1ಬೀಜಹೊಡಿಸಿಕೊಂಡವರು ಅಥವಾ ರಹಸ್ಯಾಂಗವನ್ನು ಛೇದಿಸಿಕೊಂಡವರು ಯೆಹೋವನ ಸಭೆಯಲ್ಲಿ ಸೇರಬಾರದು.
2ಅನೈತಿಕ ಸಂಬಂಧದಿಂದ ಹುಟ್ಟಿದ ಸಂತತಿಯವರು, ಹತ್ತನೆಯ ತಲೆಯವರಾದರೂ ಅವರು ಯೆಹೋವನ ಸಭೆಗೆ ಸೇರಬಾರದು.
3ಅಮ್ಮೋನಿಯರಾಗಲಿ ಅಥವಾ ಮೋವಾಬ್ಯರಾಗಲಿ ಯೆಹೋವನ ಸಭೆಗೆ ಎಂದೆಂದಿಗೂ ಸೇರಬಾರದು. ಅವರ ಸಂತತಿಯವರು ಹತ್ತನೆಯ ತಲೆಯವರಾದರೂ ಯೆಹೋವನ ಸಭೆಗೆ ಸೇರಬಾರದು.
4ಯಾಕೆಂದರೆ ನೀವು ಐಗುಪ್ತದೇಶದಿಂದ ಬಂದಾಗ ಅಮ್ಮೋನಿಯರು ಅನ್ನಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; ಮೋವಾಬ್ಯರು ನಿಮ್ಮನ್ನು ಶಪಿಸುವುದಕ್ಕಾಗಿ ಬೆಯೋರನ ಮಗನಾದ ಬಿಳಾಮನಿಗೆ ಹಣಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾಮಿನ ಪೆತೋರ್ ಊರಿನಿಂದ ಅವನನ್ನು ಕರೆಯಿಸಿದರು.
5ಆದರೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸದೆ ಅವನಿಂದ ಶಾಪವನ್ನು ನುಡಿಸದೆ ಆಶೀರ್ವಾದವನ್ನೇ ಹೇಳಿಸಿದನು.
6ನಿಮ್ಮ ಜೀವಮಾನಕಾಲವೆಲ್ಲಾ ಅವರ ಯೋಗಕ್ಷೇಮವನ್ನು ಬಯಸಲೇ ಬಾರದು.
7ಎದೋಮ್ಯರನ್ನು ಸಂಪೂರ್ಣವಾಗಿ ನಿಷೇಧಿಸಬಾರದು; ಅವರು ನಮ್ಮ ಹತ್ತಿರ ಸಂಬಂಧಿಕರು. ಐಗುಪ್ತ್ಯರನ್ನೂ ಸಂಪೂರ್ಣವಾಗಿ ನಿಷೇಧಿಸಬಾರದು; ಅವರ ದೇಶದಲ್ಲಿ ನೀವು ಪ್ರವಾಸಿಗಳಾಗಿದ್ದಿರಲ್ಲಾ.
8ಅವರ ಸಂತತಿಯವರಲ್ಲಿ ಮೂರನೆಯ ತಲೆಯವರು ಯೆಹೋವನ ಸಭೆಗೆ ಸೇರಬಹುದು.
9ನೀವು ಶತ್ರುಗಳೊಡನೆ ಯುದ್ಧಕ್ಕೆ ಹೊರಟು ಪಾಳೆಯದಲ್ಲಿರುವಾಗ ಯಾವ ಅಶುದ್ಧ ಕಾರ್ಯಗಳು ನಡೆಯದಂತೆ ಎಚ್ಚರದಿಂದಿರಬೇಕು.
10ರಾತ್ರಿಕಾಲದಲ್ಲಿ ವೀರ್ಯಸ್ಖಲನದಿಂದ ಯಾವನಾದರೂ ಅಶುದ್ಧನಾದರೆ, ಅವನು ಪಾಳೆಯದೊಳಗೆ ಇರದೆ ಹೊರಗೆ ಇರಬೇಕು.
11ಅವನು ಸಂಜೆಯ ವೇಳೆಯಲ್ಲಿ ಸ್ನಾನಮಾಡಿ ಸೂರ್ಯನು ಮುಳುಗಿದ ಮೇಲೆ ಪಾಳೆಯದೊಳಗೆ ಬರಬಹುದು.
12ಪಾಳೆಯದ ಹೊರಗೆ ಪಾಯಖಾನೆಗಾಗಿ ಒಂದು ಸ್ಥಳವನ್ನು ಗೊತ್ತುಮಾಡಬೇಕು.
13ಯುದ್ಧದ ಸಾಮಾನುಗಳಲ್ಲದೆ ನಿಮ್ಮ ಬಳಿಯಲ್ಲಿ ಸಲಿಕೆ ಇರಬೇಕು; ನೀವು ಬಹಿರ್ಭೂಮಿಗೆ ಹೋದಾಗ ಆ ಸಲಿಕೆಯಿಂದ ಅಗೆದು ಕಲ್ಮಷವನ್ನು ಮುಚ್ಚಿಬಿಡಬೇಕು.
14ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಕಾಪಾಡುವುದಕ್ಕೂ, ಶತ್ರುಗಳನ್ನು ನಿಮ್ಮ ಕೈವಶಮಾಡುವುದಕ್ಕೂ ನಿಮ್ಮ ಪಾಳೆಯದೊಳಗೆ ಸಂಚಾರಮಾಡುತ್ತಾನಲ್ಲಾ; ಆದುದರಿಂದ ಪಾಳೆಯವು ನಿಮರ್ಲವಾಗಿರಬೇಕು; ನಿಮ್ಮಲ್ಲಿ ಅಶುದ್ಧವೇನಾದರೂ ಕಂಡುಬಂದರೆ ಆತನು ನಿಮ್ಮನ್ನು ಬಿಟ್ಟುಹೋದಾನು.
15ತಪ್ಪಿಸಿಕೊಂಡ ಗುಲಾಮನು ನಿಮ್ಮಲ್ಲಿರುವುದಕ್ಕೆ ಬಂದರೆ ಅವನನ್ನು ಅವನ ದಣಿಗೆ ಪುನಃ ವಶಪಡಿಸಬಾರದು.
16ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಇಷ್ಟವಾಗಿದೆಯೋ ಅಲ್ಲೇ ಅವನು ವಾಸವಾಗಿರಬಹುದು; ಅವನನ್ನು ನಿರ್ಬಂಧಪಡಿಸಬಾರದು ಹಾಗೂ ನೀವು ಅವನನ್ನು ಮತ್ತೆ ಶೋಷಣೆಗೆ ಗುರಿಮಾಡಬಾರದು.
17ಇಸ್ರಾಯೇಲರಲ್ಲಿ ಯಾವ ಸ್ತ್ರೀಯೂ ದೇವದಾಸಿಯಾಗಬಾರದು; ಯಾವ ಪುರುಷನೂ ಅಂತಹ ವೇಶ್ಯೆತನಕ್ಕೆ ಇಳಿಯಬಾರದು.
18ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯೂ ವ್ಯಭಿಚಾರದಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಯೆಹೋವನ ಆಲಯದೊಳಗೆ ತರಲೇಬಾರದು. ಈ ಎರಡೂ ಯೆಹೋವನಿಗೆ ಅಸಹ್ಯವಾದ ವಿಷಯ.
19ಹಣವನ್ನಾಗಲಿ, ಆಹಾರಪದಾರ್ಥಗಳನ್ನಾಗಲಿ ಬೇರೆ ಯಾವುದನ್ನಾಗಲಿ ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ಕೊಡಬಾರದು.
20ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ದೇಶದಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸುವನು.
21ನಿಮ್ಮ ದೇವರಾದ ಯೆಹೋವನಿಗೆ ಹರಕೆಮಾಡಿದ ಮೇಲೆ ಅದನ್ನು ತಡಮಾಡದೆ ತೀರಿಸಬೇಕು; ಆತನು ತಪ್ಪದೆ ಅದನ್ನು ವಿಚಾರಿಸುವನು; ತೀರಿಸದೆ ಹೋಗುವುದು ಪಾಪ.
22ನೀವು ಹರಕೆಮಾಡದಿದ್ದರೆ ದೋಷವೇನೂ ಇರಲಿಲ್ಲ;
23ಆದರೆ ಬಾಯಿಂದ ನುಡಿದದ್ದನ್ನು ನೆರವೇರಿಸಲೇಬೇಕು. ನಿಮ್ಮ ದೇವರಾದ ಯೆಹೋವನಿಗೆ ಬಾಯಿಂದ ಹರಕೆಮಾಡಿಕೊಂಡಂತೆಯೇ ಅದನ್ನು ಒಪ್ಪಿಸಿಬಿಡಬೇಕು.
24ಮತ್ತೊಬ್ಬನ ದ್ರಾಕ್ಷಿತೋಟದಲ್ಲಿ ನೀವು ಹೋಗುತ್ತಿರುವಾಗ ಇಷ್ಟಾನುಸಾರವಾಗಿ ಹಣ್ಣುಗಳನ್ನು ತಿನ್ನಬಹುದೇ ಹೊರತು ಪಾತ್ರೆಯಲ್ಲಿ ತುಂಬಿಕೊಂಡು ಹೋಗಬಾರದು.
25ಮತ್ತೊಬ್ಬನ ಪೈರಿನಲ್ಲಿ ಹೋಗುತ್ತಿರುವಾಗ ತೆನೆಗಳನ್ನು ಕೈಯಿಂದ ಮುರಿದುಕೊಳ್ಳಬಹುದೇ ಹೊರತು ಆ ಪೈರಿಗೆ ಕುಡುಗೋಲು ಹಾಕಬಾರದು.