Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 9

ಲೂಕ 9:16-37

Help us?
Click on verse(s) to share them!
16ಆ ಮೇಲೆ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ, ಮುರಿದು ಶಿಷ್ಯರ ಕೈಗೆ ಕೊಟ್ಟು, ಇದನ್ನು ಜನರ ಗುಂಪಿಗೆ ಹಂಚಿರಿ ಅಂದನು.
17ಅವರೆಲ್ಲರು ಊಟಮಾಡಿ ತೃಪ್ತರಾದರು; ನಂತರ ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು.
18ಒಂದು ದಿನ ಯೇಸುವು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಅನಂತರ ಆತನು ಅವರಿಗೆ, “ಜನರು ನನ್ನನ್ನು ಕುರಿತು ಏನು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಲು,
19ಅವರು, “ನಿನ್ನನ್ನು ಸ್ನಾನಿಕನಾದ ಯೋಹಾನನು ಎಂದೂ, ಕೆಲವರು ಎಲೀಯನು ಎಂದೂ, ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆ ಎಂದು ಅನ್ನುತ್ತಿದ್ದಾರೆ” ಎಂದು ಹೇಳಿದರು.
20ಯೇಸು ಅವರನ್ನು, “ಆದರೆ ನೀವು ನನ್ನನ್ನು ಯಾರು ಅನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ದೇವರಿಂದ ಬರಬೇಕಾಗಿರುವ ಕ್ರಿಸ್ತನು” ಎಂದು ಉತ್ತರ ಕೊಟ್ಟನು.
21ಆಗ ಯೇಸುವು, ಇದನ್ನು ಯಾರಿಗೂ ಹೇಳಬೇಡಿರಿ ಎಂದು ಬಹು ಖಂಡಿತವಾಗಿ ಅವರಿಗೆ ಅಪ್ಪಣೆ ಕೊಟ್ಟನು.
22ಯೇಸು ಅವರಿಗೆ, “ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕರಿಸಲ್ಪಟ್ಟು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ” ಎಂದು ಹೇಳಿದನು.
23ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ತಾನು ನಿರಾಕರಿಸಿ ಪ್ರತಿದಿನವು ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
24ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.
25ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನನ್ನೇ ತಾನು ಹಾಳುಮಾಡಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು?
26ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ, ಅವನಿಗೆ ಮನುಷ್ಯಕುಮಾರನು ತನಗೂ ತನ್ನ ತಂದೆಗೂ ಪರಿಶುದ್ಧ ದೂತರಿಗೂ ಇರುವ ಮಹಾಪ್ರಭಾವದೊಡನೆ ಬರುವಾಗ ಅವನ ಕುರಿತು ನಾಚಿಕೊಳ್ಳುವನು.
27ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತಿರುವವರೊಳಗೆ ಕೆಲವರು ದೇವರ ರಾಜ್ಯವನ್ನು ನೋಡುವ ತನಕ ಮರಣಹೊಂದುವುದಿಲ್ಲ” ಎಂದು ಹೇಳಿದನು.
28ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರೆದುಕೊಂಡು ಪ್ರಾರ್ಥನೆಮಾಡುವುದಕ್ಕೆ ಬೆಟ್ಟವನ್ನು ಹತ್ತಿದನು.
29ಆತನು ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬದಲಾಯಿತು. ಆತನ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂದಿತು.
30ಇದಲ್ಲದೆ ಇಬ್ಬರು ಪುರುಷರು ಆತನ ಸಂಗಡ ಮಾತನಾಡುತ್ತಿದ್ದರು. ಅವರು ಯಾರೆಂದರೆ ಮೋಶೆಯೂ ಎಲೀಯನೂ.
31ಅವರು ವೈಭವದೊಡನೆ ಕಾಣಿಸಿಕೊಂಡು ಯೆರೂಸಲೇಮಿನಲ್ಲಿ ಆತನು ಹೊಂದಬೇಕಾಗಿದ್ದ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.
32ಇಷ್ಟರಲ್ಲಿ ಪೇತ್ರನಿಗೂ ಅವನ ಸಂಗಡ ಇದ್ದವರಿಗೂ ನಿದ್ರೆಯಿಂದ ಮೈಭಾರವಾಗಿತ್ತು. ಆದರೆ ಎಚ್ಚರವಾದ ಮೇಲೆ ಅವರು ಆತನ ಮಹಿಮೆಯನ್ನೂ ಆತನ ಸಂಗಡ ನಿಂತಿದ್ದ ಆ ಇಬ್ಬರು ಪುರುಷರನ್ನೂ ಕಂಡರು.
33ಅವರು ಯೇಸುವನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ, “ಗುರುವೇ ನಾವು ಇಲ್ಲೇ ಇರುವುದು ಒಳ್ಳೆಯದು, ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು ಎಲೀಯನಿಗೊಂದು ಹಾಗೂ ಮೋಶೆಗೊಂದು” ಎಂದು ಹೇಳಿದನು. ತಾನು ಏನು ಹೇಳುತ್ತಿದ್ದೇನೆಂದು ತನಗೇ ಗೊತ್ತಾಗಲಿಲ್ಲ.
34ಅವನು ಇದನ್ನು ಹೇಳುತ್ತಿರುವಲ್ಲಿ ಮೋಡವು ಬಂದು ಅವರ ಮೇಲೆ ಕವಿಯಿತು. ಮೋಡವು ಅವರನ್ನು ಆವರಿಸಿಕೊಂಡಾಗ ಅವರು ಹೆದರಿದರು.
35ಆಗ ಆ ಮೋಡದೊಳಗಿಂದ, “ಈತನು ನನ್ನ ಮಗನು. ನಾನು ಆರಿಸಿಕೊಂಡವನು, ಈತನ ಮಾತನ್ನು ಕೇಳಿರಿ” ಎಂಬ ವಾಣಿ ಆಯಿತು.
36ಆ ವಾಣಿ ಆದ ಮೇಲೆ ಯೇಸುವನ್ನು ಮಾತ್ರ ಕಂಡರು. ತಾವು ಕಂಡ ಈ ಸಂಗತಿಗಳಲ್ಲಿ ಒಂದನ್ನಾದರೂ ಆ ದಿನಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು.
37ಮರುದಿನ ಅವರು ಬೆಟ್ಟದಿಂದ ಇಳಿದು ಬಂದಾಗ ಜನರ ದೊಡ್ಡ ಗುಂಪೊಂದು ಆತನನ್ನು ಎದುರುಗೊಂಡಿತು.

Read ಲೂಕ 9ಲೂಕ 9
Compare ಲೂಕ 9:16-37ಲೂಕ 9:16-37