Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 9

1 ಅರಸು 9:1-19

Help us?
Click on verse(s) to share them!
1ಸೊಲೊಮೋನನು ಯೆಹೋವನ ಆಲಯವನ್ನೂ ತನ್ನ ಅರಮನೆಯನ್ನೂ ಕಟ್ಟಿಸಿದ ನಂತರ,
2ಯೆಹೋವನು ಅವನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷನಾದಂತೆ ಎರಡನೆಯ ಸಾರಿ ಪ್ರತ್ಯಕ್ಷನಾದನು.
3ಆತನು ಅವನಿಗೆ, “ನೀನು ನನಗೆ ಮಾಡಿದ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆಯನ್ನೂ ಕೇಳಿದ್ದೇನೆ. ನನ್ನ ನಾಮಮಹತ್ತು ನೀನು ಕಟ್ಟಿಸಿದ ಆಲಯದಲ್ಲಿ ಸದಾ ಇರುವಂತೆ ಅದನ್ನು ನನಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ. ನನ್ನ ದೃಷ್ಟಿಯೂ, ಮನಸ್ಸೂ ಪ್ರತಿದಿನವೂ ಅದರ ಮೇಲಿರುವವು.
4ನೀನು ನಿನ್ನ ತಂದೆಯಾದ ದಾವೀದನಂತೆ ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ನನಗೆ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುತ್ತಾ ಬರುವುದಾದರೆ,
5ಇಸ್ರಾಯೇಲರಲ್ಲಿ ನಿನ್ನ ಸಿಂಹಾಸನವನ್ನು ಸದಾ ಸ್ಥಿರಪಡಿಸುವೆನು. ‘ಇಸ್ರಾಯೇಲ್ ಸಿಂಹಾಸನದ ಮೇಲೆ ನಿನ್ನ ಸಂತಾನದವರು ತಪ್ಪದೆ ಕುಳಿತುಕೊಳ್ಳುವರು’ ಎಂಬುದಾಗಿ ನಿನ್ನ ತಂದೆಯಾದ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
6ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ, ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳದೆ, ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಹಿಂಬಾಲಿಸಿ, ಅವುಗಳಿಗೆ ಕೈಮುಗಿಯುವುದಾದರೆ
7ಇಸ್ರಾಯೇಲರನ್ನು ನಾನು ಅವರಿಗೆ ಕೊಟ್ಟ ದೇಶದಿಂದ ತೆಗೆದು ಹಾಕಿ, ನನ್ನ ಹೆಸರಿಗೋಸ್ಕರ ಪ್ರತಿಷ್ಠಿಸಿಕೊಂಡ ಆಲಯವನ್ನು ನಿರಾಕರಿಸಿಬಿಡುವೆನು. ‘ಇಸ್ರಾಯೇಲರು’ ಎಲ್ಲಾ ಜನಾಂಗಗಳವರ ಗಾದೆಗೂ ನಿಂದೆಗೂ, ಲೋಕದ ಅಪವಾದಕ್ಕೂ ಗುರಿಯಾಗುವಾಗುವರು.
8ಉನ್ನತವಾದ ಈ ಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ, ‘ಅಬ್ಬಬ್ಬಾ ಇದೇನು, ಯೆಹೋವನು ಈ ದೇಶವನ್ನು ಮತ್ತು ಈ ಆಲಯವನ್ನೂ ಹೀಗೇಕೆ ಮಾಡಿದನು?’ ಎಂದು ಕೇಳುವರು.
9ಆಗ ಈ ದೇಶದವರು ಅವರಿಗೆ, ‘ನಮ್ಮ ಪೂರ್ವಿಕರನ್ನು ಐಗುಪ್ತದಿಂದ ಬರಮಾಡಿದ ದೇವರಾದ ಯೆಹೋವನನ್ನು ಬಿಟ್ಟು, ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದಲೇ ಯೆಹೋವನು ಈ ಎಲ್ಲಾ ಆಪತ್ತನ್ನು ಬರಮಾಡಿದ್ದಾನೆ’ ಎಂಬ ಉತ್ತರ ಹೇಳುವರು” ಎಂದನು.
10ಅರಸನಾದ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವನ ಆಲಯವನ್ನೂ ಮತ್ತು ತನ್ನ ಅರಮನೆಯನ್ನೂ ಕಟ್ಟಿಸಿ ಮುಗಿಸಿದನು.
11ಆನಂತರ ಅವನು ತನಗೆ ಬೇಕಾದಷ್ಟು ದೇವದಾರುಮರಗಳನ್ನೂ, ತುರಾಯಿಮರಗಳನ್ನೂ ಮತ್ತು ಬಂಗಾರವನ್ನೂ ಕೊಟ್ಟಂಥ ತೂರಿನ ಅರಸನಾದ ಹೀರಾಮನಿಗೆ ಗಲಿಲಾಯ ಪ್ರಾಂತ್ಯದಲ್ಲಿ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
12ಹೀರಾಮನು ತೂರಿನಿಂದ ಬಂದು ಆ ಪಟ್ಟಣಗಳನ್ನು ನೋಡಲು ಅವು ಅವನಿಗೆ ಮೆಚ್ಚಿಗೆಯಾಗಲಿಲ್ಲ.
13ಆದುದರಿಂದ ಅವನು ಸೊಲೊಮೋನನಿಗೆ, “ಸಹೋದರನೇ, ನೀನು ನನಗೆ ಎಂಥಾ ಪಟ್ಟಣಗಳನ್ನು ಕೊಟ್ಟಿರುವೇ?” ಎಂದು ಹೇಳಿ ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಅವುಗಳಿಗೆ ಇಂದಿನವರೆಗೂ ಇದೇ ಹೆಸರಿರುತ್ತದೆ.
14ಹೀರಾಮನು ಸೊಲೊಮೋನನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನು ಕೊಟ್ಟನು.
15ಸೊಲೊಮೋನನ ಬಿಟ್ಟೀ ಕೆಲಸದವರು ಕಟ್ಟಿದವುಗಳು ಯಾವುವೆಂದರೆ, ಯೆಹೋವನ ಆಲಯ, ಅರಮನೆ, ಮಿಲ್ಲೋ ಕೋಟೆ, ಯೆರೂಸಲೇಮಿನ ಪೌಳಿಗೋಡೆ, ಹಾಚೋರ್ ಮೆಗಿದ್ದೋ ಮತ್ತು ಗೆಜೆರ್ ಇವುಗಳೇ.
16ಐಗುಪ್ತದ ಅರಸನಾದ ಫರೋಹನು ಗೆಜೆರ್ ಪಟ್ಟಣವನ್ನು ಹಿಡಿದು ಅದಕ್ಕೆ ಬೆಂಕಿಹೊತ್ತಿಸಿ, ಅದರಲ್ಲಿದ್ದ ಕಾನಾನ್ಯರನ್ನು ಹತಿಸಿ, ಅದನ್ನು ವಶಮಾಡಿಕೊಂಡು ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಮದುವೆಯ ಉಡುಗೊರೆಯಾಗಿ ಕೊಟ್ಟಿದ್ದನು.
17ಸೊಲೊಮೋನನು ಗೆಜೆರ್ ಪಟ್ಟಣದ ಹೊರತಾಗಿ ಕೆಳಗಿನ ಬೆತ್ ಹೋರೋನ್,
18ಯೆಹೂದದ ಅರಣ್ಯಪ್ರದೇಶದಲ್ಲಿರುವ ಬಾಲಾತ್ ಮತ್ತು ತಾಮಾರ್,
19ತನ್ನ ಎಲ್ಲಾ ಉಗ್ರಾಣ ಪಟ್ಟಣಗಳು, ಯುದ್ಧ ರಥಗಳನ್ನಿರಿಸುವ ಪಟ್ಟಣಗಳು, ರಾಹುತರ ಪಟ್ಟಣಗಳು ಇವುಗಳನ್ನೂ ಕಟ್ಟಿಸಿದನು. ಇದಲ್ಲದೆ ಯೆರೂಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತ್ಯಗಳಲ್ಲಿಯೂ ತನ್ನ ಮನಸ್ಸಿಗೆ ಬಂದವುಗಳನ್ನೆಲ್ಲಾ ಕಟ್ಟಿಸಿದನು.

Read 1 ಅರಸು 91 ಅರಸು 9
Compare 1 ಅರಸು 9:1-191 ಅರಸು 9:1-19