Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 12

ಲೂಕ 12:6-35

Help us?
Click on verse(s) to share them!
6ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲ? ಆದಾಗ್ಯೂ ಅವುಗಳಲ್ಲಿ ಒಂದನ್ನೂ ದೇವರು ಮರೆತುಹೋಗುವುದಿಲ್ಲ.
7ಅಷ್ಟುಮಾತ್ರವಲ್ಲ, ನಿಮ್ಮ ತಲೆ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ, ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.
8“ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಮನುಷ್ಯಕುಮಾರನು ಸಹ ಆ ವ್ಯಕ್ತಿಯನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು.
9ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು.
10ಮನುಷ್ಯಕುಮಾರನ ವಿರುದ್ಧ ಮಾತನಾಡುವ ಪ್ರತಿಯೊಬ್ಬನಿಗೆ ಕ್ಷಮಾಪಣೆಯಾಗುವುದು. ಆದರೆ ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮಾಪಣೆಯಿಲ್ಲ.
11ಅವರು ನಿಮ್ಮನ್ನು ಸಭಾಮಂದಿರಗಳಿಗೂ, ಸಭಾಮಂದಿರಗಳ ಅಧಿಕಾರಿಗಳ ಎದುರಿಗೂ, ಅಧಿಪತಿಗಳ ಎದುರಿಗೂ, ಹಿಡಿದುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರ ಕೊಡಬೇಕು? ಏನು ಹೇಳಬೇಕು? ಎಂದು ಚಿಂತೆಮಾಡಬೇಡಿರಿ.
12ಏಕೆಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು” ಅಂದನು.
13ಆಗ ಜನರಲ್ಲಿ ಒಬ್ಬನು, “ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡುವಂತೆ ನನ್ನ ಅಣ್ಣನಿಗೆ ಹೇಳು” ಎಂದು ಯೇಸುವನ್ನು ಕೇಳಿಕೊಳ್ಳಲು,
14ಅದಕ್ಕೆ ಯೇಸು, “ಮನುಷ್ಯನೇ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು?” ಎಂದು ಅವನನ್ನು ಕೇಳಿ,
15ಜನರಿಗೆ, “ಎಲ್ಲಾ ದುರಾಶೆಗಳಿಂದಲು ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ” ಎಂದು ಹೇಳಿ, ಒಂದು ಸಾಮ್ಯವನ್ನು ಹೇಳಿದನು.
16ಅದೇನೆಂದರೆ “ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆ ಬೆಳೆಯಿತು.
17ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವುದಕ್ಕೆ ನನಗೆ ಸ್ಥಳವಿಲ್ಲವಲ್ಲಾ?’ ಎಂದು ಆಲೋಚಿಸಿ,
18‘ಒಂದು ಕೆಲಸ ಮಾಡುತ್ತೇನೆ. ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು,
19ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.
20“ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.
21ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ” ಅಂದನು.
22ಇದಲ್ಲದೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟ ಮಾಡಬೇಕು? ದೇಹ ರಕ್ಷಣೆಗೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬುದಾಗಿ ನಿಮಗೆ ಹೇಳುತ್ತೇನೆ.
23ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವು ಮೇಲಾದದು.
24ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.
25ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಒಂದು ಮೊಳದಷ್ಟು ಹೆಚ್ಚಿಸಲುನಿಮ್ಮಲ್ಲಿ ಯಾರಿಂದಾದೀತು?
26ಇಂಥ ಅಲ್ಪ ಕಾರ್ಯಗಳನ್ನು ಮಾಡಲು ನೀವು ಆಸಕ್ತರಾಗಿರಲಾಗಿ ಉಳಿದ ವಿಷಯದಲ್ಲಿ ಚಿಂತೆಮಾಡುವುದೇಕೆ?
27ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಗಮನಿಸಿ ನೋಡಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಈ ಅಡವಿಯ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪುಗಳನ್ನು ಧರಿಸಲಿಲ್ಲವೆಂದು ನಿಮಗೆ ಹೇಳುತ್ತೇನೆ.
28ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು.
29ಏನು ಊಟ ಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಟ್ಟು ಚಿಂತಿಸಬೇಡಿರಿ.
30ಇವೆಲ್ಲವುಗಳ ಕುರಿತು ಇಹಲೋಕದ ಜನಗಳು ಅಲೆದಾಡುತ್ತಾರೆ. ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.
31ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ. ಇದರ ಕೂಡ ಅವೂ ನಿಮಗೆ ದೊರಕುವವು.
32ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
33ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.
34ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸು ಇರುತ್ತದಷ್ಟೆ.
35“ನಿಮ್ಮ ನಡುಗಳು ಕಟ್ಟಿರಲಿ. ನಿಮ್ಮ ದೀಪಗಳು ಆರದಂತೆ ಉರಿಯುತ್ತಾ ಇರಲಿ.

Read ಲೂಕ 12ಲೂಕ 12
Compare ಲೂಕ 12:6-35ಲೂಕ 12:6-35