Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಕೀರ್ತ

ಕೀರ್ತ 52

Help us?
Click on verse(s) to share them!
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ ದಾವೀದನು ರಚಿಸಿದ ಪದ್ಯ. ಪರಾಕ್ರಮಿಯೇ, ನೀನು ಕೆಡುಕುಮಾಡಿ ಹಿಗ್ಗುವುದೇನು? ದೇವರ ಕೃಪೆಯು ಯಾವಾಗಲೂ ಇರುವುದು.
2ಮೋಸಗಾರನೇ, ನಿನ್ನ ನಾಲಿಗೆಯು ಹರಿತವಾದ ಕ್ಷೌರಕತ್ತಿಯಂತೆ ಅಪಾಯಗಳನ್ನೇ ಕಲ್ಪಿಸುತ್ತದೆ.
3ಉಪಕಾರಕ್ಕಿಂತಲೂ ಅಪಕಾರವೇ ನಿನಗೆ ಇಷ್ಟ; ನೀತಿಯನ್ನು ಬಿಟ್ಟು ಅನೀತಿಯನ್ನು ಸ್ಥಾಪಿಸುವುದೇ ನಿನಗೆ ಸಂತೋಷ. ಸೆಲಾ
4ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
5ದೇವರು ನಿನ್ನನ್ನು ಎಂದಿಗೂ ಏಳದಂತೆ ಕೆಡವಿಬಿಡುವನು; ನಿನ್ನನ್ನು ಹಿಡಿದು ಗುಡಾರದೊಳಗಿಂದ ಕಿತ್ತು ಬೀಸಾಡುವನು; ಆತನು ನಿನ್ನನ್ನು ಜೀವಲೋಕದಿಂದ ಬೇರು ಸಹಿತವಾಗಿ ಕಿತ್ತುಹಾಕುವನು.
6ನೀತಿವಂತರು ಅದನ್ನು ನೋಡಿ ಭಯಪಡುವರು; ಅವರು ಪರಿಹಾಸ್ಯಮಾಡುತ್ತಾ,
7“ನೋಡಿರಿ, ದೇವರನ್ನು ಆಶ್ರಯಿಸಿಕೊಳ್ಳದೆ, ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು, ತನ್ನ ದುಷ್ಟತ್ವವೇ ತನಗೆ ಬಲವೆಂದು ನಂಬಿಕೊಂಡ ಮೂಢನು ಇವನೇ” ಎಂದು ಹೇಳುವರು.
8ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು; ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು.
9ದೇವರೇ, ನಿನ್ನ ಉಪಕಾರಕ್ಕಾಗಿ ಯಾವಾಗಲೂ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವು ಸರ್ವೋತ್ತಮವೆಂದು ನಿನ್ನ ಭಕ್ತರ ಮುಂದೆ ಹೊಗಳುವೆನು.