Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ

ಕೀರ್ತ 61

Help us?
Click on verse(s) to share them!
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ. ದೇವರೇ, ನನ್ನ ಕೂಗನ್ನು ಕೇಳಿ ನನ್ನ ಪ್ರಾರ್ಥನೆಗೆ ಕಿವಿಗೊಡು.
2ನಾನು ಎದೆಗುಂದಿದವನಾಗಿ ಭೂಮಿಯ ಕಡೆಯ ಭಾಗದಿಂದ ನಿನಗೆ ಮೊರೆಯಿಡುತ್ತೇನೆ; ನಾನು ಹತ್ತಲಾರದ ಆಶ್ರಯಗಿರಿಯ ಮೇಲೆ ನನ್ನನ್ನು ಹತ್ತಿಸು.
3ನೀನು ನನಗೆ ಶರಣನೂ, ಶತ್ರುಗಳಿಂದ ತಪ್ಪಿಸುವ ಭದ್ರವಾದ ಬುರುಜು ಆಗಿದ್ದೀ.
4ನನಗೆ ನಿರಂತರವೂ ನಿನ್ನ ಗುಡಾರದಲ್ಲಿ ಬಿಡಾರವಾಗಲಿ; ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವಂತೆ ಅನುಗ್ರಹಿಸು. ಸೆಲಾ
5ದೇವರೇ, ನೀನು ನನ್ನ ಹರಕೆಗಳಿಗೆ ಲಕ್ಷ್ಯಕೊಟ್ಟಿದ್ದೀ; ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಸಿಕ್ಕತಕ್ಕ ಬಾಧ್ಯತೆಯನ್ನು ನನಗೂ ದಯಪಾಲಿಸಿದ್ದೀ.
6ಅರಸನು ದೀರ್ಘಕಾಲ ಬಾಳುವಂತೆ ಅನುಗ್ರಹಿಸು; ಅವನ ಆಯಸ್ಸು ತಲತಲಾಂತರಗಳವರೆಗೆ ವೃದ್ಧಿಯಾಗಲಿ.
7ಅವನು ನಿನ್ನ ಸಾನ್ನಿಧ್ಯವನ್ನು ಪಡೆದು, ಸದಾಕಾಲವೂ ಸಿಂಹಾಸನಾರೂಢನಾಗಿರಲಿ; ನಿನ್ನ ಪ್ರೇಮ ಮತ್ತು ಸತ್ಯತೆಗಳು ಅವನನ್ನು ಕಾಯಲಿ.
8ಹೀಗಾದರೆ ನಾನು ಪ್ರತಿದಿನವೂ ನನ್ನ ಹರಕೆಗಳನ್ನು ಸಲ್ಲಿಸುವವನಾಗಿ, ನಿನ್ನ ನಾಮವನ್ನು ಸದಾ ಸ್ಮರಿಸಿ ಕೀರ್ತಿಸುತ್ತಿರುವೆನು.