮುರಿದು ಜನರಿಗೆ ಹಂಚಲು ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು.
7ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಆತನು ಅವುಗಳಿಗಾಗಿ ದೇವರಿಗೆ ಸ್ತೋತ್ರಮಾಡಿ, ಇವುಗಳನ್ನೂ ಹಂಚಿಕೊಡಿರಿ ಎಂದು ಶಿಷ್ಯರಿಗೆ ಅಪ್ಪಣೆ ಕೊಟ್ಟನು.
8ಜನರು ತಿಂದು ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು.
9ಊಟಮಾಡಿದವರು ಹೆಚ್ಚುಕಡಿಮೆ ನಾಲ್ಕು ಸಾವಿರ ಗಂಡಸರಿದ್ದರು.
10ಆತನು ಅವರನ್ನು ಕಳುಹಿಸಿದ ನಂತರ ಕೂಡಲೆ ತನ್ನ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿ ದಲ್ಮನೂಥ ಸೀಮೆಗೆ ಬಂದನು.
11ತರುವಾಯ ಫರಿಸಾಯರು ಯೇಸುವಿನ ಬಳಿಗೆ ಬಂದು, ಆತನ ಕೂಡ ತರ್ಕಮಾಡಿ, ಆತನನ್ನು ಪರೀಕ್ಷಿಸುವ ಉದ್ದೇಶದಿಂದ, “ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡಿ ತೋರಿಸು” ಎಂದು ಕೇಳಿದರು.
12ಯೇಸು ಅದನ್ನು ಕೇಳಿ ತನ್ನ ಆತ್ಮದಲ್ಲಿ ನಿಟ್ಟುಸಿರುಬಿಟ್ಟು, “ಈ ಸಂತತಿಯು ಸೂಚಕಕಾರ್ಯವನ್ನು ಅಪೇಕ್ಷಿಸುವುದು ಏಕೆ? ನಿಮಗೆ ನಾನು ಸತ್ಯವಾಗಿ ಹೇಳುತ್ತೇನೆ, ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡುವುದಿಲ್ಲ, ಇದು ಖಂಡಿತ” ಎಂದು ಹೇಳಿದನು.
13ಅವರನ್ನು ಬಿಟ್ಟು ತಿರುಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೋದನು.
14ಆದರೆ ಶಿಷ್ಯರು ರೊಟ್ಟಿಯನ್ನು ತೆಗೆದುಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಅವರ ಹತ್ತಿರ ಒಂದು ರೊಟ್ಟಿ ಮಾತ್ರ ಇತ್ತು; ಬೇರೆ ಏನೂ ಇರಲಿಲ್ಲ.
15ಯೇಸು ಅವರಿಗೆ, “ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೀವು ಜಾಗರೂಕತೆಯಿಂದಿರಿ” ಎಂದು ಎಚ್ಚರಿಸಿದನು.
16ಅವರು, “ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು” ಎಂದು ತಮ್ಮೊಳಗೆ ಚರ್ಚಿಸಿಕೊಂಡರು.
17ಆತನು ಅದನ್ನು ತಿಳಿದು, “ರೊಟ್ಟಿಯಿಲ್ಲವಲ್ಲಾ ಎಂದು ನಿಮ್ಮೊಳಗೆ ಚರ್ಚಿಸಿಕೊಳ್ಳುವುದೇಕೆ? ನೀವು ಇನ್ನೂ ಗ್ರಹಿಸಲಿಲ್ಲವೋ? ನಿಮಗೆ ತಿಳಿವಳಿಕೆ ಬರಲಿಲ್ಲವೋ? ನಿಮ್ಮ ಮನಸ್ಸು ಅಷ್ಟು ಕಠಿಣವಾಗಿದೆಯೋ?
18ಕಣ್ಣಿದ್ದು ಕಾಣುವುದಿಲ್ಲವೋ? ಕಿವಿಯಿದ್ದು ಕೇಳುವುದಿಲ್ಲವೋ? ನಿಮಗೆ ನೆನಪಿಲ್ಲವೋ?
19ನಾನುಆ ಐದು ರೊಟ್ಟಿಗಳನ್ನು ಮುರಿದು ಐದು ಸಾವಿರ ಜನರಿಗೆ ಹಂಚಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ತೆಗೆದುಕೊಂಡು ಹೋದಿರಿ?” ಎಂದು ಕೇಳಿದನು. ಅವರು, “ಹನ್ನೆರಡು ಬುಟ್ಟಿಗಳು” ಅಂದರು.
20“ಮತ್ತುಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದು ಹಂಚಿಸಿದ ನಂತರ ಎಷ್ಟು ಪುಟ್ಟಿಗಳನ್ನು ತೆಗೆದುಕೊಂಡು ಹೋದಿರಿ” ಎಂದು ಕೇಳಿದನು. ಅವರು, “ಏಳು ಪುಟ್ಟಿಗಳು” ಅಂದರು.
21ಆಗ ಆತನು ಅವರಿಗೆ, “ನೀವು ಇನ್ನೂ ಗ್ರಹಿಸಲಿಲ್ಲವೋ?” ಎಂದು ಕೇಳಿದನು.
22ಮತ್ತು ಅವರು ಬೇತ್ಸಾಯಿದ ಊರಿಗೆ ಬಂದರು. ಅಲ್ಲಿ ಜನರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದು, ಇವನನ್ನು ಮುಟ್ಟಬೇಕು ಎಂದು ಆತನನ್ನು ಬೇಡಿಕೊಂಡರು.
23ಆತನು ಕುರುಡನ ಕೈ ಹಿಡಿದು ಊರ ಹೊರಗೆ ಕರೆದುಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳು ಹಚ್ಚಿ, ಅವನ ಮೇಲೆ ತನ್ನ ಕೈಗಳನ್ನಿಟ್ಟು, “ನಿನಗೆ ಏನಾದರೂ ಕಾಣುತ್ತದೆಯೋ?” ಎಂದು ಅವನನ್ನು ಕೇಳಿದನು.
24ಅವನು ತಲೆಯೆತ್ತಿ ನೋಡಿ, “ನನಗೆ ಜನರು ಕಾಣುತ್ತಾರೆ; ಆದರೆ ಅವರು ನಡೆದಾಡುವ ಮರಗಳಂತೆ ಕಾಣಿಸುತ್ತಿದ್ದಾರೆ” ಎಂದನು.
25ತನ್ನ ಕೈಗಳನ್ನು ಪುನಃ ಅವನ ಕಣ್ಣುಗಳ ಮೇಲಿಟ್ಟನು; ಆಗ ಅವನು ಕಣ್ಣರಳಿಸಿ ನೋಡಿ ಪೂರ್ಣ ದೃಷ್ಟಿಯನ್ನು ಹೊಂದಿದನು. ಅವನು ನೋಡಲು ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು.
26ತರುವಾಯ ಆತನು, “ನೀನು ಊರೊಳಗೆ ಹೋಗಬೇಡ” ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿಬಿಟ್ಟನು.

Read ಮಾರ್ಕ 8ಮಾರ್ಕ 8
Compare ಮಾರ್ಕ 8:6-26ಮಾರ್ಕ 8:6-26