Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 22

1 ಅರಸು 22:9-17

Help us?
Click on verse(s) to share them!
9ಆಗ ಇಸ್ರಾಯೇಲ್ಯರ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ, “ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಬೇಗನೆ ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು.
10ಇಸ್ರಾಯೇಲರ ಅರಸನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರ್ಯ ಪಟ್ಟಣದ ಹೆಬ್ಬಾಗಿಲಿನ ಹತ್ತಿರವಿರುವ ಬಯಲಿನಲ್ಲಿ ತಮ್ಮ ತಮ್ಮ ಆಸನಗಳ ಮೇಲೆ ಕುಳಿತುಕೊಂಡಿರಲು ಎಲ್ಲಾ ಪ್ರವಾದಿಗಳು ಅವರ ಮುಂದೆ ಪರವಶರಾಗಿ ಮಾತನಾಡುತ್ತಾ ಇದ್ದರು.
11ಅವರಲ್ಲಿ ಕೆನಾನನ ಮಗನಾದ ಚಿದ್ಕೀಯ ಎಂಬುವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ, ತಲೆಗೆ ಕಟ್ಟಿಕೊಂಡು ಬಂದು, “ಯೆಹೋವನು ಹೀಗೆನ್ನುತ್ತಾನೆ, ಅರಾಮ್ಯರು ನಿರ್ಮೂಲರಾಗುವವರೆಗೂ ಇವುಗಳಿಂದ ನೀನು ಅವರನ್ನು ಇರಿದು ಕೊಂದುಹಾಕುವಿ” ಎಂದನು.
12ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ಹೇಳಿ, “ರಾಮೋತ್ ಗಿಲ್ಯಾದಿಗೆ ಹೋಗು ನೀನು ಸಫಲನಾಗಿ ಬರುವಿ. ಯೆಹೋವನು ಅದನ್ನು ಅರಸನ ಕೈಗೆ ಒಪ್ಪಿಸುವನು” ಅಂದರು.
13ಮೀಕಾಯೆಹುವನ್ನು ಕರೆಯುವುದಕ್ಕೆ ಹೋದ ದೂತನು ಅವನಿಗೆ, “ಎಲ್ಲಾ ಪ್ರವಾದಿಗಳೂ ಏಕ ಮನಸ್ಸಿನಿಂದ ಅರಸನಿಗೆ ಶುಭವನ್ನೇ ಮುಂತಿಳಿಸುತ್ತಾರೆ, ದಯವಿಟ್ಟು ನೀನೂ ಅವರಂತೆ ಶುಭವನ್ನೇ ಮುಂತಿಳಿಸು” ಎಂದು ಹೇಳಿದನು.
14ಅದಕ್ಕೆ ಮೀಕಾಯೆಹುವು, “ಯೆಹೋವನಾಣೆ, ಯೆಹೋವನು ಹೇಳುವುದನ್ನೇ ನುಡಿಯುತ್ತೇನೆ” ಎಂದು ಉತ್ತರಕೊಟ್ಟನು.
15ಅವನು ಅರಸನ ಬಳಿಗೆ ಬಂದಾಗ ಅರಸನು, “ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕಾಗಿ ಹೋಗಬಹುದೋ, ಹೋಗಬಾರದೋ?” ಎಂದು ಕೇಳಲು ಅವನು, “ಹೋಗಬಹುದು, ಸಫಲನಾಗುವಿ, ಯೆಹೋವನು ಪಟ್ಟಣವನ್ನು ಅರಸನ ಕೈಗೆ ಒಪ್ಪಿಸುವನು” ಎಂದು ಹೇಳಿದನು.
16ಆಗ ಅರಸನು, “ಅವನಿಗೆ ಸತ್ಯವನ್ನೇ ತಿಳಿಸಬೇಕೆಂದು ಯೆಹೋವನ ಹೆಸರಿನಲ್ಲಿ ನಿನ್ನಿಂದ ಎಷ್ಟು ಸಾರಿ ಪ್ರಮಾಣ ಮಾಡಿಸಬೇಕು?” ಎಂದನು.
17ಆಗ ಮೀಕಾಯೆಹುವು, “ಇಸ್ರಾಯೇಲರೆಲ್ಲರು ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳಲ್ಲಿ ಚದುರಿಹೋದದ್ದನ್ನು ಕಂಡೆನು. ಆಗ ಯೆಹೋವನು, ‘ಇವರು ಒಡೆಯನಿಲ್ಲದವರಾಗಿರುತ್ತಾರೆ, ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ’ ಎಂದನು” ಎಂಬುದಾಗಿ ಉತ್ತರಕೊಟ್ಟನು.

Read 1 ಅರಸು 221 ಅರಸು 22
Compare 1 ಅರಸು 22:9-171 ಅರಸು 22:9-17