Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ತಿಮೊ

1 ತಿಮೊ 1

Help us?
Click on verse(s) to share them!
1ನಮ್ಮ ರಕ್ಷಕನಾದ ದೇವರ ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು
2ನಂಬಿಕೆಯ ವಿಷಯದಲ್ಲಿ ನಿಜಕುಮಾರನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ, ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಉಂಟಾಗಲಿ.
3ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ, ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ,
4ಕಲ್ಪಿತಕಥೆಗಳಿಗೂ, ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ, ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ. ಅಂತಹ ಕಥೆಗಳೂ, ವಂಶಾವಳಿಗಳೂ ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ. ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ.
5ಶುದ್ಧಹೃದಯ, ಒಳ್ಳೆಯ ಮನಸ್ಸಾಕ್ಷಿ, ಪ್ರಾಮಾಣಿಕವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವಾಜ್ಞೆಯ ಗುರಿಯಾಗಿದೆ.
6ಕೆಲವರು ಈ ಗುರಿಯನ್ನು ಬಿಟ್ಟು ವ್ಯರ್ಥವಾದ ವಿಚಾರಗಳ ಕಡೆಗೆ ತಿರುಗಿಕೊಂಡಿದ್ದಾರೆ.
7ಅವರು ಧರ್ಮೋಪದೇಶಕರಾಗಬೇಕೆಂದು ಬಯಸುತ್ತಿದ್ದರೂ ತಾವು ಹೇಳುವುದಾಗಲಿ, ತಾವು ದೃಢವಾಗಿ ಮಾತನಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ.
8ಧರ್ಮಶಾಸ್ತ್ರವು ಒಳ್ಳೆಯದೆಂದು ಬಲ್ಲೆವು. ಆದರೆ ಅದನ್ನು ಅದರ ಉದ್ದೇಶಕ್ಕೆ ತಕ್ಕ ಹಾಗೆ ಉಪಯೋಗಿಸಬೇಕು.
9ಧರ್ಮಶಾಸ್ತ್ರವು ನೀತಿವಂತರಿಗೋಸ್ಕರ ಅಲ್ಲ, ಆದರೆ ಅಕ್ರಮಗಾರರು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ಅಪವಿತ್ರರು, ಪ್ರಾಪಂಚಿಕರು, ತಂದೆತಾಯಿಗಳನ್ನು ಕೊಲ್ಲುವವರು, ನರಹತ್ಯಮಾಡುವವರು,
10ಜಾರರು, ಸಲಿಂಗಕಾಮಿಗಳು, ನರಚೋರರು, ಸುಳ್ಳುಗಾರರು, ಅಸತ್ಯವಾದಿಗಳು, ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ.
11ಈ ಬೋಧನೆಯು ಭಾಗ್ಯವಂತನಾದ ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ ಅನುಸಾರವಾಗಿದೆ. ಈ ಸುವಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು.
12ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು;
14ಆದರೆ ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು.
15ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ, ಯಾಕೆಂದರೆ ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು.
16ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ, ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ, ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು.
17ಸರ್ವಯುಗಗಳ ಅರಸನೂ, ಅಮರನೂ, ಅದೃಶ್ಯನೂ ಆಗಿರುವ ಏಕ ದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.
18ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ.
19ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ವಿಷಯದಲ್ಲಿ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ.

20ಹುಮೆನಾಯನೂ ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.