Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ - ಕೀರ್ತ 51

ಕೀರ್ತ 51:2-19

Help us?
Click on verse(s) to share them!
2ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ, ನನ್ನನ್ನು ಶುದ್ಧಿಗೊಳಿಸು.
3ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.
4ನಿನಗೇ, ಕೇವಲ ನಿನಗೇ ತಪ್ಪುಮಾಡಿದ್ದೇನೆ; ನಿನ್ನ ದೃಷ್ಟಿಗೆ ಕೆಟ್ಟದ್ದಾಗಿರುವುದನ್ನೇ ಮಾಡಿದ್ದೇನೆ. ನಿನ್ನ ನಿರ್ಣಯ ನ್ಯಾಯವಾಗಿಯೂ, ನಿನ್ನ ತೀರ್ಪು ನಿಷ್ಕಳಂಕವಾಗಿಯೂ ಇರುತ್ತದೆ.
5ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.
6ಯಥಾರ್ಥಚಿತ್ತವೇ ನಿನಗೆ ಸಂತೋಷ; ಸುಜ್ಞಾನದ ರಹಸ್ಯಗಳನ್ನು ನನಗೆ ತಿಳಿಯಪಡಿಸು.
7ಹಿಸ್ಸೋಪ್ ಗಿಡದ ಬರಲಿನಿಂದ ನೀರನ್ನು ಚಿಮಕಿಸಿಯೋ ಎಂಬಂತೆ ನನ್ನ ಅಶುದ್ಧತ್ವವನ್ನು ತೆಗೆದುಬಿಡು, ಆಗ ಶುದ್ಧನಾಗುವೆನು; ನನ್ನನ್ನು ತೊಳೆ, ಆಗ ಹಿಮಕ್ಕಿಂತಲೂ ಬೆಳ್ಳಗಾಗುವೆನು.
8ನನ್ನಲ್ಲಿ ಸಂಭ್ರಮೋತ್ಸವದ ಧ್ವನಿ ಉಂಟಾಗುವಂತೆ ಮಾಡು; ಆಗ ನೀನು ಜಜ್ಜಿದ ಎಲುಬುಗಳು ಆನಂದಪಡುವವು.
9ನನ್ನ ದೋಷಕ್ಕೆ ವಿಮುಖನಾಗು; ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
10ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.
11ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.
12ನಿನ್ನ ರಕ್ಷಣಾನಂದವನ್ನು ನಾನು ಪುನಃ ಅನುಭವಿಸುವಂತೆ ಮಾಡು; ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ನನಗೆ ಆಧಾರನಾಗು.
13ಆಗ ನಿನ್ನ ಮಾರ್ಗವನ್ನು ದ್ರೋಹಿಗಳಿಗೆ ಬೋಧಿಸುವೆನು; ಪಾಪಿಗಳು ನಿನ್ನ ಕಡೆಗೆ ತಿರುಗಿಕೊಳ್ಳುವರು.
14ದೇವರೇ, ನನ್ನ ರಕ್ಷಣಾ ಕರ್ತನೇ, ಪ್ರಾಣಹತ್ಯದ ಅಪರಾಧದಿಂದ ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ಉತ್ಸಾಹದಿಂದ ನಿನ್ನ ನೀತಿಯನ್ನು ಕೊಂಡಾಡುವುದು.
15ಕರ್ತನೇ, ನನ್ನ ಬಾಯಿ ನಿನ್ನನ್ನು ಸ್ತೋತ್ರಮಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16ನಿನಗೆ ಯಜ್ಞಗಳಲ್ಲಿ ಅಪೇಕ್ಷೆಯಿಲ್ಲ, ಇದ್ದರೆ ಸಮರ್ಪಿಸುತ್ತಿದ್ದೆನು; ಸರ್ವಾಂಗಹೋಮಗಳಲ್ಲಿ ನಿನಗೆ ಸಂತೋಷವಿಲ್ಲ.
17ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟವಾದ ಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವುದಿಲ್ಲ.
18ಚೀಯೋನ್ ಪಟ್ಟಣವನ್ನು ಕಟಾಕ್ಷಿಸಿ ಅದಕ್ಕೆ ಶುಭವನ್ನುಂಟುಮಾಡು; ಯೆರೂಸಲೇಮಿನ ಪೌಳಿಗೋಡೆಯನ್ನು ಕಟ್ಟಿಸು.
19ಆಗ ಜನರು ನ್ಯಾಯವಾದ ಯಜ್ಞಗಳನ್ನೂ, ಸರ್ವಾಂಗಹೋಮಗಳನ್ನೂ ಸಮರ್ಪಿಸಿ, ದೇವರೇ ನಿನಗೆ ಸಂತೋಷವನ್ನು ಉಂಟುಮಾಡುವರು. ನಿನ್ನ ಯಜ್ಞವೇದಿಯ ಮೇಲೆ ಹೋರಿಗಳನ್ನು ಸಮರ್ಪಿಸುವರು.

Read ಕೀರ್ತ 51ಕೀರ್ತ 51
Compare ಕೀರ್ತ 51:2-19ಕೀರ್ತ 51:2-19