2ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿದನು; ಕೆಸರಿನೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿ, ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
3ಆತನು ನನ್ನ ಬಾಯಲ್ಲಿ ನೂತನ ಕೀರ್ತನೆಯನ್ನು ಹುಟ್ಟಿಸಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ. ಆತನ ಮಹತ್ಕಾರ್ಯಗಳನ್ನು ನೋಡಿದ ಅನೇಕರು ಭಯಭಕ್ತಿಯುಳ್ಳವರಾಗಿ ಯೆಹೋವನಲ್ಲಿ ನಂಬಿಕೆಯಿಡುವರು.
4ಯಾರು ಅಹಂಕಾರಿಗಳ ಜೊತೆಯಲ್ಲಿಯೂ, ಸುಳ್ಳುದೇವರನ್ನು ಹಿಂಬಾಲಿಸುವವರಲ್ಲಿಯೂ ಸೇರದೆ, ಯೆಹೋವನನ್ನೇ ನಂಬುತ್ತಾನೋ, ಅವನೇ ಧನ್ಯನು.
5ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ, ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯ; ಅವು ಅಸಂಖ್ಯಾತವಾಗಿವೆ.
6ಯಜ್ಞನೈವೇದ್ಯಗಳು ನಿನಗೆ ಇಷ್ಟವಿಲ್ಲ; ಸರ್ವಾಂಗಹೋಮಗಳನ್ನಾಗಲಿ, ದೋಷಪರಿಹಾರಕ ಯಜ್ಞಗಳನ್ನಾಗಲಿ ನೀನು ಅಪೇಕ್ಷಿಸಲಿಲ್ಲ. ಆದರೆ ಶ್ರವಣಶಕ್ತಿಯನ್ನು ನನಗೆ ಅನುಗ್ರಹಿಸಿದಿ.
7ಆಗ ನಾನು, “ಇಗೋ ಇದ್ದೇನೆ; ನನ್ನ ಕರ್ತವ್ಯವು ಗ್ರಂಥದ ಸುರುಳಿಯಲ್ಲಿ ಬರೆದದೆ.
8ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವುದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಅಂದೆನು.
9ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು, ಧಾರಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು; ಯೆಹೋವನೇ, ನೀನೇ ಬಲ್ಲೆ.
10ನಿನ್ನ ನೀತಿಸಾಧನೆಯನ್ನು ಮರೆಮಾಡಲಿಲ್ಲ; ನಿನ್ನ ನಂಬಿಕೆಯನ್ನೂ, ರಕ್ಷಣೆಯನ್ನೂ ಪ್ರಸಿದ್ಧಪಡಿಸಿದೆನು; ನಿನ್ನ ಕೃಪಾಸತ್ಯತೆಗಳನ್ನು ಮಹಾಸಮುದಾಯದಲ್ಲಿ ತಿಳಿಸದೆ ಇರಲಿಲ್ಲ.
11ಯೆಹೋವನೇ, ನೀನಂತೂ ನಿನ್ನ ಕರುಣೆಯನ್ನು ನನ್ನಿಂದ ಅಗಲಿಸಬೇಡ; ನಿನ್ನ ಕೃಪಾಸತ್ಯತೆಗಳು ನನ್ನನ್ನು ಯಾವಾಗಲೂ ಕಾಪಾಡಲಿ.
12ಏಕೆಂದರೆ ಲೆಕ್ಕವಿಲ್ಲದ ಆಪತ್ತುಗಳು ನನ್ನನ್ನು ಸುತ್ತಿಕೊಂಡಿವೆ; ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿರುತ್ತವೆ, ನನಗೆ ದಿಕ್ಕೇ ತೋರುವುದಿಲ್ಲ. ಅವು ನನ್ನ ತಲೆಯ ಕೂದಲುಗಳಿಗಿಂತಲೂ ಹೆಚ್ಚಾಗಿವೆ, ನಾನು ಎದೆಗುಂದಿ ಹೋದೆನು.
13ಯೆಹೋವನೇ, ದಯವಿಟ್ಟು ನನ್ನನ್ನು ರಕ್ಷಿಸು; ಯೆಹೋವನೇ, ಬೇಗನೆ ಬಂದು ಸಹಾಯಮಾಡು.
14ನನ್ನ ಪ್ರಾಣವನ್ನು ತೆಗೆಯುವುದಕ್ಕೆ ಸಮಯನೋಡುವವರು, ಆಶಾಭಂಗಪಟ್ಟು ಅವಮಾನಹೊಂದಲಿ; ನನ್ನ ಆಪತ್ತಿನಲ್ಲಿ ಸಂತೋಷಿಸುವವರು ಅಪಮಾನದಿಂದ ಹಿಂದಿರುಗಿ ಓಡಲಿ.
15ಆಹಾ, ಆಹಾ ಎಂದು ನನ್ನನ್ನು ಪರಿಹಾಸ್ಯಮಾಡುವವರು, ತಮಗೆ ಆಗುವ ಅವಮಾನದಿಂದ ವಿಸ್ಮಯಗೊಳ್ಳಲಿ.
16ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ; ನಿನ್ನ ಜಯದಲ್ಲಿ ಆನಂದಿಸುವವರು, “ಯೆಹೋವನು ಮಹೋನ್ನತನು” ಎಂದು ಯಾವಾಗಲೂ ಹೇಳುವವರಾಗಲಿ.
17ನಾನಾದರೋ ಕುಗ್ಗಿದವನೂ, ದಿಕ್ಕಿಲ್ಲದವನೂ ಆಗಿದ್ದೇನೆ; ಕರ್ತನೇ ನನ್ನ ಹಿತಚಿಂತಕನು. ನನ್ನ ದೇವರೇ, ನೀನೇ ನನಗೆ ಸಹಾಯಕನೂ, ರಕ್ಷಕನೂ ಆಗಿದ್ದೀ; ತಡಮಾಡಬೇಡ.