Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ನ್ಯಾಯ - ನ್ಯಾಯ 11

ನ್ಯಾಯ 11:21-40

Help us?
Click on verse(s) to share them!
21ಇಸ್ರಾಯೇಲರ ದೇವರಾದ ಯೆಹೋವನು ಸೀಹೋನನನ್ನೂ, ಅವನ ಜನರೆಲ್ಲರನ್ನೂ ಇಸ್ರಾಯೇಲರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು, ಅವರ ದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು.
22ಹೀಗೆ ಇಸ್ರಾಯೇಲರು ಅರ್ನೋನಿನಿಂದ ಯಬ್ಬೋಕಿನವರೆಗೂ, ಅರಣ್ಯದಿಂದ ಯೊರ್ದನಿನವರೆಗೂ ಇದ್ದ ಅಮೋರಿಯರ ಪ್ರಾಂತ್ಯವನ್ನೆಲ್ಲಾ ವಶಮಾಡಿಕೊಂಡರು.
23ಇಸ್ರಾಯೇಲರ ದೇವರಾದ ಯೆಹೋವನು ಈ ದೇಶವನ್ನು ಅಮೋರಿಯರಿಂದ ತೆಗೆದು ತನ್ನ ಪ್ರಜೆಗಳಾದ ಇಸ್ರಾಯೇಲರಿಗೆ ಕೊಟ್ಟ ಮೇಲೆ ನೀನು ಅದನ್ನು ತೆಗೆದುಕೊಳ್ಳುವುದು ಹೇಗೆ?
24ನಿನ್ನ ದೇವನಾದ ಕೆಮೋಷನು ನಿನಗೆ ಕೊಡುವ ದೇಶಗಳನ್ನು ನೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲವೋ? ಹಾಗೆಯೇ ನಮ್ಮ ದೇವರಾದ ಯೆಹೋವನು ನಮಗೆ ಒಪ್ಪಿಸಿಕೊಡುವುದನ್ನು ನಾವು ಸ್ವಾಧೀನಪಡಿಸಿಕೊಳ್ಳುವುದು ನ್ಯಾಯವಾಗಿದೆ.
25ಚಿಪ್ಪೋರನ ಮಗನೂ ಮೋವಾಬ್ಯರ ಅರಸನೂ ಆದ ಬಾಲಾಕನಿಗಿಂತ ನೀನು ಹೆಚ್ಚಿನವನೋ? ಅವನು ಇಸ್ರಾಯೇಲರೊಡನೆ ಎಂದಾದರೂ ವಿವಾದಮಾಡಿದನೋ? ಅಥವಾ ಅವರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನೋ?
26ಇಸ್ರಾಯೇಲರು ಮುನ್ನೂರು ವರ್ಷಗಳಿಂದ ಹೆಷ್ಬೋನ್, ಅರೋಯೇರ್ ಎಂಬ ಪಟ್ಟಣಗಳಲ್ಲಿಯೂ, ಅವುಗಳ ಗ್ರಾಮಗಳಲ್ಲಿಯೂ, ಅರ್ನೋನ್ ತೀರದ ಎಲ್ಲಾ ಪಟ್ಟಣಗಳಲ್ಲಿಯೂ ವಾಸಿಸುತ್ತಿದ್ದಾರಲ್ಲಾ. ಇಷ್ಟು ದಿನಗಳವರೆಗೆ ನೀನು ಅದನ್ನು ಬಿಡಿಸಿಕೊಳ್ಳದೆ ಇದ್ದದ್ದೇಕೆ?
27ನಾನು ನಿನಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ. ನೀನು ಈಗ ನನಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದರಿಂದ ನೀನೇ ಅನ್ಯಾಯ ಮಾಡಿದ ಹಾಗಾಯಿತು. ನ್ಯಾಯಸ್ಥಾಪಕನಾದ ಯೆಹೋವನೇ ಈ ಹೊತ್ತು ಇಸ್ರಾಯೇಲರ ಮತ್ತು ಅಮ್ಮೋನಿಯರ ಮಧ್ಯದಲ್ಲಿ ನ್ಯಾಯತೀರಿಸಲಿ” ಎಂದು ಹೇಳಿಸಿದನು.
28ಆದರೆ ಯೆಪ್ತಾಹನು ಹೇಳಿಕಳುಹಿಸಿದ ಮಾತುಗಳಿಗೆ ಅಮ್ಮೋನಿಯರ ಅರಸನು ಕಿವಿಗೊಡಲಿಲ್ಲ.
29ಆಗ ಯೆಹೋವನ ಆತ್ಮವು ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್ ಪ್ರಾಂತ್ಯ, ಮನಸ್ಸೆಯ ದೇಶ ಇವುಗಳಲ್ಲಿ ಸಂಚರಿಸಿ ತಿರುಗಿ ಗಿಲ್ಯಾದಿನ ಮಿಚ್ಪೆಗೆ ಬಂದು, ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು.
30ಇದಲ್ಲದೆ ಅವನು ಯೆಹೋವನಿಗೆ, “ನೀನು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವುದಾದರೆ
31ನಾನು ಸುರಕ್ಷಿತವಾಗಿ ಮನೆಗೆ ಸೇರುವಾಗ ನನ್ನನ್ನು ಎದುರುಗೊಳ್ಳುವುದಕ್ಕಾಗಿ ನನ್ನ ಮನೆಯ ಬಾಗಿಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ನಿನಗೋಸ್ಕರ ಯಜ್ಞವಾಗಿ ಅರ್ಪಿಸುವೆನು” ಎಂದು ಹರಕೆಮಾಡಿದನು.
32ಯೆಪ್ತಾಹನು ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗಲು ಯೆಹೋವನು ಅವರನ್ನು ಅವನ ಕೈಗೆ ಒಪ್ಪಿಸಿದನು.
33ಅವನು ಅವರನ್ನು ಸೋಲಿಸಿ ಅರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಆಬೇಲ್ ಕೆರಾಮೀಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿಬಿಟ್ಟನು. ಹೀಗೆ ದೊಡ್ಡ ಜಯವಾಗಿ ಅಮ್ಮೋನಿಯರು ಇಸ್ರಾಯೇಲರ ಮುಂದೆ ತಗ್ಗಿಸಲ್ಪಟ್ಟರು.
34ಯೆಪ್ತಾಹನು ಮಿಚ್ಪೆಯಲ್ಲಿದ್ದ ತನ್ನ ಮನೆಯನ್ನು ಸಮೀಪಿಸಿದಾಗ ಅವನ ಮಗಳು ದಮ್ಮಡಿಬಡಿಯುತ್ತಾ, ನೃತ್ಯಮಾಡುತ್ತಾ ಅವನನ್ನು ಎದುರುಗೊಳ್ಳುವುದಕ್ಕಾಗಿ ಬಂದಳು. ಆಕೆಯು ಅವನಿಗೆ ಒಬ್ಬಳೇ ಮಗಳಾಗಿದ್ದಳು. ಆಕೆಯ ಹೊರತು ಅವನಿಗೆ ಬೇರೆ ಗಂಡು ಹೆಣ್ಣು ಮಕ್ಕಳೇ ಇರಲಿಲ್ಲ.
35ಆಕೆಯನ್ನು ಕಾಣುತ್ತಲೇ ಅವನು ತನ್ನ ಬಟ್ಟೆಯನ್ನು ಹರಿದುಕೊಂಡು, “ಅಯ್ಯೋ, ನನ್ನ ಮಗಳೇ, ನೀನು ನನ್ನನ್ನು ಕುಗ್ಗಿಸೇಬಿಟ್ಟೆಯಲ್ಲಾ; ನನಗೆ ಮಹಾಸಂಕಟವನ್ನು ಉಂಟುಮಾಡಿದಿ. ನಾನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾರೆನು” ಎಂದು ಕೂಗಿಕೊಳ್ಳಲು
36ಆಕೆಯು ಅವನಿಗೆ, “ನನ್ನ ತಂದೆಯೇ, ನೀನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ ಮೇಲೆ ಆತನು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿತೀರಿಸಿದ್ದರಿಂದ ನಿನ್ನ ಬಾಯಿಂದ ಹೊರಟದ್ದನ್ನೇ ನೆರವೇರಿಸು” ಎಂದಳು.
37ಆಕೆಯು ತಿರುಗಿ ತನ್ನ ತಂದೆಗೆ, “ನನ್ನ ಬಿನ್ನಹವನ್ನು ಲಾಲಿಸು; ಎರಡು ತಿಂಗಳುಗಳ ಕಾಲ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಬೆಟ್ಟದ ಪ್ರದೇಶಗಳಿಗೆ ಹೋಗಿ, ನನ್ನ ಕನ್ಯಾವಸ್ಥೆಗೋಸ್ಕರ ಗೋಳಾಡುವೆನು” ಎಂದಳು.
38ಅವನು, “ಎರಡು ತಿಂಗಳ ತನಕ ಹೋಗಿ ಬಾ” ಎಂದು ಕಳುಹಿಸಿದನು. ಆಕೆಯು ಸಖಿಯರ ಸಹಿತವಾಗಿ ಬೆಟ್ಟದ ಪ್ರದೇಶಗಳಿಗೆ ಹೋಗಿ ತನ್ನ ಕನ್ಯಾವಸ್ಥೆಗೋಸ್ಕರ ಗೋಳಾಡಿದಳು.
39ಎರಡು ತಿಂಗಳು ಕಳೆದ ನಂತರ ಆಕೆ ಪುನಃ ತಂದೆಯ ಹತ್ತಿರ ಬರಲು ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆಯು ಪುರುಷನನ್ನರಿಯದವಳು.
40ಇಸ್ರಾಯೇಲ್ಯರ ಹೆಣ್ಣುಮಕ್ಕಳು ಪ್ರತಿವರ್ಷದಲ್ಲಿಯೂ ನಾಲ್ಕು ದಿನ ಗಿಲ್ಯಾದ್ಯನಾದ ಯೆಪ್ತಾಹನ ಮಗಳನ್ನು ವರ್ಣಿಸುತ್ತಾರೆ. ಇದು ಅವರಲ್ಲಿ ಒಂದು ಪದ್ಧತಿ.

Read ನ್ಯಾಯ 11ನ್ಯಾಯ 11
Compare ನ್ಯಾಯ 11:21-40ನ್ಯಾಯ 11:21-40