Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 16

1 ಅರಸು 16:13-30

Help us?
Click on verse(s) to share them!
13ಆದುದರಿಂದ ಆತನು ಪ್ರವಾದಿಯಾದ ಯೇಹುವಿನ ಮುಖಾಂತರವಾಗಿ ಬಾಷನ ಮನೆಗೆ ಆಗುವ ದುರ್ಗತಿಯನ್ನು ಮುಂತಿಳಿಸಿದ್ದನು. ಜಿಮ್ರಿಯು ಬಾಷನ ಮನೆಯವರೆಲ್ಲರನ್ನೂ ನಿರ್ನಾಮಗೊಳಿಸಿದಾಗ ಆ ಮಾತು ನೆರವೇರಿತು.
14ಏಲನ ಉಳಿದ ಚರಿತ್ರೆಯೂ ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
15ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ತಿರ್ಚದಲ್ಲಿ ಇಸ್ರಾಯೇಲರ ಅರಸನಾಗಿ ಏಳು ವರ್ಷ ಆಳ್ವಿಕೆ ಮಾಡಿದನು. ಆ ಸಮಯದಲ್ಲಿ ಇಸ್ರಾಯೇಲರು ಫಿಲಿಷ್ಟಿಯರ ವಶದಲ್ಲಿದ್ದ ಗಿಬ್ಬೆತೋನ್ ಎಂಬ ಪಟ್ಟಣಕ್ಕೆ ಮುತ್ತಿಗೆ ಹಾಕಿದ್ದರು.
16ಜಿಮ್ರಿಯು ಅರಸನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಅವನನ್ನು ಕೊಂದುಹಾಕಿದನೆಂಬ ವರ್ತಮಾನವು ಪಾಳೆಯದಲ್ಲಿದ್ದ ಇಸ್ರಾಯೇಲರಿಗೆ ಮುಟ್ಟಿತು. ಅವರು ಅದೇ ದಿನ ಅಲ್ಲಿಯೇ ಸೈನ್ಯಾಧಿಪತಿಯಾದ ಒಮ್ರಿಯನ್ನು ತಮ್ಮ ಅರಸನನ್ನಾಗಿ ನೇಮಿಸಿಕೊಂಡರು.
17ಒಮ್ರಿಯೂ ಅವನ ಜೊತೆಯಲ್ಲಿದ್ದ ಎಲ್ಲಾ ಇಸ್ರಾಯೇಲರೂ ಗಿಬ್ಬೆತೋನನ್ನು ಬಿಟ್ಟುಹೋಗಿ ತಿರ್ಚಕ್ಕೆ ಮುತ್ತಿಗೆ ಹಾಕಿದರು.
18ಪಟ್ಟಣವು ಅವರ ವಶವಾದುದನ್ನು ಜಿಮ್ರಿಯು ಕಂಡು ಅರಮನೆಯ ಗರ್ಭಗೃಹಕ್ಕೆ ಹೋಗಿ, ಅರಮನೆಗೆ ಬೆಂಕಿ ಹೊತ್ತಿಸಿ ಸುಟ್ಟುಕೊಂಡು ಸತ್ತನು.
19ಅವನು ಯಾರೊಬ್ಬಾಮನಂತೆ ತಾನು ಪಾಪಮಾಡಿದ್ದಲ್ಲದೆ ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ, ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದುದರಿಂದ ಹೀಗಾಯಿತು.
20ಜಿಮ್ರಿಯ ಉಳಿದ ಚರಿತ್ರೆಯೂ ಅವನ ಒಳಸಂಚೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
21ಆ ಕಾಲದಲ್ಲಿ ಇಸ್ರಾಯೇಲರೊಳಗೆ ಎರಡು ಪಕ್ಷಗಳುಂಟಾದವು. ಒಂದು ಪಕ್ಷದವರು ಗೀನತನ ಮಗನಾದ ತಿಬ್ನಿಯನ್ನು ಹಿಂಬಾಲಿಸಿ ಅವನನ್ನು ಅರಸನನ್ನಾಗಿ ಮಾಡಿಕೊಳ್ಳಬೇಕೆಂದಿದ್ದರು. ಇನ್ನೊಂದು ಪಕ್ಷದವರು ಒಮ್ರಿಯನ್ನು ಹಿಂಬಾಲಿಸಿದರು.
22ಆದರೆ ಒಮ್ರಿಯ ಪಕ್ಷದವರು ಗೀನತನ ಮಗನಾದ ತಿಬ್ನೀಯ ಪಕ್ಷದವರನ್ನು ಸೋಲಿಸಿದರು. ತಿಬ್ನಿಯು ಮರಣ ಹೊಂದಿದ್ದರಿಂದ ಒಮ್ರಿಯೇ ಅರಸನಾದನು.
23ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಮೂವತ್ತೊಂದನೆಯ ವರ್ಷದಲ್ಲಿ ಒಮ್ರಿಯು ಇಸ್ರಾಯೇಲರ ಅರಸನಾಗಿ ಹನ್ನೆರಡು ವರ್ಷ ಆಳ್ವಿಕೆ ಮಾಡಿದನು. ಆರು ವರ್ಷಗಳ ವರೆಗೆ ತಿರ್ಚವೇ ಅವನ ರಾಜಧಾನಿಯಾಗಿತ್ತು.
24ಅನಂತರ ಶೆಮೆರ್ ಎಂಬವನಿಗೆ ಎರಡು ತಲಾಂತು ಬೆಳ್ಳಿಯನ್ನು ಕೊಟ್ಟು ಅವನಿಂದ ಸಮಾರ್ಯವೆಂಬ ಗುಡ್ಡವನ್ನು ಕೊಂಡುಕೊಂಡು, ಅದರ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ, ಅದಕ್ಕೆ ಆ ಭೂಮಿಯ ಒಡೆಯನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ಸಮಾರ್ಯ ಎಂಬ ಹೆಸರಿಟ್ಟನು.
25ಒಮ್ರಿಯು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯೂ ತನ್ನ ಪೂರ್ವಾಧಿಕಾರಿಗಳೆಲ್ಲರಿಗಿಂತ ದುಷ್ಟನಾಗಿದ್ದನು.
26ಇಸ್ರಾಯೇಲರು ವಿಗ್ರಹಗಳಿಂದ ತಮ್ಮ ದೇವರಾದ ಯೆಹೋವನಿಗೆ ಕೋಪ ಬರಿಸುವಂತೆ ಅವರನ್ನು ಪಾಪಕ್ಕೆ ಪ್ರೇರೇಪಿಸಿ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗದಲ್ಲಿ ಅವನೂ ನಡೆದನು.
27ಅವನ ಉಳಿದ ಚರಿತ್ರೆಯೂ ಪರಾಕ್ರಮಕೃತ್ಯಗಳೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
28ಒಮ್ರಿಯು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯಪಟ್ಟಣದಲ್ಲಿ ಸಮಾಧಿ ಮಾಡಿದರು. ಅವನ ನಂತರ ಅವನ ಮಗನಾದ ಅಹಾಬನು ಅರಸನಾದನು.
29ಯೆಹೂದ್ಯರ ಅರಸನಾದ ಆಸನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗನಾದ ಅಹಾಬನು ಇಸ್ರಾಯೇಲರ ಅರಸನಾಗಿ ಸಮಾರ್ಯಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳ್ವಿಕೆ ಮಾಡಿದನು.
30ಅವನು ತನ್ನ ಪೂರ್ವಾಧಿಕಾರಿಗಳೆಲ್ಲರಿಗಿಂತಲೂ ದುಷ್ಟನಾಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು

Read 1 ಅರಸು 161 ಅರಸು 16
Compare 1 ಅರಸು 16:13-301 ಅರಸು 16:13-30