Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 12

ಲೂಕ 12:18-49

Help us?
Click on verse(s) to share them!
18‘ಒಂದು ಕೆಲಸ ಮಾಡುತ್ತೇನೆ. ನನ್ನ ಕಣಜಗಳನ್ನು ಕೆಡವಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನು ತುಂಬಿಟ್ಟು,
19ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.
20“ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.
21ತನಗೋಸ್ಕರ ಹಣವನ್ನು ಸಂಗ್ರಹಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ” ಅಂದನು.
22ಇದಲ್ಲದೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, “ಈ ಕಾರಣದಿಂದ ಪ್ರಾಣಧಾರಣೆಗೆ ಏನು ಊಟ ಮಾಡಬೇಕು? ದೇಹ ರಕ್ಷಣೆಗೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬುದಾಗಿ ನಿಮಗೆ ಹೇಳುತ್ತೇನೆ.
23ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವು ಮೇಲಾದದು.
24ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.
25ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಒಂದು ಮೊಳದಷ್ಟು ಹೆಚ್ಚಿಸಲುನಿಮ್ಮಲ್ಲಿ ಯಾರಿಂದಾದೀತು?
26ಇಂಥ ಅಲ್ಪ ಕಾರ್ಯಗಳನ್ನು ಮಾಡಲು ನೀವು ಆಸಕ್ತರಾಗಿರಲಾಗಿ ಉಳಿದ ವಿಷಯದಲ್ಲಿ ಚಿಂತೆಮಾಡುವುದೇಕೆ?
27ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಗಮನಿಸಿ ನೋಡಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಆದರೂ ಅರಸನಾದ ಸೊಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಈ ಅಡವಿಯ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪುಗಳನ್ನು ಧರಿಸಲಿಲ್ಲವೆಂದು ನಿಮಗೆ ಹೇಳುತ್ತೇನೆ.
28ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಈ ಪ್ರಕಾರ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು.
29ಏನು ಊಟ ಮಾಡಬೇಕು? ಏನು ಕುಡಿಯಬೇಕು? ಎಂದು ತವಕಪಟ್ಟು ಚಿಂತಿಸಬೇಡಿರಿ.
30ಇವೆಲ್ಲವುಗಳ ಕುರಿತು ಇಹಲೋಕದ ಜನಗಳು ಅಲೆದಾಡುತ್ತಾರೆ. ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.
31ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ. ಇದರ ಕೂಡ ಅವೂ ನಿಮಗೆ ದೊರಕುವವು.
32ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.
33ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.
34ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸು ಇರುತ್ತದಷ್ಟೆ.
35“ನಿಮ್ಮ ನಡುಗಳು ಕಟ್ಟಿರಲಿ. ನಿಮ್ಮ ದೀಪಗಳು ಆರದಂತೆ ಉರಿಯುತ್ತಾ ಇರಲಿ.
36ನೀವಂತೂ ತಮ್ಮ ಯಜಮಾನನು ಯಾವಾಗ ಮದುವೆ ಔತಣ ಮುಗಿಸಿಕೊಂಡು ಹಿಂತಿರುಗುವನೋ ಎಂದು ಕಾಯುವಂಥ ಮತ್ತು ಆತನು ತಟ್ಟಿದ ಕೂಡಲೆ ಬಾಗಿಲನ್ನು ತೆರೆಯಲು ಸಿದ್ಧರಾಗಿರುವಂಥ ಆಳುಗಳಂತೆ ಇರಿ.
37ಯಜಮಾನನು ಬಂದು ಯಾವ ಆಳು ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಏಕೆಂದರೆ, ಯಜಮಾನನೇ ನಡುಕಟ್ಟಿಕೊಂಡು ಆ ಆಳುಗಳನ್ನು ಊಟಕ್ಕೆ ಕುಳ್ಳಿರಿಸಿ, ಹತ್ತಿರಕ್ಕೆ ಬಂದು ಅವರಿಗೆ ಊಟವನ್ನು ಬಡಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
38ಯಜಮಾನನು ಬರುವಾಗ ನಡು ರಾತ್ರಿಯಾಗಿರಲಿ, ಮುಂಜಾವವಾಗಿರಲಿ, ಆತನು ಬರುವಾಗ ಎಚ್ಚರವಾಗಿ ಕಾಣಿಸಿಕೊಳ್ಳುವ ಆಳುಗಳು ಧನ್ಯರು.
39ಕಳ್ಳನು ಬರುವ ಗಳಿಗೆಯು ಮನೆ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು, ತನ್ನ ಮನೆಗೆ ಕನ್ನಾ ಹಾಕಗೊಡಿಸುತ್ತಿರಲಿಲ್ಲವೆಂದು ತಿಳಿದುಕೊಳ್ಳಿರಿ.
40ಅದುದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಅಂದನು.
41ಆಗ ಪೇತ್ರನು, “ಕರ್ತನೇ, ನೀನು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತಿದ್ದೀಯೋ ಅಥವಾ ಎಲ್ಲರಿಗೋ?” ಎಂದು ಕೇಳಲು,
42ಕರ್ತನು ಹೇಳಿದ್ದೇನಂದರೆ, “ಹೊತ್ತು ಹೊತ್ತಿಗೆ ಅವಶ್ಯಕತೆಗೆ ಬೇಕಾದದ್ದನ್ನು ಅಳೆದು ಕೊಡುವುದಕ್ಕಾಗಿ ಯಜಮಾನನು ತನ್ನ ಆಳುಗಳ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆದ ಮೇಲ್ವಿಚಾರಕ ಯಾರು?
43ಯಜಮಾನನು ಬಂದು ಯಾವ ಆಳು ಹೀಗೆ ಮಾಡುವುದನ್ನು ಕಾಣುವನೋ ಆ ಆಳು ಧನ್ಯನು.
44ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಕಾರಿಯಾಗಿ ನೇಮಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
45ಆದರೆ ಆ ಆಳು, ನನ್ನ ಯಜಮಾನನು ಬರುವುದಕ್ಕೆ ತಡವಾಗುತ್ತದೆಯೆಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವುದಕ್ಕೂ ತೊಂದರೆಕೊಡುವುದಕ್ಕೂ ಮತ್ತು ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ,
46ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾದ ಚಿತ್ರಹಿಂಸೆಗೂ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು.
47ತನ್ನ ಯಜಮಾನನ ಇಷ್ಟಾರ್ಥವನ್ನು ಆಳು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಅವನ ಚಿತ್ತಕ್ಕನುಸಾರ ನಡೆಯದಿದ್ದರೆ ಕಠಿಣವಾದ ಶಿಕ್ಷೆಗೆ ಗುರಿಯಾಗುವನು.
48ತಿಳಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಯಾವನಿಗೆ ಬಹಳವಾಗಿ ಕೊಡಲ್ಪಟ್ಟಿದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. ಇದಲ್ಲದೆ ಯಾವನ ವಶಕ್ಕೆ ಬಹಳವಾಗಿ ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳಲ್ಪಡುವುದು.
49“ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕಬೇಕೆಂದು ಬಂದೆನು. ಅದು ಇಷ್ಟರೊಳಗೆ ಹತ್ತಿಕೊಂಡಿದ್ದರೆ ನನಗೆ ಎಷ್ಟೋ ಸಂತೋಷ.

Read ಲೂಕ 12ಲೂಕ 12
Compare ಲೂಕ 12:18-49ಲೂಕ 12:18-49