1ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ. ಸರ್ವಜನಾಂಗದವರೇ, ಚಪ್ಪಾಳೆ ಹೊಡೆಯಿರಿ; ಆರ್ಭಟದಿಂದ ದೇವರಿಗೆ ಜಯಧ್ವನಿ ಮಾಡಿರಿ.
2ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ; ಆತನು ಭೂಲೋಕಕ್ಕೆಲ್ಲಾ ಮಹಾರಾಜನು ಆಗಿದ್ದಾನೆ.
3ಆತನು ಜನಾಂಗಗಳನ್ನು ನಮಗೆ ಅಧೀನಪಡಿಸಿ, ಜನಾಂಗಗಳನ್ನು ನಮ್ಮ ಕಾಲಕೆಳಗೆ ಹಾಕಿದ್ದಾನೆ.
4ಆತನು ಘನತೆಯುಳ್ಳ ಯಾಕೋಬನ ವಂಶದವರಾದ ನಮ್ಮನ್ನು ಪ್ರೀತಿಸಿ, ನಮ್ಮ ಸ್ವತ್ತನ್ನು ಆಯ್ದುಕೊಂಡಿದ್ದಾನೆ. ಸೆಲಾ
5ದೇವರು ಜಯಘೋಷದಿಂದ ಏರಿದ್ದಾನೆ; ಯೆಹೋವನು ತುತ್ತೂರಿಯ ಧ್ವನಿಯೊಡನೆ ಆರೋಹಣ ಮಾಡಿದ್ದಾನೆ.
6ದೇವರನ್ನು ಸಂಕೀರ್ತಿಸಿರಿ, ಸ್ತುತಿಸಿ ಹಾಡಿರಿ; ನಮ್ಮ ಅರಸನನ್ನು ಕೀರ್ತಿಸಿರಿ, ಕೊಂಡಾಡಿರಿ.
7ಏಕೆಂದರೆ, ದೇವರು ಭೂಲೋಕಕ್ಕೆಲ್ಲಾ ರಾಜನು; ಆತನನ್ನು ಜ್ಞಾನಯುಕ್ತರಾಗಿ ಕೀರ್ತಿಸಿರಿ.
8ದೇವರು ಸರ್ವಾಧಿಪತ್ಯವನ್ನು ವಹಿಸಿಕೊಂಡಿದ್ದಾನೆ; ಆತನು ತನ್ನ ಪರಿಶುದ್ಧ ಸಿಂಹಾಸನದಲ್ಲಿ ಆಸೀನನಾಗಿದ್ದಾನೆ.
9ಜನಾಂಗಗಳನ್ನು ಆಳುವ ಪ್ರಭುಗಳು ಅಬ್ರಹಾಮನ ದೇವರ ಪ್ರಜೆಗಳೊಂದಿಗೆ ಸೇರಿಕೊಂಡಿದ್ದಾರೆ; ಏಕೆಂದರೆ ಭೂಪರಲೋಕದ ಗುರಾಣಿಗಳು ದೇವರಿಗೆ ಸೇರಿದವುಗಳೇ. ಆತನೇ ಸರ್ವೋನ್ನತನು.