Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 22

ಲೂಕ 22:18-47

Help us?
Click on verse(s) to share them!
18ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು.
19ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು.
20ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ, ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.
21“ಆದರೂ ನೋಡಿರಿ, ನನ್ನನ್ನು ಹಿಡಿದುಕೊಡುವವನು ನನ್ನೊಡನೆ ಮೇಜಿನ ಮೇಲೆ ಕೈಯಿಟ್ಟು ಊಟಮಾಡುತ್ತಿದ್ದಾನೆ.
22ನಿರ್ಣಯವಾಗಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ, ಆದರೆ ಆತನನ್ನು ಹಿಡಿದುಕೊಡುವ ಮನುಷ್ಯನ ಗತಿಯನ್ನು ಏನು ಹೇಳಲಿ” ಅಂದನು.
23ಇದನ್ನು ಕೇಳಿ ಅವರು, ಇಂಥ ಕೆಲಸವನ್ನು ಮಾಡಬೇಕೆಂದಿರುವವನು ನಮ್ಮಲ್ಲಿ ಯಾವನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.
24ಇದಲ್ಲದೆ ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು.
25ಆಗ ಆತನು ಅವರಿಗೆ, “ಅನ್ಯಜನಾಂಗದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮೇಲೆ ಅಧಿಕಾರದಿಂದ ಆಡಳಿತ ನಡಿಸುವವರು ಉಪಕಾರಿಗಳೆಂದು ಕರೆಸಿಕೊಳ್ಳುತ್ತಾರೆ.
26ನೀವು ಹಾಗಿರಬಾರದು, ನಿಮ್ಮಲ್ಲಿ ದೊಡ್ಡವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು.
27ಯಾರು ದೊಡ್ಡವನು? ಊಟಕ್ಕೆ ಕುಳಿತವನೋ ಸೇವೆಮಾಡುವವನೋ? ಊಟಕ್ಕೆ ಕುಳಿತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.
28ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು.
29ಆದುದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿರುವ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ;
30ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರ್ಪುಮಾಡುವಿರಿ.
31“ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು.
32ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು.
33ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು,
34ಆತನು, “ಪೇತ್ರನೇ, ನನ್ನ ವಿಷಯದಲ್ಲಿ ಇವನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ತನಕ ಈಹೊತ್ತು ಕೋಳಿ ಕೂಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” ಅಂದನು.
35ಮತ್ತು ಆತನು, “ನಿಮ್ಮನ್ನು ನಾನು ಹಣ, ಕೈಚೀಲಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ?” ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು.
36ಅದಕ್ಕೆ ಆತನು, “ಈಗಲಾದರೋ ಹಣವಿದ್ದವನು ಅದನ್ನು ತೆಗೆದುಕೊಳ್ಳಲಿ, ಕೈಚೀಲವಿರುವವನು ಅದನ್ನು ತೆಗೆದುಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ.
37ಏಕೆಂದರೆ, ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಬರೆಯಲ್ಪಟ್ಟಿರುವ ಎಲ್ಲವು ನೆರವೇರಬೇಕು” ಎಂದು ಹೇಳಿದನು.
38ಅವರು, “ಕರ್ತನೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ” ಅನ್ನಲು, ಆತನು ಅವರಿಗೆ, “ಅಷ್ಟು ಸಾಕು” ಅಂದನು.
39ತರುವಾಯ ಆತನು ಪ್ರತಿದಿನದಂತೆ ಹೊರಟು ಎಣ್ಣೆಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು.
40ಆತನು ಆ ಕ್ಲುಪ್ತ ಸ್ಥಳಕ್ಕೆ ಬಂದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
41ಆ ಮೇಲೆ ಆತನು ಅವರನ್ನು ಬಿಟ್ಟು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ,
42“ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತದಂತೆಯೇ ಆಗಲಿ” ಪ್ರಾರ್ಥಿಸಿದನು.
43ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು, ಆತನನ್ನು ಬಲಪಡಿಸಿದನು.
44ಯೇಸು ತೀವ್ರವಾದ ಮನೋವ್ಯಥೆಯುಳ್ಳವನಾಗಿ, ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ, ಆತನ ಬೆವರು ರಕ್ತದ ಹನಿಗಳೋಪಾದಿಯಲ್ಲಿ ನೆಲಕ್ಕೆ ಬೀಳುತ್ತಿತ್ತು.
45ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು, ಅವರು ದುಃಖದಿಂದ ಬಳಲಿಹೋದವರಾಗಿ ನಿದ್ರೆಹತ್ತಿರುವುದನ್ನು ಕಂಡು,
46ಅವರಿಗೆ, “ನೀವು ನಿದ್ರೆಮಾಡುವುದೇನು? ಏಳಿರಿ, ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
47ಆತನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನೆಂಬುವನು ಆ ಜನರ ಗುಂಪಿನ ಮುಂದೆ ನಡೆಯುತ್ತಾ, ಯೇಸುವಿಗೆ ಮುದ್ದಿಡುವುದಕ್ಕಾಗಿ ಆತನ ಬಳಿಗೆ ಬರಲು,

Read ಲೂಕ 22ಲೂಕ 22
Compare ಲೂಕ 22:18-47ಲೂಕ 22:18-47