Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಅರಸು - 2 ಅರಸು 15

2 ಅರಸು 15:8-36

Help us?
Click on verse(s) to share them!
8ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ಜೆಕರ್ಯ ಎಂಬುವವನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಆರು ತಿಂಗಳು ಆಳಿದನು.
9ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
10ಯಾಬೇಷನ ಮಗನಾದ ಶಲ್ಲೂಮನು ಅವನಿಗೆ ವಿರುದ್ಧವಾಗಿ ಒಳಸಂಚುಮಾಡಿ ಪ್ರಜೆಗಳ ಮುಂದೆಯೇ ಅವನನ್ನು ಕೊಂದು ಅವನಿಗೆ ಬದಲಾಗಿ ತಾನು ಅರಸನಾದನು.
11ಜೆಕರ್ಯನ ಉಳಿದ ಚರಿತ್ರೆಯು ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
12“ನಿನ್ನ ಸಂತಾನದವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲರ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು” ಎಂಬುದಾಗಿ ಯೆಹೋವನು ಯೇಹುವಿಗೆ ಮುಂತಿಳಿಸಿದ ಮಾತು ನೆರವೇರಿತು.
13ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.
14ಗಾದಿಯ ಮಗನಾದ ಮೆನಹೇಮನೆಂಬುವನು ತಿರ್ಚದಿಂದ ಸಮಾರ್ಯಕ್ಕೆ ಬಂದು ಅಲ್ಲಿದ್ದ ಯಾಬೇಷನ ಮಗನಾದ ಶಲ್ಲೂಮನನ್ನು ಕೊಂದು, ಅವನಿಗೆ ಬದಲಾಗಿ ತಾನು ಅರಸನಾದನು.
15ಶಲ್ಲೂಮನ ಉಳಿದ ಚರಿತ್ರೆಯೂ ಮತ್ತು ಅವನ ಒಳಸಂಚಿನ ವಿವರವೂ ಇಸ್ರಾಯೇಲ್ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ.
16ಮೆನಹೇಮನು ತಿರ್ಚದಿಂದ ತಿಪ್ಸಹುವಿಗೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲನ್ನು ಅವನಿಗೆ ತೆರೆಯಲಿಲ್ಲ, ಆದುದರಿಂದ ಅವನು ಆ ಊರನ್ನು ಅದಕ್ಕೆ ಸೇರಿದ ಪ್ರದೇಶವನ್ನೂ ಹಾಳುಮಾಡಿ ಅದರ ನಿವಾಸಿಗಳನ್ನು ಸಂಹರಿಸಿದನು. ಅದರಲ್ಲಿದ್ದ ಎಲ್ಲಾ ಗರ್ಭಿಣಿಗಳ ಹೊಟ್ಟೆಯನ್ನು ಸೀಳಿಹಾಕಿಸಿದನು.
17ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗನಾದ ಮೆನಹೇಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹತ್ತು ವರ್ಷ ಆಳಿದನು.
18ಇವನು ಜೀವದಿಂದ ಇರುವವರೆಗೂ ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
19ಅಶ್ಶೂರ ದೇಶದ ಅರಸನಾದ ಪೂಲನೆಂಬವನು ಇಸ್ರಾಯೇಲ್ ದೇಶಕ್ಕೆ ವಿರುದ್ಧವಾಗಿ ಬಂದಾಗ ಮೆನಹೇಮನು ಅವನ ಮುಖಾಂತರವಾಗಿ ತನ್ನ ಅರಸುತನವನ್ನು ಜನರು ದೃಢಪಡಿಸಿಕೊಳ್ಳುವುದಕ್ಕೋಸ್ಕರ ಅವನಿಗೆ ಸಾವಿರ ತಲಾಂತು ಬೆಳ್ಳಿಯನ್ನು ಕೊಟ್ಟನು.
20ಮೆನಹೇಮನು ಅಶ್ಶೂರದ ಅರಸನಿಗೆ ಆ ಹಣವನ್ನು ಕೊಡುವುದಕ್ಕಾಗಿ ಇಸ್ರಾಯೇಲರ ಪ್ರತಿಯೊಬ್ಬ ಐಶ್ವರ್ಯವಂತನಿಂದ ಐವತ್ತು ರೂಪಾಯಿಗಳನ್ನು ವಸೂಲಿಮಾಡಿಕೊಂಡನು. ಆ ಹಣವು ಸಿಕ್ಕಿದ ನಂತರ ಅಶ್ಶೂರದ ಅರಸನು ಅಲ್ಲಿ ನಿಲ್ಲದೆ ಹಿಂತಿರುಗಿ ಹೋದನು.
21ಮೆನಹೇಮನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
22ಮೆನಹೇಮನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಮಗನಾದ ಪೆಕಹ್ಯನು ಇಸ್ರಾಯೇಲರ ಅರಸನಾದನು.
23ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯ ಎಂಬುವವನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಎರಡು ವರ್ಷ ಆಳಿದನು.
24ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
25ಇವನ ಸರದಾರನೂ, ರೆಮಲ್ಯನ ಮಗನೂ ಆಗಿದ್ದ ಪೆಕಹನು, ಗಿಲ್ಯಾದಿನ ಐವತ್ತು ಮಂದಿ ಜನರನ್ನು ಕೂಡಿಸಿಕೊಂಡು ಇವನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಇವನನ್ನೂ ಅರ್ಗೋಬ್, ಅರ್ಯೇ ಎಂಬವರನ್ನೂ ಕೊಂದು ಇವನಿಗೆ ಬದಲಾಗಿ ತಾನು ಅರಸನಾದನು.
26ಪೆಕಹ್ಯನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
27ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಇಪ್ಪತ್ತು ವರ್ಷ ಆಳಿದನು.
28ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
29ಇಸ್ರಾಯೇಲರ ಅರಸನಾದ ಪೆಕಹನ ಕಾಲದಲ್ಲಿ ಅಶ್ಶೂರ್ ದೇಶದ ಅರಸನಾದ ತಿಗ್ಲತ್ಪಿಲೆಸೆರನೆಂಬುವವನು ಬಂದು ಇಯ್ಯೋನ್, ಆಬೇಲ್ಬೇತ್ಮಾಕಾ, ಯಾನೋಹ, ಕೆದೆಷ್, ಹಾಚೋರ್ ಮೊದಲಾದ ನಫ್ತಾಲಿಯ ಊರುಗಳನ್ನು ಗಿಲ್ಯಾದ್ ಮತ್ತು ಗಲಿಲಾಯ ಪ್ರಾಂತ್ಯಗಳನ್ನೂ ಸ್ವಾಧೀನಪಡಿಸಿಕೊಂಡು ಅವುಗಳ ನಿವಾಸಿಗಳನ್ನು ಅಶ್ಶೂರ್ ದೇಶಕ್ಕೆ ಸೆರೆಯಾಗಿ ತೆಗೆದುಕೊಂಡು ಹೋದನು.
30ಆಗ ಏಲನ ಮಗನಾದ ಹೋಶೇಯನು, ರೆಮಲ್ಯನ ಮಗನಾದ ಪೆಕಹನಿಗೆ ವಿರುದ್ಧವಾಗಿ ಒಳಸಂಚು ಮಾಡಿ, ಇವನನ್ನು ಉಜ್ಜೀಯನ ಮಗನಾದ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಕೊಂದು ಇವನಿಗೆ ಬದಲಾಗಿ ತಾನು ಅರಸನಾದನು.
31ಪೆಕಹನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
32ಇಸ್ರಾಯೇಲರ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯೆಹೂದ್ಯರ ಅರಸನಾದ ಉಜ್ಜೀಯನ ಮಗನಾದ ಯೋತಾಮನು ಆಳತೊಡಗಿದನು.
33ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಇವನು ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷಾ ಇವನ ತಾಯಿ.
34ಇವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು.
35ಆದರೆ ಇವನ ಕಾಲದಲ್ಲಿ ಪೂಜಾಸ್ಥಳಗಳು ಇನ್ನೂ ತೆಗೆಯಲ್ಪಟ್ಟಿರಲಿಲ್ಲ. ಆದುದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಸಮರ್ಪಿಸುತ್ತಿದ್ದರು. ಯೆಹೋವನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿದವನು ಇವನೇ.
36ಯೋತಾಮನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.

Read 2 ಅರಸು 152 ಅರಸು 15
Compare 2 ಅರಸು 15:8-362 ಅರಸು 15:8-36