1(ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಉದಯದ ಜಿಂಕೆ ಎಂಬ ರಾಗದ ಮೇಲೆ ಹಾಡತಕ್ಕದ್ದು; ದಾವೀದನ ಕೀರ್ತನೆ.) ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಏಕೆ ನನಗೆ ಸಹಾಯಮಾಡದೆಯೂ, ನನ್ನ ಕೂಗನ್ನು ಕೇಳದೆಯೂ ದೂರವಾಗಿದ್ದೀ?
2ನನ್ನ ದೇವರೇ, ಹಗಲಿನಲ್ಲಿ ಮೊರೆಯಿಡುತ್ತೇನೆ; ಪ್ರತ್ಯುತ್ತರವೇ ಇಲ್ಲ; ರಾತ್ರಿಯಲ್ಲಿಯೂ ನನಗೆ ಉಪಶಮನವಿಲ್ಲ.
3ಇಸ್ರಾಯೇಲರ ಸ್ತೋತ್ರಸಿಂಹಾಸನದಲ್ಲಿ ಇರುವಾತನೇ, ನೀನು ಪವಿತ್ರಸ್ವರೂಪನು.
4ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟರು; ನಿನ್ನನ್ನು ನಂಬಿ ಉದ್ಧಾರವಾದರು.
5ನಿನಗೆ ಮೊರೆಯಿಟ್ಟು ವಿಮುಕ್ತರಾದರು; ನಿನ್ನಲ್ಲಿ ವಿಶ್ವಾಸವಿಟ್ಟು ಆಶಾಭಂಗಪಡಲಿಲ್ಲ.
6ನಾನಾದರೋ ಹುಳದಂಥವನೇ ಹೊರತು ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟು ಜನರಿಂದ ತಿರಸ್ಕಾರ ಹೊಂದಿದ್ದೇನೆ.