Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಹೋಶೇ

ಹೋಶೇ 13

Help us?
Click on verse(s) to share them!
1ಪೂರ್ವದಲ್ಲಿ ಎಫ್ರಾಯೀಮು ನುಡಿದ ಮಾತಿಗೆ ಎಲ್ಲರೂ ನಡುಗಿದರು, ಅದು ಇಸ್ರಾಯೇಲಿನಲ್ಲಿ ಉನ್ನತಸ್ಥಿತಿಗೆ ಬಂದಿತ್ತು; ಆದರೆ ಬಾಳ್ ದೇವತೆಯ ವಿಷಯದಲ್ಲಿ ದೋಷಿಯಾದಾಗ ನಾಶವಾಯಿತು.
2ಈಗ ಎಫ್ರಾಯೀಮ್ಯರು ಹೆಚ್ಚೆಚ್ಚಾಗಿ ಪಾಪಮಾಡುತ್ತಾರೆ, ತಮ್ಮ ಬೆಳ್ಳಿಯಿಂದ ಸ್ವಬುದ್ಧಿಗೆ ತಕ್ಕ ಎರಕದ ಬೊಂಬೆಗಳನ್ನು ರೂಪಿಸಿಕೊಂಡಿದ್ದಾರೆ; ಅವೆಲ್ಲಾ ಶಿಲ್ಪಿಗಳ ಕೈಕೆಲಸವೇ; ಇಂಥವುಗಳನ್ನು ಮಾತನಾಡಿಸುತ್ತಾರೆ, ಮನುಷ್ಯರಾದ ಪೂಜಾರಿಗಳು ಪಶುವಿನ ಮೂರ್ತಿಗಳನ್ನು ಮುದ್ದಿಸುತ್ತಾರೆ.
3ಹೀಗಿರಲು ಅವರು ಪ್ರಾತಃಕಾಲದ ಮೋಡದ ಹಾಗೆ, ಬೇಗನೆ ಮಾಯವಾಗುವ ಇಬ್ಬನಿಯಂತೆಯೂ, ಬಿರುಗಾಳಿಯು ಕಣದಿಂದ ಬಡಿದುಕೊಂಡುಹೋಗುವ ಹೊಟ್ಟಿನ ಹಾಗೂ, ಚಿಮಿಣಿಯಿಂದ ಹೊರಡುವ ಹೊಗೆಯೋಪಾದಿಯಲ್ಲಿಯೂ ಇರುವರು.
4ನಾನಾದರೋ ನೀನು ಐಗುಪ್ತ ದೇಶದಲ್ಲಿದ್ದ ಕಾಲದಿಂದ ಯೆಹೋವನೆಂಬ ನಿನ್ನ ದೇವರಾಗಿದ್ದೇನೆ; ನನ್ನ ಹೊರತು ಯಾವ ದೇವರೂ ನಿನಗೆ ಗೊತ್ತಿಲ್ಲ, ನನ್ನ ಹೊರತು ಯಾವ ರಕ್ಷಕನೂ ಇಲ್ಲ.
5ಅರಣ್ಯದಲ್ಲಿ, ಘೋರ ಮರುಭೂಮಿಯಲ್ಲಿ ನಿನ್ನನ್ನು ಲಕ್ಷಿಸಿದವನು ನಾನೇ.
6ಆಹಾರವು ನಿನ್ನವರಿಗೆ ಸಿಕ್ಕಿದಾಗ ಹೊಟ್ಟೆತುಂಬಿಸಿಕೊಂಡರು; ಹೊಟ್ಟೆ ತುಂಬಿದಾಗ ಅವರ ಮನಸ್ಸು ಉಬ್ಬಿಕೊಂಡಿತು; ಇದರಿಂದ ನನ್ನನ್ನು ಮರೆತುಬಿಟ್ಟರು.
7ಆದಕಾರಣ ನಾನು ಅವರ ಪಾಲಿಗೆ ಸಿಂಹ; ಚಿರತೆಯ ಹಾಗೆ ದಾರಿಯ ಮಗ್ಗುಲಲ್ಲಿ ಹೊಂಚುಹಾಕುವೆನು.
8ಮರಿಗಳನ್ನು ಕಳಕೊಂಡ ಕರಡಿಯಂತೆ ಅವರಿಗೆ ಎದುರು ಬಿದ್ದು ಅವರ ಎದೆಯನ್ನು ಸೀಳಿಬಿಡುವೆನು; ಅಲ್ಲೇ ಮೃಗರಾಜನಂತೆ ಅವರನ್ನು ನುಂಗುವೆನು; ಭೂಜಂತುಗಳು ಅವರನ್ನು ಹರಿದುಬಿಡುವವು.
9ಇಸ್ರಾಯೇಲೇ, ನಾನು ನಿನ್ನನ್ನು ನಾಶಮಾಡುವೆನು, ಯಾರು ನಿನ್ನನ್ನು ರಕ್ಷಿಸುವರು?
10ಈಗ ನಿನ್ನ ಅರಸನು ಎಲ್ಲಿ? ನಿನ್ನ ಪಟ್ಟಣಗಳಲ್ಲೆಲ್ಲಾ ನಿನ್ನವರನ್ನು ಉದ್ಧರಿಸುವನೋ? ನನಗೆ ರಾಜನನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸು ಎಂದು ನನ್ನನ್ನು ಕೇಳಿಕೊಂಡಿಯಷ್ಟೆ; ನಿನ್ನನ್ನು ರಕ್ಷಿಸಬಲ್ಲ ನಗರಪಾಲಕರು ಎಲ್ಲಿ?
11ನಾನು ಕೋಪಗೊಂಡು ರಾಜರನ್ನು ಕೊಟ್ಟಿದ್ದೇನೆ; ಕೋಪೋದ್ರೇಕನಾಗಿ ಅವರನ್ನು ತೆಗೆದು ಹಾಕಿದ್ದೇನೆ.
12ಎಫ್ರಾಯೀಮಿನ ಅಧರ್ಮವು ಗಂಟುಕಟ್ಟಿದೆ, ಅದರ ಪಾಪವು ಭದ್ರಪಡಿಸಿದೆ.
13ಅದಕ್ಕೆ ಪ್ರಸವವೇದನೆಯಾಗುತ್ತಾ ಇದೆ; ಅದು ಮಂಕು ಮಗುವಿನಂತಿದೆ; ಈ ಸಮಯವು ಗರ್ಭದ್ವಾರದಲ್ಲಿ ನಿಲ್ಲತಕ್ಕ ಸಮಯವಲ್ಲ.
14ನಾನು ಅದನ್ನು ಪಾತಾಳದ ಅಧಿಕಾರದಿಂದ ಬಿಡಿಸಲೋ? ಮರಣದಿಂದ ಉದ್ಧರಿಸಲೋ? ಮರಣವೇ, ನಿನ್ನ ಉಪದ್ರವಗಳಲ್ಲಿ? ಪಾತಾಳವೇ, ನೀನು ಮಾಡುವ ನಾಶನವೆಲ್ಲಿ? ಕನಿಕರವು ನನಗೆ ಕಾಣಿಸದು.
15ಎಫ್ರಾಯೀಮು ತನ್ನ ಸಹೋದರರಲ್ಲಿ ಫಲಸಮೃದ್ಧವಾಗಿದ್ದರೂ, ಕಾಡಿನಿಂದ ಯೆಹೋವನು ಬೀಸಮಾಡುವ ಮೂಡಣ ಗಾಳಿಯು ಬರಲು ಅದರ ಬುಗ್ಗೆಯು ಬತ್ತುವುದು, ಅದರ ಒರತೆಯು ಒಣಗುವುದು. ಶತ್ರುವು ಅವರ ಪ್ರಿಯವಸ್ತುಗಳ ನಿಧಿಯನ್ನು ಸೂರೆಮಾಡುವನು.
16ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದುದರಿಂದ ತನ್ನ ದೋಷಫಲವನ್ನು ಅನುಭವಿಸಲೇ ಬೇಕು; ಅದರ ಜನರು ಖಡ್ಗದಿಂದ ಹತರಾಗುವರು; ವೈರಿಗಳು ಅಲ್ಲಿನ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.