Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಹೋಶೇ

ಹೋಶೇ 2

Help us?
Click on verse(s) to share them!
1ನಿಮ್ಮ ಸಹೋದರರನ್ನು “ಅಮ್ಮಿ” ಎಂದು, ನಿಮ್ಮ ಸಹೋದರಿಯರನ್ನು “ರುಹಾಮ” ಎಂದು ಕರೆಯಿರಿ.
2“ನಿಮ್ಮ ತಾಯಿಯ ಸಂಗಡ ವಾದಮಾಡಿ; ಅವಳು ನನ್ನ ಹೆಂಡತಿಯಲ್ಲ, ನಾನು ಅವಳ ಗಂಡನಲ್ಲ. ಅವಳು ವ್ಯಭಿಚಾರವನ್ನು ತನ್ನ ಮುಖಸೌಂದರ್ಯದಿಂದ, ವ್ಯಭಿಚಾರದ ಬೆಡಗನ್ನು ತನ್ನ ಸ್ತನಮಧ್ಯದಿಂದ ತೊಲಗಿಸಲಿ.
3ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ಕಿತ್ತು, ಅವಳನ್ನು ಹುಟ್ಟಿದಾಗ ಇದ್ದಂತೆ ಬೆತ್ತಲೆಯಾಗಿ ನಿಲ್ಲಿಸುವೆನು ಅವಳನ್ನು ಬೆಂಗಾಡಾಗಿಸಿ, ಮರುಭೂಮಿಯ ಸ್ಥಿತಿಗೆ ತಂದು, ನೀರಡಿಕೆಯಿಂದ ಸಾಯಿಸುವೆನು.
4ಅವಳ ಮಕ್ಕಳನ್ನೂ ಕರುಣಿಸುವುದಿಲ್ಲ, ಅವರು ವ್ಯಭಿಚಾರದಿಂದ ಹುಟ್ಟಿದ ಮಕ್ಕಳಲ್ಲವೇ.
5ಅವರ ತಾಯಿ ವ್ಯಭಿಚಾರ ಮಾಡಿದ್ದಾಳೆ, ಹೆತ್ತವಳು ನಾಚಿಕೆಗೇಡಿಯಾಗಿ ನಡೆದಿದ್ದಾಳೆ. ‘ತನಗೆ ಬೇಕಾದ ಅನ್ನ ಪಾನಗಳನ್ನೂ, ಉಣ್ಣೆ ನಾರುಗಳನ್ನೂ, ತೈಲವನ್ನೂ ಪಾನಕಗಳನ್ನೂ ತನಗೆ ಕೊಡುವ ಹಾಗೂ ತನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿಸಿಕೊಂಡವರ ಹಿಂದೆ ಹೋಗುವೆನು ಅಂದುಕೊಂಡಿದ್ದಾಳೆ.’”
6ಹೀಗಿರಲು, ಆಹಾ, ನಾನು ಅವಳ ದಾರಿಗೆ ಮುಳ್ಳುಬೇಲಿ ಹಾಕುವೆನು, ತನಗೆ ಬೇಕಾದ ಹಾದಿಗಳನ್ನು ಹಿಡಿಯದಂತೆ ಅವಳಿಗೆ ಅಡ್ಡಗೋಡೆ ಕಟ್ಟುವೆನು.
7ಅವಳು ತನ್ನೊಂದಿಗೆ ವ್ಯಭಿಚಾರ ಮಾಡಿದವರನ್ನು ಅನುಸರಿಸಿ ಹೋದರೂ ಅವರು ಸಿಕ್ಕುವುದಿಲ್ಲ. ಆಗ ಅವಳು, “‘ನಾನು ಮದುವೆಯಾದ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು, ಈಗಿನ ನನ್ನ ಸ್ಥಿತಿಗಿಂತ ಆಗಿನ ಸ್ಥಿತಿಯು ಎಷ್ಟೋ ಲೇಸು’ ಅಂದುಕೊಳ್ಳುವಳು.
8ಅವಳಿಗೆ ಧಾನ್ಯ, ದ್ರಾಕ್ಷಾರಸ, ತೈಲಗಳು ನನ್ನಿಂದ ದೊರೆತವುಗಳೆಂದೂ, ಬಾಳನ ಪೂಜೆಗೆ ಉಪಯೋಗಿಸಿದ ಬೆಳ್ಳಿಬಂಗಾರಗಳು ನನ್ನ ಧಾರಾಳವಾದ ವರವೆಂದೂ ಅವಳಿಗೆ ತಿಳಿಯದು.
9ಆದಕಾರಣ ನಾನು ನನ್ನ ಧಾನ್ಯ, ದ್ರಾಕ್ಷಾರಸಗಳನ್ನು ಆಯಾ ಕಾಲದಲ್ಲಿ ಹಿಂದಕ್ಕೆ ತೆಗೆದುಕೊಳ್ಳುವೆನು, ಅವಳ ಮಾನವನ್ನು ಮರೆಮಾಡುವುದಕ್ಕೆ ನಾನು ಕೊಟ್ಟ ಉಣ್ಣೆ, ನಾರುಗಳನ್ನು ಹಿಂತೆಗೆದುಕೊಳ್ಳುವೆನು.
10ಈಗ ಅವಳೊಂದಿಗೆ ವ್ಯಭಿಚಾರ ಮಾಡಿದವರ ಕಣ್ಣೆದುರಿಗೆ ಅವಳ ನಾಚಿಕೆಗೇಡಿತನವನ್ನು ಬೈಲಿಗೆ ತರುವೆನು; ಅವಳನ್ನು ನನ್ನ ಕೈಯಿಂದ ಯಾರೂ ಬಿಡಿಸರು.
11ನಾನು ಅವಳ ಉಲ್ಲಾಸ, ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಸಬ್ಬತ್ತು, ಮಹೋತ್ಸವ, ಇವುಗಳನ್ನೆಲ್ಲಾ ನಿಲ್ಲಿಸಿಬಿಡುವೆನು.
12ಅವಳು ಯಾವ ಅಂಜೂರ ಮತ್ತು ದ್ರಾಕ್ಷಿಗಳನ್ನು ‘ಇವು ನನ್ನೊಂದಿಗೆ ವ್ಯಭಿಚಾರ ಮಾಡಿದವರಿಂದಾದ ಪ್ರತಿಫಲ’ ಅಂದುಕೊಂಡಳೋ, ಅವುಗಳನ್ನು ನಾನು ಹಾಳುಮಾಡಿ ಕಾಡುಗಿಡಗಳ ಗತಿಗೆ ತರುವೆನು; ಅವು ಭೂಜಂತುಗಳಿಗೆ ಆಹಾರವಾಗುವವು.
13ಅವಳು ನನ್ನನ್ನು ಮರೆತು ಮೂಗುತಿ ಮೊದಲಾದ ಒಡವೆಗಳಿಂದ ತನ್ನನ್ನು ಶೃಂಗರಿಸಿಕೊಂಡು, ವ್ಯಭಿಚಾರಿಗಳ ಹಿಂದೆ ಹೋಗಿ ಬಾಳ್ ದೇವತೆಗಳ ಉತ್ಸವ ದಿನಗಳಲ್ಲಿ ಧೂಪಹಾಕಿದ್ದಕ್ಕೆ ನಾನು ಅವಳನ್ನು ದಂಡಿಸುವೆನು, ಇದು ಯೆಹೋವನ ನುಡಿ.”
14“ಆಹಾ, ನಾನು ಅವಳನ್ನು ಒಲಿಸಿ, ಅಡವಿಗೆ ಕರೆದುಕೊಂಡು ಹೋಗಿ, ಅವಳೊಂದಿಗೆ ಹೃದಯಂಗಮವಾಗಿ ಮಾತನಾಡುವೆನು.
15ಅವಳ ದ್ರಾಕ್ಷಿಯ ತೋಟಗಳನ್ನು ಅಲ್ಲಿರುವಾಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ ತಗ್ಗನ್ನೇ ಅವಳ ಸುಖ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು. ಯೌವನದಲ್ಲಿ, ಐಗುಪ್ತದೇಶದೊಳಗಿಂದ ಹೊರಟುಬಂದ ದಿನದಲ್ಲಿ ಇದ್ದಂತೆ ಅಲ್ಲಿ ಆಕೆಯು ಮುಳುಗುವಳು.”
16ಯೆಹೋವನು ಇಂತೆನ್ನುತ್ತಾನೆ, “ಆ ಕಾಲದಲ್ಲಿ ನೀನು ನನ್ನನ್ನು ಇನ್ನು ‘ಬಾಳೀ’ ಅನ್ನದೆ ‘ಈಶೀ’ ಅನ್ನುವಿ.
17ನಾನು ಬಾಳ್ ದೇವತೆಗಳ ಹೆಸರುಗಳನ್ನು ನಿನ್ನ ಬಾಯೊಳಗಿಂದ ತೊಲಗಿಸುವೆನು; ಅವುಗಳನ್ನು ಇನ್ನು ಹೆಸರಿಸದಿರುವಿ.
18ಆ ಕಾಲದಲ್ಲಿ ನಾನು ನನ್ನ ಜನರಿಗಾಗಿ ಭೂಜಂತುಗಳಿಗೂ, ಆಕಾಶದ ಪಕ್ಷಿಗಳಿಗೂ, ನೆಲದ ಕ್ರಿಮಿಕೀಟಗಳಿಗೂ ನಿಬಂಧನೆಮಾಡಿ ವಿಧಿಸಿ ಬಿಲ್ಲು, ಕತ್ತಿ ಮತ್ತು ಕಾಳಗಗಳನ್ನು ದೇಶದಲ್ಲಿ ನಿಲ್ಲದಂತೆ ಧ್ವಂಸಪಡಿಸಿ, ನನ್ನ ಜನರು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.

19ನಾನು ನಿನ್ನನ್ನು ಶಾಶ್ವತವಾಗಿ ವರಿಸುವೆನು; ಹೌದು, ನೀತಿ, ನ್ಯಾಯ, ಪ್ರೀತಿ ಮತ್ತು ದಯೆಗಳಿಂದ ನಿನ್ನನ್ನು ವರಿಸುವೆನು.
20ನಾನು ನಿನ್ನನ್ನು ನಂಬಿಕೆಯಿಂದ ವರಿಸಲು ನೀನು ಯೆಹೋವನಾದ ನನ್ನನ್ನು ತಿಳಿದುಕೊಳ್ಳುವೆ.”
21ಆ ದಿನದಲ್ಲಿ ಯೆಹೋವನು, “ಆ ಕಾಲದಲ್ಲಿ ನಾನು ಒಲುಮೆ ತೋರಿಸುವೆನು. ಬೇಡುವ ಆಕಾಶಕ್ಕೆ ನಾನು ಒಲಿಯಲು, ಬೇಡುವ ಭೂಮಿಗೆ ಅದು ಒಲಿಯುವುದು.
22ಬೇಡುವ ಧಾನ್ಯ, ದ್ರಾಕ್ಷಾರಸ, ತೈಲಗಳಿಗೆ ಭೂಮಿಯು ಒಲಿಯುವುದು, ಬೇಡುವ ಇಜ್ರೇಲಿಗೆ ಅವು ಒಲಿಯುವವು.
23ನಾನು ದೇಶದಲ್ಲಿ ಇಜ್ರೇಲನ್ನು ನನಗಾಗಿ ಬಿತ್ತಿಕೊಳ್ಳುವೆನು, ಲೋ ರುಹಾಮಳಿಗೆ ವಾತ್ಸಲ್ಯವನ್ನು ತೋರಿಸುವೆನು; ಲೋ ಅಮ್ಮಿಗೆ ‘ನೀನು ನನ್ನ ಪ್ರಜೆಯೇ’ ಎಂದು ಹೇಳುವೆನು. ಅವರು ನನ್ನನ್ನು ‘ನನ್ನ ದೇವರೇ’ ಎಂದು ಭಜಿಸುವರು” ಎಂದು ನುಡಿಯುತ್ತಾನೆ.